ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ: ಹೆಸರು, ಉದ್ದು ಅಧಿಕ ಬಿತ್ತನೆ

Last Updated 15 ಜುಲೈ 2017, 7:29 IST
ಅಕ್ಷರ ಗಾತ್ರ

ಚಿತ್ತಾಪುರ: ಬೆಲೆ ಕುಸಿತದ ಕಾರಣ ರೈತರು ತೊಗರಿ ಬಿತ್ತನೆಗೆ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ತಾಲ್ಲೂಕಿನಲ್ಲಿ ಪ್ರತಿ ವರ್ಷಕ್ಕಿಂತ ಅಂದಾಜು 12 ಸಾವಿರ ಹೆಕ್ಟೇರ್‌ನಷ್ಟು ತೊಗರಿ ಬಿತ್ತನೆ ಕಡಿಮೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 77,525 ಹೆಕ್ಟೇರ್‌ ಬಿತ್ತನೆ ಗುರಿಯಿತ್ತು. 65,332 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಇಲ್ಲಿಯವರೆಗೆ ಶೇ 84 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.

65,525 ಹೆಕ್ಟೇರ್‌ ಕ್ಷೇತ್ರದಲ್ಲಿ ತೊಗರಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಪ್ರಸ್ತುತ ರೈತರು ಕೇವಲ 35,600 ಹೆಕ್ಟೇರ್‌ ಕ್ಷೇತ್ರದಲ್ಲಿ ಮಾತ್ರ ಬಿತ್ತನೆ ಮಾಡಿದ್ದಾರೆ. ಇನ್ನೂ ಬಿತ್ತನೆ ಕಾರ್ಯ ನಡೆಯುತ್ತಿದೆ. ರೈತರು ಹೆಸರು ಮತ್ತು ಉದ್ದು ಬಿತ್ತನೆಗೆ ಹೆಚ್ಚಿನ ಒಲವು ತೋರಿದ್ದಾರೆ.

ಒಟ್ಟು 5,700 ಹೆಕ್ಟೇರ್‌ ಕ್ಷೇತ್ರದಲ್ಲಿ ಹೆಸರು ಬಿತ್ತನೆ ಗುರಿಯಿತ್ತು. 14,560 ಹೆಕ್ಟೇರ್‌ ಕ್ಷೇತ್ರದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. 4,100 ಹೆಕ್ಟೇರ್‌ ಕ್ಷೇತ್ರದಲ್ಲಿ ಉದ್ದು ಬಿತ್ತನೆಯ ಗುರಿಯಿತ್ತು. 12,850 ಹೆಕ್ಟೇರ್‌ ಕ್ಷೇತ್ರದಲ್ಲಿ ಉದ್ದು ಬಿತ್ತನೆ ಮಾಡಲಾಗಿದೆ.

ಪ್ರತಿ ವರ್ಷ ಹೆಸರು 6ರಿಂದ 8 ಸಾವಿರ ಹೆಕ್ಟೇರ್‌ ಮತ್ತು 4 ರಿಂದ 5 ಸಾವಿರ ಹೆಕ್ಟೇರ್‌ ಕ್ಷೇತ್ರದಲ್ಲಿ ಉದ್ದು ಬಿತ್ತನೆ ಮಾಡಲಾಗುತ್ತಿತ್ತು. ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೆಸರು ಮತ್ತು ಉದ್ದಿನ ಬಿತ್ತನೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಮುಂಗಾರು ಹಂಗಾಮಿನ ಬಿತ್ತನೆಗಾಗಿ 200 ಕ್ವಿಂಟಲ್‌ ತೊಗರಿ ಬೀಜ ದಾಸ್ತಾನು ಮಾಡಲಾಗಿತ್ತು. ಅದರಲ್ಲಿ 102 ಕ್ವಿಂಟಲ್‌ ಮಾರಾಟವಾಗಿದೆ. ಉದ್ದಿನ ಬೀಜ 152 ಕ್ವಿಂಟಲ್‌ ಪೈಕಿ 105 ಕ್ವಿಂಟಲ್‌ ಮಾರಾಟವಾಗಿದೆ. ಹೆಸರು ಬೀಜ 200 ಕ್ವಿಂಟಲ್‌ನಲ್ಲಿ 160 ಕ್ವಿಂಟಲ್‌ ಮಾರಾಟವಾಗಿದೆ. ಚಿತ್ತಾಪುರ, ಮಾಡಬೂಳ, ನಾಲವಾರ, ಶಹಾಬಾದ, ಕಾಳಗಿ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಜಾಲೇಂದ್ರ ಗುಂಡಪ್ಪ ತಿಳಿಸಿದರು.

200 ಕ್ವಿಂಟಲ್‌ ಸೋಯಾಬಿನ್‌ ಬೀಜ ದಾಸ್ತಾನು ಮಾಡಿದ್ದು, ಪೂರ್ಣ ಮಾರಾಟವಾಗಿದೆ. 700 ಹೆಕ್ಟೇರ್‌ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. 500 ಹೆಕ್ಟೇರ್‌  ಬಿತ್ತನೆಯಾಗಿದೆ. 1,750 ಹೆಕ್ಟೇರ್‌  ಕ್ಷೇತ್ರ ಸಜ್ಜೆ ಬಿತ್ತನೆಯ ಗುರಿ ಇತ್ತು. 650 ಹೆಕ್ಟೇರ್‌ ಬಿತ್ತನೆಯಾಗಿದೆ. 840 ಹೆಕ್ಟೇರ್‌  ಸೂರ್ಯಕಾಂತಿ ಬಿತ್ತನೆ ಗುರಿಯಿತ್ತು, 175 ಹೆಕ್ಟೇರ್‌ ಮಾತ್ರ ಬಿತ್ತನೆ ಮಾಡಲಾಗಿದೆ ಎಂದು ಅವರು ಹೇಳಿದರು.

‘ಮುಂಗಾರು ಮಳೆ ಬೇಗ ಬಂದಿದ್ದರಿಂದ ಹಾಗೂ ತೊಗರಿ ಬೆಲೆ ಕುಸಿದಿದ್ದರಿಂದ  ರೈತರು ತೊಗರಿ ಬಿತ್ತನೆಗಿಂತ ಹೆಸರು ಮತ್ತು ಉದ್ದು ಬಿತ್ತನೆಗೆ ಹೆಚ್ಚಿನ ಒಲವು ತೋರಿದ್ದಾರೆ.  ಜೂನ್‌ ತಿಂಗಳ ಕೊನೆ ವಾರ ಮತ್ತು ಜುಲೈ ಮೊದಲ ವಾರದಲ್ಲಿ ಮಳೆ ಬಾರದಿದ್ದರಿಂದ ಹಾಗೂ ವ್ಯಾಪಕವಾಗಿ ಮಳೆ ಬಾರದ ಕಾರಣ ಮಳೆ
ಕೊರತೆ ಕಾಡುತ್ತಿದೆ’ ಎಂದು ಅವರು ತಿಳಿಸಿದರು.

ವಾಡಿಕೆ ಮತ್ತು ಬಂದ ಮಳೆ: ತಾಲ್ಲೂಕಿನ 5 ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಯಂತೆ ಸರಾಸರಿ ಮುಂಗಾರು ಮಳೆಯಾಗಿದೆ. ತಾಲ್ಲೂಕಿನಾದ್ಯಂತ ಜುಲೈ ಮೊದಲ ವಾರದವರೆಗೆ ಒಟ್ಟು 133.4 ಮಿ.ಮೀ ಮಳೆ ಬರಬೇಕಾಗಿತ್ತು. 195.9 ಮಿ.ಮೀ ಮಳೆಯಾಗಿದೆ.

ಅಂಕಿ–ಅಂಶ
35 ಸಾವಿರ ಹೆಕ್ಟೇರ್‌ ತೊಗರಿ ಬಿತ್ತನೆ

14 ಸಾವಿರ ಹೆಕ್ಟೇರ್‌ ಹೆಸರು ಬಿತ್ತನೆ

12 ಸಾವಿರ ಹೆಕ್ಟೇರ್‌ ಉದ್ದು ಬಿತ್ತನೆ

* * 

ತೊಗರಿ ಬಿತ್ತನೆ ಜುಲೈ ಕೊನೆವರೆಗೆ ನಡೆಯುತ್ತದೆ. ಆದರೆ, ಬಿತ್ತನೆ ಕ್ಷೇತ್ರ ಕಡಿಮೆಯಾಗಿದ್ದು,  ಹೆಸರು ಮತ್ತು ಉದ್ದು ಬಿತ್ತನೆಯು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ.
ಜಾಲೇಂದ್ರ ಗುಂಡಪ್ಪ,
ಸಹಾಯಕ ಕೃಷಿ ನಿರ್ದೇಶಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT