ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಸಾವಿರಾರು ರೈತರಿಗೆ ಸಿಗದ ಪರಿಹಾರ

Last Updated 15 ಜುಲೈ 2017, 5:37 IST
ಅಕ್ಷರ ಗಾತ್ರ

ತುಮಕೂರು: ‘ಬರ ಪರಿಹಾರ (ಇನ್‌ಪುಟ್ ಸಬ್ಸಿಡಿ) ಮೊತ್ತ ಜಿಲ್ಲೆಯ ಸಾವಿರಾರು ರೈತರಿಗೆ ಸಿಕ್ಕಿಲ್ಲ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣವಾಗಿದೆ ಎಂದು  ಜಿಲ್ಲಾ ಪಂಚಾಯಿತಿ ಸದಸ್ಯರು ಆರೋಪಿಸಿದರು. ಲೋಪ ಸರಿಪಡಿಸಿ ರೈತರಿಗೆ ಪರಿಹಾರ ಮೊತ್ತ ಶೀಘ್ರ ದೊರಕಿಸುವ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯ ಮಾಡಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಎಂ.ಲತಾ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಕೆಂಪಚೌಡಪ್ಪ, ಸರ್ಕಾರವು ಒಣ ಬೇಸಾಯ ಪ್ರತಿ ಎಕರೆಗೆ ₹ 6,500 ಪರಿಹಾರ ನಿಗದಿಪಡಿಸಿದೆ. ಎಕರೆವಾರು ಘೋಷಿಸಿದ ಈ ಮೊತ್ತಕ್ಕೆ ತಕ್ಕಂತೆ ರೈತರಿಗೆ ಪರಿಹಾರ ಬಂದಿಲ್ಲ ಎಂದು ದೂರಿದರು.
ಒಬ್ಬರಿಗೆ ₹ 500, ₹ 1500 ಈ ತರಹ ಬಂದಿದೆ. ಸಾವಿರಾರು ರೈತರಿಗೆ ಪರಿಹಾರವೇ ಬಂದಿಲ್ಲ ಎಂದು ಸಮಸ್ಯೆ ವಿವರಿಸಿದರು.

ಎಕರೆವಾರು ಸರ್ಕಾರ ನಿಗದಿಪಡಿಸಿದಷ್ಟೂ ಪರಿಹಾರ ಯಾಕೆ ಕೊಟ್ಟಿಲ್ಲ ಹಾಗೂ ಸಾವಿರಾರು ರೈತರಿಗೆ ಯಾಕೆ ಇನ್ನೂ ಪರಿಹಾರ ಬಂದಿಲ್ಲ ಎಂದು ಪ್ರಶ್ನಿಸಿದರು.
ಕೃಷಿ ಇಲಾಖೆ ಪ್ರಭಾರ ಜಂಟಿ ನಿರ್ದೇಶಕಿ ರೂಪಾದೇವಿ ಮಾತನಾಡಿ, ಜಿಲ್ಲೆಯಲ್ಲಿ 2 ಲಕ್ಷ 651 ರೈತರು ಬರ ಪರಿಹಾರ ನೋಂದಣಿ ಮಾಡಿಸಿದ್ದರು. ₹ 136 ಕೋಟಿ ರೈತರ ಬ್ಯಾಂಕ್ ಖಾತೆಗೆ  ಪರಿಹಾರ ಸಾಫ್ಟವೇರ್ ಮುಖಾಂತರ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಹಾಕಲಾಗಿದೆ ಎಂದರು.

6, 976 ರೈತರಿಗೆ ಪರಿಹಾರ ಮೊತ್ತ ಪಾವತಿಯಾಗಬೇಕಿದೆ. ಆಧಾರ್ ಲಿಂಕ್ ಮಾಡದೇ ಇರುವುದು, ಬ್ಯಾಂಕ್ ಖಾತೆಯಂತಹ ತಾಂತ್ರಿಕ ಕಾರಣಕ್ಕೆ ಪರಿಹಾರ ಮೊತ್ತ ಜಮಾ ಆಗಿಲ್ಲ. ಈ ರೈತರಿಗೂ ಪರಿಹಾರ ಮೊತ್ತ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಕೆಂಪಚೌಡಪ್ಪ ಮಾತನಾಡಿ, ನೋಂದಣಿಯಾದ ರೈತರಿಗೆ ಹಣ ಪಾವತಿ ಮಾಡುವುದಾಗಿ ಹೇಳಿದ್ದೀರಿ. ನೋಂದಣಿಯನ್ನೇ ಮಾಡಿಸದೇ ಇರುವ ರೈತರಿಗೆ ಪರಿಹಾರ ಕೊಡುವವರೂ ಯಾರು?  ನಿಗದಿಪಡಿಸಿದಷ್ಟು ಪರಿಹಾರ ಮೊತ್ತ ಯಾಕೆ ಬಂದಿಲ್ಲ ಎಂಬುದಕ್ಕೆ ಉತ್ತರ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ನೀವೂ ರೈತರ ಜೀವನದ ಜತೆ ಚೆಲ್ಲಾಟ ಆಡುತ್ತಿದ್ದೀರಿ? ಕಡಿಮೆ ಪರಿಹಾರ ಬಂದ ರೈತ ಎಲ್ಲಿಗೆ ಹೋಗಬೇಕು? ಇದೆಲ್ಲವೂ ನಿಮ್ಮ ಲೋಪದಿಂದಲೇ ಆಗಿರುವಂತಹದ್ದು. ನೀವೇ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಸದಸ್ಯ ಕೆಂಚಮಾರಯ್ಯ ಮಾತನಾಡಿ, ಇದೊಂದು ವ್ಯವಸ್ಥಿತ ಜಾಲವೇ ಇದೆ. ಪಂಚಾಯಿತಿ ಮಟ್ಟದಲ್ಲಿ ಗ್ರಾಮಲೆಕ್ಕಾಧಿಕಾರಿ ರೈತರ ವಿವರ ದಾಖಲಿಸಬೇಕು. ಅವರು ಆ ಕೆಲಸ ಮಾಡದೇ ಬೇರೆಯವರಿಗೆ ವಹಿಸಿದ್ದಾರೆ ಎಂದು ಆಪಾದಿಸಿದರು.

ಹಣ ಕೊಟ್ಟವರ ಹೆಸರು ದಾಖಲಿಸಿ ಕೃಷಿ ಇಲಾಖೆಗೆ ಪಟ್ಟಿ ಕಳುಹಿಸುತ್ತಾರೆ. ಹಣ ಯಾರು ಕೊಟ್ಟಿಲ್ಲವೊ ಆ ರೈತರಿಗೆ ಪರಿಹಾರ ಬಂದಿಲ್ಲ ಎಂದು ಹೇಳಿದರು.
‘ವೈಯಕ್ತಿಕವಾಗಿ ನನ್ನ ತಮ್ಮನ ಮಗನಿಗೆ ಹಣ ಕೇಳಿದ್ದಾರೆ. ಕೊಡದೇ ಇದ್ದುದ್ದಕ್ಕೆ ಎಲ್ಲ ದಾಖಲಾತಿ ಕೊಟ್ಟರೂ ಆತನಿಗೆ  ಪರಿಹಾರ ಬಂದಿಲ್ಲ’ಎಂದು ತಮ್ಮದೇ ಕುಟುಂಬದ ಉದಾಹರಣೆ ನೀಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್ ಮಾತನಾಡಿ, ಬರ ಪರಿಹಾರ ವಿತರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ರೈತರ ಹೆಸರು ನೋಂದಣಿಯನ್ನು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಸೇರಿ ಜಂಟಿ ಸಮೀಕ್ಷೆ ನಡೆಸಿ ದಾಖಲಿಸಿದ್ದಾರೆ ಎಂದರು.

ಕಡಿಮೆ ಪರಿಹಾರ ಬಂದ ಪ್ರಕರಣ, ದಾಖಲಾತಿ ಸಲ್ಲಿಸಿದರೂ ಪರಿಹಾರ ಲಭಿಸದೇ ಇರುವಂತಹ ಪ್ರಕರಣಗಳ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಿ ವಿಸ್ತೃತ ವರದಿ ಸಲ್ಲಿಸಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಪರಿಹಾರ ಕಂತು ಕಟ್ಟಲು ಹೋದರೆ ಬ್ಯಾಂಕಿನವರು ಸ್ವೀಕರಿಸುತ್ತಿಲ್ಲ.  ವೈಯಕ್ತಿಕವಾಗಿ ನನಗೂ ಸೇರಿ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ರಾಜಣ್ಣ ಹೇಳಿದರು. ಬ್ಯಾಂಕಿನವರಿಗೆ ಸೂಚಿಸಿ ಪರಿಹಾರ ಕಂತು ಕಟ್ಟಿಸಿಕೊಳ್ಳುವ ವ್ಯವಸ್ಥೆ ಮಾಡಿಸಬೇಕು ಎಂದು ಅಧ್ಯಕ್ಷೆಯ ಗಮನಕ್ಕೆ ತಂದರು.

ಶಾಲಾ ಕೊಠಡಿ ದುರಸ್ತಿ ಇಲ್ಲ: ಸರ್ಕಾರಿ ಶಾಲಾ ಕೊಠಡಿಗಳು ಬೀಳುವಂತಿವೆ. ಅನಾಹುತವಾದರೆ ಏನು ಮಾಡಲಾಗುತ್ತದೆ. ದುರಸ್ತಿ ಪಡಿಸಲು ಸೂಚಿಸಿದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಣ ಇಲ್ಲ ಎಂದು ಹೇಳುತ್ತಾರೆ. ತಕ್ಷಣ ಈ ಸಮಸ್ಯೆ ಪರಿಹರಿಸಬೇಕು ಎಂದು ಸದಸ್ಯೆ ಅನಸೂಯಾ ವೈ.ಕೆ.ರಾಮಯ್ಯ ಒತ್ತಾಯ ಮಾಡಿದರು.

ನಾಲ್ಕೈದು ವರ್ಷಗಳಿಂದ ಹೇಳಿದರೂ ಸ್ಪಂದಿಸಿಲ್ಲ. ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬೇಕಾಗಿದೆ. ಇದೇ ಸ್ಥಿತಿ ಮುಂದುವರಿದರೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಬೇಡಿ ಎಂದು ನಾನೇ ಜನರಿಗೆ ಹೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಧ್ವನಿಗೂಡಿಸಿದ ಸದಸ್ಯರು ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲೂ ಇಂತಹ ಶಿಥಿಲ ಕಟ್ಟಡಗಳಿವೆ ಎಂದರು.

ರಾಜಣ್ಣ ಮಾತನಾಡಿ, ಈಗಾಗಲೇ ಅಂಗನವಾಡಿ ಕಟ್ಟಡಗಳನ್ನು ಉದ್ಯೋಗ ಖಾತರಿ ಯೋಜನೆ ಅನುದಾನ ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಶಾಲಾ ಕಟ್ಟಡ ನಿರ್ಮಾಣ, ದುರಸ್ತಿಗೆ ಅವಕಾಶವಿದ್ದರೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಸಾಧ್ಯವಿದ್ದರೆ ಇದೇ ಅನುದಾನದಲ್ಲಿ ಶಾಲೆ ದುರಸ್ತಿ ಮಾಡಲು ಮುಂದಾಗಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಲಹೆ ನೀಡಿದರು.

ಪ್ರಚಾರದ ಕೊರತೆಯಿಂದ ರೈತರಿಗೆ ಅನ್ಯಾಯ
‘ಜಿಲ್ಲೆಯಲ್ಲಿ ಬರ ಪರಿಹಾರ, ಫಸಲ್ ಬಿಮಾ ಯೋಜನೆ ಬಗ್ಗೆ ತೋಟಗಾರಿಕೆ, ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ವ್ಯಾಪಕ ಪ್ರಚಾರ ಮಾಡಿಲ್ಲ. ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ ಎಂದು ಅಧಿಕಾರಿಗಳು ಹೇಳುತ್ತಾರೆ’ಎಂದು ಸದಸ್ಯ ಕೆಂಚಮಾರಯ್ಯ ಆರೋಪಿಸಿದರು. ‘ಎಲ್ಲ ರೈತರೂ ಹೋಗಲು ಸಾಧ್ಯವಿಲ್ಲ. ಹೆಚ್ಚಿನ ಪ್ರಚಾರ ಮಾಡದೇ ಇರುವುದೂ ಬರ ಪರಿಹಾರ, ಬೆಳೆ ಪರಿಹಾರದಿಂದ ಹೆಚ್ಚಿನ ರೈತರು ವಂಚಿತರಾಗುವಂತೆ ಮಾಡಿದೆ’ ಎಂದು ಹೇಳಿದರು.

ಅಂಕಿ- ಅಂಶ
₹2.65 ಲಕ್ಷ ಬರಪರಿಹಾರ ನೋಂದಣಿ ಮಾಡಿಸಿದ ರೈತರು

₹136ಕೋಟಿ ರೈತರ ಬ್ಯಾಂಕ್ ಖಾತೆಗೆ ಬಂದ ಪರಿಹಾರ ಮೊತ್ತ

6976 ಪರಿಹಾರ ಪಡೆಯಬೇಕಾದ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT