ಶುಕ್ರವಾರ, ಡಿಸೆಂಬರ್ 6, 2019
17 °C
ಆಗಸ್ಟ್‌ 15ರ ಗಡುವಿನೊಳಗೆ ‘ಇಂದಿರಾ ಕ್ಯಾಂಟೀನ್‌’ ನಿರ್ಮಿಸಲು ಬೆಂಗಳೂರು ಮಹಾನಗರ ಪಾಲಿಕೆ ತರಾತುರಿ

ಹಂಚಿಕೆಯಾದ ನಿವೇಶನದ ಮೇಲೂ ಪಾಲಿಕೆ ಕಣ್ಣು

ಪಿ. ವಿ.ಪ್ರವೀಣ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಹಂಚಿಕೆಯಾದ ನಿವೇಶನದ ಮೇಲೂ ಪಾಲಿಕೆ ಕಣ್ಣು

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಇಂದಿರಾ ಕ್ಯಾಂಟೀನ್‌’   ಯೋಜನೆಯನ್ನು ಆಗಸ್ಟ್‌ 15ರ ಒಳಗೆ ಜಾರಿಗೊಳಿಸುವ ತರಾತುರಿಯಲ್ಲಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದಕ್ಕೆ 14 ಕಡೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನಗಳನ್ನು ಬಳಸಿಕೊಳ್ಳಲು ಮುಂದಾಗಿದೆ.

ಕ್ಯಾಂಟೀನ್‌ ನಿರ್ಮಾಣಕ್ಕಾಗಿ ಬಿಬಿಎಂಪಿ ಗುರುತಿಸಿರುವ ಬಿಡಿಎ ಜಾಗಗಳ ಪೈಕಿ ಈಗಾಗಲೇ ಹಂಚಿಕೆ ಮಾಡಿರುವ ನಾಗರಿಕ ಸೌಕರ್ಯ ನಿವೇಶನಗಳೂ ಸೇರಿವೆ. ಇಂತಹ ಜಾಗವನ್ನು ನೀಡಲು ಬಿಡಿಎ ನಿರಾಕರಿಸಿದೆ.

ಉತ್ತರಹಳ್ಳಿ ವಾರ್ಡ್‌ನ  ಸುಬ್ರಹ್ಮಣ್ಯ  ಕೆರೆ  ಸಮೀಪದ 1,600 ಚದರ ಅಡಿ ಜಾಗ ನೀಡುವಂತೆ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು ಬಿಡಿಎಗೆ ಪತ್ರ ಬರೆದಿದ್ದರು. ಆದರೆ, ಈ ಜಾಗವನ್ನು ಬಿಡಿಎ 2009ರಲ್ಲಿ ಸಮಾಜ ಸಂಪರ್ಕ ವೇದಿಕೆಗೆ ವಿದ್ಯಾರ್ಥಿನಿಲಯ ನಿರ್ಮಿಸುವ ಉದ್ದೇಶಕ್ಕೆ ಹಂಚಿಕೆ ಮಾಡಿತ್ತು.

‘ಈ ನಿವೇಶನವು ಈಗಾಗಲೇ ಹಂಚಿಕೆ ಆಗಿರುವುದರಿಂದ ಅದನ್ನು ನೀಡಲು ಸಾಧ್ಯವಿಲ್ಲ’  ಎಂದು ಬಿಡಿಎ  ಬೊಮ್ಮನಹಳ್ಳಿ ವಲಯದ  ಜಂಟಿ ಆಯುಕ್ತರಿಗೆ ಶುಕ್ರವಾರ ಪತ್ರ ಬರೆದಿದೆ.

‘ಸಾಮಾನ್ಯವಾಗಿ ಮೂಲಸೌಕರ್ಯ ನಿವೇಶನಗಳನ್ನು ಹಂಚಿಕೆ ಮಾಡುವ ಮುನ್ನ  ಅಧಿಸೂಚನೆ ಹೊರಡಿಸಿ, ಈ ಕುರಿತು ಪತ್ರಿಕೆಗಳಲ್ಲಿ ಪ್ರಕಟಣೆ ನೀಡುತ್ತೇವೆ. ನಿರ್ದಿಷ್ಟ ನಿವೇಶನವನ್ನು ಯಾವ ಉದ್ದೇಶಕ್ಕೆ ಮೀಸಲಿಡಲಾಗಿದೆ ಎಂಬುದನ್ನೂ ಅದರಲ್ಲಿ ಉಲ್ಲೇಖಿಸುತ್ತೇವೆ. ಅರ್ಜಿದಾರರ ಪೈಕಿ ಅರ್ಹರಿಗೆ ಅದನ್ನು ಹಂಚಿಕೆ ಮಾಡುತ್ತೇವೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ಮೂಲಸೌಕರ್ಯ ನಿವೇಶನಗಳ ಹಂಚಿಕೆ ನಿಯಮಗಳ ಪ್ರಕಾರ ನಿರ್ದಿಷ್ಟ ಉದ್ದೇಶಕ್ಕೆ ಯಾವುದಾದರೂ ನಿವೇಶನವನ್ನು ಕಾಯ್ದಿರಿಸಿದ್ದರೆ ಅದನ್ನು  ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಒದಗಿಸಲು ಸಾಧ್ಯವಿಲ್ಲ. ಬಿಬಿಎಂಪಿ ಸುಮಾರು 14 ಕಡೆ ಜಾಗವನ್ನು ಕೇಳಿದೆ.   ಎಲ್ಲ ಕಡೆ ಜಾಗ ನೀಡಲು ಸಾಧ್ಯವಿಲ್ಲ. ಅವಕಾಶ ಇರುವ ಕಡೆ ಈ ಉದ್ದೇಶಕ್ಕೆ ಜಾಗ ನೀಡುತ್ತೇವೆ’ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬಿಡಿಎ ಈಗಾಗಲೇ ಹಂಚಿಕೆ ಮಾಡಿರುವ ಜಾಗವನ್ನು ನಾವು ಗುರುತಿಸಿರುವ ಸಾಧ್ಯತೆ ಇರಲೂಬಹುದು. ಬಿಡಿಎ ಆ ಜಾಗವನ್ನು ನೀಡಲು ಸಾಧ್ಯವಾಗದಿದ್ದರೆ, ಸಮೀಪದಲ್ಲೇ ಬೇರೆ ಜಾಗ ನೀಡಬೇಕಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.

‘ನಗರದ 198 ವಾರ್ಡ್‌ಗಳಲ್ಲೂ ಇಂದಿರಾ ಕ್ಯಾಂಟೀನ್‌ ನಿರ್ಮಾಣವಾಗಲಿವೆ. 150 ಕಡೆ ಈಗಾಗಲೇ ಜಾಗವನ್ನು ಗುರುತಿಸಿ ಕಟ್ಟಡ  ನಿರ್ಮಾಣಕ್ಕೂ ಚಾಲನೆಯನ್ನೂ ನೀಡಲಾಗಿದೆ’ ಎಂದು ತಿಳಿಸಿದರು.

‘ಕ್ಯಾಂಟೀನ್‌ಗೆ ಬಿಬಿಎಂಪಿ ಜಾಗ ಲಭ್ಯ ಇಲ್ಲದ ಕಡೆ ಬಿಡಿಎ, ಪೊಲೀಸ್‌ ಇಲಾಖೆ, ಜಲಮಂಡಳಿ ಕರ್ನಾಟಕ ಗೃಹಮಂಡಳಿಯ ಜಾಗಗಳನ್ನು ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಜಾಗ ಹಸ್ತಾಂತರ ಪ್ರಕ್ರಿಯೆ ಸ್ವಲ್ಪ ವಿಳಂಬವಾಗುತ್ತದೆ. ಆದರೂ, ಎಲ್ಲ ವಾರ್ಡ್‌ಗಳಲ್ಲೂ ಆಗಸ್ಟ್‌ 15ರ ಒಳಗೆ ಕ್ಯಾಂಟೀನ್‌ ಆರಂಭಿಸುವ ಉದ್ದೇಶ ಇಟ್ಟುಕೊಂಡು ನಾವು ಕಾರ್ಯಪ್ರವೃತ್ತರಾಗಿದ್ದೇವೆ’ ಎಂದರು.

‘ಆಗಸ್ಟ್‌ 15ರೊಳಗೆ ಕ್ಯಾಂಟೀನ್‌ ನಿರ್ಮಿಸಬೇಕು ಎಂಬ ಕಾರಣಕ್ಕೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಜಾಗ ಗುರುತಿಸಿರುವುದು ಸರಿಯಲ್ಲ. ಜನರಿಗೆ ಅನುಕೂಲ ಆಗುವ ಇಂತಹ ಯೋಜನೆಗಳ ಅನುಷ್ಠಾನದ ವೇಳೆ ಗೊಂದಲಗಳಿಗೆ ಅವಕಾಶ ನೀಡಬಾರದು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸಾಯಿದತ್ತ ಹೇಳಿದರು.

**

ಇಂದಿರಾ ಕ್ಯಾಂಟೀನ್‌ಗೆ ಪ್ರತಿದಿನ ಸ್ಥಳ ಬದಲಾವಣೆ: ಆಕ್ರೋಶ

ದೊಮ್ಮಲೂರು ವಾರ್ಡ್‌ನಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ದಿನ ದಿನವೂ ಸ್ಥಳ ಬದಲಿಸಲಾಗುತ್ತಿದ್ದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

‘ಕ್ಯಾಂಟೀನ್‌ ನಿರ್ಮಾಣಕ್ಕಾಗಿ ಮೊದಲು ಹಳೆ ವಿಮಾನ ನಿಲ್ದಾಣ ರಸ್ತೆಯ ಸರ್ವೀಸ್‌ ರಸ್ತೆಯಲ್ಲಿ ಸ್ಥಳ ಗುರುತಿಸಿ, ಅಲ್ಲಿದ್ದ ಮರವನ್ನೂ ಕಡಿದಿದ್ದರು. ಆದರೆ, ಇದ್ದಕ್ಕಿದ್ದ ಹಾಗೆ ಆ ಸ್ಥಳವನ್ನು ಬದಲಾಯಿಸಿ ಶಂಕರ್‌ನಾಗ್‌ ಉದ್ಯಾನದಲ್ಲಿ ಕ್ಯಾಂಟೀನ್‌ ನಿರ್ಮಿಸಲು ನಿರ್ಧರಿಸಿದ್ದಾರೆ’ ಎಂದು ಸಾರ್ವಜನಿಕರು ದೂರಿದರು.

‘ಈಗಾಗಲೇ ಮರ ಕಡಿದು, ಸ್ಥಳ ಗುರುತಿಸಿರುವುದನ್ನು ಬಿಟ್ಟು ಉದ್ಯಾನದಲ್ಲಿ ಮತ್ತೆ 20 ಮರ ಕಡಿಯಲು ಹೊರಟಿರುವುದು ಸರಿಯಲ್ಲ. ಇದಕ್ಕೆ ನಾವು ಬಿಡುವುದೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಎನ್.ಎ.ಹ್ಯಾರಿಸ್ ಹಾಗೂ ಸ್ಥಳೀಯ ಕಾರ್ಪೊರೇಟರ್ ಲಕ್ಷ್ಮೀನಾರಾಯಣ ನಡುವೆ ಮಾತಿನ ಚಕಮಕಿ ನಡೆಯಿತು.

ಎನ್.ಎ.ಹ್ಯಾರಿಸ್, ‘ಅವನೇ ನಿನ್ನೆ ಕ್ಯಾಂಟೀನ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದ. ಆದರೆ, ಇವತ್ತು ಕೆಲ ಜನರನ್ನು ಸೇರಿಸಿ ಬೇಡ ಅನ್ನುತ್ತಿದ್ದಾನೆ. ಮನೆ ಮುಂದೆ ಮರ ಕಡೀತಾನೆ, ಇಲ್ಲಿ ಬಂದು ಮರ ತಬ್ಬಿಕೊಳ್ತಾನೆ’ ಎಂದು ಟೀಕಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀನಾರಾಯಣ, ‘ಶಾಸಕರು ಹೇಳುತ್ತಿರುವುದೆಲ್ಲ ಶುದ್ಧ ಸುಳ್ಳು. ಅದು ನಿಜ ಆದ್ರೆ, ನಾನು ಬಿಬಿಎಂಪಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ’ ಎಂದರು.

ನಂತರ, ಸ್ಥಳೀಯರ ಮಾತಿಗೆ ಮಣಿದು ಬೇರೆ ಕಡೆ ಕ್ಯಾಂಟೀನ್ ನಿರ್ಮಿಸಲು ತೀರ್ಮಾನಿಸಲಾಯಿತು.

ಬನಶಂಕರಿ ವಾರ್ಡ್‌ನಲ್ಲೂ ಪ್ರತಿಭಟನೆ: ಬನಶಂಕರಿ ದೇವಸ್ಥಾನ ವಾರ್ಡ್‌ನಲ್ಲೂ ಕ್ಯಾಂಟೀನ್‌ ನಿರ್ಮಾಣಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಯಾಂಟೀನ್‌ ನಿರ್ಮಾಣಕ್ಕೆ ದೇವಸ್ಥಾನದ ಜಾಗದಲ್ಲಿ ಸ್ಥಳಾವಕಾಶ ಒದಗಿಸಲಾಗಿದೆ ಎಂಬುದು ಅವರ ಆಕ್ರೋಶಕ್ಕೆ ಕಾರಣ.

**

‘ವಿರೋಧವಿದ್ದೆಡೆ ಪರ್ಯಾಯ ಜಾಗ’

‘ಇಂದಿರಾ ಕ್ಯಾಂಟೀನ್‌ ಸಲುವಾಗಿ ಮರಗಳನ್ನು ಕಡಿಯುವ ಬಗ್ಗೆ ಹಾಗೂ ಆಟದ ಮೈದಾನಗಳಿರುವ ಜಾಗವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುವ ಬಗ್ಗೆ ವಿರೋಧ ವ್ಯಕ್ತವಾಗಿರುವ ಕಡೆ ಪರ್ಯಾಯ ಜಾಗ ಹುಡುಕುತ್ತಿದ್ದೇವೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು. ಇಂದಿರಾ ಕ್ಯಾಂಟೀನ್‌ಗೆ ಬಳಕೆ ಯಾಗುವ ಬಿಡಿಎ ನಿವೇಶನಗಳ ಮಾಲೀಕತ್ವ ಪ್ರಾಧಿಕಾರದ ಬಳಿಯೇ ಉಳಿಯಲಿದೆ.

ಪ್ರತಿಕ್ರಿಯಿಸಿ (+)