ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣಪುಟ್ಟ ನಿವೇಶನಗಳಲ್ಲಿ ಅಪಾರ್ಟ್‌ಮೆಂಟ್‌ ನಿರ್ಬಂಧ

ಕನಿಷ್ಠ 5,381 ಚದರ ಅಡಿ ನಿವೇಶನ ಇದ್ದರೆ ಮಾತ್ರ ಅನುಮತಿ
Last Updated 14 ಜುಲೈ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ಸಣ್ಣ–ಪುಟ್ಟ ನಿವೇಶನದಲ್ಲಿ ಎಂಟು–ಹತ್ತು ಫ್ಲ್ಯಾಟ್ ಇರುವ ಅಪಾರ್ಟ್‌ಮೆಂಟ್‌ ಕಟ್ಟುವವವರಿಗೆ ನಿರ್ಬಂಧ ವಿಧಿಸಲು ಸರ್ಕಾರ ಮುಂದಾಗಿದೆ.

ನಗರಾಭಿವೃದ್ಧಿ ಇಲಾಖೆ ಸಿದ್ಧಪಡಿಸಿರುವ ಕರಡು ಸಾಮಾನ್ಯ ವಲಯ (ಝೆಡ್ ಆರ್‌) ನಿಯಮಗಳ ಅನುಸಾರ ಅಪಾರ್ಟ್‌ಮೆಂಟ್‌ ನಿರ್ಮಿಸಬೇಕಾದರೆ ಕನಿಷ್ಠ 5,381.56 ಚದರಡಿ (500 ಮೀಟರ್‌) ಅಳತೆಯ ನಿವೇಶನ ಇರಬೇಕು ಹಾಗೂ ನಿವೇಶನಕ್ಕೆ ಅಭಿಮುಖವಾಗಿ 30 ಅಡಿ ಅಗಲದ ರಸ್ತೆ ಇರಬೇಕು. ಹಾಗಿದ್ದರೆ ಮಾತ್ರ  ವಸತಿ ಉದ್ದೇಶದ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಅನುಮತಿ ಸಿಗಲಿದೆ.

ಇಲ್ಲಿಯವರೆಗೆ ಈ ರೀತಿಯ ಯಾವುದೇ ನಿರ್ಬಂಧ ಇರಲಿಲ್ಲ. ಹೀಗಾಗಿ, 30X40, 60X40, 50X80 ಅಳತೆಯ ನಿವೇಶನಗಳಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣ ಮಾಡಲಾಗುತ್ತಿತ್ತು. ಬೆಂಗಳೂರಿನಲ್ಲಿ ಇಂತಹ ಸಾವಿರಾರು ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿದ್ದವು. ಹೊಸ ನಿಯಮ ಜಾರಿಯಾದರೆ ಈ ಮಾದರಿಯ ಕಿರು ವಸತಿ ಸಮುಚ್ಚಯಗಳಿಗೆ ಕಡಿವಾಣ ಬೀಳಲಿದೆ.

ಈ ನಿಯಮವು ಒಮ್ಮೆ ಜಾರಿಯಾದರೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಉಳಿದ ಎಲ್ಲ ಮಹಾನಗರ ಪಾಲಿಕೆ ಹಾಗೂ ನಗರಸಭೆ, ಪುರಸಭೆಗಳ ವ್ಯಾಪ್ತಿಯ ಪ್ರದೇಶಕ್ಕೂ ಅನ್ವಯವಾಗಲಿದೆ.

ಒಂದು ಅಂತಸ್ತಿನಲ್ಲಿ ನಾಲ್ಕು ವಾಸ ಯೋಗ್ಯ ಘಟಕಗಳಿರುವ ಒಂದಕ್ಕಿಂತ ಹೆಚ್ಚು ಅಂತಸ್ತುಗಳಿರುವ ಕಟ್ಟಡವನ್ನು ಅಪಾರ್ಟ್‌ಮೆಂಟ್‌ ಎಂದು ಕರಡು ನಿಯಮ ವ್ಯಾಖ್ಯಾನಿಸಿದೆ. ನಗರಗಳ ಅಭಿವೃದ್ಧಿಯಲ್ಲಿ ಏಕರೂಪತೆ ತರುವ ಉದ್ದೇಶದಿಂದ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ.

‘ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿರುವ ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ  ಅಪಾರ್ಟ್‌ಮೆಂಟ್‌ಗಳು ನಾಯಿಕೊಡೆಗಳಂತೆ ಏಳುತ್ತಿವೆ. ಚಾಲ್ತಿಯಲ್ಲಿರುವ ಮಾಸ್ಟರ್‌ ಪ್ಲಾನ್‌ನಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ನಿಯಂತ್ರಿಸುವ   ನಿಯಮಗಳು ಇಲ್ಲದೇ ಇರುವುದರಿಂದ ಎಲ್ಲೆಂದರಲ್ಲಿ ನಿರ್ಮಾಣವಾಗುತ್ತಿವೆ. ಬೆಂಗಳೂರಿನಲ್ಲಂತೂ ಸಣ್ಣಪುಟ್ಟ ನಿವೇಶನಗಳಲ್ಲೂ ಅಪಾರ್ಟ್‌ಮೆಂಟ್‌ ಕಟ್ಟಲಾಗುತ್ತಿದೆ. ಇದರ ನಿಯಂತ್ರಣಕ್ಕಾಗಿ  ಸಾಮಾನ್ಯ ವಲಯ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ನಗರ ಯೋಜನಾ ನಿರ್ದೇಶಕ ಎಲ್. ಶಶಿಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

***

ಉದ್ಯಾನ, ಮುಕ್ತ ಪ್ರದೇಶಕ್ಕೆ ಅವಕಾಶ

ಖಾಸಗಿ ಭೂಮಿಯನ್ನು ಉದ್ಯಾನ ಮತ್ತು  ಮುಕ್ತ ಪ್ರದೇಶ ಎಂದು ಗುರುತಿಸುವ ಅಧಿಕಾರವನ್ನು ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ನೀಡಲು ಸಾಮಾನ್ಯ ವಲಯ ನಿಯಮಗಳಲ್ಲಿ  ಅವಕಾಶ ಕಲ್ಪಿಸಲಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರಗಳು ಅಭಿವೃದ್ಧಿ ಪಡಿಸುವ ಬಡಾವಣೆಗಳ ಅಕ್ಕಪಕ್ಕದಲ್ಲಿ ಕನಿಷ್ಠ 10,763 ಚದರ ಅಡಿ ಅಳತೆಯ ಖಾಸಗಿ ಭೂಮಿ ಇದ್ದರೆ ಅದರಲ್ಲಿ ಶೇ 50ರಷ್ಟನ್ನು ಉದ್ಯಾನ ಎಂದು  ಘೋಷಿಸುವ ಅಧಿಕಾರ ಪ್ರಾಧಿಕಾರಕ್ಕೆ ಸಿಗಲಿದೆ.

ಆದರೆ, ಖಾಸಗಿ ಭೂಮಿಯ ಮಾಲೀಕ ಈ ಭೂಮಿಯನ್ನು ಉಚಿತವಾಗಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಬೇಕು. ಉಳಿದ ಜಾಗವನ್ನು ಯಾವುದೇ ಉದ್ದೇಶಕ್ಕಾದರೂ ಮಾಲೀಕ ಬಳಸಬಹುದು.

ಈಗಿರುವ ನಗರ ಯೋಜನಾ ಕಾಯ್ದೆ ಅನುಸಾರ, ಉದ್ಯಾನ ಮತ್ತು ಮುಕ್ತ ಪ್ರದೇಶಕ್ಕಾಗಿ ಸೂಕ್ತ ಪರಿಹಾರ ನೀಡಿಯೇ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಆದರೆ, ಪರಿಹಾರ ನೀಡುವಷ್ಟು ಸಂಪನ್ಮೂಲ ಪ್ರಾಧಿಕಾರಗಳಲ್ಲಿ ಇಲ್ಲ.  ಪ್ರಾಧಿಕಾರ ಮತ್ತು ಭೂಮಾಲೀಕರಿಗೆ ಲಾಭ ಮಾಡಿ ಕೊಡುವ ಉದ್ದೇಶದಿಂದ ನಿಯಮ ಸೇರಿಸಲು ಸರ್ಕಾರ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT