ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ಕುರ್ಚಿ ಮೇಲೆ ಭೂಮಿ!

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ಉಷ್ಣತೆ ಹೆಚ್ಚಾಗುತ್ತಿದೆ. ಜಾಗತಿಕ ತಾಪಮಾನವು ಈ ಶತಮಾನದ ಅಂತ್ಯದ ಹೊತ್ತಿಗೆ 4.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದನ್ನು ‘ಹಸಿರುಮನೆ ಪರಿಣಾಮ’ ಅಥವಾ ‘ಗ್ಲೋಬಲ್ ವಾರ್ಮಿಂಗ್’ ಎಂದು ಕರೆಯುತ್ತಾರೆ.

ಚಳಿಗಾಲದಲ್ಲಿ ಕೆಲವು ಬಗೆಯ ಗಿಡಗಳನ್ನು ಬೆಳೆಸುವ ಗಾಜಿನ ಮನೆಗೆ ‘ಹಸಿರುಮನೆ’ ಎಂದು ಕರೆಯುತ್ತಾರೆ. ಸೂರ್ಯನಿಂದ ಹೀರಿಕೊಂಡ ಶಾಖವನ್ನು ಗಿಡಗಳಿಗೆ ಪೂರೈಸುವ ಕೆಲಸವನ್ನು ಇಂಥ ಮನೆಗಳು ಮಾಡುತ್ತವೆ. ಬೆಳಕನ್ನು ಮಾತ್ರ ಒಳಪ್ರವೇಶಿಸಲು ಬಿಡುವ ಹಸಿರುಮನೆಯ ಗಾಜುಗಳು ಶಾಖವನ್ನು ಹೊರಗೇ ಉಳಿಯುವಂತೆ ಮಾಡುತ್ತವೆ. ಹೀಗೆಯೇ ಭೂಮಿ ಕೂಡ ಬೃಹತ್ ‘ಹಸಿರುಮನೆ’ಯಂತೆಯೇ ವರ್ತಿಸುತ್ತದೆ.

ವಾತಾವರಣದಲ್ಲಿ ಇರುವ ಕೆಲವು ‘ಸಹಜ ಗಾಜುಗಳು’ (ಆವಿಯಾಗುವ ನೀರಿನ ಪಸೆ, ಇಂಗಾಲದ ಡಯಾಕ್ಸೈಡ್, ನೈಟ್ರಸ್ ಆಕ್ಸೈಡ್, ಮಿಥೇನ್ ಇತ್ಯಾದಿ) ಸೌರಶಕ್ತಿಯನ್ನು ತಡೆಹಿಡಿಯುತ್ತವೆ. ಆಗ ಶಾಖವು ಮತ್ತೆ ಬಾಹ್ಯಾಕಾಶದತ್ತ ಹೋಗುತ್ತದೆ.

ಹಸಿರುಮನೆಯ ಅನಿಲಗಳು ಅತ್ಯಗತ್ಯ. ಅವುಗಳಿಲ್ಲದೆ ಭೂಮಿಯಲ್ಲಿನ ಜೀವಿಗಳಿಗೆ ಅಗತ್ಯವಿರುವ ಶಾಖವೇ ದೊರೆಯುವುದಿಲ್ಲ. ಕಳೆದ 50 ವರ್ಷಗಳಲ್ಲಿ ವಾತಾವರಣದಲ್ಲಿ ಈ ಅನಿಲಗಳ ಪ್ರಮಾಣ ನಾಟಕೀಯ ರೀತಿಯಲ್ಲಿ ಹೆಚ್ಚಾಗಿದೆ. ಇದರಿಂದಾಗಿಯೇ ಭೂಮಿಯು ಸಹಜವಾಗಿ ಎಷ್ಟು ಬಿಸಿಯಾಗಬೇಕೋ ಅದಕ್ಕಿಂತಲೂ ಹೆಚ್ಚು ಕಾಯುತ್ತಿರುವುದು.

ವಿಶ್ವದೆಲ್ಲೆಡೆ ಚಳಿ ಹಾಗೂ ಬಿಸಿಲು ಅಗತ್ಯಕ್ಕಿಂತಲೂ ಅತಿಯಾಗಿ ಹೆಚ್ಚು ಅಥವಾ ವಿಪರೀತ ಕಡಿಮೆಯಾಗಲು ಇದೇ ಕಾರಣ. ಆರ್ಕ್‌ಟಿಕ್‌ ಹಾಗೂ ಅಂಟಾರ್ಕ್ಟಿಕಾದಲ್ಲಿ ಹಿಮ ಕರಗುವುದು ಹೆಚ್ಚಾಗಿರುವುದರಿಂದ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆ ಉಂಟಾಗಿದೆ. ಕರಾವಳಿ ಪ್ರದೇಶಗಳಲ್ಲಿ ಪದೇ ಪದೇ ಪ್ರಕೃತಿ ವೈಪರೀತ್ಯ ಆಗುತ್ತಿರುವುದು ಇದರಿಂದಾಗಿಯೇ.

ಆರ್ಕ್‌ಟಿಕ್ ಹಿಮವು ಸಂಪೂರ್ಣ ಕರಗಿ, 2100ರ ಹೊತ್ತಿಗೆ ಮಾಯವಾಗಲಿದೆ ಎಂಬ ಅಭಿಪ್ರಾಯವಿದೆ. ಆಗ ಹವಾಮಾನ ವೈಪರೀತ್ಯದ ಬಿಸಿ ಜನರಿಗೆ ಇನ್ನಷ್ಟು ತಟ್ಟಲಿದೆ. ಸಮುದ್ರ ಮಟ್ಟದಿಂದ ಕೆಳಗಿರುವ ಹಲವು ಭೂಪ್ರದೇಶಗಳು ಹಾಗೂ ದ್ವೀಪಗಳು ಆಗ ಮುಳುಗಲಿವೆ. ಬಾಂಗ್ಲಾದೇಶದಿಂದ ಹಿಡಿದು ನೆದರ್‌ಲ್ಯಾಂಡ್ಸ್‌ವರೆಗೆ ಹಲವು ದೇಶಗಳು ಮುಳುಗುವ ಅಪಾಯವಿದೆ. ನಾವು ಈಗ ಎಚ್ಚೆತ್ತುಕೊಳ್ಳದೇ ಇದ್ದರೆ ಭೂಮಿಯ ಭವಿಷ್ಯ ಆತಂಕಕಾರಿಯಾಗಲಿದೆ.

ವಿಶ್ವಸಂಸ್ಥೆಯು ಏಪ್ರಿಲ್ 22 ಅನ್ನು ‘ಭೂಮಿ ದಿನ’ವನ್ನಾಗಿ ಆಚರಿಸುತ್ತದೆ. ಮೊದಲ ಭೂಮಿ ದಿನವನ್ನು ಆಚರಿಸಿದ್ದು 1970ರಲ್ಲಿ. ಅಮೆರಿಕದ ಪರಿಸರ ಕಾಳಜಿ ಇರುವವರ ಗುಂಪೊಂದು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇದನ್ನು ಪ್ರಾರಂಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT