ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಲಗ್ಗೆಯಿಟ್ಟ ಸಿಲಿಕ್

Last Updated 14 ಜುಲೈ 2017, 19:55 IST
ಅಕ್ಷರ ಗಾತ್ರ

ಲಂಡನ್: ಕ್ರೊವೇಷ್ಯಾದ ಆಟಗಾರ ಮರಿನ್ ಸಿಲಿಕ್ ಶುಕ್ರವಾರ ಮೊದಲ ಬಾರಿಗೆ ವಿಂಬಲ್ಡನ್ ಫೈನಲ್ ತಲುಪಿದ ಸಂಭ್ರಮ ಆಚರಿಸಿದರು.

11ನೇ ಸೆಮಿಫೈನಲ್‌ ಪ್ರಯತ್ನದಲ್ಲಿ ಸಿಲಿಕ್‌ 6–7, 6–4, 7–6, 7–5ರಲ್ಲಿ ಅಮೆರಿಕದ ಸ್ಯಾಮ್‌ ಕ್ವೆರಿ ಅವರನ್ನು ಮಣಿಸಿದರು.

ಏಳನೇ ಶ್ರೇಯಾಂಕದ ಕ್ರೊವೇಷ್ಯಾದ ಆಟಗಾರ 2014ರಲ್ಲಿ ಅಮೆರಿಕ ಓಪನ್ ಗೆದ್ದುಕೊಂಡಿದ್ದರು.

‘ನನಗೆ ಈಗಲೂ ನಂಬಲು ಆಗುತ್ತಿಲ್ಲ. ಸೆಮಿಫೈನಲ್‌ನಲ್ಲಿ ನಾನು ಉತ್ತಮವಾಗಿ ಆಡಲು ಸಾಧ್ಯವಾಗಿದ್ದಕ್ಕೆ ಅತೀವ ಸಂತಸವಾಗಿದೆ’ ಎಂದು 28 ವರ್ಷದ ಆಟಗಾರ ಸಿಲಿಕ್ ಹೇಳಿದ್ದಾರೆ.

‘ಮೊದಲ ಸೆಟ್‌ನಲ್ಲಿ ಸ್ಯಾಮ್ ಅಮೋಘವಾಗಿ ಆಡಿದರು. ಆದರೆ ಬಳಿಕ ನಾನು ಎಂದಿನ ಲಯಕ್ಕೆ ಮರಳಿದೆ. ಗೆಲ್ಲುವ ಭರವಸೆ ಇತ್ತು. ಇದರಿಂದಲೇ ಜಯ ಗಳಿಸಲು ಸಾಧ್ಯವಾಯಿತು’ ಎಂದು ಸಿಲಿಕ್ ಹೇಳಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 28ನೇ ಸ್ಥಾನದಲ್ಲಿರುವ ಕ್ವೆರಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅಗ್ರಗಣ್ಯ ಆಟಗಾರ ಆ್ಯಂಡಿ ಮರ್ರೆ ಅವರನ್ನು ಮಣಿಸಿ ಪ್ರಶಸ್ತಿ ಸುತ್ತು ತಲುಪುವ ವಿಶ್ವಾಸ ಮೂಡಿಸಿದ್ದರು.

ಆದರೆ ಸಿಲಿಕ್ 25 ಏಸ್‌ಗಳನ್ನು ಸಿಡಿಸುವ ಮೂಲಕ ಪಂದ್ಯ ತಮ್ಮದಾಗಿಸಿಕೊಂಡರು.

ಫೈನಲ್ ತಲುಪಿದ ಕ್ರೊವೇಷ್ಯಾದ ಎರಡನೇ ಆಟಗಾರ ಎಂಬ ಶ್ರೇಯ ಸಿಲಿಕ್ ಅವರಿಗೆ ಸಂದಿದೆ. ಗೊರ್ವನ್‌ ಇವಾನಿಸೆವಿಚ್ ಈ ಮೊದಲು ಇಲ್ಲಿ ಫೈನಲ್ ಪಂದ್ಯ ಆಡಿದ್ದರು.

ಬ್ಯಾಕ್‌ಹ್ಯಾಂಡ್ ಹೊಡೆತಗಳಲ್ಲಿ ಹಿಂದೆ ಉಳಿದ ಸಿಲಿಕ್ ಮೊದಲ ಸೆಟ್‌ನಲ್ಲಿ ಸೋಲು ಕಂಡರು. ಆದರೆ ಬ್ರೇಕ್‌ಪಾಯಿಂಟ್ಸ್‌ ಪಡೆಯುವ ಸಮಯದಲ್ಲಿ ಕ್ವೆರಿ ತೀವ್ರ ಹಿನ್ನಡೆ ಅನುಭವಿಸಿದರು. ಇದರ ಲಾಭ ಪಡೆದ ಸಿಲಿಕ್ ಗೆಲುವು ಒಲಿಸಿಕೊಂಡರು.

ಎರಡನೇ ಸೆಟ್‌ನ ಒಂದು ಮತ್ತು ಐದನೇ ಗೇಮ್‌ನಲ್ಲಿ ಸಿಲಿಕ್ ಬ್ರೇಕ್‌ಪಾಯಿಂಟ್ಸ್‌ ಪಡೆದುಕೊಳ್ಳುವಲ್ಲಿ ಮುಗ್ಗರಿಸಿದರು.

**

ಬೋಪಣ್ಣ ಜೋಡಿಗೆ ಸೋಲು

ಭಾರತದ ರೋಹನ್ ಬೋಪಣ್ಣ ಹಾಗೂ ಕೆನಡಾದ ಗ್ಯಾಬ್ರಿಯೆಲಾ ದಬ್ರೋವ್‌ಸ್ಕಿ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.

ಬೋಪಣ್ಣ ಸೋಲಿನೊಂದಿಗೆ ಈ ಬಾರಿಯ ವಿಂಬಲ್ಡನ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ಫ್ರೆಂಚ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ಹತ್ತನೇ ಶ್ರೇಯಾಂಕದ ಈ ಜೋಡಿ ಇಲ್ಲಿ 7–6, 4–6, 5–7ರಲ್ಲಿ ಶ್ರೇಯಾಂಕ ರಹಿತ ಜೋಡಿ ಹೆನ್ರಿ ಕೊಂಟನೆನ್‌ ಮತ್ತು ಹೆದರ್‌ ವಾಟ್ಸನ್‌ ಎದುರು ನಿರಾಸೆ ಅನುಭವಿಸಿದೆ.

ಗೆಲುವು ದಾಖಲಿಸಿದ ಜೋಡಿ 109 ಪಾಯಿಂಟ್ಸ್ ಪಡೆದರೆ ಬೋಪಣ್ಣ ಜೋಡಿ 104 ಪಾಯಿಂಟ್ಸ್ ಪಡೆದು ಕೊಂಡಿತು.

ಪುರುಷರ ಡಬಲ್ಸ್ ವಿಭಾಗದಲ್ಲಿ ಬೋಪಣ್ಣ ಜೋಡಿ ಈಗಾಗಲೇ ಸೋಲು ಅನುಭವಿಸಿ ಹೊರಬಿದ್ದಿದೆ. ಸಾನಿಯಾ ಮಿರ್ಜಾ ಕೂಡ ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಪರಾಭವಗೊಂಡಿದ್ದಾರೆ.

ಜೂನಿಯರ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಮಹಕ್ ಜೈನ್, ಜೀಲ್ ದೇಸಾಯಿ, ಮಿಹಿಕಾ ಯಾದವ್ ಮತ್ತು ಸಿದ್ದಾರ್ಥ್‌ ಬಂತಿಯಾ ಕೂಡ ಸೋಲು ಕಂಡಿದ್ದಾರೆ.

ಜೀಲ್ ದೇಸಾಯಿ ಜೂನಿಯರ್ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ತಲುಪಿದ್ದರೆ, ಡಬಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದರು.

**

ಆರನೇ ಪ್ರಶಸ್ತಿ ನಿರೀಕ್ಷೆಯಲ್ಲಿ ವೀನಸ್‌

ಅಮೆರಿಕದ ವೀನಸ್‌ ವಿಲಿಯಮ್ಸ್‌ ವೃತ್ತಿಜೀವನದಲ್ಲಿ ತಮ್ಮ ಆರನೇ ವಿಂಬಲ್ಡನ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

ಶನಿವಾರ ಇಲ್ಲಿನ ಆಲ್‌ ಇಂಗ್ಲೆಂಡ್‌ ಕೋರ್ಟ್‌ನಲ್ಲಿ ನಡೆಯುವ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ವೀನಸ್ ಸ್ಪೇನ್‌ನ ಗಾರ್ಬೈನ್ ಮುಗುರುಜಾ ಅವರ ಸವಾಲು ಎದುರಿಸಲಿದ್ದಾರೆ.

ಸೆಮಿಫೈನಲ್‌ನಲ್ಲಿ ವೀನಸ್‌ 6–4, 6–2ರಲ್ಲಿ ಜೊಹನ್ನಾ ಕೊಂಥಾ ಅವರ ಸವಾಲನ್ನು ಮೀರಿ ನಿಲ್ಲುವ ಮೂಲಕ ಪ್ರಶಸ್ತಿ ಸುತ್ತು ತಲುಪಿದ್ದರು. 37 ವರ್ಷದ ಆಟಗಾರ್ತಿ ಒಂಬತ್ತನೇ ಬಾರಿ ಇಲ್ಲಿ ಫೈನಲ್‌ ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT