ಶನಿವಾರ, ಏಪ್ರಿಲ್ 17, 2021
27 °C
ಭದ್ರಾ ಜಲಾಶಯದಿಂದ ಗದಗ ಜಿಲ್ಲೆ ಸಿಂಗಟಾಲೂರು ಬ್ಯಾರೇಜ್‌ವರೆಗೆ ಪೈಪ್‌ಲೈನ್ ಅಳವಡಿಕೆ

ಜಲ ಕಳವು ನಿಯಂತ್ರಣಕ್ಕೆ ಪ್ರಾಧಿಕಾರದ ಪ್ರತಿತಂತ್ರ!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಜಲ ಕಳವು ನಿಯಂತ್ರಣಕ್ಕೆ ಪ್ರಾಧಿಕಾರದ ಪ್ರತಿತಂತ್ರ!

ಶಿವಮೊಗ್ಗ: ಕುಡಿಯುವ ನೀರಿನ ಯೋಜನೆಗಳಿಗೆ ನದಿ ಮೂಲಕ ಹರಿಸುವ ನೀರಿನ ದುರ್ಬಳಕೆ ತಡೆಯಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹೊಸ ಕಾರ್ಯ ತಂತ್ರ ರೂಪಿಸಿದೆ.

ಭದ್ರಾ ಜಲಾಶಯದಿಂದ ನದಿ ಮೂಲಕ ನೀರು ಹರಿಸುವ ಸಾಂಪ್ರದಾಯಿಕ ಪದ್ಧತಿಗೆ ತಿಲಾಂಜಲಿ ನೀಡಿ, ನದಿ ಪಾತ್ರದ ಉದ್ದಕ್ಕೂ ಗದಗ ಜಿಲ್ಲೆ ಮುಂಡರಗಿ ತಾಲ್ಲೂಕು ಸಿಂಗಟಾಲೂರು ಬ್ಯಾರೇಜ್‌ವರೆಗೆ 222 ಕಿ.ಮೀ. ದೂರ ಪೈಪ್‌ಲೈನ್‌ ಅಳವಡಿಸಿ, ಆ ಮೂಲಕ ಗುರುತ್ವಾಕರ್ಷಣೆ ಶಕ್ತಿಯ ಆಧಾರದ ಮೇಲೆ ಕುಡಿಯುವ ನೀರಿನ ಯೋಜನೆಗಳಿಗೆ ಅಗತ್ಯವಾದ ನೀರು ಹರಿಸಲಾಗುತ್ತದೆ.

ಜಲಾಶಯದಿಂದ ಸಿಂಗಟಾಲೂರು ಮಧ್ಯೆ ಇರುವ ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಗಳ 200ಕ್ಕೂ ಹೆಚ್ಚು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೂ ಈ ಪೈಪ್‌ಲೈನ್‌ ಮೂಲಕವೇ ನೀರನ್ನು ಪೂರೈಸಲಾಗುತ್ತದೆ. ಮೈಲ್ಡ್‌ಸ್ಟೀಲ್‌ನ ಈ ಪೈಪ್‌ ಮಾರ್ಗ ಅಳವಡಿಕೆಗೆ ತಗಲುವ ಅಂದಾಜು ವೆಚ್ಚ ₹ 700 ಕೋಟಿ.

ಭದ್ರಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ 71.53 ಟಿಎಂಸಿ ಅಡಿ.  ಇದರಲ್ಲಿ 13.832 ಟಿಎಂಸಿ ಅಡಿ ಡೆಡ್‌ಸ್ಟೋರೇಜ್‌ ಹೊರತುಪಡಿಸಿ ಉಳಿದ 57.698 ಟಿಎಂಸಿ ಅಡಿ ನೀರು ಕೃಷಿ, ಕೈಗಾರಿಕೆ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ.

ಸರ್ಕಾರದ ಆದೇಶದಂತೆ ಕುಡಿಯುವ ನೀರಿಗಾಗಿ ಪ್ರತಿ ವರ್ಷವೂ 7 ಟಿಎಂಸಿ ಅಡಿ ನೀರು ಮೀಸಲಿಡುವುದು ಕಡ್ಡಾಯ. ಅದರಲ್ಲಿ 3.367 ಟಿಎಂಸಿ ಅಡಿ ನೀರು ನದಿ ಮೂಲಕ ಹರಿಸಲಾಗುತ್ತದೆ.

ಮೂರು ಪಟ್ಟು ನೀರು ವ್ಯರ್ಥ: ಜಲಾಶಯದಿಂದ ಸಿಂಗಟಾಲೂರು ಬ್ಯಾರೇಜ್‌ವರೆಗೆ ನದಿ ಮೂಲಕ ನಿಗದಿತ ಪ್ರಮಾಣದ ನೀರು ತಲುಪಿಸಲು ಪ್ರಾಧಿಕಾರ ಇದುವರೆಗೂ ಅದರ ಮೂರುಪಟ್ಟು ನೀರು ಖರ್ಚು ಮಾಡುತ್ತಿದೆ. ಇದಕ್ಕೆ ಕಾರಣ ನದಿ ಪಾತ್ರದ ಉದ್ದಕ್ಕೂ ಇರುವ ಜಲಗಳ್ಳರ ಹಾವಳಿ, ಮರಳು ಗಣಿಗಾರಿಕೆಗೆ ತೆಗೆದ ಬೃಹತ್‌ ಗುಂಡಿಗಳು.

ಭದ್ರಾ ಹಾಗೂ ತುಂಗಭದ್ರಾ ನದಿ ತೀರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಕ್ರಮ ಪಂಪ್‌ಸೆಟ್‌ ಅಳವಡಿಸಲಾಗಿದ್ದು, ಬೇಸಿಗೆಯಲ್ಲಿ ಅಪಾರ ಪ್ರಮಾಣದ ನೀರನ್ನು ಅಕ್ರಮವಾಗಿ ಬಳಕೆ ಮಾಡಲಾಗುತ್ತಿದೆ. ಹೀಗಾಗಿ, ಕುಡಿಯುವ ನೀರಿನ ಯೋಜನೆಗಳಿಗೆ ನಿಗದಿತ ಪ್ರಮಾಣದ ನೀರು ತಲುಪಿಸುವುದು  ಪ್ರಾಧಿಕಾರಕ್ಕೆ ಸವಾಲಿನ ಕೆಲಸವಾಗಿದೆ.

ಕಳೆದ ಬೇಸಿಗೆಯಲ್ಲಿ ನೀರಿನ ತೀವ್ರ ಕೊರತೆಯ ನಡುವೆಯೂ ಗದಗ–ಬೆಟಗೇರಿಯವರಿಗೆ ಕುಡಿಯುವ ನೀರಿಗಾಗಿ ಅಗತ್ಯವಿದ್ದ 1.5 ಟಿಎಂಸಿ ಅಡಿಯಷ್ಟನ್ನು ತಲುಪಿಸಲು ಜಲಾಶಯದ 5 ಟಿಎಂಸಿ ಅಡಿ  ಖಾಲಿ ಮಾಡಲಾಗಿತ್ತು. ಇದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.

ಬೇಸಿಗೆ ಭತ್ತದ ಬೆಳೆ ತ್ಯಾಗ ಮಾಡಿದ್ದ ಅಚ್ಚುಕಟ್ಟು ರೈತರು ನದಿಗೆ ಅಷ್ಟೊಂದು ಪ್ರಮಾಣದ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲ ಕಾರಣಗಳಿಂದ ಭವಿಷ್ಯದಲ್ಲಿ ಜಲ ಕಳವು ತಡೆದು ನೀರು ಪೋಲಾಗದಂತೆ ಪ್ರಾಧಿಕಾರ ಪೈಪ್‌ಲೈನ್‌ ಅಳವಡಿಸುವ ಯೋಜನೆ ರೂಪಿಸಿದೆ.

‘3–4 ವರ್ಷಗಳಿಂದ ಮಳೆ ಕೊರತೆಯಾಗಿದೆ. ಎರಡು ವರ್ಷಗಳಿಂದ ಜಲಾಶಯ ಭರ್ತಿಯಾಗಿಲ್ಲ. ಅಚ್ಚುಕಟ್ಟು ರೈತರ ನಡುವೆಯೇ ನೀರಿಗಾಗಿ ಕಲಹ ಏರ್ಪಡುತ್ತಿದೆ. ನದಿ, ಕಾಲುವೆಗಳ ಮೂಲಕ ನೀರಿನ ಅಕ್ರಮ ಬಳಕೆ ಹೆಚ್ಚಾಗಿದೆ. ನದಿ ನೀರು ಪೋಲಾಗದಂತೆ ತಡೆದು ಕುಡಿಯುವ ನೀರಿನ ಯೋಜನೆಗಳಿಗೂ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ, ಪೈಪ್‌ಲೈನ್‌ ಮೂಲಕವೇ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಸರ್ಕಾರದ ಅನುಮೋದನೆ ಪಡೆದು ಯೋಜನೆ ಕಾರ್ಯಗತ ಮಾಡಲಾಗುವುದು’ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.