ಶುಕ್ರವಾರ, ಡಿಸೆಂಬರ್ 6, 2019
21 °C

‘ಬಿಜೆಪಿ ಹಚ್ಚಿದ ಬೆಂಕಿ ಆರಿಸುತ್ತೇವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಿಜೆಪಿ ಹಚ್ಚಿದ ಬೆಂಕಿ ಆರಿಸುತ್ತೇವೆ’

ಮೈಸೂರು: ‘ಬೆಂಕಿ ಹಚ್ಚುವುದರಲ್ಲಿ ಬಿಜೆಪಿಯವರು ಅನುಭವಿಗಳು. ಅವರು ಹಚ್ಚಿದ ಕಿಡಿಯನ್ನು ಆರಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶುಕ್ರವಾರ ಬಿಜೆಪಿಗೆ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ದಕ್ಷಿಣ ಕನ್ನಡ ಜಿಲ್ಲೆ ಹೊತ್ತಿ ಉರಿಯುತ್ತದೆ ಎಂಬ ಎಚ್ಚರಿಕೆಯನ್ನು ಸಂಸದ ನಳೀನಕುಮಾರ್‌ ಕಟೀಲು ಹಿಂದೆಯೇ ನೀಡಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಕೂಡ ಇಂತಹುದೇ ಮಾತುಗಳನ್ನು ಆಡಿದ್ದಾರೆ. ಇದು ಅವರ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತಿದೆ’ ಎಂದರು.

‘ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಬಗ್ಗೆ ನಾನು ಯಾವ ಮಾತೂ ಆಡಿಲ್ಲ. ಆದರೆ, ಬಿಜೆಪಿಯವರೇ ಪದೇ ಪದೇ ಅವರ ತಂಟೆಗೆ ಬನ್ನಿ ಎಂಬ ಆಹ್ವಾನ ನೀಡುತ್ತಿದ್ದಾರೆ. ಪಾಪಪ್ರಜ್ಞೆಯಿಂದ ಇಂತಹ ಮಾತುಗಳು ಹೊರಬರುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುವುದು ಬಿಜೆಪಿಯವರಿಗೆ ಬೇಕಾಗಿಲ್ಲ. ಬೆಂಕಿ ಆರಿದರೆ ಅವರ ಬೇಳೆ ಬೇಯುವುದಿಲ್ಲ’ ಎಂದು ಲೇವಡಿ ಮಾಡಿದರು.

‘ಯಡಿಯೂರಪ್ಪ ಅವರಿಗೆ 75 ವರ್ಷ ತುಂಬಿದೆ. ಮುಂಬರುವ ಚುನಾವಣೆಯೇ ಅವರಿಗೆ ಕೊನೆಯ ಅವಕಾಶ. ಅಧಿಕಾರ ಹಿಡಿಯುವುದೇ ಅವರ ಮುಂದಿರುವ ಗುರಿ. ಆದರೆ, ಅದು ಸಾಧ್ಯವಿಲ್ಲ ಎಂಬುದು ಮನವರಿಕೆಯಾಗಿದೆ. ಹೀಗಾಗಿ, ಇಂತಹ ಗಲಭೆ ಸೃಷ್ಟಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ರಾಜ್ಯದ ಎಲ್ಲೆಡೆ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ. ನಿರ್ಮಲಾ ಸೀತಾರಾಮ್‌ ಅವರು ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣದ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಲಿ’ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಲು ಇಚ್ಛಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು.

‘ಉಪ ಚುನಾವಣೆಯಲ್ಲಿ ಈ ಕ್ಷೇತ್ರ ಮರುಜನ್ಮ ನೀಡಿದೆ. ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮುಂದೆಯೂ ಇದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಿದ್ದೇನೆ’ ಎಂದು ಮೈಸೂರಿನಲ್ಲಿ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ತಿಳಿಸಿದರು.

ಬಿಜೆಪಿಯವರ ಬಳಿ ಕತ್ತರಿ ಇದೆ. ಬಟ್ಟೆಯನ್ನು ಕತ್ತರಿಸುವುದೇ ಅವರ ಕೆಲಸ. ನಾವು (ಕಾಂಗ್ರೆಸ್‌) ಸೂಜಿ ಇಟ್ಟುಕೊಂಡಿದೇವೆ. ಅವರು ಹರಿದಿದ್ದನ್ನು ಹೊಲಿಯುತ್ತಿದ್ದೇವೆ. ಇದು ಎರಡೂ ಪಕ್ಷಗಳ ನಡುವಿನ ಭಿನ್ನತೆ

ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)