ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾವೆಲ್ಲ ವೈದ್ಯರೇ ಎಂಬ ನಿರ್ಧಾರಕ್ಕೆ ಬನ್ನಿ’

2ನೇ ವಿಶ್ವ ಕ್ವಾಂಟಮ್‌ ಎನರ್ಜಿ ಮೆಡಿಸಿನ್‌ ಸಮ್ಮೇಳನಕ್ಕೆ ಚಾಲನೆ
Last Updated 14 ಜುಲೈ 2017, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಅಲೋಪಥಿ, ಹೋಮಿಯೋಪಥಿ, ಯುನಾನಿ, ಆಯುರ್ವೇದ ವೈದ್ಯರನ್ನು ಪ್ರತ್ಯೇಕಿಸಿದೆ, ಎಲ್ಲರೂ ವೈದ್ಯರೇ ಎಂಬ ನಿರ್ಧಾರಕ್ಕೆ ಬರಬೇಕಿದೆ’ ಎಂದು ಆಯುಷ್‌ ಇಲಾಖೆಯ ನಿವೃತ್ತ ನಿರ್ದೇಶಕ ಜಿ.ಎನ್‌.ಶ್ರೀಕಂಠಯ್ಯ ತಿಳಿಸಿದರು.

ವರ್ಲ್ಡ್‌ ಆಫ್‌ ಕ್ವಾಂಟಮ್‌ ಎನರ್ಜಿ ಮೆಡಿಸಿನ್‌ (ಡಬ್ಲ್ಯುಒಕ್ಯುಇಎಂ) ಸಂಸ್ಥೆಯ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘2ನೇ ವಿಶ್ವ ಕ್ವಾಂಟಮ್‌ ಎನರ್ಜಿ ಮೆಡಿಸಿನ್‌ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

‘ಆಧುನಿಕ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ತೊಡಗಿಸಿಕೊಂಡಿರುವ ಕೆಲ ವೈದ್ಯರು, ನಾವೇ ಶ್ರೇಷ್ಠ, ನೀವು ಕನಿಷ್ಠ ಎಂದು ವಾದ ಮಾಡುತ್ತಾರೆ. ಆದರೆ, ಎಲ್ಲ ಪದ್ಧತಿಗಳ ಮೂಲ ಉದ್ದೇಶ ರೋಗಿಗೆ ಉತ್ತಮ ಚಿಕಿತ್ಸೆ ನೀಡುವುದೇ ಆಗಿದೆ. ಚಿಕಿತ್ಸಾ ಪದ್ಧತಿ ಯಾವುದೇ ಇರಲಿ, ಎಲ್ಲರನ್ನು ವೈದ್ಯರೆಂದೇ ಪರಿಗಣಿಸಬೇಕು’ ಎಂದು ಹೇಳಿದರು.

‘ಅಲೋಪಥಿ ಚಿಕಿತ್ಸಾ ಪದ್ಧತಿಯಲ್ಲಿ ರೋಗಿಯ ದೇಹಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ತುರ್ತು ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೆ ಇದು ಹೆಚ್ಚು ಉಪಯುಕ್ತ. ಆದರೆ, ಆಯುರ್ವೇದ, ಹೋಮಿಯೋಪಥಿ, ಯುನಾನಿ ಪದ್ಧತಿಯಲ್ಲಿ ದೇಹದ ಜತೆಗೆ ಮನಸ್ಸಿಗೂ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ರೋಗ ಬರದಂತೆ ತಡೆಗಟ್ಟಬಹುದು’ ಎಂದರು.

ನಿಮ್ಹಾನ್ಸ್‌ನ ನಿರ್ದೇಶಕ ಡಾ.ಬಿ.ಎನ್‌. ಗಂಗಾಧರ್‌, ‘ಯೋಗಾಭ್ಯಾಸದಿಂದ ಮಿದುಳಿನ ನರಕೋಶಗಳು (ನ್ಯೂರಾನ್‌) ಚುರುಕಾಗಿ ಕೆಲಸ ಮಾಡುತ್ತವೆ. ಯೋಗದಿಂದ ಆಗುವ ಉಪಯೋಗಗಳ ಬಗ್ಗೆ ಅಧ್ಯಯನ ನಡೆಸಲು ನಿಮ್ಹಾನ್ಸ್‌ನಲ್ಲಿ ಪ್ರತ್ಯೇಕ ವಿಭಾಗವನ್ನೇ ತೆರೆಯಲಾಗಿದೆ’ ಎಂದು ತಿಳಿಸಿದರು.

ಡಬ್ಲ್ಯುಒಕ್ಯುಇಎಂ ಸಂಶೋಧನಾ ಕೇಂದ್ರದ ನಿರ್ದೇಶಕಿ ರೀಟಾ ಮಹಾಜನ್‌, ‘ಒಬ್ಬರಿಗೆ ಕಾಯಿಲೆ ಬಂದರೆ, ಇಡೀ ಕುಟುಂಬದ ಸದಸ್ಯರು ದುಡಿದು ಕೂಡಿಟ್ಟ ಹಣವನ್ನೆಲ್ಲಾ ಖರ್ಚು ಮಾಡಬೇಕಾಗುತ್ತದೆ. ಅವರ ಜೀವನವೆಲ್ಲಾ ಬೇಸರ, ನೋವು, ಜಗಳ, ಖಿನ್ನತೆಯಲ್ಲೇ ಕಳೆದುಹೋಗುತ್ತದೆ. ಆದರೆ, ಪ್ರತಿಯೊಬ್ಬರ ದೇಹದಲ್ಲಿ ದಿವ್ಯಶಕ್ತಿ ಇದೆ. ಅದನ್ನು ಬಳಸಿಕೊಳ್ಳುವುದರಿಂದ ರೋಗಗಳು ಬರದಂತೆ ತಡೆಗಟ್ಟಬಹುದು. ಸುಖ, ನೆಮ್ಮದಿಯಿಂದ ಬಾಳಬಹುದು’ ಎಂದರು.‘ಧ್ಯಾ

ನ, ಯೋಗ ಮಾಡುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಚೈತನ್ಯಶಕ್ತಿ ಸಿಗುತ್ತದೆ. ಮನಸ್ಸಿಗೆ ಇಷ್ಟವಾಗುವ ಸಂಗೀತ, ಕಲೆ, ನೃತ್ಯದಂತಹ ಕಲಾ ಪ್ರಕಾರಗಳಲ್ಲೂ ತೊಡಗಿಸಿಕೊಳ್ಳುವುದರಿಂದ ಒತ್ತಡ ನಿವಾರಣೆ ಆಗುತ್ತದೆ. ಮನಸ್ಸು ನಿರಾಳವಾಗುತ್ತದೆ’ ಎಂದು ಹೇಳಿದರು.

ಈ ಸಮ್ಮೇಳನವು ಜುಲೈ 16ರವರೆಗೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT