ಶುಕ್ರವಾರ, ಡಿಸೆಂಬರ್ 6, 2019
17 °C
ನಾಯಕನಹಟ್ಟಿ: ಮಳೆಗೆ ಕಾದುಕುಳಿತ ರೈತ ಸಮುದಾಯ l ಶುರುವಾಗದ ಬಿತ್ತನೆ ಕಾರ್ಯ

ಕೈಕೊಟ್ಟ ಮುಂಗಾರು: ಶೇಂಗಾ ಮಾರಾಟ ಕುಸಿತ

ಧನಂಜಯ.ವಿ. Updated:

ಅಕ್ಷರ ಗಾತ್ರ : | |

ಕೈಕೊಟ್ಟ ಮುಂಗಾರು: ಶೇಂಗಾ ಮಾರಾಟ ಕುಸಿತ

ನಾಯಕನಹಟ್ಟಿ: ನಿರಂತರವಾದ ಬರಗಾಲದಿಂದ ತತ್ತರಿಸಿ ಹೋಗಿದ್ದ ಹೋಬಳಿಯ ರೈತರು ಈ ವರ್ಷವಾದರೂ ಸಮೃದ್ಧವಾಗಿ ಮಳೆಯಾಗುತ್ತದೆ ಎಂಬ ಆಶಾಭಾವನೆ ಹೊಂದಿದ್ದರು. ಆದರೆ, ಈ ವರ್ಷ ಕೂಡ ಮುಂಗಾರು ಕೈಕೊಟ್ಟಿದ್ದು, ರೈತರು ಚಿಂತಿಸುವಂತಾಗಿದೆ.

ಹವಾಮಾನ ಇಲಾಖೆಯ ವರದಿ ನೀಡಿದ್ದ ಉತ್ತಮವಾಗಿ ಮಳೆಯಾಗುತ್ತದೆ ಎಂಬ ಮುನ್ಸೂಚನೆ ಮತ್ತೊಮ್ಮೆ ಹುಸಿಯಾಗಿದೆ. ಮಳೆಗಾಲ ಶುರುವಾಗಿ ಎರಡು ತಿಂಗಳು ಕಳೆದರೂ ಒಂದು ದಿನವೂ ಹದ ಮಳೆಯಾಗಿಲ್ಲ. ಈಗಾಗಲೇ ನೀರಿಲ್ಲದೆ ಒಣಗಿಹೋಗಿರುವ ಕೆರೆಕಟ್ಟೆಗಳಿಂದ ಮುಂದಿನ ದಿನಗಳಲ್ಲಿ ಕುಡಿಯುವ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಇದೆ. 

ಶೇಂಗಾ ಮಾರಾಟ ಕುಸಿತ: ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಶೇಂಗಾ ಬಿತ್ತನೆಬೀಜ ಮಾರಾಟ ಮಾಡಲಾಗುತ್ತಿದೆ. ಆದರೆ, ಮಳೆಯ ಕೊರತೆಯಿಂದ ಬಿತ್ತನೆ ಬೀಜದ ಮಾರಾಟ ಪ್ರಕ್ರಿಯೆ ಕ್ಷೀಣಿಸಿದೆ.

ಹಿಂದಿನ ವರ್ಷಗಳಲ್ಲಿ ಬಿತ್ತನೆ ಬೀಜಕ್ಕಾಗಿ ನೂಕಾಟ, ತಳ್ಳಾಟಗಳು, ಪೊಲೀಸ್‌ ಬಂದೋಬಸ್ತ್‌ನಲ್ಲಿ ಬೀಜ ವಿತರಣೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ರೈತರು ಶೇಂಗಾ ಬೀಜ ಖರೀದಿಸಲು ಮುಂದೆ ಬರುತ್ತಿಲ್ಲ.

ಸಿರಿಧಾನ್ಯಕ್ಕೆ ಆದ್ಯತೆ: ಶೇಂಗಾ ಬಿತ್ತನೆಗೆ ಆ.16ರವರೆಗೂ ಸಮಯವಿದೆ. ಜತೆಗೆ ಹೋಬಳಿಯ ಕೃಷಿ ಭೂಮಿಯು ಸಿರಿಧಾನ್ಯ ಬೆಳೆಯಲು ಸೂಕ್ತವಾಗಿದೆ. ಕಡಿಮೆ ಮಳೆಯಲ್ಲಿ ಉತ್ತಮವಾದ ಇಳುವರಿ ಪಡೆಯಬಹುದು.

ಬದಲಾದ ಜೀವನ ಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನವಣೆ, ಸಾಮೆ, ಕೊರ್ಲೆ, ಆರ್ಕ, ಊದಲು ಬೆಳೆಗಳಿಗೆ ಬೇಡಿಕೆ ಇದೆ. ರೈತರು ಇಂತಹ ತೃಣಧಾನ್ಯಗಳನ್ನು ಬೆಳೆಯಲು ಮುಂದಾಗಬೇಕು ಎಂದು ಕೃಷಿ ಅಧಿಕಾರಿ ಎನ್.ಗಿರೀಶ್ ಸಲಹೆ ನೀಡುತ್ತಾರೆ.

***

ಸಾಲ ತೀರಿಸುವುದು ಹೇಗೆ?

ಮಲೇಬೋರನಹಟ್ಟಿ ರೈತ ಸಣ್ಣೀರಯ್ಯ ಮಾತನಾಡಿ, ‘ಕೃಷಿಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ತೆಗೆದುಕೊಂಡಿರುವ ಸಾಲಗಳನ್ನು ತೀರಿಸುವುದು ಹೇಗೆ ಎಂದು ದಿಕ್ಕು ತೋಚದಂತಾಗಿದೆ.

ಈ ವರ್ಷವಾದರೂ ಉತ್ತಮವಾದ ಮಳೆಯಾಗುತ್ತದೆ, ಬೆಳೆ ಬೆಳೆದು ಸಾಲ ತೀರಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಆರಂಭದಲ್ಲೇ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಯನ್ನೇ ಆರಂಭಿಸಿಲ್ಲ. ಮುಂದಿನ ದಿನಗಳಲ್ಲಿ ಹೇಗೋ ಏನೋ ಎಂದು ಚಿಂತೆಯಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

 

ಪ್ರತಿಕ್ರಿಯಿಸಿ (+)