ಶುಕ್ರವಾರ, ಡಿಸೆಂಬರ್ 6, 2019
17 °C

ಅನುದಾನಕ್ಕಾಗಿ ಶೌಚಾಲಯ ನಿರ್ಮಾಣ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನುದಾನಕ್ಕಾಗಿ ಶೌಚಾಲಯ ನಿರ್ಮಾಣ ಸಲ್ಲ

ಕೋಲಾರ: ‘ಶೌಚಾಲಯ ನಿರ್ಮಾಣವು ಬಳಕೆಗೆ ಹೊರತು ಸರ್ಕಾರದ ಅನುದಾನ ಪಡೆಯಲು ಅಲ್ಲ ಎಂಬ ಸಂಗತಿಯನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಬಿ.ಕಾವೇರಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಸ್ವಚ್ಛ ಭಾರತ್ ಮಿಷನ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾನಾಡಿದ ಅವರು, ‘ಸಾಕಷ್ಟು ಮಂದಿ ಸರ್ಕಾರದ ಸಹಾಯಧನಕ್ಕಾಗಿ ಶೌಚಾಲಯ ಕಟ್ಟಿಸಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಶೌಚಾಲಯ ನಿರ್ಮಾಣದ ಹಿಂದಿರುವ ಗೌರವ ಮತ್ತು ಆರೋಗ್ಯದ ಉದ್ದೇಶ ಹಾಗೂ ಬಳಕೆ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

‘2014ರ ಅ.2ರಂದು ನಿರ್ಮಲ ಭಾರತ್ ಅಭಿಯಾನದ ಮೂಲಕ ಎಲ್ಲಾ ಮನೆಗಳಲ್ಲೂ ಶೌಚಾಲಯ ನಿರ್ಮಿಸುವಂತೆ ಅರಿವು ಮೂಡಿಸುವ ಕಾರ್ಯ ಆರಂಭವಾಯಿತು. ಆದರೆ, ಇಷ್ಟು ವರ್ಷ ಕಳೆದರೂ ಶೌಚಾಲಯ ನಿರ್ಮಾಣದಲ್ಲಿ ಹೆಚ್ಚಿನ ಪ್ರಗತಿ ಸಾಧಿಸದಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣ ಆಗದಿರುವುದಕ್ಕೆ ಹಣಕಾಸಿನ ಕೊರತೆಯ ಉತ್ತರ ನೀಡುವುದು ಸಮಂಜಸವಲ್ಲ. ಪೋಷಕರಿಗೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ವಂತಿಗೆ ನೀಡಲು ಹಣವಿರುತ್ತದೆ. ದುಬಾರಿ ಮೊತ್ತದ ಮೊಬೈಲ್‌ ಕೊಂಡುಕೊಳ್ಳಲು ಹಣ ಇರುತ್ತದೆ. ಆದರೆ, ಶೌಚಾಲಯ ಕಟ್ಟಿಸಿಕೊಳ್ಳಲು ಹಣ ಇರುವುದಿಲ್ಲವೆ’ ಎಂದು ಪ್ರಶ್ನಿಸಿದರು.

ಸುಲಭದ ಮಾತಲ್ಲ: ‘ಅ.2ರೊಳಗೆ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಮಾಡುವುದು ಸುಲಭದ ಮಾತಲ್ಲ. ಈಗಾಗಲೇ ನೋಡಲ್ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿಗಳನ್ನು ಹಂಚಿಕೆ ಮಾಡಲಾಗಿದ್ದು, ಚುರುಕಾಗಿ ಕಾರ್ಯ ನಿರ್ವಹಿಸಿ ನಿಗದಿತ ಗಡುವಿನೊಳಗೆ ಉದ್ದೇಶಿತ ಗುರಿ ಸಾಧಿಸಬೇಕು’ ಎಂದು ಸೂಚಿಸಿದರು.

‘ಗ್ರಾಮಗಳಲ್ಲಿ ಅರಿವು ಮೂಡಿಸುವ ವೇಳೆ ಕೇವಲ ಭಾಷಣ ಮಾಡಿದರೆ ಪ್ರಯೋಜನವಾಗುವುದಿಲ್ಲ. ಆಕರ್ಷಣೀಯವಾಗಿ ಮಾತನಾಡಿ, ಶೌಚಾಲಯದ ಅಗತ್ಯತೆಯನ್ನು ಮನರಂಜನಾತ್ಮಕವಾಗಿ ಮನವರಿಕೆ ಮಾಡಿಕೊಡಬೇಕು. ಕೆಲವರು ಉದ್ದೇಶಪೂರ್ವಕವಾಗಿ ಅಧಿಕಾರಿಗಳನ್ನು ದಾರಿ ತಪ್ಪಿಸಲು ಯತ್ನಿಸುತ್ತಾರೆ. ಅಂತಹವರ ಬಳಿ ಎಚ್ಚರದಿಂದ ಮಾತನಾಡಬೇಕು’ ಎಂದು ತಿಳಿಸಿದರು.

ಹೆಚ್ಚಿನ ಪ್ರಗತಿಯಾಗಿಲ್ಲ: ‘ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳಿಂದ ಬಂದಿದ್ದ ಸಂಪನ್ಮೂಲ ವ್ಯಕ್ತಿಗಳು ಜಿಲ್ಲೆಯ 231 ಗ್ರಾಮಗಳಿಗೆ ಕಲಾ ತಂಡಗಳೊಂದಿಗೆ ತೆರಳಿ, ಗ್ರಾಮಗಳ ಚಿತ್ರ ಬಿಡಿಸುವ ಮೂಲಕ ಅರಿವು ಮೂಡಿಸಿದ್ದಾರೆ. ಅಧಿಕಾರಿಗಳು ಅದೇ ಹಾದಿಯಲ್ಲಿ ಸಾಗಬೇಕು. ಶೌಚಾಲಯ ನಿರ್ಮಾಣದಲ್ಲಿ ಬಂಗಾರಪೇಟೆ ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ. ಈ ತಾಲ್ಲೂಕುಗಳಲ್ಲಿ ಒಂದು ಗ್ರಾಮ ಪಂಚಾಯಿತಿ ಸಹ ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಣೆಯಾಗಿಲ್ಲ’ ಎಂದರು.

‘ಶೌಚಾಲಯ ನಿರ್ಮಾಣದಲ್ಲಿ ಮಾಲೂರು ತಾಲ್ಲೂಕಿನ 4 ಗ್ರಾಮ ಪಂಚಾಯಿತಿಗಳು ಬಯಲು ಬಹಿರ್ದೆಸೆ ಮುಕ್ತವಾಗಿದ್ದು, 11 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶೇ 80ಕ್ಕಿಂತ ಹೆಚ್ಚಿನ ಪ್ರಗತಿಯಾಗಿದೆ. ಕೋಲಾರ ತಾಲ್ಲೂಕಿನಲ್ಲಿ ಕ್ಯಾಲನೂರು ಮತ್ತು ನರಸಾಪುರ ಬಯಲು ಬಹಿರ್ದೆಸೆ ಮುಕ್ತವಾಗಿದ್ದು, 6 ಗ್ರಾಮ ಪಂಚಾಯಿತಿಗಳು ಶೇ 80ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿವೆ. 24 ಗ್ರಾಮ ಪಂಚಾಯಿತಿಗಳಲ್ಲಿ ಶೇ 80ರಷ್ಟು ಪ್ರಗತಿಯಾಗಿದ್ದು, 6 ಗ್ರಾಮ ಪಂಚಾಯಿತಿಗಳಲ್ಲಿ ಶೇ 60ಕ್ಕಿಂತ ಕಡಿಮೆ ಇದೆ’ ಎಂದು ಅವರು ಮಾಹಿತಿ ನೀಡಿದರು.

‘ಮುಳಬಾಗಿಲು ತಾಲ್ಲೂಕಿನಲ್ಲಿ 7 ಗ್ರಾಮ ಪಂಚಾಯಿತಿಗಳು ಶೇ 80ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಿವೆ. ಜಿಲ್ಲೆಗೆ ಪ್ರಥಮವಾಗಿ ತಾಯಲೂರು ಗ್ರಾಮ ಪಂಚಾಯಿತಿ ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಣೆಯಾಗಿದೆ. ಶೇ 60ಕ್ಕಿಂತಲೂ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳ ಸಂಖ್ಯೆ ಹೆಚ್ಚಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ಶೇ 60ಕ್ಕಿಂತ ಕಡಿಮೆ ಸಾಧನೆ ಮಾಡಿರುವ ಗ್ರಾಮ ಪಂಚಾಯಿತಿಗಳಿಗೆ ನೋಟಿಸ್‌ ನೀಡಲಾಗುತ್ತದೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ 7 ಗ್ರಾಮ ಪಂಚಾಯಿತಿಗಳು ಶೇ 80ರಷ್ಟು ಪ್ರಗತಿ ಸಾಧಿಸಿದ್ದು, ನೋಡಲ್ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು’ ಎಂದು ತಿಳಿಸಿದರು.

ದುಷ್ಪರಿಣಾಮ ವಿವರಿಸಿ: ‘ಶೌಚಾಲಯ ನಿರ್ಮಾಣ ಸಂಬಂಧ ಗ್ರಾಮಗಳಲ್ಲಿ ಅರಿವು ಮೂಡಿಸುವ ವೇಳೆ ಶೌಚಾಲಯ ನಿರ್ಮಿಸಿಕೊಂಡವರು ಹಾಗೂ ಶೌಚಾಲಯ ಇಲ್ಲದವರೂ ಭಾಗವಹಿಸಿರುತ್ತಾರೆ. ಗ್ರಾಮದ ಚಿತ್ರ ಬಿಡಿಸಿ, ಬಯಲಿನಲ್ಲಿ ಬಹಿರ್ದೆಸೆಗೆ ಹೋಗುವುದರಿಂದ ಗಾಳಿ, ನೀರು, ಭೂಮಿ ಕಲುಷಿತವಾಗಿ ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ಎಳೆ ಎಳೆಯಾಗಿ ವಿವರಿಸಬೇಕು. ಅಧಿಕಾರಿಗಳು ಮಾತನಾಡುವ ಶೈಲಿಯಿಂದ ಚಟುವಟಿಕೆಗಳು ಸಫಲವಾಗುತ್ತವೆ’ ಎಂದು ಸ್ವಚ್ಛ ಭಾರತ್ ಮಿಷನ್ ಅಧಿಕಾರಿ ನೋಟಲ್‌ ಜಗದೀಶ್ ಕಿವಿಮಾತು ಹೇಳಿದರು.

* * 

ಶೌಚಾಲಯ ನಿರ್ಮಿಸಿಕೊಳ್ಳುವ ಸಾಮಾನ್ಯ ವರ್ಗದವರಿಗೆ ₹ 12 ಸಾವಿರ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹ 15 ಸಾವಿರ ಸಹಾಯಧನ ನೀಡಲಾಗುತ್ತಿದೆ

ಬಿ.ಬಿ.ಕಾವೇರಿ

ಜಿಲ್ಲಾ ಪಂಚಾಯಿತಿ ಸಿಇಒ

ಪ್ರತಿಕ್ರಿಯಿಸಿ (+)