ಸೋಮವಾರ, ಡಿಸೆಂಬರ್ 9, 2019
25 °C

ಆಸ್ಪತ್ರೆಗಳಲ್ಲಿ ನಾಗರಿಕ ಸೌಲಭ್ಯಗಳ ಸಂಕೀರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಪತ್ರೆಗಳಲ್ಲಿ ನಾಗರಿಕ ಸೌಲಭ್ಯಗಳ ಸಂಕೀರ್ಣ

ಹಾವೇರಿ: ಒಂದು ಇಡ್ಲಿಗೆ ₹4.50, ಫಲಾವ್‌ಗೆ ₹9, ಅನ್ನ –ಸಾಂಬಾರಿಗೆ ₹ 9, ಎರಡು ಚಪಾತಿ ಪಲ್ಯ–ದಾಲ್‌ಗೆ ₹8... ಇಂದಿನ ದುಬಾರಿ ಪ್ರಪಂಚದಲ್ಲಿ ಇಷ್ಟೊಂದು ಕಡಿಮೆ ದರದಲ್ಲಿ ಹೋಟೆಲ್‌ ತಿಂಡಿ–ತಿನಿಸುಗಳನ್ನು ಕಲ್ಪಿಸಲೂ ಸಾಧ್ಯವಿಲ್ಲ. ಕೆಲವು ದಶಕಗಳ ಹಿಂದಿನ ದರದಲ್ಲೇ ಇನ್ನು ಮುಂದೆ ತಿಂಡಿ–ತಿನಿಸು ಲಭ್ಯವಾದರೆ...!

ಇಷ್ಟೊಂದು ಕಡಿಮೆ ದರದಲ್ಲಿ ತಿಂಡಿ–ತಿನಿಸಲು ಪೂರೈಸಲು ಸರ್ಕಾರಿ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಸಿದ್ಧತೆ ನಡೆಯುತ್ತಿದೆ.

ರಾಜ್ಯ ಸರ್ಕಾರವು ಎಲ್ಲ ಜಿಲ್ಲಾ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ತೆರೆಯಲು ಉದ್ದೇಶಿಸಿದ ‘ಉಪಾಹಾರ ಗೃಹ’ ಗಳಲ್ಲಿ ಈ ಆಹಾರ ಪದಾರ್ಥಗಳು ಸಿಗಲಿವೆ. ಜಿಲ್ಲೆಯಲ್ಲಿ ಏಳು ‘ನಾಗರಿಕ ಸೌಲಭ್ಯಗಳ ಸಂಕೀರ್ಣ’ಗಳ ಆರಂಭಕ್ಕೆ ಸಿದ್ಧತೆ ಭರದಿಂದ ಸಾಗಿದೆ.

‘ಈ ನಾಗರಿಕ ಸೌಲಭ್ಯಗಳ ಸಂಕೀರ್ಣದಲ್ಲಿ ಉಪಾಹಾರ ಗೃಹ, ನಂದಿನ ಮಿಲ್ಕ್ ಪಾರ್ಲರ್‌, ಪುಸ್ತಕ ಮಳಿಗೆ, ಎಸ್‌.ಟಿ.ಡಿ. ಬೂತ್ ಹಾಗೂ ಶೌಚಾಲಯಗಳು ಇರಲಿವೆ. ಈ ಪೈಕಿ ಹಾವೇರಿ ಮತ್ತು ಬ್ಯಾಡಗಿಯಲ್ಲಿ ಈಗಾ ಗಲೇ ಕಟ್ಟಡಗಳು ಪೂರ್ಣಗೊಂಡಿವೆ. ಹಾನಗಲ್ ಮತ್ತು ಶಿಗ್ಗಾವಿಯಲ್ಲಿ ಅಂತಿಮ ಹಂತಕ್ಕೆ ಬಂದಿವೆ.

ಹಿರೇಕೆರೂರಿನಲ್ಲಿ ತಳಪಾಯದ ಕಾಮಗಾರಿ ಮುಗಿದಿದೆ. ರಾಣೆಬೆನ್ನೂರಿನಲ್ಲಿ ತಾಲ್ಲೂಕು ಆಸ್ಪತ್ರೆಯು ಜಾಗ  ನೀಡಬೇಕಾಗಿದೆ. ಸವಣೂರಿನಲ್ಲಿ ಜಾಗದ ಕೊರತೆ ಇದೆ’ ಎಂದು ನಿರ್ಮಾಣದ ಉಸ್ತುವಾರಿ ವಹಿಸಿದ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯ (ಕೆ.ಎಚ್‌.ಎಸ್‌.ಡಿ.ಆರ್‌.ಪಿ.)

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಜಿತ್ ಅವರು ತಿಳಿಸಿದರು.

‘ಇಲ್ಲಿ ಆಹಾರ ಸಿದ್ಧಪಡಿಸುವ ಹಾಗೂ ನೀಡುವ ವ್ಯವಸ್ಥೆಗಾಗಿ ಟೆಂಡರ್ ಕರೆಯಲಾಗಿದ್ದು, ಮಹಿಳಾ ಸ್ವಸಹಾಯ ಸಂಘಗಳು, ಅಂಗವಿಕಲರು, ವಿಧಯವೆಯರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಅಂಗವಿಕಲರ ಕಲ್ಯಾಣ ಇಲಾಖೆಯ ಉಸ್ತುವಾರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಆಯಾ ಆಸ್ಪತ್ರೆಯ ಸಮಿತಿಯು ಟೆಂಡರ್‌ದಾರರನ್ನು ಗುರುತಿಸಿಕೊಂಡು ಸ್ಥಳೀಯವಾಗಿ ಸೂಕ್ತ ದರವನ್ನು ನಿಗದಿ ಮಾಡಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಡ್ಡಿ ತಿಳಿಸಿದರು.

ಈ ಉಪಾಹಾರ ಗೃಹಕ್ಕೆ ಸ್ಥಳೀಯ ಆಸ್ಪತ್ರೆಯಿಂದಲೇ ನೀರು ಹಾಗೂ ವಿದ್ಯುತ್ ಪೂರೈಸಲಾಗುವುದು. ಎಂಎಸ್ಐಎಲ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಪಾತ್ರೆ ತೊಳೆಯುವ ಯಂತ್ರವನ್ನು ನೀಡಲಾಗುವುದು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಕ್ಕಿ, ಗೋದಿ, ಬೇಳೆ ಇತ್ಯಾದಿ ದಿನಸಿ ಪೂರೈಸಲಾಗುವುದು ಎಂದು ಆರೋಗ್ಯ ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ ರಾಜ್ಯಮಟ್ಟದಲ್ಲಿ ‘ನಾಗರಿಕ ಸೌಲಭ್ಯಗಳ ಸಂಕೀರ್ಣ’ದ ನಿರ್ಮಾಣ ಮತ್ತು ಅನುಷ್ಠಾನದ ಗುತ್ತಿಗೆಯನ್ನು ‘ಫಾಸ್ಟ್ ಟ್ರ್ಯಾಕ್’ ಸಂಸ್ಥೆ ಪಡೆದಿದೆ.

ಹೊಸ ಸೌಲಭ್ಯಗಳು: ಆಸ್ಪತ್ರೆಗೆ ಬರುವ ನಾಗರಿಕರಿಗೆ ಸೌಲಭ್ಯಗಳನ್ನು ಕಲ್ಪಿಸುವ ಸರ್ಕಾರದ ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಜೆನೆರಿಕ್ ಔಷಧ ಮಳಿಗೆ, ಶುದ್ಧ ಕುಡಿಯುವ ನೀರಿನ ಘಟಕ, ಎಸ್‌.ಟಿ.ಡಿ. ಬೂತ್, ನಂದಿನಿ ಮಿಲ್ಕ್‌ ಪಾರ್ಲರ್, ಪುಸ್ತಕ ಮಳಿಗೆ ಹಾಗೂ ಸುಸಜ್ಜಿತ ಶೌಚಾಲಯದ ವ್ಯವಸ್ಥೆ ದೊರೆಯಲಿದೆ.

ಪ್ರತಿಕ್ರಿಯಿಸಿ (+)