ಭಾನುವಾರ, ಡಿಸೆಂಬರ್ 8, 2019
21 °C

ಜಾನುವಾರು ಹಸಿವು ನೀಗಿಸದ ಮೇವು ಬ್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾನುವಾರು ಹಸಿವು ನೀಗಿಸದ ಮೇವು ಬ್ಯಾಂಕ್

ಗದಗ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಜಿಲ್ಲಾಡಳಿತ  ಜಿಲ್ಲೆಯ 46 ಗ್ರಾಮ ಪಂಚಾಯಿತಿ ಮಟ್ಟ ದಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆದಿತ್ತು. ಆದರೆ, ಮೇವು ಬ್ಯಾಂಕ್‌ಗಳಲ್ಲಿ ಸಿಗುವ ಮೇವು ತುಂಬಾ ಹಳೆಯದು ಮತ್ತು ಕಳಪೆ ಗುಣಮಟ್ಟದ್ದು ಎಂಬ ಕಾರಣಕ್ಕೆ ರೈತರು ಈ ಕೇಂದ್ರಗಳಿಂದ ಮೇವು ಖರೀದಿಸಲು ಹಿಂದೇಟು ಹಾಕಿದ್ದರು.

ಹೀಗಾಗಿ, ಮೇವು ಬ್ಯಾಂಕ್‌ಗಳಲ್ಲಿ ದಾಸ್ತಾನು ಇದ್ದ ಮೇವಿನಲ್ಲಿ ಅರ್ಧ ದಷ್ಟೂ ಮಾರಾಟವಾಗಿಲ್ಲ. ಗೋಶಾಲೆಗಳು ಮತ್ತು ಮೇವು ಬ್ಯಾಂಕ್‌ಗಳು ಸೇರಿ ಜೂನ್‌ ಅಂತ್ಯದವರೆಗೆ ಸುಮಾರು 200 ಟನ್‌ನಷ್ಟು ಮೇವು ದಾಸ್ತಾನು ಮಾರಾಟ ವಾಗದೇ ಹಾಗೆಯೇ ಉಳಿದಿದೆ.

ಜಿಲ್ಲಾಡಳಿತ ಖಾಸಗಿ ಪೂರೈಕೆದಾರರಿಂದ ಪ್ರತಿ ಟನ್‌ಗೆ ₹ 5 ಸಾವಿರ ನೀಡಿ ಈ ಮೇವು ಖರೀದಿಸಿತ್ತು. ಇದನ್ನು ಕೆ.ಜಿಗೆ ₹ 3ರಂತೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಮೇವು ಮಾರಾಟವಾಗದೆ ಉಳಿದಿದೆ.

‘ಮೇವು ಬ್ಯಾಂಕ್‌ಗಳಲ್ಲಿ ಲಭ್ಯವಿದ್ದ ಮೇವು ಒಂದೆರಡು ವರ್ಷಗಳಷ್ಟು ಹಳೆಯದು. ಈ ಮೇವು ಜಾನುವಾರುಗಳಿಗೆ ತಿನ್ನಲು ಯೋಗ್ಯವಲ್ಲ. ಪುಡಿ ಪುಡಿಯಾಗಿರುವ ಹೊಟ್ಟು ಮೇವನ್ನು ತಿಂದರೆ ಎತ್ತುಗಳ ನಾಲಗೆ ಊದಿಕೊಳ್ಳುತ್ತದೆ. ಸರಿಯಾಗಿ ಜೀರ್ಣವಾಗುವುದಿಲ್ಲ. ಜತೆಗೆ ಶೇಖರಿಸಿಟ್ಟಿರುವ ಮೇವಿನಲ್ಲಿ ಸರಿಯಾಗಿ ಗಾಳಿಯಾಡದೆ ಕಮಟು ವಾಸನೆ ಬರುತ್ತಿತ್ತು. ಹೀಗಾಗಿ, ಮೇವು ಬ್ಯಾಂಕ್‌ ನಿಂದ ಮೇವು ಖರೀದಿಸಿಲ್ಲ’ ಎನ್ನುತ್ತಾರೆ ಹೆಚ್ಚಿನ ರೈತರು.

‘ಒಂದು ಟ್ರ್ಯಾಕ್ಟರ್ ಬಿಳಿಜೋಳದ ದಂಟಿನ ಮೇವಿಗೆ ₹ 6ರಿಂದ ₹ 8 ಸಾವಿರ ಬೆಲೆ ಇದೆ. ಜೇಬಿಗೆ ಹೊರೆಯಾದರೂ ಪರವಾಗಿಲ್ಲ, ಹೊರಗಿನಿಂದ  ಈ ಮೇವು ಖರೀದಿಸಿ ಜಾನುವಾರುಗಳಿಗೆ ಕೊಟ್ಟಿದ್ದೇವೆ. ಮೇವು ಬ್ಯಾಂಕ್‌ನಿಂದ ಮೇವು ಖರೀದಿಸಿಲ್ಲ’ ಎನ್ನುತ್ತಾರೆ ಶಿರಹಟ್ಟಿ ತಾಲ್ಲೂ ಕಿನ ಶೆಟ್ಟಿಕೆರೆಯ ರೈತ ಹನುಮಂತಪ್ಪ.

317 ಜಾನುವಾರುಗಳಿಗೆ ಆಶ್ರಯ: ಕಳೆದ ಬೇಸಿಗೆಯಲ್ಲಿ ಮೇವಿಗೆ ತೀವ್ರ ಕೊರತೆ ಕಾಣಿಸಿಕೊಂಡಾಗ ಜಿಲ್ಲಾಡಳಿತ ಜಿಲ್ಲೆಯ 6 ಕಡೆ ಗೋಶಾಲೆ ಹಾಗೂ ಐದೂ ತಾಲ್ಲೂಕುಗಳಲ್ಲಿ ಮೇವು ಬ್ಯಾಂಕ್‌ ಗಳನ್ನು ಪ್ರಾರಂಭಿಸಿತ್ತು. 6 ತಿಂಗಳ ಹಿಂದೆ ಅಂದರೆ ಜೂನ್‌ 19ರಂದು ಜಿಲ್ಲೆಯ ಮೊದಲ ಗೋಶಾಲೆಯನ್ನು ಕುರ್ತಕೋಟಿ ಯಲ್ಲಿ ತೆರೆಯಲಾಗಿತ್ತು.

ಇದರ ಬೆನ್ನಿಗೆ ಲಕ್ಕುಂಡಿ, ಶಿರಹಟ್ಟಿ ತಾಲ್ಲೂಕಿನ ಶೆಟ್ಟಿಕೆರೆ ಯಲ್ಲಿ ನಂತರ ಮುಂಡರಗಿ ತಾಲ್ಲೂಕಿನ ಡಂಬಳ, ರೋಣ ತಾಲ್ಲೂಕಿನ ನಾಗೇಂದ್ರಗಡ ಮತ್ತು ನರಗುಂದ ತಾಲ್ಲೂಕಿನ ಭೈರನಹಟ್ಟಿಯಲ್ಲಿ ಗೋಶಾಲೆ ತೆರೆಯಲಾ ಗಿತ್ತು. ಈ ಆರೂ ಗೋಶಾಲೆಗಳು ಸೇರಿ ಒಟ್ಟು 317 ಜಾನುವಾರುಗಳಿಗೆ ಆಶ್ರಯ ಒದಗಿಸಿದ್ದವು.

ಗೋಶಾಲೆಗಳು ತಡವಾಗಿ ಪ್ರಾರಂಭವಾದ್ದರಿಂದ ಮತ್ತು ಇಲ್ಲೂ ಮೇವು ಮತ್ತು ನೀರಿಗೆ ಸಮಸ್ಯೆ ಇದ್ದುದರಿಂದ ಹೆಚ್ಚಿನ ರೈತರು  ಜಾನುವಾರುಗಳನ್ನು ತಂದುಬಿಡಲು ಹಿಂದೇಟು ಹಾಕಿದ್ದರು. ಲಕ್ಕುಂಡಿಯಲ್ಲಿ ತೆರೆಯಲಾದ ಗೋಶಾಲೆಯಲ್ಲಿ ಕೇವಲ 9 ಜಾನುವಾರು ಗಳು ಆಶ್ರಯ ಪಡೆದರೆ, ಡಂಬಳದ ಗೋಶಾಲೆಯಲ್ಲಿ 113 ಜಾನುವಾರುಗಳಿಗೆ ಆಶ್ರಯ ಲಭಿಸಿತ್ತು. ಪಶುಸಂಗೋಪನೆ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2.10 ಲಕ್ಷ ಜಾನುವಾರುಗಳಿವೆ.

ಮೇವಿಗೆ ತೀವ್ರ ಕೊರತೆ ಇದ್ದರೂ ರೈತರು ಗೋಶಾಲೆಗಳಿಗೆ ಜಾನುವಾರು ತಂದು ಬಿಡಲು ಮನಸ್ಸು ಮಾಡಲಿಲ್ಲ. ಹೀಗಾಗಿ 6 ಗೋಶಾಲೆಗಳಲ್ಲೂ ಬಳಕೆಯಾಗದೆ ಉಳಿದಿರುವ 16.616 ಟನ್‌ ಮೇವು ಸಂಗ್ರಹ ಬಾಕಿ ಇದೆ.

ಕೆಲವೆಡೆ 1 ಕೆ.ಜಿ ಮೇವೂ ಮಾರಾಟ ಆಗಿಲ್ಲ: ಜಿಲ್ಲೆಯ 5 ತಾಲ್ಲೂಕುಗಳ 43 ಗ್ರಾಮ ಪಂಚಾಯಿತಿ ಮಟ್ಟದಲ್ಲಿ  ಒಟ್ಟು 46 ಮೇವಿನ ಬ್ಯಾಂಕ್‌ ತೆರೆಯಲಾಗಿತ್ತು. ಜಿಲ್ಲಾಡಳಿತದ ಅಂಕಿ– ಅಂಶದಂತೆ ಇಲ್ಲಿ ಜೂನ್‌ ಅಂತ್ಯದವರೆಗೆ 305 ಟನ್‌ ಮೇವು ಮಾತ್ರ ಮಾರಾಟವಾಗಿದೆ. ಇನ್ನೂ 186 ಟನ್‌ ಮೇವು ಸಂಗ್ರಹ ಇದೆ.

ಶಿರಹಟ್ಟಿ ತಾಲ್ಲೂಕಿನ ಮಾಗಡಿ, ಗೂಜನೂರ, ಬೆಳ್ಳಟ್ಟಿ, ಲಕ್ಷ್ಮೇಶ್ವರ, ಯಳವತ್ತಿಯಲ್ಲಿ ತೆರೆಯಲಾದ ಮೇವು ಬ್ಯಾಂಕ್‌ಗಳಿಂದ ಗರಿಷ್ಠ ಪ್ರಮಾಣದಲ್ಲಿ ಅಂದರೆ 181 ಟನ್‌ನಷ್ಟು ಮೇವು ಮಾರಾಟವಾಗಿದೆ. ಉಳಿದೆಡೆ ಅಂದರೆ, ಗದಗ ತಾಲ್ಲೂಕಿನ 5, ಮುಂಡರಗಿ, ರೋಣ, ನರಗುಂದ ತಾಲ್ಲೂಕಿನ ತಲಾ 6 ಗ್ರಾಮ ಪಂಚಾಯಿತಿ ಮಟ್ಟದಲ್ಲಿ  ತೆರೆಯಲಾದ ಮೇವು ಬ್ಯಾಂಕ್‌ನಿಂದ ಒಂದು ಕೆ.ಜಿ ಮೇವು ಕೂಡ ಮಾರಾಟವಾಗಿಲ್ಲ.

ಪ್ರತಿಕ್ರಿಯಿಸಿ (+)