ಭಾನುವಾರ, ಡಿಸೆಂಬರ್ 8, 2019
21 °C

ನಿವೇಶನ ವಾಪಸ್‌ಗೆ ಶಾಸಕ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿವೇಶನ ವಾಪಸ್‌ಗೆ ಶಾಸಕ ನಿರ್ಧಾರ

ಹುಬ್ಬಳ್ಳಿ: ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಉದ್ದೇಶಕ್ಕಾಗಿ ಇಲ್ಲಿನ ಬೈರಿದೇವರಕೊಪ್ಪದಲ್ಲಿ ಪಡೆದಿದ್ದ 20 ಗುಂಟೆ ವಿಸ್ತೀರ್ಣದ ನಿವೇಶನವನ್ನು ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಹುಡಾ) ಮರಳಿಸಲು ಶಾಸಕ ಪ್ರಸಾದ್‌ ಅಬ್ಬಯ್ಯ ನಿರ್ಧರಿಸಿದ್ದಾರೆ.

ತಾವು ಅಧ್ಯಕ್ಷರಾಗಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗೆ ಒಂದು ಎಕರೆ ಜಾಗ ಮಂಜೂರು ಮಾಡುವಂತೆ ಕೋರಿ 2011ರಲ್ಲಿ ಪ್ರಸಾದ್‌ ಅಬ್ಬಯ್ಯ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಆದರೆ, 20 ಗುಂಟೆ ನಿವೇಶನವನ್ನು (ಕ್ರಮ ಸಂಖ್ಯೆ 10, ರಿ.ಸಂ.ನಂ. 310, ಸಿ.ಎ. ನಿವೇಶನ ನಂ 7) ಹಂಚಿಕೆ ಮಾಡಲಾಯಿತು. ಪ್ರಸಾದ್‌ ಅವರು ಶಾಸಕರಾದ ನಂತರ ಹುಡಾದ ಸದಸ್ಯರೂ ಆಗಿದ್ದಾರೆ. ಹೀಗಾಗಿ, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಈ ಸಂಗತಿ ನವನಗರದ ನಿವಾಸಿ ಮಂಜುನಾಥ ಎಂ. ಕೊಣ್ಣೂರ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯಿಂದ ಬಹಿರಂಗವಾಗಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪ್ರಸಾದ್, ‘ಅಕ್ರಮ ಮಾರ್ಗದಿಂದ ನಾನು ನಿವೇಶನ ಪಡೆಯಲು ಬಯಸಿದ್ದರೆ ಹಲವು ವರ್ಷಗಳ ಹಿಂದೆಯೇ ಪಡೆಯುತ್ತಿದ್ದೆ. ವಿದ್ಯಾಸಂಸ್ಥೆಯ ಮೂಲಕ ಕಾಲೇಜು ಆರಂಭಿಸುವ ಉದ್ದೇಶ ಮೊದಲಿನಿಂದಲೂ ಇತ್ತು. ಈ ಉದ್ದೇಶಕ್ಕಾಗಿಯೇ ಅರ್ಜಿ ಸಲ್ಲಿಸಿ ನಿವೇಶನ ಪಡೆದುಕೊಂಡಿದ್ದೆ. ಆದರೆ, ನಿಯಮಗಳ ಪ್ರಕಾರ ನಗರ ಪ್ರದೇಶದಲ್ಲಿ ಕಾಲೇಜು ಆರಂಭಿಸಲು ಒಂದು ಎಕರೆ ಜಾಗ ಬೇಕಿದ್ದರಿಂದ ಮಂಜೂರಾದ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಿರಲಿಲ್ಲ. ಅಂದು ಹುಡಾ ಸಭೆಯಲ್ಲಿದ್ದ ಶಾಸಕರಾದ ಜಗದೀಶ ಶೆಟ್ಟರ್‌, ಅರವಿಂದ ಬೆಲ್ಲದ, ಶ್ರೀನಿವಾಸ ಮಾನೆ ಅವರು ಇನ್ನೊಮ್ಮೆ ಅರ್ಜಿ ಹಾಕಿರಿ.

ಒಂದು ಎಕರೆ ಮಂಜೂರು ಮಾಡಿಸೋಣ ಎಂದು ಸಲಹೆ ನೀಡಿದ್ದರು.

ಅದರಂತೆ ಅರ್ಜಿ ಹಾಕಿದ್ದೆ. ಈಗ ಆಗುತ್ತಿರುವ ಬೆಳವಣಿಗೆಗಳಿಂದ ಮನನೊಂದು ಮಂಜೂರಾಗಿದ್ದ 20 ಗುಂಟೆ ಜಾಗವನ್ನು ವಾಪಸ್‌ ಮಾಡಲು ನಿರ್ಧರಿಸಿದ್ದು, ಈ ಸಂಬಂಧ ನನ್ನ ಸಹೋದರ ಮಂಜುನಾಥ ಅಬ್ಬಯ್ಯ ಅವರಿಗೆ ಹೇಳಿದ್ದೇನೆ’ ಎಂದರು.

ಪ್ರತಿಕ್ರಿಯಿಸಿ (+)