ಸೋಮವಾರ, ಡಿಸೆಂಬರ್ 16, 2019
18 °C
ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮ ಹಣಕಾಸು ಸಾಧನೆ

ಇನ್ಫೊಸಿಸ್‌ ನಿವ್ವಳ ಲಾಭ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ಫೊಸಿಸ್‌ ನಿವ್ವಳ ಲಾಭ ಹೆಚ್ಚಳ

ಬೆಂಗಳೂರು: ಸಾಫ್ಟ್‌ವೇರ್‌ ಸೇವೆಗಳನ್ನು ರಫ್ತು ಮಾಡುವ ದೇಶದ ಎರಡನೇ ಅತಿ ದೊಡ್ಡ ಕಂಪೆನಿ ಇನ್ಫೊಸಿಸ್‌, ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತಲೂ ಉತ್ತಮ ಸಾಧನೆ ಮಾಡಿದೆ.

ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ₹3,483 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ₹3,436 ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಶೇ 1.3ರಷ್ಟು ವೃದ್ಧಿಯಾಗಿದೆ.

ಉತ್ತರ ಅಮೆರಿಕ ಮತ್ತು ಯುರೋಪ್‌ನಲ್ಲಿ ವಹಿವಾಟು ಹೆಚ್ಚಾಗಿರುವುದರಿಂದ  ನಿವ್ವಳ ಲಾಭದಲ್ಲಿ ಏರಿಕೆ ಕಂಡುಬಂದಿದೆ ಎಂದು ಕಂಪೆನಿ ತಿಳಿಸಿದೆ.

ತ್ರೈಮಾಸಿಕದಲ್ಲಿ ಕಂಪೆನಿ ವರಮಾನ ₹16,782 ಕೋಟಿಗಳಿಂದ ₹17,078 ಕೋಟಿಗಳಿಗೆ (ಶೇ 1.7 ರಷ್ಟು) ಹೆಚ್ಚಾಗಿದೆ.

‘ಸಂಶೋಧನೆ ಮತ್ತು ತರಬೇತಿಯಿಂದ ಕಂಪೆನಿಯಲ್ಲಿ ಪರಿವರ್ತನೆ ಸಾಧ್ಯವಾಗುತ್ತಿದೆ. ಮುಂದಿನ ಪೀಳಿಗೆಯ ಪ್ರಮುಖ ಸೇವಾ ಕಂಪೆನಿಯಾಗಿ ಇನ್ಫೊಸಿಸ್‌ ಬೆಳೆಯುತ್ತಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ’ ಎಂದು ಕಂಪೆನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿಶಾಲ್‌ ಸಿಕ್ಕಾ ಹೇಳಿದ್ದಾರೆ.

10 ಸಾವಿರ ಉದ್ಯೋಗ: ಎರಡು ವರ್ಷಗಳಲ್ಲಿ ಅಮೆರಿಕದಲ್ಲಿ 10 ಸಾವಿರ ಮಂದಿಗೆ ಉದ್ಯೋಗ ನೀಡುವುದಾಗಿ ಇನ್ಫೊಸಿಸ್ ಕಂಪೆನಿ ಪ್ರಕಟಿಸಿದೆ. ಇದೇ ವೇಳೆ  ಭಾರತದಲ್ಲಿ ಕೇವಲ ಆರು ತಿಂಗಳಿನಲ್ಲಿ ಇಷ್ಟೇ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದೆ.

‘ಭಾರತದಲ್ಲಿ ಹೊಸ ನೇಮಕಾತಿಗೆ ಹಿನ್ನಡೆ ಆಗುವುದಿಲ್ಲ. ಅಮೆರಿಕದಲ್ಲಿ ನಡೆಸುವ ನೇಮಕಾತಿಯ ಭಾರತದಲ್ಲಿ ಉದ್ಯೋಗ ಸೃಷ್ಟಿ ಯೋಜನೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಕ್ಯಾಂಪಸ್‌ ನೇಮಕಾತಿ ಮೂಲಕ 19 ಸಾವಿರ ಮಂದಿಗೆ ತರಬೇತಿಗೆ ಆಹ್ವಾನಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ಅಮೆರಿಕಕ್ಕೆ ರಂಗನಾಥ್‌: ಇನ್ಫೊಸಿಸ್‌ನ ಮುಖ್ಯ ಆರ್ಥಿಕ ಅಧಿಕಾರಿ (ಸಿಎಫ್‌ಒ) ಎಂ.ಡಿ. ರಂಗನಾಥ್‌ ಅವರು ಇನ್ನು ಮುಂದೆ  ಅಮೆರಿಕದಿಂದಲೇ ಕಾರ್ಯನಿರ್ವಹಿಸಲಿದ್ದಾರೆ.

ಪ್ರತಿಕ್ರಿಯಿಸಿ (+)