ಶನಿವಾರ, ಡಿಸೆಂಬರ್ 14, 2019
20 °C

‘2030ಕ್ಕೆ ಡಾಲರ್‌ ಮೌಲ್ಯಕ್ಕೆ ₹ ಸಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘2030ಕ್ಕೆ ಡಾಲರ್‌ ಮೌಲ್ಯಕ್ಕೆ ₹ ಸಮ’

ಬೆಂಗಳೂರು: ‘ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ಭಾರತ ಮುನ್ನಡೆ ಸಾಧಿಸುತ್ತಿದೆ. ಇದು ಹೀಗೆಯೇ ಮುಂದುವರಿದರೆ, 2030ಕ್ಕೆ ರೂಪಾಯಿ ಮತ್ತು ಡಾಲರ್‌ ವಿನಿಮಯ ಮೌಲ್ಯ ಸಮವಾಗಲಿದೆ’ ಎಂದು ಕೆನರಾ ಬ್ಯಾಂಕ್ ಅಧ್ಯಕ್ಷ ಟಿ.ಎನ್. ಮನೋಹರನ್ ಅಭಿಪ್ರಾಯ ವ್ಯಕ್ತಪಡಿಸಿದರು.

‘ಇನ್ಸ್‌ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿಸ್‌ ಆಫ್ ಇಂಡಿಯಾ’ದ ದಕ್ಷಿಣ ಭಾರತದ ಪ್ರಾದೇಶಿಕ ಸಮಿತಿಯು ನಗರದಲ್ಲಿ ಹಮ್ಮಿಕೊಂಡಿದ್ದ 42ನೇ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘ಬದಲಾವಣೆಯನ್ನು ಮುನ್ನಡೆಸಿ; ಅವಕಾಶಗಳನ್ನು ಅಪ್ಪಿಕೊಳ್ಳಿ’ ಎಂಬುದು ಸಮ್ಮೇಳನದ ಘೋಷವಾಕ್ಯವಾಗಿದೆ.

‘2010ರಲ್ಲಿ ಜಿಡಿಪಿಯಲ್ಲಿ 9ನೇ ಸ್ಥಾನದಲ್ಲಿದ್ದ ಭಾರತ, 2015ರಲ್ಲಿ 7ನೇ ಸ್ಥಾನಕ್ಕೆ ಬಂದಿದೆ. 2022ಕ್ಕೆ 5ನೇ ಸ್ಥಾನಕ್ಕೆ ಬರುವ ಗುರಿ ಇಟ್ಟುಕೊಂಡಿದೆ. ಇದು ಹೀಗೆ ಸಕಾರಾತ್ಮಕವಾಗಿ ಮುಂದುವರಿದರೆ ಅಮೆರಿಕನ್ನರು ಸಾಲಿನಲ್ಲಿ ನಿಂತು ಭಾರತದ ವೀಸಾ ಪಡೆಯುವ ಕಾಲವೂ ಬರುತ್ತದೆ’ ಎಂದರು.

ಕೇಂದ್ರ ಅಬಕಾರಿ ಪ್ರಧಾನ ಹೆಚ್ಚುವರಿ ಮಹಾನಿರ್ದೇಶಕ ಡಿ.ಪಿ. ನಾಗೇಂದ್ರ ಕುಮಾರ್, ‘ಪಾರದರ್ಶಕ ಮತ್ತು ಭ್ರಷ್ಟಾಚಾರರಹಿತ ಆಡಳಿತ ನಿರ್ಮಿಸಲು ಜಿಎಸ್‌ಟಿ ನೆರವಾಗಿದೆ. ಸಮಗ್ರ ಜಿಎಸ್‌ಟಿಯಿಂದ (ಐಜಿಎಸ್‌ಟಿ) 10 ದಿನಗಳಲ್ಲಿ ದೇಶಕ್ಕೆ ₹4 ಸಾವಿರ ಕೋಟಿ ವರಮಾನ ಬಂದಿದೆ. ಇದು ತೆರಿಗೆ ವ್ಯವಸ್ಥೆ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎನ್ನುವುದಕ್ಕೆ ಉದಾಹರಣೆ’ ಎಂದು ಹೇಳಿದರು.

ರಾಷ್ಟ್ರೀಯ ಕಾನೂನು ಶಾಲೆಯ ಕುಲಸಚಿವ ಪ್ರೊ. ನಂದಿಮಠ ಹಾಗೂ ಹಿರಿಯ ವಕೀಲ ಕೆ.ಜಿ. ರಾಘವನ್‌ ಅವರು ವಕಾಲತ್ತು ಕೌಶಲಗಳು ಹಾಗೂ ನ್ಯಾಯಾಲಯದ ಶಿಷ್ಟಾಚಾರಗಳ ಕುರಿತು ಮಾತನಾಡಿದರು. ಜಿಎಸ್‌ಟಿ ಅನುಷ್ಠಾನ ಕುರಿತಾದ ಸಮಸ್ಯೆ ಮತ್ತು ಪರಿಹಾರಗಳ ಕುರಿತು ಚರ್ಚಿಸಲಾಯಿತು.

ಪ್ರತಿಕ್ರಿಯಿಸಿ (+)