ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 1,00,676 ಲೈಂಗಿಕ ವೃತ್ತಿನಿರತರು!

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಹವನ್ನೇ ಬಂಡವಾಳ’ವನ್ನಾಗಿಸಿಕೊಂಡು ನಡೆಯುವ ‘ಸೆಕ್ಸ್‌ ವರ್ಕ್‌’ ಅರ್ಥಾತ್ ದಂಧೆ, ವೇಶ್ಯಾವಟಿಕೆ, ಸೂಳೆಗಾರಿಕೆ, ಕಸುಬು, ಲೈಂಗಿಕ ವೃತ್ತಿ, ಲೈಂಗಿಕ ಕಾರ್ಯ ಎಂದೆಲ್ಲ ಕರೆಸಿಕೊಳ್ಳುವ ‘ಕೆಂಪು ಲೋಕ’ದ ಸಮಗ್ರ ಚಿತ್ರಣವನ್ನು ‘ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನ’ ವರದಿ ಮೂಲಕ ಜಯಮಾಲಾ ನೇತೃತ್ವದ ಸಮಿತಿ ಕಣ್ಣಿಗೆ ಕಟ್ಟುವಂತೆ ರಾಜ್ಯ ಸರ್ಕಾರದ ಮುಂದಿಟ್ಟಿದೆ.

ರಾಜ್ಯದಾದ್ಯಂತ ಲೈಂಗಿಕ ವೃತ್ತಿನಿರತರಿಂದ ಸಂಗ್ರಹಿಸಿದ ಮಾಹಿತಿಗಳನ್ನು ಕ್ರೋಡೀಕರಿಸಿ ಅತ್ಯಂತ ಗೌಪ್ಯವಾಗಿ ವರದಿಯನ್ನು ಸಮಿತಿ ಸಿದ್ಧಪಡಿಸಿದೆ.
ಒಲ್ಲದ ಮನಸ್ಸಿನಿಂದ ದಂಧೆಗೆ ಇಳಿಯಲೇಬೇಕಾದ ಅಸಹಾಯಕತೆ, ನಂತರ, ಅದರಿಂದ ಹೊರಬರಲಾಗದ ಅನಿವಾರ್ಯ ಸ್ಥಿತಿ... ಹೀಗೆ ಈವರೆಗೆ ಬಹಿರಂಗವಾಗದ ಅವರ ಅಂತರಂಗದ ಜಗತ್ತಿನ ಬವಣೆಗಳತ್ತ ವರದಿ ಕನ್ನಡಿ ಹಿಡಿದಿದೆ. ಜೊತೆಗೆ, ದಂಧೆ ತಡೆಯುವ ಕುರಿತು ಮತ್ತು ಅದರಲ್ಲಿ ಬದುಕು ಕಾಣುತ್ತಿರುವವರ ಜೀವನಮಟ್ಟ ಸುಧಾರಣೆಯ ಕುರಿತು ಬೆಳಕು ಚೆಲ್ಲಿದೆ.

‘ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂಥದ್ದೊಂದು ಅಧ್ಯಯನ ನಡೆದಿದೆ. ಆ ಮೂಲಕ ನಿರ್ಲಕ್ಷಿತ ಸಮುದಾಯಕ್ಕೆ ನ್ಯಾಯ ಒದಗಿಸುವ ದಿಕ್ಕಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ’  ಎಂದು ಸಮಿತಿ ಹೇಳಿಕೊಂಡಿದೆ. ಸರ್ಕಾರದ ಆರೋಗ್ಯ ಸೌಲಭ್ಯ ಯೋಜನೆಗಳನ್ನು ಆಧರಿಸಿ ಲೈಂಗಿಕ ವೃತ್ತಿನಿರತರ ಸಂಖ್ಯೆಯನ್ನು ಸಮಿತಿ ಅಂದಾಜು ಮಾಡಿದೆ. ಅದರ ಪ್ರಕಾರ ಸುಮಾರು 1 ಲಕ್ಷ ನೋಂದಾಯಿತ ವೃತ್ತಿನಿರತರಿದ್ದಾರೆ. ಅವರ ಜೊತೆ ಸಂವಾದ ನಡೆಸಿದ ಬಳಿಕ, 3 ಲಕ್ಷ ಮಹಿಳೆಯರು ಈ ವೃತ್ತಿ ಅವಲಂಬಿಸಿದ್ದಾರೆ ಎಂದು ಸಮಿತಿ ಲೆಕ್ಕ ಹಾಕಿದೆ. ಆದರೆ, ಸಮುದಾಯದ ಸಂಘಟನೆಗಳ ಪ್ರಕಾರ ಈ ಸಂಖ್ಯೆ ಆರೇಳು ಪಟ್ಟು ಹೆಚ್ಚು ಇದೆ. ಅಂಕಿ– ಅಂಶಗಳು ಏನೇ ಇದ್ದರೂ, ಹೆಚ್ಚಿನವರು ಹೊಟ್ಟೆಪಾಡಿಗಾಗಿಯೇ ಈ ದಂಧೆಯನ್ನು ಆಶ್ರಯಿಸಿಕೊಂಡಿದ್ದಾರೆ ಎನ್ನುವುದು ಆತಂಕದ ಸಂಗತಿ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ದಂಧೆಯನ್ನು ಮುಖ್ಯವಾಗಿ ಬೀದಿ, ವೇಶ್ಯಾಗೃಹ (ಬ್ರಾಥೆಲ್‌), ವಸತಿಗೃಹ, ಮನೆ ಆಧಾರಿತ ಎಂದು ವಿಂಗಡಿಸಲಾಗುತ್ತದೆ. ರಾಜ್ಯದಲ್ಲಿ ಮನೆಗಳನ್ನೆ ಈ ದಂಧೆಗೆ ಬಳಸಿಕೊಳ್ಳುವುದು ಹೆಚ್ಚು. ಲಾಡ್ಜ್‌ ಮತ್ತು ಅಪರಿಚಿತ ಸ್ಥಳಗಳಲ್ಲೂ ನಡೆಯುತ್ತಿರುವುದು ಕಂಡುಬಂದಿದೆ. ಬೀದಿ ಆಧಾರಿತ ದಂಧೆಯಲ್ಲಿ ನಿರ್ದಿಷ್ಟ ಬೀದಿಗಳಲ್ಲಿ ನಿಂತು ಗಿರಾಕಿಗಳನ್ನು ನಿಗದಿಪಡಿಸಿಕೊಂಡು ಬೇರೆಡೆಗೆ (ಲಾಡ್ಜ್‌, ತೋಟ, ಹೊಲ, ಶೌಚಾಲಯ...) ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಲಾಗುತ್ತದೆ.  ವೇಶ್ಯಾಗೃಹಗಳು ಏಕಕಾಲಕ್ಕೆ ಹಲವು ಮಹಿಳೆಯರು ಅನೇಕ ಗಂಡಸರಿಗೆ ಸೇವೆ ನೀಡುವುದಕ್ಕೆ ಪೂರಕವಾಗಿವೆ. ಇಲ್ಲಿ  ಮಾಲೀಕರಿಂದ   ಹಿಡಿದು  ದಲ್ಲಾಳಿಗಳವರೆಗೆ ಮಾಮೂಲಿ ನೀಡಬೇಕಾಗುತ್ತದೆ. ವೇಶ್ಯಾಗೃಹ ಮಾಲೀಕರಾದ ಘರ್‌ವಾಲಿಗಳು, ಸ್ಥಳೀಯ ಗೂಂಡಾಗಳಿಗೂ ಹಣದಲ್ಲಿ ಪಾಲು ಇರುತ್ತದೆ. ಪೊಲೀಸರಿಗೂ ಪಾಲು ನೀಡಬೇಕಾಗುತ್ತದೆ ಎಂದು ವರದಿ ಹೇಳಿದೆ.

ಮಸಾಜ್‌ ಪಾರ್ಲರ್‌, ಬ್ಯೂಟಿ ಪಾರ್ಲರ್‌, ಡಾಬಾ, ಕ್ಲಬ್‌, ಪ್ರವಾಸಿ ಮಂದಿರಗಳಲ್ಲೂ ದಂಧೆ ನಡೆಯುತ್ತದೆ. ಸ್ವಂತ ಮನೆಗಳನ್ನು, ಗೆಳತಿಯರ ಮನೆಗಳನ್ನು ದಂಧೆಗೆ ಬಳಸಿಕೊಳ್ಳುವವರು ಸಾಕಷ್ಟು ಮಂದಿ ಇದ್ದಾರೆ. ವಯಸ್ಸಾದ ಕಾರಣಕ್ಕೆ ಈ ವೃತ್ತಿಯಿಂದ ದೂರವಾದವರು, ತಮ್ಮ ಮನೆಗಳಲ್ಲಿ ದಂಧೆ ಮಾಡಲು ಜಾಗ ನೀಡಿ ಹಣ ಪಡೆದುಕೊಳ್ಳುತ್ತಾರೆ. ಆ ಮೂಲಕ, ಸಂಪಾದನೆಗೆ ದಾರಿ ಕಂಡುಕೊಂಡಿದ್ದಾರೆ.

ಉತ್ತಮ ಮಾವಿನ ಹಣ್ಣಿಗೆ ಖ್ಯಾತಿ ಪಡೆದ ಕೋಲಾರದ ಶ್ರೀನಿವಾಸಪುರದ ಮಾವಿನ ಮೇಳದ ಸಂದರ್ಭದಲ್ಲಿ ಎಗ್ಗಿಲ್ಲದೇ ದಂಧೆ ನಡೆಯುತ್ತದೆ. ಗ್ರಾಮೀಣ     ಪ್ರದೇಶಗಳಲ್ಲಿ ಸಂತೆ, ಜಾತ್ರೆ, ಉತ್ಸವ ಸಂದರ್ಭಗಳಲ್ಲೂ ದಂಧೆ ನಡೆಯುತ್ತಿರುವ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದಂಧೆಯಲ್ಲಿ ತೊಡಗಿರುವ ಮಹಿಳೆಯರಿಂದಲೇ ಈ ಅಂಶಗಳನ್ನು ಸಮಿತಿ ಸಂಗ್ರಹಿಸಿದೆ.

‘ದೇಶದಲ್ಲಿ ದಂಧೆ ನಡೆಯುತ್ತಿರುವ ಸ್ಥಳಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮನೆಗಳಲ್ಲಿ ದಂಧೆ ಹೆಚ್ಚು ನಡೆಯುತ್ತಿರುವುದು ವಿಶಿಷ್ಟ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ರಕ್ಷಣೆಯ ದೃಷ್ಟಿಯಿಂದ ಮನೆಯನ್ನು ಆಯ್ಕೆ ಮಾಡಿಕೊಂಡಿದ್ದರೂ, ಅಲ್ಲಿ ಭದ್ರತೆ ಇಲ್ಲ ಎಂಬುದನ್ನೂ ವರದಿ ಬೊಟ್ಟು ಮಾಡಿದೆ.
‘ಕ್ಲಿಷ್ಟ ಪ್ರಶ್ನೆ’ಯ ಸುತ್ತಮುತ್ತ: ಲೈಂಗಿಕ ವೃತ್ತಿಯನ್ನು ಕಾನೂನಾತ್ಮಕಗೊಳಿಸಬೇಕೇ ಅಥವಾ ಅಪರಾಧ ಎಂದು ಪರಿಗಣಿಸಬೇಕೇ ಎನ್ನುವುದು ಆಡಳಿತ ವ್ಯವಸ್ಥೆಯ ಮುಂದಿರುವ ಕ್ಲಿಷ್ಟ ಪ್ರಶ್ನೆ. ಕಾನೂನುಬಾಹಿರವಾದರೆ ಈ ವೃತ್ತಿ ಕತ್ತಲಲ್ಲಿ ನಡೆಯುವ ಅಪಾಯವಿದೆ. ಕಾನೂನುಬದ್ಧಗೊಳಿಸಿದರೆ ದೌರ್ಜನ್ಯ ನಡೆಯಬಹುದು. ಆರೋಗ್ಯ ಸವಾಲುಗಳು ಎದುರಾಗಬಹುದು. ಮಾನವ ಕಳ್ಳಸಾಗಣೆಗೆ ಒಳಗಾದವರಿಗೆ, ಅಪರಾಧಕ್ಕೆ ಬಲಿಯಾಗುವವರಿಗೆ ರಕ್ಷಣೆ ಸಿಗದೇ ಹೋಗಬಹುದು. ಲೈಂಗಿಕ ವೃತ್ತಿ ಅಪರಾಧ ಎಂದು ಭಾವಿಸಿದರೆ, ಬಲವಂತಕ್ಕಾಗಿ  ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರನ್ನೂ ಅಪರಾಧಿಗಳೆಂದು ಪರಿಗಣಿಸಬೇಕಾಗಬಹುದು. ಅಪರಾಧ ಅಲ್ಲ ಎಂದು ಪರಿಗಣಿಸಿದರೆ ಅದರೊಳಗಿನ ಅಪರಾಧ ಜಗತ್ತಿನಲ್ಲಿ ಕ್ರೌರ್ಯ ವಿಜೃಂಭಿಸುವ ಆತಂಕವಿದೆ.
ಸದ್ಯ, ದಂಧೆ ನಡೆಸುವವರನ್ನು ಮತ್ತು ದಂಧೆಗೆ ದೂಡುವುದನ್ನು ಅಪರಾಧವೆಂದು ಪರಿಗಣಿಸಿ. ವೃತ್ತಿ ನಿರತರನ್ನು ನಿರಪರಾಧಿಗಳು ಎಂದು ಪರಿಗಣಿಸಲಾಗುತ್ತಿದೆ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿ ಕಾನೂನಿನ ಸಮರ್ಪಕ ಅನುಷ್ಠಾನ ನಡೆಯದಿರುವುದು ಸಮಸ್ಯೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಡತನದ ಬವಣೆಯ ಬಲೆ
ಕೆಲವು ಮಹಿಳೆಯರು ಪ್ರತಿನಿತ್ಯ, ಅಥವಾ ವಾರಕ್ಕೆ ಒಂದೆರಡು ಬಾರಿ ಅಥವಾ ತಿಂಗಳಲ್ಲಿ ಕೆಲವು ದಿನ ದಂಧೆ ಮಾಡುತ್ತಾರೆ. ಕೆಲವರು ಹಣದ ಅಗತ್ಯ ಇದ್ದಾಗ ದಂಧೆ ಮಾಡುತ್ತಾರೆ. ಕೆಲವರು ಪರವೂರಿನಲ್ಲಿ ಅಥವಾ ಬೇರೆ ರಾಜ್ಯದಲ್ಲಿ ದಂಧೆ ಮಾಡುತ್ತಾರೆ. ಸಂಜೆಯಿಂದ ಮಧ್ಯರಾತ್ರಿವರೆಗೆ ಕೆಲವರು ದಂಧೆ ಮಾಡುತ್ತಾರೆ. ಇನ್ನೂ ಕೆಲವರು ಇಡೀ ರಾತ್ರಿ ಹೋಗಿ ಬೆಳಿಗ್ಗೆ ಮನೆಗೆ ಮರಳುತ್ತಾರೆ. ಕೆಲವರು ಹಗಲಿನಲ್ಲೇ ಈ ವೃತ್ತಿಯಲ್ಲಿ ತೊಡಗುತ್ತಾರೆ. ಘರ್‌ವಾಲಿಗಳು ಕೊಟ್ಟಷ್ಟು ಹಣ ಪಡೆದು ತಮ್ಮ ಹಳ್ಳಿಗಳಿಗೆ ಮರಳುವವರೂ  ಇದ್ದಾರೆ. ಕೆಲವರಿಗೆ ಶಾಶ್ವತವಾಗಿ 4–5 ಗಿರಾಕಿಗಳಿದ್ದು, ಕರೆ ಬಂದಾಗ ಹೋಗಿ ಬರುತ್ತಾರೆ. ಹೀಗೆ ಈ ದಂಧೆಯನ್ನು ಅವಲಂಬಿಸಿದವರ ಬದುಕು, ಬಡತನದ ಬವಣೆಯ ಬಲೆಯಲ್ಲಿ ಒದ್ದಾಡುತ್ತಿದೆ ಎನ್ನುತ್ತದೆ ವರದಿ.

ಲೈಂಗಿಕ ವ್ಯಾಪಾರದೊಳಗೆ...
‘ದೇಹವನ್ನು ಸರಕಾಗಿಸಿ ಹಣ ಮತ್ತು ವಸ್ತುಗಳಿಗೆ ವಿನಿಮಯ ಮಾಡುವ ಲೈಂಗಿಕ ವೃತ್ತಿನಿರತರು ರಾಜ್ಯದುದ್ದಕ್ಕೂ ಚದುರಿ ಹೋಗಿದ್ದಾರೆ. ನಾಗರಿಕ ವ್ಯವಸ್ಥೆಯ ಮರೆಯೊಳಗೆ ಕ್ರಿಯಾತ್ಮಕವಾಗಿರುವುದರಿಂದ ಈ ಸಮುದಾಯವನ್ನು ಗುರುತಿಸುವುದು ಸವಾಲಿನ ಕೆಲಸ. ಈ ಲೈಂಗಿಕ ವ್ಯಾಪಾರದೊಳಗೆ ಸಾಮಾಜಿಕ ಮೌಲ್ಯಗಳೂ ಬೆಸೆದುಕೊಂಡಿವೆ’ ಎನ್ನುವ ಅಂಶವನ್ನು ಅಧ್ಯಯನ ಸಮಿತಿ ಕಂಡುಕೊಂಡಿದೆ.

11,000 ಲೈಂಗಿಕ ಕಾರ್ಯಕತೆಯರ ಬದುಕಿನ ಕಥೆಯಿದು!

ರಾಜ್ಯದ 30 ಜಿಲ್ಲೆಗಳಲ್ಲಿ 169 ಪ್ರಶ್ನಾವಳಿಗಳ ಮೂಲಕ ಜಯಮಾಲಾ ನೇತೃತ್ವದ ಸಮಿತಿ ಲೈಂಗಿಕ ವೃತ್ತಿನಿರತರ ಸ್ಥಿತಿಗತಿ ಅಧ್ಯಯನ ಮಾಡಿದೆ. 20 ಆಪ್ತ ಸಮಾಲೋಚಕರ ನೆರವಿನಿಂದ 176 ತಾಲ್ಲೂಕುಗಳಲ್ಲಿ ಲೈಂಗಿಕ ವೃತ್ತಿಯಲ್ಲಿ ತೊಡಗಿರುವ 8,100 ಮಹಿಳೆಯರಿಂದ ಪ್ರಶ್ನಾವಳಿಗಳ ಮಾಹಿತಿ ಸಂಗ್ರಹಿಸಲಾಗಿದೆ.
ಪ್ರತಿ ಜಿಲ್ಲೆಯಲ್ಲಿ  ಮೂರು ಹಂತಗಳಲ್ಲಿ ನೇರ ಸಂವಾದದ  ಮೂಲಕ 3,000 ಮಹಿಳೆಯರಿಂದ ಮಾಹಿತಿ  ಪಡೆಯಲಾಗಿದೆ. ರಾಜ್ಯದಲ್ಲಿ  ಲೆಕ್ಕ ಸಿಕ್ಕಿದ ಲೈಂಗಿಕ ವೃತ್ತಿ ನಿರತರ ಪೈಕಿ ಶೇಕಡಾ 12ರಷ್ಟು ಮಂದಿಯಿಂದ ದತ್ತಾಂಶಗಳನ್ನು ಸಂಗ್ರಹಿಸಿ ವರದಿಯನ್ನು  ಸಿದ್ಧಪಡಿಸಲಾಗಿದೆ.


(ನಾಳಿನ ಸಂಚಿಕೆಯಲ್ಲಿ ‘ಬಿಕರಿಯಾದ ಹೆಣ್ಣು ಮಕ್ಕಳ ಅಂತರಾಳದ ಉರಿ’ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT