ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರ ನಿರ್ಲಕ್ಷಿಸಿದ ಸರ್ಕಾರಗಳು

Last Updated 15 ಜುಲೈ 2017, 5:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬಹಳ ಕನಿಷ್ಠ ಮಟ್ಟದ ಅನುದಾನ ಮೀಸಲಿಡುತ್ತ ಬರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ನೀಡಬೇಕಾದ ಆದ್ಯತೆ ಕೊಡುತ್ತಿಲ್ಲ. ಪರಿಣಾಮ ಈವರೆಗೆ ದೇಶದ ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಸಂಘದ (ಕೆಜಿಸಿಟಿಎ) ಅಧ್ಯಕ್ಷ ಎಚ್‌. ಪ್ರಕಾಶ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಮಹಾವಿದ್ಯಾಲಯಗಳ (ಬಿ.ಇಡಿ) ಅಧ್ಯಾಪಕರ ಸಂಘ, ಕೆ.ವೆಂಕಟಪತೆಪ್ಪ ಶಿಕ್ಷಣ ಮಹಾವಿದ್ಯಾಲಯ, ಸಿವಿವಿ ಶೈಕ್ಷಣಿಕ ಕೇಂದ್ರದ ಸಹಯೋಗದಲ್ಲಿ ಕೆ.ವಿ.ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ ಕೇವಲ 28 ವಿಶ್ವವಿದ್ಯಾಲಗಳು, 537 ಕಾಲೇಜುಗಳು ಇದ್ದವು. ಇವತ್ತು ದೇಶದಲ್ಲಿ 700 ಸರ್ಕಾರಿ ವಿಶ್ವವಿದ್ಯಾಲಯಗಳು, 400 ಖಾಸಗಿ ವಿಶ್ವವಿದ್ಯಾಲಯಗಳಿವೆ. 45 ಸಾವಿರ ಕಾಲೇಜುಗಳಿವೆ. ಕಳೆದ 70 ವರ್ಷಗಳ ಸ್ವಾತಂತ್ರೋತ್ತರ ಅವಧಿಯಲ್ಲಿ ನಾವು ಶೇ70ರಿಂದ 80 ರಷ್ಟು ಸಾಕ್ಷರತೆಯ ಪ್ರಗತಿ ಸಾಧಿಸಬಹುದಿತ್ತು. ಆದರೆ ಇಂದಿಗೂ ದೇಶದಲ್ಲಿ ಶೇ 55 ರಿಂದ 60 ರಷ್ಟು ಮಾತ್ರ ಸಾಕ್ಷರತೆಯ ಪ್ರಗತಿಯಾಗಿದೆ’ ಎಂದು ಹೇಳಿದರು.

‘ನಾವು ಪ್ರತಿ ಪಂಚ ವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ನಿವ್ವಳ ದಾಖಲಾತಿ ಅನುಪಾತ (ಜಿಇಆರ್) ಮತ್ತು ಸಾಕ್ಷರತೆಯ ಪ್ರಮಾಣವನ್ನು ಶೇ 10ರಷ್ಟು ಹೆಚ್ಚಳ ಮಾಡಬೇಕು. ಆದರೆ ನಮ್ಮಿಂದ ಅಷ್ಟು ಪ್ರಗತಿ ಸಾಧ್ಯವಾಗುತ್ತಿಲ್ಲ. ಪರಿಣಾಮ ಇವತ್ತು ವಿಶ್ವದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಅಮೆರಿಕದ 99 ವಿಶ್ವವಿದ್ಯಾಲಯಗಳಿವೆ. ಆ ಪಟ್ಟಿಯಲ್ಲಿ ನಮ್ಮ ದೇಶದ ಏಕೈಕ ವಿಶ್ವವಿದ್ಯಾಲಯ ಮುಂಬೈನ ಐಐಟಿ 137ನೇ ಸ್ಥಾನದಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಒಂದು ಐಐಟಿ ಸ್ಥಾಪಿಸಲು ಕೇಂದ್ರ ಸರ್ಕಾರ ₹1,000 ಕೋಟಿ ಅನುದಾನ, 500 ಎಕರೆ ಜಮೀನು ನೀಡುತ್ತದೆ. ಆದರೆ ಐಐಟಿಯಲ್ಲಿ ಓದುವವರ ಪೈಕಿ ಶೇ70ರಷ್ಟು ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ. ಅಮೆರಿಕ, ಆಸ್ಟ್ರೆಲಿಯಾ, ಜರ್ಮನಿ ವಿಶ್ವವಿದ್ಯಾಲಯಗಳು ಇಂದು ಭಾರತೀಯ ವಿದ್ಯಾರ್ಥಿಗಳನ್ನು ಹೆಚ್ಚು ಆಕರ್ಷಿಸುತ್ತಿವೆ. ಇವತ್ತು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುವ ಅನುದಾನಕ್ಕಿಂತಲೂ ಹೆಚ್ಚಿನ ಹಣವನ್ನು ಪೋಷಕರು ತಮ್ಮ ಮಕ್ಕಳಿಗೆ ವಿದೇಶಗಳಲ್ಲಿ ಉನ್ನತ ಶಿಕ್ಷಣ ಕೊಡಿಸಲು ಖರ್ಚು ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಇನ್ನಾದರೂ ಸರ್ಕಾರಗಳು ಪ್ರತಿಭಾವಂತರನ್ನು ತಯಾರಿಸಿ ವಿದೇಶಕ್ಕೆ ಕಳುಹಿಸುವ ಶಿಕ್ಷಣ ಸಂಸ್ಥೆಗಳ ಬದಲು ಪ್ರಾಥಮಿಕ, ಪದವಿಪೂರ್ವ, ಪದವಿ ಕಾಲೇಜುಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಕಾಯಂಗೊಳಿಸಿ ಸೇವಾ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ದೇಶವೊಂದರ ಅಭಿವೃದ್ಧಿ, ಭವಿಷ್ಯ ಆ ದೇಶದ ಶಿಕ್ಷಣ ನೀತಿಯ ಮೇಲೆ ಅವಲಂಬಿಸಿರುತ್ತದೆ. ಆದರೆ ನಮ್ಮಲ್ಲಿ ಅಧಿಕಾರಶಾಹಿಗಳೇ ಶಿಕ್ಷಣ ನೀತಿ ಸಿದ್ಧಪಡಿಸುತ್ತಿರುವ ಕಾರಣ ಅದರಿಂದ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ನೀತಿ ರೂಪಿಸುವ ಸಂದರ್ಭದಲ್ಲಿ ಸರ್ಕಾರಗಳು ಬೋಧಕರಿಂದ ಸಲಹೆ, ಸೂಚನೆ ಪಡೆಯುತ್ತಿಲ್ಲ. ಉನ್ನತ ಶಿಕ್ಷಣ ಬಲಿಷ್ಠಗೊಳಿಸಲು ಎಲ್ಲಾ ಕಾಲೇಜುಗಳ ಪ್ರಾಂಶುಪಾಲರ ವೇದಿಕೆಯನ್ನು ಮಾಡುವ ಯೋಜನೆಯ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಈವರೆಗೆ ಸರ್ಕಾರ ಅದರ ಬಗ್ಗೆ ಗಮನ ಹರಿಸಿಲ್ಲ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ರಮೇಶ್ ಬಾಬು ಮಾತನಾಡಿ, ‘ಇವತ್ತು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೃತ್ತಿ ಶಿಕ್ಷಣದವರೆಗೆ ಅನೇಕ ಬದಲಾವಣೆಗಳಾಗುತ್ತಿವೆ. ಶಿಕ್ಷಕರು ಕೂಡ ಈ ಬದಲಾವಣೆಗೆ ತಮ್ಮನ್ನು ಒಡ್ಡಿಕೊಳ್ಳಬೇಕು. ಎಲ್ಲಿಯವರೆಗೆ ನಾವು ಹೊಸತನವನ್ನು ಅಳವಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಹೊಸತನ ಹುಟ್ಟು ಹಾಕಲು ಸಾಧ್ಯವಾಗುವುದಿಲ್ಲ’ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜುಗಳ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಎಸ್‌.ಜಿ.ನಾಗರಾಜು ಮಾತನಾಡಿ, ‘ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನೇ ನೀಡುತ್ತ ಬರುತ್ತಿದ್ದೇವೆ. ಇದಕ್ಕೆ ಈ ಸಮಾವೇಶವೇ ಸಾಕ್ಷಿ. ಇಂತಹ ಸಮಾವೇಶಕ್ಕೆ ಕರೆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಬರುವುದಿಲ್ಲ. ಅದೇ ನಾವು ಬೇಡಿಕೆಗಳನ್ನು ತೆಗೆದುಕೊಂಡು ಅವರ ಕಚೇರಿಗೆ ಹೋದರೆ ಗುಣಮಟ್ಟದ ಶಿಕ್ಷಣದ ಬಗ್ಗೆ ಆಸಕ್ತಿ ಇಲ್ಲ ಎಂದು ನಮ್ಮನ್ನು ಬಗ್ಗುಬಡಿಯಲು ಹಾರಿಕೆ ಉತ್ತರ ನೀಡುತ್ತಾರೆ. ಇಂತಹ ಸಮಸ್ಯೆಗಳನ್ನು ಎದುರಿಸಿ ನಿಲ್ಲಬೇಕಾದರೆ ಅಧ್ಯಾಪಕರೆಲ್ಲ ಸಂಘಟಿತರಾಗಬೇಕು’ ಎಂದು ಕರೆ ನೀಡಿದರು.

ಸಮಾವೇಶದ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ರಾಜಾಜಿನಗರ ಎಂಇಎಸ್‌ ಶಿಕ್ಷಣ ಮಹಾವಿದ್ಯಾಲಯ ವಿಶ್ರಾಂತ ಪ್ರಾಂಶುಪಾಲ ಎಚ್.ಎಸ್‌.ಗಣೇಶ ಭಟ್‌ ಮತ್ತು ದಾವಣಗೆರೆ ಎಂ.ಎಂ.ಶಿಕ್ಷಣ ಮಹಾವಿದ್ಯಾಲಯ ವಿಶ್ರಾಂತ ಪ್ರಾಂಶುಪಾಲ ಎಚ್‌.ವಿ.ವಾಮದೇವಪ್ಪ ಅವರು ‘ರಾಷ್ಟ್ರೀಯ ಶಿಕ್ಷಣ ನೀತಿ–2016’ ಕುರಿತು ಮಾತನಾಡಿದರು.

ಕೆ.ವೆಂಕಟಪತೆಪ್ಪ ಟ್ರಸ್ಟ್‌ ಅಧ್ಯಕ್ಷ ಕೆ.ವಿ. ನವೀನ್‌ ಕಿರಣ್, ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಅಧ್ಯಕ್ಷ ಡಿ.ಸಿ.ಗೋಪಿನಾಥ್, ಶಿಕ್ಷಣ ತಜ್ಞ ಅಜೀತ್ ಪ್ರಸಾದ್‌, ವಕೀಲ ಪೃಥ್ವಿರಾಜ್,  ಕೆ.ವಿ. ಮತ್ತು ಪಂಚಗಿರಿ ದತ್ತಿಯ ಆಡಳಿತಾಧಿಕಾರಿ ಸಾಯಿಪ್ರಭು, ದತ್ತಿಯ ಹಿರಿಯ ಸದಸ್ಯ ಬಿ.ಮುನಿಯಪ್ಪ, ಕೆ.ವೆಂಕಟಪತೆಪ್ಪ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಕೆ.ಆರ್.ನಾಗಭೂಷಣ್‌ ಉಪಸ್ಥಿತರಿದ್ದರು.

ಬಾಕಿ ವೇತನ ಬಿಡುಗಡೆಗೆ ಒತ್ತಾಯ
‘ತಜ್ಞರ ಸಮಿತಿ ಶಿಫಾರಸುಗಳನ್ನು ಅನುಷ್ಟಾನಕ್ಕೆ ತರುವಾಗ ಸರ್ಕಾರ ಅನೇಕ ಗೊಂದಲಗಳನ್ನು ಮಾಡಿ ಅಧ್ಯಾಪಕರಿಗೆ ಸಲ್ಲಬೇಕಾದ ಸವಲತ್ತುಗಳು ಒದಗಿಸುವುದೇ ಇಲ್ಲ.

ಯುಜಿಸಿ ವೇತನ ಶ್ರೇಣಿ ಅನ್ವಯ ಬಾಕಿ ಇರುವ ಹಣವನ್ನು ರಾಜ್ಯ ಸರ್ಕಾರ ಈವರೆಗೆ ಬಿಡುಗಡೆ ಮಾಡಿಲ್ಲ. ಉಳಿದೆಲ್ಲ ರಾಜ್ಯಗಳಲ್ಲಿ ಈಗಾಗಲೇ ಬಾಕಿ ವೇತನ ಪಾವತಿಯಾಗಿದೆ. ರಾಜ್ಯದಲ್ಲಿ ಮಾತ್ರ ಈ ಬಗ್ಗೆ ಉದಾಸೀನತೆ ತೋರಲಾಗುತ್ತಿದೆ’ ಎಂದು ಪ್ರಕಾಶ್ ಬೇಸರ ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ 24 ರಂದು ಪ್ರತಿಭಟನೆ
‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ತಿಂಗಳು 24 ರಂದು ನವದೆಹಲಿಯ ಜಂತರ್‌ಮಂತರ್‌ನಲ್ಲಿ ದೇಶದ ಎಲ್ಲ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಅಧ್ಯಾಪಕರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಾಪಕರು ಭಾಗವಹಿಸಬೇಕು’ ಎಂದು ಪ್ರಕಾಶ್ ಹೇಳಿದರು.

* * 

ಅನುಭವಿ ಬೋಧಕರು ಮತ್ತು ಶಿಕ್ಷಣ ತಜ್ಞರ ಸಲಹೆ ಪಡೆದು ಸಮಗ್ರ ಶಿಕ್ಷಣ ನೀತಿ ರೂಪಿಸಿದಾಗ ಮಾತ್ರ ದೇಶದ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ.
ಎಚ್‌.ಪ್ರಕಾಶ್,
ಕೆಜಿಸಿಟಿಎ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT