ಸೋಮವಾರ, ಡಿಸೆಂಬರ್ 16, 2019
23 °C

ಪೊಲೀಸ್‌ ಬೇಗುದಿ ನಿವಾರಣೆಗೆ ಸೈಕಲ್‌ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್‌ ಬೇಗುದಿ ನಿವಾರಣೆಗೆ ಸೈಕಲ್‌ ಜಾಥಾ

ಜಮಖಂಡಿ: ‘ಎರಡು–ಮೂರು ವರ್ಷ ಗಳಿಂದ ಪೊಲೀಸ್‌ ಇಲಾಖೆಯ ಸಿಬ್ಬಂದಿಯಲ್ಲಿ ಅಸಮಾಧಾನ ಕಂಡು ಬರುತ್ತಿದೆ. ಹಿರಿಯ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಇಲಾಖೆಯಲ್ಲಿನ ಬೇಗುದಿ ನಿವಾರಣೆಗೆ ಸೈಕಲ್‌ ಜಾಗೃತಿ ಜಾಥಾ ಹಮ್ಮಿಕೊಂಡಿದ್ದೇವೆ’ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ ರಾವ್‌ ಹೇಳಿದರು.

ಬೀದರ್‌ನಿಂದ 50 ಮಂದಿ ಸೈಕ್ಲಿಸ್ಟ್‌ಗಳೊಂದಿಗೆ ಸೈಕಲ್‌ ಮೇಲೆ ಕೆಎಸ್‌ಆರ್‌ಪಿ ಕರ್ನಾಟಕ ದರ್ಶನ ಜಾಗೃತಿ ಜಾಥಾ ಆರಂಭಿಸಿರುವ ಅವರು ಶುಕ್ರವಾರ ಬೆಳಿಗ್ಗೆ ನಗರದ ಕಟ್ಟೆಕೆರೆ ಹತ್ತಿರ ಮುಧೋಳ ದಿನ್ನಿಗೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಅವರನ್ನು ಬರಮಾಡಿಕೊಂಡ ಮೇಲೆ ಅವರು ಮಾತನಾಡಿದರು.

‘ಬುಧವಾರ ಬೀದರ್‌ನಿಂದ ಆರಂಭವಾಗಿರುವ ಜಾಥಾ 1,750 ಕಿ.ಮೀ ದೂರವನ್ನು ಕ್ರಮಿಸಿ ಇದೇ 25ರಂದು ಬೆಂಗಳೂರು ತಲುಪಲಿದೆ. ಮಾರ್ಗ ಮಧ್ಯದಲ್ಲಿ ಬರುವ 15 ಕೆಎಸ್‌ಆರ್‌ಪಿ ಬಟಾಲಿಯನ್‌ಗಳಿಗೆ ಭೇಟಿ ನೀಡಿ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.

‘ತಮ್ಮೊಂದಿಗೆ 50 ಮಂದಿ ಸೈಕ್ಲಿಸ್ಟ್‌ಗಳು ಮಾತ್ರ ಇರಬಹುದು. ಆದರೆ, ಅವರು ಇಡೀ ಪೊಲೀಸ್‌ ಇಲಾಖೆಗೆ ಪ್ರೇರಕ ಶಕ್ತಿಯಾಗಿ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಒಗ್ಗಟ್ಟು ಮೂಡಿಸುವುದು ತಮ್ಮ ಧ್ಯೇಯವಾಗಿದೆ’ ಎಂದರು.

‘ಮಂಗಳೂರು ಗಲಭೆ, ಪರಪ್ಪನ ಅಗ್ರಹಾರದ ಭ್ರಷ್ಟಾಚಾರ ಇತ್ಯಾದಿ ಕುರಿತು ಪೊಲೀಸ್‌ ಇಲಾಖೆ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ನಡುವೆ ಜಾಥಾ ಮೂಲಕ ಒಂದಿಷ್ಟು ಒಳ್ಳೆಯ ಕಾರ್ಯ ಮಾಡುತ್ತಿದ್ದೇವೆ. ಕೆಎಸ್‌ಆರ್‌ಪಿಗೆ ಅಪಾರವಾದ ಶಕ್ತಿ ಇದೆ. ಸಿವಿಲ್‌ ಪೊಲೀಸ್‌ಗಿಂತ ಹೆಚ್ಚಿನ ಶಕ್ತಿ ಕೆಎಸ್‌ಆರ್‌ಪಿಗೆ ಇದೆ.

ಆದರೆ, ಅದರ ಉಪಯೋಗ ಸರಿಯಾಗಿ ಆಗುತ್ತಿಲ್ಲ. ನೇಮಕಗೊಂಡ ಸಿಬ್ಬಂದಿ ಕೆಎಸ್‌ಆರ್‌ಪಿ ಬಿಟ್ಟು ಸಿವಿಲ್‌ ಪೊಲೀಸ್‌ ಸೇರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಎಸ್‌ಆರ್‌ಪಿ ಅಂದರೆ ಏನು ಅಂತ ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶವಾಗಿದೆ’ ಎಂದು ಸಮಗ್ರ ಮಾಹಿತಿ ನೀಡಿದರು.

ಜಾಥಾ ನಗರಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ತಂಪು ಪಾನೀಯ, ಹಣ್ಣು ನೀಡಿ ದಣಿವು ಆರಿಸಿಕೊಳ್ಳಲು ಅನುವು ಮಾಡಿ ಕೊಡಲಾಯಿತು. ಡಿವೈಎಸ್ಪಿ ರಾಮನ ಗೌಡ ಹಟ್ಟಿ, ಸಿಪಿಐ ಸುನೀಲ್‌ಕುಮಾರ್‌ ನಂದೇಶ್ವರ, ನಗರ ಠಾಣೆಯ ಪಿಎಸ್‌ಐ ಪರಶುರಾಮ ಮನಗೂಳಿ ಹಾಗೂ ಅವರ ಸಿಬ್ಬಂದಿ, ಸೈಕ್ಲಿಂಗ್‌ ತರಬೇತುದಾರ ಚಂದ್ರು ಕುರಣಿ ಹಾಜರಿದ್ದರು.

‘ಶಿಕ್ಷಣಕ್ಕೆ ಮಹತ್ವ ನೀಡಿ’

ಮುಧೋಳ: ‘ಪೊಲೀಸರಲ್ಲಿ ಉತ್ಸಾಹ, ಸಾಮರ್ಥ್ಯ, ಪುನಶ್ಚೇತನಗೊಳಿಸುವ  ನಿಟ್ಟಿನಲ್ಲಿ ಅನೇಕ ಸಾಹಸ ಕಾರ್ಯ ಕ್ರಮಗಳನ್ನು ಇಲಾಖೆ ಹಾಕಿಕೊಂಡಿದೆ’ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ ರಾವ್‌ ಹೇಳಿದರು.

ಅವರು ಶುಕ್ರವಾರ ನಗರದ ಕೆ.ಆರ್.ಲಕ್ಕಂ ವಿದ್ಯಾಲಯದಲ್ಲಿ ಜಿಲ್ಲಾ ಪೊಲೀಸರು ಎಡಿಜಿಪಿ ಭಾಸ್ಕರರಾವ ನೇತೃತ್ವದಲ್ಲಿ ನಡೆದಿರುವ ಬೀದರ್‌ನಿಂದ ಬೆಂಗಳೂರುವರೆಗೆ ಕರ್ನಾಟಕ ದರ್ಶನ ಸೈಕಲ್ ಜಾಥಾಕ್ಕೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಹೆಚ್ಚಿನ ಮಹತ್ವ ನೀಡಬೇಕು. ಬಡವರಾಗಿ ಹುಟ್ಟಿರಬಹುದು, ಆದರೆ ಬಡವರಾಗಿ ಮರಣ ಹೊಂದಬಾರದು. ಕೇವಲ ಕ್ಲಾಸ್ ರೂಮ್ ನಮ್ಮ ಪ್ರಪಂಚವಾಗಬಾರದು. ಕ್ಲಾಸ್ ರೂಮ್‌ದಲ್ಲಿ ಪ್ರಪಂಚವನ್ನೇ ತರಬೇಕು. ಕೆಲಸ ಸಣ್ಣದು ದೊಡ್ಡದು ಎಂದು ತಿಳಿದುಕೊಳ್ಳದೆ, ಆ ಕೆಲಸದಲ್ಲಿ ಹೆಚ್ಚನ ಕೌಶಲ ಮೆರದರೆ ಅವರಿಗೆ ಗೌರವ ಬಂದೇ ಬರುತ್ತದೆ ಎಂದರು.

ಬಾಗಲಕೋಟೆ ಜಿಲ್ಲಾ ವರಿಷ್ಠಾಧಿಕಾರಿ ರಿಷ್ಯಂತ ಮಾತನಾಡಿದರು. ಡಾ.ಮೋಹನ ಬಿರಾದಾರ ಮಾತನಾಡಿದರು. ಸಂಸ್ಥೆಯ ಪದಾಧಿಕಾರಿಗಳಾದ ದುಂಡಪ್ಪಣ್ಣ ಲಕ್ಕಂ, ಅಪ್ಪಾಸಾಹೇಬ ಲಕ್ಕಂ, ಬಾಗಲಕೋಟೆ ಎಎಸ್‌ಪಿ ಲಕ್ಷ್ಮೀಪ್ರಸಾದ, ಎಎಸ್‌ಪಿ ಕೆಎಸ್‌ಆರ್‌ಪಿ ಅಯ್ಯಪ್ಪ, ಜಮಖಂಡಿ ಡಿಎಸ್‌ಪಿ ರಾಮನಗೌಡ ಹಟ್ಟಿ, ಸಿಪಿಐ ಸಂಜೀವ ಕಾಂಬಳೆ, ಪಿಎಸ್‌ಐ ಶಿವಶಂಕರ ಮುಕರಿ, ಪ್ರಾಚಾರ್ಯ ಗಂಗಾಧರ ಪೈ, ಸೈಕಲಿಂಗ್ ತರಬೇತುದಾರರಾದ ಅನಿತಾ ನಿಂಬರಗಿ, ಸಿ.ಎಂ.ಕುರಣಿ ಇದ್ದರು.

ಪ್ರತಿಕ್ರಿಯಿಸಿ (+)