ಶುಕ್ರವಾರ, ಡಿಸೆಂಬರ್ 6, 2019
18 °C

ಜಿಲ್ಲೆಯಲ್ಲಿ ವಿವಿಧೆಡೆ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ವಿವಿಧೆಡೆ ಉತ್ತಮ ಮಳೆ

ಕಾರವಾರ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಉತ್ತಮ ಮಳೆಯಾಗಿದ್ದು, ಸಿದ್ದಾ ಪುರ ಹಾಗೂ ಕಾರವಾರದ ಕೆಲವೆಡೆ ಮರ ಬಿದ್ದು ಸಣ್ಣಪುಟ್ಟ ಹಾನಿಯಾಗಿದೆ.

ಶಿರಸಿ, ಸಿದ್ದಾಪುರ, ಕುಮಟಾ ಹಾಗೂ ಹಳಿಯಾಳದಲ್ಲಿ ಆಗಾಗ ಮಳೆ ಬಿರುಸಾಗಿ ಸುರಿದಿದೆ.

ಇನ್ನು ಭಟ್ಕಳ, ಮುಂಡಗೋಡ, ಯಲ್ಲಾಪುರದಲ್ಲಿ ಸಾಧಾರಣ ಮಳೆ ಆಗಿದೆ. ಕಾರವಾರ ತಾಲ್ಲೂಕಿನ ಕದ್ರಾ ಬಳಿಯ ರಸ್ತೆಯಲ್ಲಿ ಬೆಳಿಗ್ಗೆ  ಅಡ್ಡಲಾಗಿ ಮರವೊಂದು ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತು. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಪರದಾಡಿದರು.

561.4 ಮಿ.ಮೀ ಮಳೆ:  ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ಅವಧಿಯಲ್ಲಿ ಒಟ್ಟು 561.4 ಮಿ.ಮೀ. ಮಳೆಯಾಗಿದ್ದು, ಸರಾಸರಿ 51 ಮಿ.ಮೀ. ಮಳೆ ದಾಖಲಾಗಿದೆ.

ಅಂಕೋಲಾ 74.4 ಮಿ.ಮೀ, ಭಟ್ಕಳ 90 ಮಿ.ಮೀ, ಹಳಿಯಾಳ 21.2 ಮಿ.ಮೀ, ಹೊನ್ನಾವರ 58.2 ಮಿ.ಮೀ, ಕಾರವಾರ 87.4 ಮಿ.ಮೀ, ಕುಮಟಾ 78.1 ಮಿ.ಮೀ, ಮುಂಡಗೋಡ 7.6 ಮಿ.ಮೀ, ಸಿದ್ದಾಪುರ 33.8 ಮಿ.ಮೀ, ಶಿರಸಿ 34.5 ಮಿ.ಮೀ, ಜೊಯಿಡಾ 47ಮಿ.ಮೀ, ಯಲ್ಲಾಪುರ 29.2 ಮಿ.ಮೀ. ಮಳೆಯಾಗಿದೆ.

ಮಳೆ ಹೆಚ್ಚಳ, ಉರುಳಿ ಬಿದ್ದ ಅರಳಿ ಮರ

ಸಿದ್ದಾಪುರ: ಪಟ್ಟಣದ ರಾಜಮಾರ್ಗದ ಪಕ್ಕದಲ್ಲಿದ್ದ ಬೃಹತ್ ಅರಳಿಮರವೊಂದು ಗುರುವಾರ ರಾತ್ರಿ ಉರುಳಿ ಬಿದ್ದಿದ್ದು, ಯಾವುದೇ ಜೀವಹಾನಿ ಉಂಟಾಗಿಲ್ಲ.ಈ  ಮರ ಬಿದ್ದ ಪರಿಣಾಮ ಇಲ್ಲಿನ ಮೂರು ಅಂಗಡಿಗಳಿಗೆ ಜಖಂ ಆಗಿದ್ದು, ಕಾರು, ಬೈಕ್ ಮತ್ತು ಸೈಕಲ್‌ಗೆ ಹಾನಿ ಯಾಗಿದೆ. ವಿದ್ಯುತ್ ಕಂಬ (ವಿದ್ಯುತ್ ಟ್ರಾನ್ಸ್‌ ಫಾರ್ಮರ್ ಇದ್ದುದು) ಮುರಿ ದಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಸೈಕಲ್‌ ಮೇಲೆ ತೆರಳುತ್ತಿದ್ದ ಹಾಳದ ಕಟ್ಟಾದ ರಾಮಚಂದ್ರ ಹೆಗಡೆ ಎಂಬುವರಿಗೆ ಮರದ ಟೊಂಗೆ ಬಡಿದಿದ್ದು, ಅವರಿಗೆ ಯಾವುದೇ ಅಪಾಯ ಉಂಟಾಗಿಲ್ಲ  ಎಂದು ಸ್ಥಳೀಯರು ತಿಳಿಸಿದ್ದಾರೆ.

‘ಈ ಮರ ತುಂಬಾ ಹಳೆಯದ್ದಾಗಿದ್ದು, ಮರದ ಬುಡ ನಿರಂತರವಾಗಿ ನೆನೆದ ಪರಿಣಾಮ, ಬುಡ ಸಡಿಲಗೊಂಡು ಉರುಳಿಬಿದ್ದಿದೆ’ ಎಂದು ಸ್ಥಳಕ್ಕೆ ರಾತ್ರಿಯೇ ಭೇಟಿದ ತಹಶೀಲ್ದಾರ್ ಪಟ್ಟರಾಜ ಗೌಡ ಮಾಹಿತಿ ನೀಡಿದರು. ಶುಕ್ರವಾರ ಇಡೀ ದಿನ ನಡೆದ  ಮರದ ತೆರವು ಕಾರ್ಯದಲ್ಲಿ ಕಂದಾಯ ಇಲಾಖೆ, ಪಟ್ಟಣ ಪಂಚಾಯ್ತಿ, ಹೆಸ್ಕಾಂ, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು. 

ಮಳೆಯ ರಭಸ ಹೆಚ್ಚಳ: ಈ ಮಧ್ಯೆ ಗುರುವಾರ ರಾತ್ರಿ ಮತ್ತು ಶುಕ್ರವಾರ ಇಡೀ ದಿನ ಮಳೆ ರಭಸವಾಗಿ ಸುರಿಯಿತು. ಶುಕ್ರವಾರ ಆಗಾಗ ಬಿಡುವು ನೀಡಿದರೂ ಮಳೆಯ ಅಬ್ಬರ ಮಾತ್ರ ಸಾಕಷ್ಟಿತ್ತು. ಮಧ್ಯಾಹ್ನದ ನಂತರ ಮಳೆ ಯ ರಭಸದಲ್ಲಿ ಕೊಂಚ ಇಳಿಮುಖ ಉಂಟಾಯಿತು. ಶುಕ್ರವಾರ ಬೆಳಿಗ್ಗೆ ಮುಕ್ತಾಯಗೊಂಡ 24 ತಾಸುಗಳ ಅವಧಿಯಲ್ಲಿ 33.8 ಮಿ.ಮೀ ಮಳೆ ಸುರಿ ದಿದ್ದು, ಇದುವರೆಗೆ ಒಟ್ಟು 1068 ಮಿ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ದಿನದವರೆಗೆ 1144.8 ಮಿ.ಮೀ ಮಳೆ ದಾಖಲಾಗಿತ್ತು ಎಂದು ತಹಶೀಲ್ದಾರ್ ಕಚೇರಿಯ ಮೂಲಗಳು ತಿಳಿಸಿವೆ.

ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ತೊಂದರೆ: ಆರೋಪ

ಕುಮಟಾ: ಇಲ್ಲಿಯ ತೋಟಗಾರಿಕೆ ಕಚೇರಿಗೆ ಹೋಗುವ ಎಡಭಾಗದ ಮಿಶನರಿ ಕಾಲೊನಿಯ ಗಟಾರದಲ್ಲಿ ಸರಿಯಾಗಿ ಮಳೆ ನೀರು ಹರಿಯದೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ವಿ.ಎಸ್. ನಾಯಕ ಆರೋಪಿಸಿದರು.

‘ಗುರುವಾರ ಸಂಜೆ ಬಿದ್ದ ರಭಸದ ಮಳೆಗೆ ಮೀಶನರಿ ಕಾಲೊನಿಯ ಗಟಾರದಲ್ಲಿ ನೀರು ಹರಿಯದೆ ರಸ್ತೆಯಲ್ಲಿ ಸುಮಾರು ಎರಡು ಅಡಿ ನೀರು ನಿಂತಿತ್ತು. ರಾತ್ರಿ ಗಾಳಿ ಮಳೆಗೆ ವಿದ್ಯುತ್ ಪೂರೈಕೆ ಕೂಡ ನಿಂತು ಹೋಗಿದ್ದರಿಂದ  ಮನೆಗೆ ಹೋಗುವವರು ರಸ್ತೆಯಲ್ಲಿ ನೀರು ಹಾದು ಹೋಗಲು ಪ್ರಯಾಸ ಪಡಬೇಕಾಯಿತು. ತುಂಬಿದ ನೀರಿನಲ್ಲಿ ರಸ್ತೆ ಗೋಚರಿಸದೆ ವಾಹನ ಸವಾರರು ನೀರು ಕಡಿಮೆ ಆಗುವವರೆಗೂ ಕಾಯಬೇಕಾಯಿತು’ ಎಂದು ದೂರಿದರು.

‘ಒಳ ಚರಂಡಿ ಕಾಮಗಾರಿ ನಡೆಸುವವರು ಅಗೆದು ಹಾಕಿದ್ದ ರಸ್ತೆಯನ್ನು ಜಿ.ಎಸ್. ಕಾಮತ್ ಅವರ ಮನೆಯವರೆಗೆ ಮಾತ್ರ ದುರಸ್ತಿ ಮಾಡಿ ಮುಂದೆ ಹಾಗೇ ಬಿಡಲಾಗಿದೆ. ಅಗೆದ ಮಣ್ಣು, ತೋಟಗಾರಿಕೆ ಕಚೇರಿ ಗುಡ್ಡ ದಿಂದ ಬರುವ ಮಳೆ ನೀರಿನೊಂದಿಗೆ ಬರುವ ಕಸ ಗಟಾರವನ್ನು ಕಟ್ಟಿಹಾಕಿದೆ. ಹಾಗಾಗಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಶುಕ್ರವಾರ ಬೆಳಿಗ್ಗೆ ಶಾಲಾ ಮಕ್ಕಳ ರಿಕ್ಷಾ ರಸ್ತೆಯಲ್ಲಿ ಹಾದು ಹೋಗ ಲು ಪ್ರಯಾಸ ಉಂಟಾಯಿತು’ ಎಂದರು.

ಪ್ರತಿಕ್ರಿಯಿಸಿ (+)