ಶನಿವಾರ, ಡಿಸೆಂಬರ್ 14, 2019
25 °C

ಡಿಜಿಪಿ–ಡಿಐಜಿ ಕದನಕ್ಕೆ ತುಪ್ಪ ಸುರಿದ ವಿಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಜಿಪಿ–ಡಿಐಜಿ ಕದನಕ್ಕೆ ತುಪ್ಪ ಸುರಿದ ವಿಡಿಯೊ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಡಿಐಜಿ ಡಿ.ರೂಪಾ ಆರೋಪಿಸಿರುವ ಬೆನ್ನಲ್ಲೇ, ಜೈಲಿನಲ್ಲಿರುವ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ್ ತೆಲಗಿಗೆ ‘ವಿಐಪಿ’ ಸೌಲಭ್ಯ ನೀಡಿರುವಂಥ ಸಿ.ಸಿ ಟಿ.ವಿ ಕ್ಯಾಮೆರಾದ ವಿಡಿಯೊ ತುಣುಕೊಂದು ಶುಕ್ರವಾರ ಬಹಿರಂಗಗೊಂಡಿದೆ.ಸುದ್ದಿ ವಾಹಿನಿಗಳಲ್ಲಿ ಆ ವಿಡಿಯೊ ಪ್ರಸಾರವಾಗುತ್ತಿದ್ದಂತೆಯೇ ಕಾರಾಗೃಹಕ್ಕೆ ದೌಡಾಯಿಸಿದ ಹೆಚ್ಚುವರಿ ಪೊಲೀಸ್  ವೃತ್ತ ನಿರೀಕ್ಷಕ (ಎಐಜಿಪಿ) ವೀರಭದ್ರಸ್ವಾಮಿ, ತೆಲಗಿ ಕೊಠಡಿಯ ಸೌಕರ್ಯಗಳನ್ನು ತೆಗೆಸಿದ್ದಾರೆ ಎನ್ನಲಾಗಿದೆ. ಜೈಲು ಭೇಟಿ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಎಐಜಿಪಿ, ‘ಹಿರಿಯ ಅಧಿಕಾರಿಗಳ ಒಪ್ಪಿಗೆ ಇಲ್ಲದೆ ನಾನು ಹೇಳಿಕೆ ನೀಡುವುದಿಲ್ಲ’ ಎನ್ನುತ್ತ ಹೊರಟು ಹೋದರು.

ವಿಡಿಯೊದಲ್ಲಿ ಏನಿದೆ: ತೆಲಗಿಯ ಸೆಲ್‌ನಲ್ಲಿ ಫ್ಯಾನ್, ದಿವಾನ್ ಕಾಟ್, ಮಿನರಲ್ ವಾಟರ್ ಹಾಗೂ ಟಿ.ವಿ ಇರುವ  ದೃಶ್ಯ ಕಾಣಿಸುತ್ತದೆ. ಅಲ್ಲದೆ, ಆತನ ನೆರವಿಗೆ ನಿಯೋಜಿಸಿರುವ ಸಹಾಯಕನ ಓಡಾಟದ ದೃಶ್ಯವೂ ಅದರಲ್ಲಿದೆ.ಈ ವಿಡಿಯೊ, ಇದೀಗ ಇಲಾಖೆ ಅಧಿಕಾರಿಗಳ ನಡುವಿನ ಕದನಕ್ಕೆ ಇನ್ನಷ್ಟು ತುಪ್ಪ ಸುರಿದಂತಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಡಿಐಜಿ ರೂಪಾ ಆರೋಪ ಹೀಗಿತ್ತು: ‘ತೆಲಗಿ ಗಾಲಿಕುರ್ಚಿ (ವ್ಹೀಲ್ ಚೇರ್) ಉಪಯೋಗಿಸುತ್ತಿದ್ದ ಸಂದರ್ಭದಲ್ಲಿ ಆತನಿಗೆ ಸಹಾಯಕರನ್ನು ನೇಮಿಸಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿತ್ತು. ಆದರೀಗ ಆತ ಗಾಲಿಕುರ್ಚಿ ಬಿಟ್ಟು ಓಡಾಡಿಕೊಂಡಿದ್ದಾನೆ. ಹೀಗಿದ್ದರೂ, ಜೈಲಿನಲ್ಲಿ ಮೂರ್ನಾಲ್ಕು ಸಹಾಯಕರು ಆತನ ಸೇವೆಯಲ್ಲಿ ನಿರತರಾಗಿದ್ದಾರೆ.’

‘ಇದನ್ನು ನೀವು ಸಹ ಕಚೇರಿಯಲ್ಲೇ ಕುಳಿತು ವಿಡಿಯೊ ಪರದೆ ಮೇಲೆ ನೋಡಿರಬಹುದು. ತೆಲಗಿ ಸಹಾಯಕರನ್ನು ಹಿಂಪಡೆಯಬೇಕೆಂದು ನಾನು ಈ ಹುದ್ದೆಗೆ ಬಂದ 20 ದಿನಗಳಲ್ಲೇ ಅನೇಕ ಸಲ ಕೋರಿದ್ದರೂ ಕ್ರಮ ತೆಗೆದುಕೊಂಡಿಲ್ಲ’ ಎಂದು ರೂಪಾ ಅವರು ಡಿಜಿಪಿ ಎಚ್‌.ಎನ್‌. ಸತ್ಯನಾರಾಯಣ್‌ ರಾವ್ ಅವರಿಗೆ ಸಲ್ಲಿಸಿದ್ದ ವರದಿಯಲ್ಲಿ ಹೇಳಿದ್ದರು.

ಕಾರಾಗೃಹದಲ್ಲಿವೆ 126 ಟಿ.ವಿಗಳು!

‘ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಹಾಗೂ ಕರೀಂ ಲಾಲ್ ತೆಲಗಿಯ ಸೆಲ್‌ಗಳಿಗೆ ಟಿ.ವಿ ನೀಡಿರುವುದು ವಿಶೇಷ ಸೌಲಭ್ಯದ ವ್ಯಾಪ್ತಿಗೆ ಬರುವುದಿಲ್ಲ. ಕಾರಣ, ಕಾರಾಗೃಹದ ಪ್ರತಿಯೊಂದು ಕೋಣೆಯಲ್ಲೂ ಈಗ ಟಿ.ವಿಯನ್ನು ಇಡಲಾಗಿದೆ’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೈಲಿನಲ್ಲಿ 4,000ಕ್ಕೂ ಹೆಚ್ಚು ಕೈದಿಗಳಿದ್ದಾರೆ. ವಿಚಾರಣಾಧೀನ ಕೈದಿಗಳಿರುವ ‘ಟವರ್–1’ ಬ್ಲಾಕ್‌ನಲ್ಲಿ ಒಟ್ಟು ಒಂಬತ್ತು ಬ್ಯಾರಕ್‌ಗಳು ಬರುತ್ತವೆ. ಪ್ರತಿ ಬ್ಯಾರಕ್‌ನಲ್ಲೂ 6 ರಿಂದ 7 ಸೆಲ್‌ಗಳಿವೆ. ಎಲ್ಲ ಸೆಲ್‌ಗಳಲ್ಲೂ ಟಿ.ವಿಗಳನ್ನು ಇಡಲಾಗಿದೆ. ಅಂದರೆ, ಈ ಬ್ಲಾಕ್‌ನಲ್ಲೇ 56 ಟಿ.ವಿಗಳಿವೆ.’

‘ಅಂತೆಯೇ ಸಜಾಬಂದಿಗಳಿರುವ ‘ಟವರ್–2’ ಬ್ಲಾಕ್‌ನಲ್ಲಿ ಏಳು ಬ್ಯಾರಕ್‌ಗಳಿವೆ. ಇಲ್ಲಿಯೂ ಸೆಲ್‌ಗೆ ಒಂದರಂತೆ 50 ಟಿ.ವಿಗಳನ್ನು ಹಾಕಿದ್ದೇವೆ. ಆಸ್ಪತ್ರೆ ವಿಭಾಗದಲ್ಲೂ 20 ಟಿ.ವಿಗಳಿವೆ. ಅತಿ ಭದ್ರತೆಯ (ಹೈ–ಸೆಕ್ಯುರಿಟಿ) ಬ್ಲಾಕ್‌ನಲ್ಲಿ 20 ಸೆಲ್‌ಗಳಿದ್ದು, ಅಲ್ಲಿ ಕೈದಿಗಳು ಕೇಳಿದರೆ ಮಾತ್ರ ಟಿ.ವಿ ಒದಗಿಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)