ಭಾನುವಾರ, ಡಿಸೆಂಬರ್ 8, 2019
21 °C

ಕ್ರಿಕೆಟ್: ಎರ್ವಿನ್‌ ಶತಕದ ಸೊಬಗು

Published:
Updated:
ಕ್ರಿಕೆಟ್: ಎರ್ವಿನ್‌ ಶತಕದ ಸೊಬಗು

ಕೊಲಂಬೊ: ಕ್ರೆಗ್‌ ಎರ್ವಿನ್‌ (ಬ್ಯಾಟಿಂಗ್‌ 151; 238ಎ, 13ಬೌಂ, 1ಸಿ) ಅವರ ವೃತ್ತಿಬದುಕಿನ ಶ್ರೇಷ್ಠ ಆಟದ ನೆರವಿನಿಂದ ಜಿಂಬಾಬ್ವೆ ತಂಡ ಶ್ರೀಲಂಕಾ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಸವಾಲಿನ ಮೊತ್ತದತ್ತ ದಾಪುಗಾಲಿಟ್ಟಿದೆ.

ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ ಪ್ರಥಮ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 8 ವಿಕೆಟ್‌ಗೆ 344ರನ್‌ ಗಳಿಸಿತು.

ಆರಂಭಿಕ ಸಂಕಷ್ಟ: ಬ್ಯಾಟಿಂಗ್‌ ಶುರು ಮಾಡಿದ ಜಿಂಬಾಬ್ವೆ ತಂಡ ಆರಂಭಿಕ ಸಂಕಷ್ಟ ಎದುರಿಸಿತು. ಇನಿಂಗ್ಸ್‌ ಆರಂಭಿಸಿದ ಹ್ಯಾಮಿಲ್ಟನ್‌ ಮಸಕಜ (19; 40ಎ, 2ಬೌಂ) ಮತ್ತು ರೆಜಿಸ್‌ ಚಕಬ್ವಾ (12; 23ಎ) ಬೇಗನೆ ಔಟಾದರು. ತರಿಸೈ ಮುಸಕಾಂಡ (6)  ಹಾಗೂ ಸೀನ್‌ ವಿಲಿಯಮ್ಸ್‌ (22; 26ಎ, 4ಬೌಂ) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ  ನಿಲ್ಲಲಿಲ್ಲ. ಹೀಗಾಗಿ ತಂಡ ಆತಂಕ ಎದುರಿಸಿತ್ತು. ಆದರೆ ಎರ್ವಿನ್‌, ಮಿಂಚಿನ ಆಟದ ಮೂಲಕ ಗಮನ ಸೆಳೆದರು.

ಸಿಂಹಳೀಯ ನಾಡಿನ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಎಡಗೈ ಬ್ಯಾಟ್ಸ್‌ಮನ್‌ ಎರ್ವಿನ್‌, ರಂಗನಾ ಹೆರಾತ್‌ ಬೌಲ್‌ ಮಾಡಿದ 60ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಗಳಿಸಿ ಶತಕದ ಸಂಭ್ರಮ ಆಚರಿಸಿದರು.

ಸಂಕ್ಷಿಪ್ತ ಸ್ಕೋರ್‌

ಜಿಂಬಾಬ್ವೆ: ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 8 ವಿಕೆಟ್‌ಗೆ 344 ( ಕ್ರೆಗ್‌ ಎರ್ವಿನ್‌ ಬ್ಯಾಟಿಂಗ್‌ 151, ಸೀನ್‌ ವಿಲಿಯಮ್ಸ್‌ 22, ಸಿಕಂದರ ರಾಜ 36,  ಮಾಲ್ಕಮ್‌ ವಾಲರ್‌ 36 ಡೊನಾಲ್ಡ್‌ ತಿರಿಪಾನೊ ಬ್ಯಾಟಿಂಗ್‌ 24;  ರಂಗನಾ ಹೆರಾತ್‌ 106ಕ್ಕೆ4).

ಪ್ರತಿಕ್ರಿಯಿಸಿ (+)