ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಸಂಚರಿಸುವುದೇ ಪ್ರಯಾಸ!

Last Updated 15 ಜುಲೈ 2017, 6:10 IST
ಅಕ್ಷರ ಗಾತ್ರ

ಎನ್.ಆರ್.ಪುರ: ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಳಿ–ಶಿವಪ್ಪನಗರ ಜೋಗಿಮಕ್ಕಿ ರಸ್ತೆಯು ಸಂಪೂರ್ಣ ಕೆಸರು ಗದ್ದೆಯಾಗಿ ಪರಿಣಮಿಸಿದ್ದು, ಈ ಭಾಗದ ಜನರು ಗ್ರಾಮಕ್ಕೆ ಸಂಚರಿಸುವುದೇ ಪ್ರಯಾಸ ವಾಗಿ ಪರಿಣಮಿಸಿದೆ. ಈ ಗ್ರಾಮದ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಮನೆಗಳಿದ್ದು, 200 ಜನರಿದ್ದಾರೆ. ಮಳೆಗಾಲದ ಸಂದರ್ಭಗಳಲ್ಲಿ ಗ್ರಾಮಕ್ಕೆ ತೆರಳಬೇಕಾದರೆ 3 ಕಿ.ಮೀ ದೂರ ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿಯೇ ಪ್ರಯಾಸದಿಂದ ಸಾಗಬೇಕಾಗಿದೆ.

ಕಾನೂರು ಗ್ರಾಮದ ಅಗಳಿ, ಶಿವಪ್ಪ ನಗರ, ಜೋಗಿಮಕ್ಕಿಯ 40 ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾನೂರು ಗಣಪತಿ ದೇವಸ್ಥಾನ ಸಮೀಪದ ಮುಖ್ಯರಸ್ತೆ ಯಿಂದ ಪ್ರಾರಂಭವಾಗಿ 6 ಕಿ.ಮೀ ದೂರದ ಅಗಳಿ, ಶಿವಪ್ಪನಗರ, ಜೋಗಿಮಕ್ಕಿ ಮೂಲಕ ಬಸ್ ನಿಲ್ದಾಣಕ್ಕೆ ಸೇರುತ್ತದೆ. ಮಳೆಗಾಲ ಬಂದರೆ ಈ ರಸ್ತೆ ಯಾವುದೇ ವಾಹನ ಓಡಾಟ ಸಾಧ್ಯವಿಲ್ಲ. ಕೆಂಪು ಹಾಗೂ ಅಂಟು ಮಣ್ಣಿನ ಈ ರಸ್ತೆಯು ಕೆಸರುಮಯವಾಗಿ ವಾಹನ ಗಳು ಹೋಗಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕಾನೂರು ಮುಖ್ಯರಸ್ತೆಯಿಂದ ಜೋಗಿಮಕ್ಕಿ ರಸ್ತೆಯವರೆಗೆ  6 ಕಿ.ಮೀ ರಸ್ತೆ ಇದ್ದರೂ 4ಕಿ.ಮೀ ಅಧಿಕ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ರಸ್ತೆಯ ಮಧ್ಯೆ ಅಲ್ಲಲ್ಲಿ 20 ನೀರಿನ ಕಾಲುವೆಗಳು ಸಹ ಬರುತ್ತದೆ. ಇದಕ್ಕೆ ಯಾವುದೇ ಮೋರಿಗಳಿಲ್ಲ. ಸರಿಯಾದ ಚರಂಡಿಗಳೂ ಇಲ್ಲದೆ ಮಳೆಗಾಲದಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿದು ರಸ್ತೆಯೇ ಹಳ್ಳದ ರೀತಿ ಕಾಣುತ್ತದೆ.

ಜೂನ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಈ ಭಾಗದ 40 ಮನೆಗಳ ಜನರು ತಮ್ಮ ಮನೆಗೆ ತಲುಪಬೇಕಾದರೆ ಮುಖ್ಯರಸ್ತೆಯಿಂದ 2ಕಿ.ಮೀ ಗದ್ದೆಯ ಅಂಚಿನಲ್ಲಿ ನಡೆದೇ ಮನೆ ಸೇರಬೇಕಾಗಿದೆ. ಮಳೆಗಾಲದಲ್ಲಿ ಜೋಗಿಮಕ್ಕಿ, ಶಿವಪ್ಪನಗರ, ಅಗಳಿಗೆ ಬರಬೇಕಾದರೆ ಸೇತುವೆ ಮನೆ ಸಮೀಪದ ಮುಖ್ಯರಸ್ತೆಯಿಂದ 1.50 ಕಿ.ಮೀ ಗದ್ದೆಯಲ್ಲಿ ನಡೆದು ಹಳ್ಳ ದಾಟಿ ಬರಬೇಕಾಗುತ್ತದೆ. ಅಧಿಕ ಮಳೆ ಬಂದಾಗ ಹಳ್ಳ ಸಹ ದಾಟಲು ಸಾಧ್ಯ ವಾಗದೆ ಸುತ್ತುವರಿದು ಮನೆ ಸೇರಬೇಕು. ಯಾವುದೇ ಸರಕನ್ನು ತಲೆಮೇಲೆ ಹೊತ್ತುಕೊಂಡು ಹೋಗಬೇಕಾಗಿದೆ. ಅನಾರೋಗ್ಯಕ್ಕೆ ತುತ್ತಾದರೆ ದೇವದೇ ಗತಿ ಎನ್ನುತ್ತಾರೆ ಗ್ರಾಮಸ್ಥರು.

50ವರ್ಷಗಳಿಂದಲೂ ಗ್ರಾಮದ ರಸ್ತೆ ದುರಸ್ತಿ ಮಾಡಿಕೊಡುವಂತೆ ಪ್ರತಿ ವರ್ಷ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದ ಕಾರಣ 6ವರ್ಷಗಳ ಹಿಂದೆ ತಾಲ್ಲೂಕು ಪಂಚಾಯಿತಿ ಅನುದಾನದಿಂದ ₹30 ಸಾವಿರ ವೆಚ್ಚದಲ್ಲಿ  ಚರಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. 5 ವರ್ಷದ ಹಿಂದೆ ಗ್ರಾಮ ಪಂಚಾಯಿತಿ ವತಿಯಿಂದ 1 ಮೋರಿಗೆ  ಪೈಪ್ ಹಾಕಲಾಗಿದೆ ಎಂಬುದಾಗಿ ಗ್ರಾಮಸ್ಥರು ತಿಳಿಸುತ್ತಾರೆ.

‘ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ 2013ರ ರಿಂದ ಆರ್‌ಡಿಪಿಆರ್‌ನಲ್ಲಿ ಹೆಚ್ಚು ಅನುದಾನ ನೀಡಿಲ್ಲ. ತಾಲ್ಲೂಕಿಗೆ ₹30ಲಕ್ಷ ಅನುದಾನ ನೀಡಿದ್ದಾರೆ. ಇದರಲ್ಲಿ ಶಾಸಕ, 2 ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿಯ 11 ಸದಸ್ಯರಿಗೆ ಹಂಚಿಕೆ ಮಾಡಿದರೆ ಪ್ರತಿ ಸದಸ್ಯರಿಗೆ ₹1.50 ಲಕ್ಷ ಅನುದಾನ ಸಿಗುತ್ತದೆ. ಇದರಲ್ಲಿ ಯಾವುದೇ ರಸ್ತೆ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ’ ಎಂದು ಶಾಸಕ ಡಿ.ಎನ್.ಜೀವರಾಜ್ ‘ಪ್ರಜಾವಾಣಿ‘ಗೆ ತಿಳಿಸಿದರು.

ಈ ಬಗ್ಗೆ ಮಲೆನಾಡು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ ಅವರನ್ನು ಸಂಪರ್ಕಿಸಿದಾಗ, ‘ತಮ್ಮ ಅಧಿಕಾರದ ಅವಧಿಯಲ್ಲಿ ಸದರಿ ಗ್ರಾಮದ ರಸ್ತೆಯ ಅಭಿವೃದ್ಧಿಗೆ ₹2ಲಕ್ಷದ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಆದರೆ, ಅನುದಾನ ಬಿಡುಗಡೆಯಾಗ ದಿದ್ದರಿಂದ ಕಾಮಗಾರಿಕೈಗೊಳ್ಳಲು ಸಾಧ್ಯವಾಗಲಿಲ್ಲ’ ಎಂದು ತಿಳಿಸಿದರು. ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಿ ಗ್ರಾಮಸ್ಥರಿಗೆ ಮಳೆಗಾಲದ ಸಂದರ್ಭದಲ್ಲಾಗುವ ಸಮಸ್ಯೆಯನ್ನು ಬಗೆಹರಿಸ ಬೇಕೆಂಬುದು ಗ್ರಾಮಸ್ಥರು ಒತ್ತಾಯವಾಗಿದೆ.

* * 

ಮಳೆಗಾಲ ಬಂತೆಂದರೆ ಗ್ರಾಮಕ್ಕೆ ಯಾವುದೇ ವಾಹನ ಬರಲು ಸಾಧ್ಯವಾಗುವುದಿಲ್ಲ. ಅನಾರೋಗ್ಯಕ್ಕೆ ತುತ್ತಾದರೆ ಕಂಬಳಿ ಕಟ್ಟಿ ಕೊಂಡು ಹೋರುವ ಸ್ಥಿತಿ ಇದೆ
ಭಾಸ್ಕರ್
ಗ್ರಾಮಸ್ಥ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT