ಸೋಮವಾರ, ಡಿಸೆಂಬರ್ 16, 2019
18 °C

ಸಮಸ್ಯೆಗಳ ಆಗರ ಕಮಲನಗರ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ಯೆಗಳ ಆಗರ ಕಮಲನಗರ ಆಸ್ಪತ್ರೆ

ಕಮಲನಗರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂಲಸೌಲಭ್ಯಗಳು ಹಾಗೂ ಸಿಬ್ಬಂದಿ ಕೊರತೆಯಿಂದ ರೋಗಿಗಳು ಪರದಾಡುವ ಸ್ಥಿತಿ ಇದೆ.

ಕಮಲನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ 1999ರಲ್ಲಿ ಸರ್ಕಾರ ಮೇಲ್ದರ್ಜೆಗೇರಿಸಿತು. 6 ಹಾಸಿಗೆಯ ಆಸ್ಪತ್ರೆ 30 ಹಾಸಿಗೆ ಆಸ್ಪತ್ರೆಯಾಗಿ ಬದಲಾಯಿತು. ಆದರೆ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಬೇಕಾದ ಸೌಲಭ್ಯಗಳು ಮಾತ್ರ ಇಲ್ಲ.

19 ಹುದ್ದೆ ಖಾಲಿ: 3 ವೈದ್ಯಾಧಿಕಾರಿ ಹುದ್ದೆ, 1 ಎಕ್ಸರೇ ಟೆಕ್ನಿಷಿಯನ್‌, 1 ಎಕ್ಸರೇ ಅಟೆಂಡರ್‌, 7 ಗ್ರೂಪ್‌  ‘ಡಿ’ ನೌಕರರು, 1 ಅಡುಗೆ ಸಿಬ್ಬಂದಿ, 1 ಸ್ಟಾಫ್‌ ನರ್ಸ್‌, 1 ಎಸ್‌ಡಿಎ, 1 ಎಫ್‌ಡಿಎ, 1 ಕ್ಲರ್ಕ್‌ ಕಂ ಟೈಪಿಸ್ಟ್‌ ಹಾಗೂ ವಾಹನ ಚಾಲಕರ 1 ಹುದ್ದೆ ಹೀಗೆ ಒಟ್ಟು 19 ಹುದ್ದೆಗಳು ಖಾಲಿ ಇವೆ.ಇಲ್ಲಿ ದಿನ  ಸರಾಸರಿ 350 ಹೊರರೋಗಿಗಳು, 20 ಒಳರೋಗಿಗಳು ತಪಾಸಣೆಗೆ ಒಳಪಡುತ್ತಾರೆ. ಕೇವಲ ಇಬ್ಬರು ವೈದ್ಯರಿರುವ ಕಾರಣ ರೋಗಿಗಳು ದಿನ ಕಾಯಬೇಕಾಗಿದೆ.

ಈಚೆಗೆ ಕರ್ನಾಟಕ ಆರೋಗ್ಯ ಪದ್ಧತಿ ಮತ್ತು ಸುಧಾರಣೆ ಯೋಜನೆ ಅಡಿಯಲ್ಲಿ ₹ 3.65 ಕೋಟಿ ವೆಚ್ಚದ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕ್ಷ ಕಿರಣ ಯಂತ್ರ, ಶಸ್ತ್ರ ಚಿಕಿತ್ಸೆ ಉಪಕರಣಗಳಿಲ್ಲ, ಹೀಗಾಗಿ ರೋಗಿಗಳು ಅನಿವಾರ್ಯವಾಗಿ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡುವಂತಾಗಿದೆ.

ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಬಡ ರೋಗಿಗಳ ಆರೋಗ್ಯ ಸೇವೆ ಹಕ್ಕಿನ ಉಲ್ಲಂಘನೆ ಎಂದು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿಲೀಪ ಮುಧಾಳೆ ಅವರು ಕಳೆದ ವರ್ಷ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನನ್ವಯ ಮಾನವ ಹಕ್ಕುಗಳ ಆಯೋಗದ ಸಹಾಯಕ ವಿಲೇಖನಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇಬ್ಬರು ವೈದ್ಯರನ್ನು ಆಸ್ಪತ್ರೆಗೆ ನಿಯೋಜಿಸಲಾಗಿತ್ತು. ಆದರೆ, ಇಬ್ಬರು ಗೈರಾಗಿದ್ದಾರೆ. ಇದರಿಂದ ಇಲ್ಲಿನ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

‘ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಒಂದು ತಿಂಗಳೊಳಗಾಗಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹೇಶ ಬಿರಾದಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬೀದರ್‌–ನಾಂದೇಡ್‌ ಅಂತರರಾಜ್ಯ ಹೆದ್ದಾರಿಯಲ್ಲಿರುವ ಪ್ರಮುಖ ಹೋಬಳಿ ಕೇಂದ್ರ ಕಮಲನಗರ. ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿದರೆ. ಬೀದರ್‌ ಜಿಲ್ಲಾ ಆಸ್ಪತ್ರೆ ಇಲ್ಲಿಂದ 60 ಕಿ.ಮೀ ದೂರವಾದರೆ, ತಾಲ್ಲೂಕು ಆಸ್ಪತ್ರೆ 30 ಕಿ.ಮೀ ದೂರವಿದೆ.

ಅಪಘಾತಕ್ಕೀಡಾದವರಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಕೊಡುವ ದೃಷ್ಟಿಯಿಂದ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಘಟಕ, ರಕ್ತ ಸಂಗ್ರಹ ಘಟಕ ಇರುವುದು ಅವಶ್ಯ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ್‌.

* * 

ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದರೂ, ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಖಾಲಿ ಹುದ್ದೆಗಳು ಭರ್ತಿಯಾಗುತ್ತಿಲ್ಲ

ದಿಲೀಪ್‌ ಮುಧಾಳೆ 

ನಾಗರಿಕ ಸೇವಾ ಸಮಿತಿ ಅಧ್ಯಕ್ಷ

 

ಪ್ರತಿಕ್ರಿಯಿಸಿ (+)