ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪದವಿ ಯಾರಿಗೆ?

Last Updated 15 ಜುಲೈ 2017, 9:18 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರವಿಗೌಡ ಪಾಟೀಲ ಕೆಪಿಸಿಸಿ ಪುನರ್‌ ರಚನೆಯಲ್ಲಿ ಕಾರ್ಯದರ್ಶಿ ಯಾಗಿ ನೇಮಕ ಗೊಂಡಿದ್ದು, ತೆರ ವಾಗುವ ಸ್ಥಾನ ಯಾರ ‘ಕೈ’ ಪಾಲಾಗಲಿದೆ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ನೀರಾವರಿ ಯೋಜನೆಯ ಕಾಮಗಾರಿಗಳ ವೀಕ್ಷಣೆಗಾಗಿ ಶನಿವಾರ ವಿಜಯಪುರಕ್ಕೆ ಬರಲಿದ್ದು, ಈ ಸಂದರ್ಭ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕಾತಿ ಕುರಿತಂತೆ ಆಪ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಕಾರ್ಯದರ್ಶಿಯಾಗಿ ರವಿಗೌಡ ನೇಮಕಗೊಳ್ಳುವಲ್ಲಿ ಎಂ.ಬಿ. ಪಾಟೀಲ ಪಾತ್ರ ಮಹತ್ತರವಾದದ್ದು. ಶನಿವಾರ ರಾತ್ರಿ ಸಚಿವರನ್ನು ಭೇಟಿಯಾಗುವ ಸಂದರ್ಭವೇ ಸಚಿವರು ಜಿಲ್ಲಾ ಘಟಕಕ್ಕೆ ನೂತನ ಸಾರಥಿ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಚಿವ ಎಂ.ಬಿ. ಪಾಟೀಲ, ಶಾಸಕರಾದ ಸಿ.ಎಸ್‌. ನಾಡಗೌಡ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ ನಡುವೆ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಶೀತಲ ಸಮರ ನಡೆದಿದೆ.

ಮಾಜಿ ಶಾಸಕ ಶರಣಪ್ಪ ಸುಣಗಾರ ಬದಲಾವಣೆ ಬಳಿಕ ಅಂಬಿಗ, ಕೋಳಿ, ಗಂಗಾಮತಸ್ಥ, ತಳವಾರ ಸಮಾಜ ಅಸಮಾಧಾನ ಗೊಳ್ಳಬಾರದು ಎಂಬ ಏಕೈಕ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಅದೇ ಸಮಾಜದ ರವಿಗೌಡ ಪಾಟೀಲರನ್ನೇ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

2016ರ ಅಕ್ಟೋಬರ್‌ನಲ್ಲಿ ರವಿಗೌಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕ ಗೊಂಡ ದಿನದಿಂದಲೇ, ಶಾಸಕರ ಬಣ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸಮ್ಮುಖವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದರು.

ಈ ಘಟನೆಯಿಂದ ಮುಜುಗರಕ್ಕೀಡಾದ ಸಚಿವ ಎಂ.ಬಿ.ಪಾಟೀಲ, ರವಿಗೌಡ ಪಾಟೀಲರನ್ನು ಕೆಪಿಸಿಸಿ ಕಾರ್ಯದರ್ಶಿಯನ್ನಾಗಿ ನೇಮಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಇದೀಗ ತೆರವಾಗುವ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಯಾವ ದಾಳ ಉರುಳಿಸಲಿದ್ದಾರೆ, ಇದಕ್ಕೆ ಪ್ರತಿಯಾಗಿ ಶಾಸಕರ ತಂಡ ಯಾವ ಕಾರ್ಯತಂತ್ರ ರೂಪಿಸಲಿದೆ ಎಂಬುದು ಪಕ್ಷದ ಕಾರ್ಯಕರ್ತರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಮಾಣಿಕಂ ಭೇಟಿ: ‘ಬೆಳಗಾವಿ ವಿಭಾಗದ ಎಐಸಿಸಿ ಉಸ್ತುವಾರಿ ಮಾಣಿಕಂ ಠಾಕೂರ್ ಸೋಮವಾರ (ಜುಲೈ 17) ಸಂಜೆ ಧಾರವಾಡದಲ್ಲಿ ಎಲ್ಲ ಜಿಲ್ಲಾ ಘಟಕದ ಅಧ್ಯಕ್ಷರ ಸಭೆಯನ್ನು ನಡೆಸಲಿದ್ದಾರೆ.

ಮಂಗಳವಾರ (ಜುಲೈ 18) ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪಕ್ಷ ಸಂಘಟನೆಗಾಗಿ ಬರಲಿದ್ದು, ಈ ಸಂದರ್ಭ ಜಿಲ್ಲಾ ಘಟಕಕ್ಕೆ ನೂತನ ಸಾರಥಿಯ ಆಯ್ಕೆ ಕುರಿತ ಚರ್ಚೆ ನಡೆಯಬಹುದು’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಯೂತ್‌ ಕಾಂಗ್ರೆಸ್‌ನಿಂದ ಕಾರ್ಯದರ್ಶಿಯವರೆಗೆ...
ವಿಜಯಪುರ: ಈ ಹಿಂದಿನ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರದ ಯೂತ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ ರವಿಗೌಡ ಪಾಟೀಲ ಇದೀಗ ಕೆಪಿಸಿಸಿ ಕಾರ್ಯದರ್ಶಿ. ಮೂರು ವರ್ಷ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರದ ಯೂತ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ರವಿಗೌಡ, ಬಳಿಕ ಜಿಲ್ಲಾ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಎರಡು ವರ್ಷ ದುಡಿದಿದ್ದಾರೆ.

ನಂತರ ಸತತ 15 ವರ್ಷ ಚಡಚಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಎಂ.ಬಿ.ಪಾಟೀಲ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಶರಣಪ್ಪ ಸುಣಗಾರ ಬದಲಾವಣೆಯಾದಾಗ, ರವಿಗೌಡ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದಿದ್ದರು. ಎಂಟು ತಿಂಗಳು ಡಿಸಿಸಿ ನಿಭಾಯಿಸಿ, ಇದೀಗ ಕೆಪಿಸಿಸಿ ಪುನರ್‌ ರಚನೆಯಲ್ಲಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಮಹಿಳಾ ಕಾಂಗ್ರೆಸ್‌ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುತ್ತರಗಿ ತಾಂಡಾದ ಕಾಂತಾ ನಾಯ್ಕ್‌ ಸಹ ಕೆಪಿಸಿಸಿ ಕಾರ್ಯದರ್ಶಿ ಯಾಗಿ ನೇಮಕಗೊಂಡಿದ್ದು, ಜಿಲ್ಲೆಗೆ ಎರಡು ಸ್ಥಾನ ಲಭಿಸಿದಂತಾಗಿದೆ.

ಕಾಂತಾ ನಾಯ್ಕ್‌ ಮಹಿಳಾ ಘಟಕದಲ್ಲಿ ಗುರುತಿಸಿಕೊಳ್ಳುವ ಜತೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್‌.ಸಿ.ಮಹಾದೇವಪ್ಪ, ಎಂ.ಬಿ.ಪಾಟೀಲ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT