ಶನಿವಾರ, ಡಿಸೆಂಬರ್ 7, 2019
16 °C
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲವಳ್ಳಿ ರಮೇಶ್‌

ಜಗಳೂರಿನಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರಿನಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪನೆ

ದಾವಣಗೆರೆ:  ಜಗಳೂರು ತಾಲ್ಲೂಕಿನಲ್ಲಿ ₹ 283 ಕೋಟಿ ವೆಚ್ಚದಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲವಳ್ಳಿ ರಮೇಶ್‌ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘500 ಎಕರೆ ವಿಸ್ತೀರ್ಣದಲ್ಲಿ ಘಟಕ ನಿರ್ಮಾಣವಾಗಲಿದ್ದು ಭೂಮಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ ನೂರಾರು ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ’ ಎಂದು ಮಾಹಿತಿ ನೀಡಿದರು.

‘ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ₹ 6 ಕೋಟಿ ವೆಚ್ಚದಲ್ಲಿ ಡೈಯಿಂಗ್ ಘಟಕ ಆರಂಭಕ್ಕೆ ಸ್ಥಳದ ಹುಡುಕಾಟ ನಡೆದಿದೆ. ಘಟಕಕ್ಕೆ ಪ್ರತಿದಿನ ಒಂದು ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು, ತುಂಗಭದ್ರಾ ನದಿಯಿಂದ ಪಡೆಯುವ ಸಂಬಂಧ ಚರ್ಚೆ ನಡೆಯುತ್ತಿದೆ’ ಎಂದರು.

ಪ್ರಸ್ತುತ, ಖಾದಿ ನೂಲಿಗೆ ಬಣ್ಣ ಹಾಕಲು ಅಹಮದಾಬಾದ್ ಹಾಗೂ ತಮಿಳುನಾಡಿನ ಘಟಕಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ತಯಾರಿಕಾ ವೆಚ್ಚ ಹೆಚ್ಚಾಗಿದೆ. ಸ್ಥಳೀಯವಾಗಿ ಘಟಕ ಆರಂಭವಾದರೆ ವೆಚ್ಚ ತಗ್ಗಲಿದ್ದು, 200ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಗಲಿದೆ ಎಂದರು.

ಮಹಾತ್ಮಾ ಗಾಂಧೀಜಿ ಸಣ್ಣ ಹಾಗೂ ಗುಡಿ ಕೈಗಾರಿಕೆಗಳ ಮಹತ್ವ ಸಾರಿ ಖಾದಿ ಬಳಕೆಯ ಬಗ್ಗೆ ಜನಜಾಗೃತಿ ಮೂಡಿಸಿದ್ದರು. ಅವರ ಹಾದಿಯಲ್ಲೇ ಮಂಡಳಿ ಸಾಗುತ್ತಿದ್ದು, ಖಾದಿ ಉದ್ಯಮವನ್ನು ಉಳಿಸಿ ಬೆಳೆಸಲು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ನೂಲುವವರಿಗೆ ಒಂದು ಲಡಿಗೆ ನೀಡಲಾಗುತ್ತಿದ್ದ ₹3 ಪ್ರೋತ್ಸಾಹ ಮಜೂರಿಯನ್ನು ₹ 7ಕ್ಕೆ ಹಾಗೂ ಮೀಟರ್ ಬಟ್ಟೆ ನೇಯ್ಕೆಗೆ ₹7ರಿಂದ ₹ 14ಕ್ಕೆ ಹೆಚ್ಚಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

2 ಖಾದಿ ಪ್ಲಾಜಾ: ತಲಾ ₹ 10 ಕೋಟಿ ವೆಚ್ಚದಲ್ಲಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ 2 ಖಾದಿ ಪ್ಲಾಜಾ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಒಂದೇ ಸೂರಿನಡಿ ಎಲ್ಲ ಖಾದಿ ಉತ್ಪನ್ನಗಳು ಇಲ್ಲಿ ಲಭ್ಯವಾಗಲಿದ್ದು, ಗ್ರಾಹಕರಿಗೆ ವಿಶಿಷ್ಟ ಖರೀದಿ ಅನುಭವ ಸಿಗಲಿದೆ ಎಂದರು.

ರಾಜ್ಯದಲ್ಲಿ 146 ಖಾದಿ ಸೊಸೈಟಿಗಳಿದ್ದು, 21,500 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲಭೂತ ಸೌಕರ್ಯ ಯೋಜನೆಯಡಿ ಹಳೆಯ ಉತ್ಪಾದನಾ ಕೇಂದ್ರಗಳ ದುರಸ್ತಿಗೆ, ಹೊಸ ಚರಕ ಹಾಗೂ ಮಗ್ಗಗಳ ಖರೀದಿಗೆ ಅನುದಾನ, ಹಳೆಯ ಖಾದಿ ಭಂಡಾರಗಳನ್ನು ಆಧುನಿಕತೆಗೆ ತಕ್ಕಂತೆ ನವೀಕರಣಗೊಳಿಸಲು ಸಹಾಯಧನ ನೀಡಲಾಗುತ್ತಿದ್ದು, ಈ ಯೋಜನೆಯಡಿ ನಿಟುವಳ್ಳಿಯಲ್ಲಿರುವ ಖಾದಿ ಮಳಿಗೆಯನ್ನು ಆಕರ್ಷಕವಾಗಿ ನವೀಕರಿಸಲಾಗಿದೆ ಎಂದರು.

ಯುವ ಜನಾಂಗವನ್ನು ಖಾದಿ ಉತ್ಪನ್ನಗಳತ್ತ ಸೆಳೆಯಲು ಹೊಸ ವಿನ್ಯಾಸಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್‌ ಫ್ಯಾಷನ್‌ ಟೆಕ್ನಾಲಜಿ (ಸಿಫ್ಟ್‌) ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಖಾದಿ ಸಂಘ ಸಂಸ್ಥೆಗಳಲ್ಲಿರುವ ಸಿಬ್ಬಂದಿಗೆ ಟೈಲರಿಂಗ್ ಹಾಗೂ ಫ್ಯಾಷನ್ ಡಿಸೈನಿಂಗ್ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಎಸ್‌.ಎನ್‌.ಬಾಲಾಜಿ, ಜಿಲ್ಲಾ ಖಾದಿ ಮಂಡಳಿ ಅಧಿಕಾರಿ ಬಸವರಾಜಪ್ಪ ಇದ್ದರು.

***

ನವೆಂಬರ್‌ನಲ್ಲಿ ಖಾದಿ ಉತ್ಸವ

ದಾವಣಗೆರೆಯಲ್ಲಿ ಖಾದಿ ಉತ್ಸವ ನಡೆಸಲಾಗುವುದು. ನವೆಂಬರ್‌ನಲ್ಲಿ 20 ದಿನಗಳ ಕಾಲ ನಡೆಯಲಿರುವ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ಮೂಲೆಮೂಲೆಗಳಿಂದ ಗ್ರಾಹಕರು ಭಾಗವಹಿಸಲಿದ್ದಾರೆ. 150ರಿಂದ 200 ಮಳಿಗೆಗಳಲ್ಲಿ ಖಾದಿ ಉತ್ಪನ್ನಗಳ ಜತೆಗೆ, ಗುಡಿ ಕೈಗಾರಿಕೆಗಳಲ್ಲಿ ತಯಾರಾಗುವ ಆಹಾರ ಪದಾರ್ಥಗಳು, ಆಯುರ್ವೇದಿಕ್‌ ಉತ್ಪನ್ನಗಳೂ ಮಾರಾಟಕ್ಕೆ ಲಭ್ಯವಿರುತ್ತವೆ. ಖಾದಿ ಜೀನ್ಸ್‌ ಪ್ರಮುಖ ಆಕರ್ಷಣೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವ ಉದ್ಘಾಟಿಸಲಿದ್ದಾರೆ ಎಂದು ರಮೇಶ್ ತಿಳಿಸಿದರು.

***

ಒಂದು ಲಕ್ಷ ಚರಕ ವಿತರಣೆ

ರಾಜ್ಯದಲ್ಲಿ ಚರಕದ ಮೂಲಕ ಉತ್ಪಾದನೆ ಶೇ 10 ಮಾತ್ರವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ಲಕ್ಷ ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ ಒಂದು ಲಕ್ಷ ಚರಕ ವಿತರಿಸುವ ಯೋಜನೆ ಹಮ್ಮಿಕೊಂಡಿದೆ. ಇದರಿಂದ ಶೇ 10ರಷ್ಟು ಖಾದಿ ಉತ್ಪನ್ನ ಉತ್ಪಾದನೆ ಹೆಚ್ಚಾಗಲಿದೆ.

ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಜಿಲ್ಲೆಯ 200 ಮತ್ತು ರಾಜ್ಯದ 5200 ಫಲಾನುಭವಿಗಳಿಗೆ ಕುರಿ, ಟಗರುಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದರಿಂದ ದೊರೆಯುವ ಉಣ್ಣೆಯನ್ನು ಉಣ್ಣೆ ಘಟಕಗಳು ಖರೀದಿಸಲಿವೆ. ಉಣ್ಣೆ ಸ್ವೆಟರ್, ಟೋಪಿ, ಮಫ್ಲರ್ ಉತ್ಪಾದಿಸಲಾಗುವುದು ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಿರ್ದೇಶಕ ಎಸ್.ಎನ್ ಬಾಲಾಜಿ ತಿಳಿಸಿದರು.

***

ಪ್ರಸ್ತುತ ಕೆಲವು ಖಾದಿ ಉತ್ಪನ್ನಗಳಿಗೆ ಮಾತ್ರ ಜಿಎಸ್‌ಟಿ ಅಡಿ ತೆರಿಗೆ ವಿನಾಯಿತಿ ಇದೆ. ಎಲ್ಲ ಖಾದಿ ಉತ್ಪನ್ನಗಳನ್ನು ತೆರಿಗೆ ಮುಕ್ತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗಿದೆ.

–ಯಲವಳ್ಳಿ ರಮೇಶ್‌, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)