ಸೋಮವಾರ, ಡಿಸೆಂಬರ್ 16, 2019
18 °C

ಭ್ರಷ್ಟಾಚಾರದ ತನಿಖೆ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರದ ತನಿಖೆ ಶುರು

ಬೆಂಗಳೂರು/ಮೈಸೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಗಳ ವಿಚಾರಣೆಗೆ ನಿವೃತ್ತ ಐಎಎಸ್ ಅಧಿಕಾರಿ ವಿನಯ­ಕುಮಾರ್ ಅವರನ್ನು ಮುಖ್ಯ­ಮಂತ್ರಿ ಸಿದ್ದರಾಮಯ್ಯ ನೇಮಿಸಿದ್ದಾರೆ. ವಿನಯಕುಮಾರ್ ಅವರು ಕೇಂದ್ರ ಸರ್ಕಾರದ ಕಾರ್ಯದರ್ಶಿ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ವಿನಯಕುಮಾರ್ ಅಧ್ಯಕ್ಷತೆಯ ಸಮಿತಿ ಒಂದು ವಾರದಲ್ಲಿ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಲಿದೆ. ಒಂದು ತಿಂಗಳಲ್ಲಿ ಸಮಗ್ರ ವರದಿ ನೀಡಲು ಸೂಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸೇವಾ ನಿಯಮದಲ್ಲಿ ಅವಕಾಶವಿಲ್ಲ:  ‘ಭ್ರಷ್ಟಾಚಾರ ನಡೆದಿರುವ ಬಗ್ಗೆ ದಾಖಲೆಗಳಿದ್ದರೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲು ಕಾರಾಗೃಹದ ಡಿಐಜಿ ಡಿ.ರೂಪಾ ಅವರಿಗೆ ಅಧಿಕಾರವಿದೆ. ಆದರೆ, ಪದೇ ಪದೇ ಮಾಧ್ಯಮಗಳ ಎದುರು ಹಿರಿಯ ಅಧಿಕಾರಿಯ ಬಗ್ಗೆ ಆರೋಪ ಮಾಡಿದ್ದಾರೆ. ಸೇವಾ ನಿಯಮದಲ್ಲಿ ಇದಕ್ಕೆ ಅವಕಾಶವಿಲ್ಲ. ಹೀಗಾಗಿ, ಡಿಐಜಿ ರೂಪಾ ಅವರಿಗೆ ನೋಟಿಸ್‌ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನೇ ಗುರಿಯಾದೆ– ರೂಪಾ:  ‘ಪ್ರತಿಕ್ರಿಯೆ ನೀಡಲು ನಾನಾಗಿಯೇ  ಮಾಧ್ಯಮಗಳ ಮುಂದೆ ಹೋಗಿಲ್ಲ. ಡಿಜಿಪಿ ಅವರ ಮಾತುಗಳನ್ನು ಕೇಳಿ, ಅದಕ್ಕೆ ಸ್ಪಷ್ಟನೆ ನೀಡಿದ್ದೇನೆ ಅಷ್ಟೆ.  ಕಾನೂನು ಎಲ್ಲರಿಗೂ ಅನ್ವಯವಾಗಬೇಕು. ನನಗಷ್ಟೇ ಅಲ್ಲ. ಈ ಪ್ರಕರಣದಲ್ಲಿ ನನ್ನನ್ನು ಗುರಿ ಮಾಡಲಾಗುತ್ತಿದೆ’ ಎಂದು ಡಿಐಜಿ ಡಿ.ರೂಪಾ ಅಸಮಾಧಾನ ವ್ಯಕ್ತಪಡಿಸಿದರು.

ತಮಗೆ ನೀಡಿರುವ ನೋಟಿಸ್‌ ಬಗ್ಗೆ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇಲಾಖೆಯ ನಿಯಮಾವಳಿಯಂತೆ ಕೆಲಸ ಮಾಡುತ್ತಿದ್ದೇನೆ. ಅಕ್ರಮದ ಬಗ್ಗೆ ಇಲಾಖೆಯ ಮುಖ್ಯಸ್ಥರಾದ ಡಿಜಿಪಿ ಅವರಿಗೇ ವರದಿ ನೀಡಿದ್ದೇನೆ. ಮಾಧ್ಯಮಗಳಿಗೆ ಯಾವುದೇ ಮಾಹಿತಿ ಸೋರಿಕೆ ಮಾಡಿಲ್ಲ ಎಂದರು’.

‘ಗುರುವಾರ ರಾಜ್ಯದ ವಿವಿಧ ಜೈಲುಗಳಲ್ಲಿ ನಡೆದ ಪ್ರತಿಭಟನೆಯ ವಿಡಿಯೊ ಹಾಗೂ ಫೋಟೊಗಳು ಹೇಗೆ ಮಾಧ್ಯಮಗಳಿಗೆ ಸೋರಿಕೆಯಾದವು’ ಎಂದು ಪ್ರಶ್ನಿಸಿದ ರೂಪಾ, ‘ನನಗೂ ಕೈದಿಗಳಿಗೂ ಯಾವುದೇ ವೈರತ್ವ ಇಲ್ಲ’ ಎಂದರು.

‘ಐದು ವರ್ಷಗಳ ಹಿಂದೆ ಸೋನಿಯಾ ನಾರಂಗ್ ಅವರೂ ಪ್ರಕರಣವೊಂದರಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಆಗ ಅವರು  ಮುಖ್ಯಮಂತ್ರಿ ಅವರನ್ನೇ  ಪ್ರಶ್ನೆ ಮಾಡಿದ್ದರು. ಅದೇ ರೀತಿ ಹಲವು ಅಧಿಕಾರಿಗಳು ಮಾಧ್ಯಮ ಜತೆ ಮಾತನಾಡಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿತ್ತು’ ಎಂದು ಅವರು ತಿಳಿಸಿದರು.

‘ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಮುಖ್ಯಮಂತ್ರಿ ನೀಡಿರುವ ಆದೇಶವನ್ನು ಸ್ವಾಗತಿಸುತ್ತೇನೆ. ಇದರಿಂದ ಸತ್ಯಾಂಶ ಹೊರಬರಲಿದೆ’ ಎಂದರು.

ಡಿಜಿಪಿಗೆ ಮತ್ತೆ ಪತ್ರ ಬರೆದ ಡಿಐಜಿ: ‘ಭ್ರಷ್ಟಾಚಾರ ಆರೋಪ ಕೇಳಿಬಂದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿ ಪ್ರತಿಭಟನೆ ನಡೆಸಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕ ಕೃಷ್ಣಕುಮಾರ್‌ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಿ’ ಎಂದು ರೂಪಾ ಅವರು ಸತ್ಯನಾರಾಯಣರಾವ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಅಕ್ರಮದ ಬಗ್ಗೆ ನಿಮಗೆ ಪತ್ರ ಬರೆದಿದ್ದೇನೆ. ಅದಕ್ಕಾಗಿ ನನ್ನ ವಿರುದ್ಧ ಜೈಲು ಅಧೀಕ್ಷಕರು ಮಾಧ್ಯಮಗಳಿಗೆ ಹೇಳಿಕೆ ನೀಡಿ ಕರ್ತವ್ಯಲೋಪ ಎಸಗಿದ್ದಾರೆ. ಸಿಬ್ಬಂದಿಯೂ ಪ್ರತಿಭಟನೆ ನಡೆಸಿದ್ದಾರೆ. ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ’ ಎಂದು ಪತ್ರದಲ್ಲಿ  ಡಿಐಜಿ ಪ್ರಶ್ನಿಸಿದ್ದಾರೆ.

ಪೆನ್‌ಡ್ರೈವ್‌ನಲ್ಲಿ ವಿಡಿಯೊ ಸಂಗ್ರಹ: ಜುಲೈ 10ರಂದು ಜೈಲಿಗೆ ಭೇಟಿ ನೀಡಿದ್ದ ಡಿ.ರೂಪಾ, ಅಲ್ಲಿಯ ದೃಶ್ಯಗಳನ್ನು ಕಾರಾಗೃಹದ ಸಿಬ್ಬಂದಿ ಮೂಲಕ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ. ಜತೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಅವರು ಸಂಗ್ರಹಿಸಿದ್ದಾರೆ. ಎಲ್ಲ ವಿಡಿಯೊಗಳನ್ನು ಅವರು ಪೆವ್‌ಡ್ರೈವ್‌ನಲ್ಲಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಚಿನ್ನಮ್ಮ ಭೇಟಿಗೆ ವಿಶೇಷ ಕೊಠಡಿ

ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌ ಅವರಿಗೆ ಸಲ್ಲಿಸಲೆಂದು ಕಾರಾಗೃಹಗಳ ಡಿಐಜಿ ಡಿ.ರೂಪಾ ಅವರು ಜೈಲಿನ ಅಕ್ರಮಗಳ ಬಗ್ಗೆ ಸಮಗ್ರ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ.

‘ಪರಪ್ಪನ ಅಗ್ರಹಾರ  ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಭೇಟಿಗೂ ಕಾರಾಗೃಹದಲ್ಲಿ ವಿಶೇಷ ಕೊಠಡಿ ಮೀಸಲಿಡಲಾಗಿದೆ’ ಎಂಬ ಅಂಶವು ವರದಿಯಲ್ಲಿದೆ ಎನ್ನಲಾಗಿದೆ.

ಜೈಲು ಅಧೀಕ್ಷಕ ಕೃಷ್ಣಕುಮಾರ್‌ ಅವರ ಕೊಠಡಿ ಪಕ್ಕವೇ ಶಶಿಕಲಾ ಅವರ ಭೇಟಿಗಾಗಿ ಕೊಠಡಿ ಮೀಸಲಿಡಲಾಗಿದೆ. ತಮಿಳುನಾಡಿನ ಮುಖಂಡರು, ಜೈಲಿಗೆ ಬಂದಾಗಲೆಲ್ಲ ಅದೇ ಕೊಠಡಿಯಲ್ಲಿ  ಅವರನ್ನು ಭೇಟಿಯಾಗುತ್ತಿದ್ದಾರೆ ಎಂಬ ಸಂಗತಿ ವರದಿಯಲ್ಲಿದೆ.

‘ವಿಶೇಷ ಕೊಠಡಿಯಲ್ಲಿ 4 ಕುರ್ಚಿ, ಟೇಬಲ್‌, ಫ್ಯಾನ್ ಇಡಲಾಗಿದೆ. ಒಂದು ಕುರ್ಚಿಯಲ್ಲಿ ಶಶಿಕಲಾ ಕುಳಿತುಕೊಂಡರೆ,  ಇನ್ನುಳಿದ ಕುರ್ಚಿಯಲ್ಲಿ ಮುಖಂಡರು ಕುಳಿತುಕೊಳ್ಳುವ ವ್ಯವಸ್ಥೆ ಇದೆ’. 

‘ಆದರೆ, ಈ ಕೊಠಡಿಗೆ ಇದುವರೆಗೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿಲ್ಲ. ಈ ಮೂಲಕ ಜೈಲಿನ ಅಧಿಕಾರಿಗಳೇ ನಿಯಮ ಉಲ್ಲಂಘಿಸಿದ್ದಾರೆ. ಈ ಬಗ್ಗೆ ವರದಿ ನೀಡುವಂತೆ ತಿಳಿಸಿದರೂ ಅಧಿಕಾರಿಗಳು ಸಲ್ಲಿಸಿಲ್ಲ’ ಎಂದು ಸಹ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘15 ದಿನಕ್ಕೊಮ್ಮೆ ಮಾತ್ರ ಕೈದಿ ಭೇಟಿಗೆ ಅವಕಾಶವಿರುತ್ತದೆ. ಆದರೆ, ಶಶಿಕಲಾ ಅವರನ್ನು ಯಾವಾಗ ಬೇಕಾದರೂ ಮುಖಂಡರು ಭೇಟಿಯಾಗುತ್ತಿದ್ದಾರೆ. ಇದಕ್ಕೆ ಕಾರಾಗೃಹದ ಸಿಬ್ಬಂದಿಯೇ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ’ ಎಂಬ ಅಂಶವಿದೆ.

ಪ್ರತಿಕ್ರಿಯಿಸಿ (+)