ಸೋಮವಾರ, ಡಿಸೆಂಬರ್ 9, 2019
25 °C
ಕೈಗಾರಿಕಾ ನಿವೇಶನ ಹಂಚಿಕೆ ನಿಯಮ ಬದಲು

ಭೋಗ್ಯದ ಬದಲು 10 ವರ್ಷದ ಬಳಿಕ ಕ್ರಯಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಗ್ಯದ ಬದಲು 10 ವರ್ಷದ ಬಳಿಕ ಕ್ರಯಪತ್ರ

ಬೆಂಗಳೂರು: ಕೈಗಾರಿಕಾ ನಿವೇಶನಗಳನ್ನು 99 ವರ್ಷ ಭೋಗ್ಯದ ಆಧಾರದ ಮೇಲೆ ಹಂಚಿಕೆ ಮಾಡುವ ಬದಲು  10 ವರ್ಷಗಳ ಅವಧಿಗೆ ಭೋಗ್ಯ ಕಮ್ ಕ್ರಯಪತ್ರದ ಆಧಾರದ ಹಂಚಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮಗಳಿಂದ (ಕೆಎಸ್‌ಐಐಡಿಸಿ) ಕೈಗಾರಿಕಾ ನಿವೇಶನ ಹಂಚಿಕೆ ಮಾಡುವ ನಿಯಮಗಳಲ್ಲಿ ಬದಲಾವಣೆ ತಂದಿದ್ದ ಸರ್ಕಾರ 99 ವರ್ಷ ಭೋಗ್ಯದ ಆಧಾರದ ಮೇಲೆ ನೀಡಲು ಆರಂಭಿಸಿತ್ತು. ಇದಕ್ಕೆ ಸಣ್ಣ, ಮಧ್ಯಮ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ನಿಯಮ ಬದಲಾವಣೆ ಮಾಡುವಂತೆ ಒತ್ತಾಯ ಮಾಡಿದ್ದರು.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿಯಮ ಬದಲಾವಣೆಗೆ ಅನುಮೋದನೆ ನೀಡಲಾಗಿತ್ತು. ಈ ನಿಯಮವು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅನ್ವಯವಾಗುತ್ತದೆ. ಹತ್ತು ವರ್ಷಗಳಲ್ಲಿ ಭೋಗ್ಯ ಕಮ್‌ ಕ್ರಯಪತ್ರದ ಷರತ್ತುಗಳನ್ನು ಪಾಲಿಸಿದರೆ ನಿವೇಶನ ಹಂಚಿಕೆದಾರರು ಶುದ್ಧ  ಕ್ರಯಪತ್ರ ಪಡೆಯಬಹುದು.

  ಗರಿಷ್ಠ ಎರಡು  ಎಕರೆವರೆಗಿನ ನಿವೇಶನ ಅಥವಾ ಶೆಡ್‌ಗಳಿಗೆ ಮಾತ್ರ ಹೊಸ ನಿಯಮ ಅನ್ವಯವಾಗಲಿದೆ. ‘ಕೈಗಾರಿಕೆಗಳ ಬೆಳವಣಿಗೆ ಹಿತದೃಷ್ಟಿಯಿಂದ ಇದು ಮಹತ್ವದ ಹೆಜ್ಜೆ. ಉದ್ಯಮಿಗಳು ಇದರ  ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)