ಶುಕ್ರವಾರ, ಡಿಸೆಂಬರ್ 13, 2019
17 °C

ಶೀಘ್ರ ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೀಘ್ರ ಆರೋಪಿಗಳ ಬಂಧನ

ಮಂಗಳೂರು: ಶರತ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ರೂಪಕ್‌ ಕುಮಾರ್‌ ದತ್ತ ಹೇಳಿದರು. ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಸಂಶಯ ಇದ್ದವರನ್ನು ವಿಚಾರಣೆ ಮಾಡಲಾಗುತ್ತದೆ. ಆದಷ್ಟು ಶೀಘ್ರ ನಿಜವಾದ ಆರೋಪಿಗಳ ಬಂಧನವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಕಾರ್ತಿಕ್‌ ರಾಜ್‌ ಕೊಲೆ ಪ್ರಕರಣದಲ್ಲಿ 5 ತಿಂಗಳ ದೀರ್ಘ ವಿಚಾರಣೆ ನಡೆಸಿ, ನಿಜವಾದ ಆರೋಪಿಗಳನ್ನು ಬಂಧಿಸಲಾಗಿದೆ. ಅದೇ ರೀತಿ ಶರತ್‌ ಕೊಲೆ ಪ್ರಕರಣದಲ್ಲೂ ಯಾವುದೇ ಒತ್ತಡಕ್ಕೆ ಮಣಿಯದೇ, ನೈಜ ಅಪರಾಧಿಗಳನ್ನು ಬಂಧಿಸಲಾಗುವುದು ಎಂದರು.

ಈ ವರ್ಷ ಏಪ್ರಿಲ್‌ 20 ರ ನಂತರ ಇದುವರೆಗೆ ನಡೆದಿರುವ ಹತ್ಯೆ ಮತ್ತು ಹಲ್ಲೆ ಪ್ರಕರಣಗಳಲ್ಲಿ, ಎರಡು ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ ಎಂದ ಅವರು, ಜಿಲ್ಲೆಯ ಪೊಲೀಸರು ಸಶಕ್ತರಾಗಿದ್ದು, ಶಾಂತಿ, ಸುವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಸ್ಥಿತಿ ಸಾಮಾನ್ಯವಾಗಿದೆ. ಪೊಲೀಸರು ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಇದುವರೆಗೆ ನಡೆದಿರುವ ಘಟನೆಗಳಲ್ಲಿ ಕೆಲವು ವೈಯಕ್ತಿಕ ದ್ವೇಷದಿಂದ ಆಗಿವೆ. ಹೀಗಾಗಿ ಪ್ರಕರಣಗಳನ್ನು ಸೂಕ್ಷ್ಮವಾಗಿ ತನಿಖೆ ನಡೆಸಲಾಗುತ್ತಿದ್ದು, ಪೊಲೀಸರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಹಾಗೂ ನಗರ ಪೊಲೀಸ್‌ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ ನಡೆದಿರುವ ಎಲ್ಲ ಪ್ರಕರಣಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಪಟ್ಟಿ ತಯಾರಿಸಿ, ಅಂಥವರ ಮೇಲೆ ಗೂಂಡಾ ಕಾಯ್ದೆ, ಗಡೀಪಾರು ಹಾಗೂ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಸ್ಥಳ ಪರಿಶೀಲನೆ:  ಬಿ.ಸಿ. ರೋಡ್‌ನಲ್ಲಿರುವ ಉದಯ ಲಾಂಡ್ರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹಲ್ಲೆ, ಹತ್ಯೆ ನಡೆದ ಸ್ಥಳಗಳಿಗೆ ಪೊಲೀಸ್‌ ಮಹಾನಿರ್ದೇಶಕ ರೂಪಕ್‌ ಕುಮಾರ್‌ ದತ್ತ ಶುಕ್ರವಾರ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದರು. ಎಸ್‌ಡಿಪಿಐ ಮುಖಂಡ ಅಶ್ರಫ್‌ ಕಲಾಯಿ ಕೊಲೆ ನಡೆದ ಬೆಂಜನಪದವು ರಾಮನಗರ, ಜಲೀಲ್‌ ಕರೋಪಾಡಿ ಹತ್ಯೆ ನಡೆದ ಕರೋಪಾಡಿ ಗ್ರಾಮ ಪಂಚಾಯಿತಿ, ಶರತ್‌ ಅವರ ಉದಯ ಲಾಂಡ್ರಿಗಳಿಗೆ ಭೇಟಿ ನೀಡಿದರು.

ಸಚಿವ ರೈ ಆಟ ಮುಗಿಯಿತು: ಡಿವಿಎಸ್‌

ಬಂಟ್ವಾಳ: ‘ಈ ಬಾರಿ ಸಚಿವ ಬಿ.ರಮಾನಾಥ ರೈ ಅವರನ್ನು ನಾವು ಸೋಲಿಸಬೇಕಿಲ್ಲ. ಅವರ ಆಟ ಇನ್ನು ಮುಂದೆ ನಡೆಯುವುದೂ ಇಲ್ಲ’ ಎಂದು ಕೇಂದ್ರ ಸಾಂಖ್ಯಿಕ, ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಒಂದೂವರೆ ತಿಂಗಳಿನಿಂದ ಸಚಿವ ಬಿ.ರಮಾನಾಥ ರೈ ಮತ್ತು ಯು.ಟಿ.ಖಾದರ್ ಅವರು ನಡೆಸುತ್ತಿರುವ ಹಿಂದೂ ವಿರೋಧಿ ನೀತಿ ಹಾಗೂ ಇಲ್ಲಿಂದಲೇ ಸ್ಪರ್ಧಿಸುವಂತೆ ಅವರು ಒಡ್ಡಿರುವ ಸವಾಲಿಗೆ ಜನರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದರು.

ಪ್ರತಿಕ್ರಿಯಿಸಿ (+)