ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗೆಯ ಸಹಬಾಳ್ವೆ ಪಾಠ

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ಒಂದು ದಿನ ಬಿಲ್ಡಿಂಗ್ ಮೇಲೆ ಮಗನನ್ನು ಕರೆದೊಯ್ದು ರಸ್ತೆಬದಿ ಓಡಾಡುತ್ತಿದ್ದ ನಾಯಿಗಳು, ಅಕ್ಕಪಕ್ಕದ ಮರಗಳಲ್ಲಿ ಕೂತಿದ್ದ ಪಕ್ಷಿಗಳನ್ನು ತೋರಿಸುತ್ತಿದ್ದೆ. ಪಕ್ಕದ ಬಿಲ್ಡಿಂಗ್ ಮೂಲೆಯಲ್ಲಿ ಎರಡು ಕಾಗೆಗಳು ಕೂಗುತ್ತಿದ್ದವು. ಅವುಗಳಿಗೆ ತುಂಬಾ ಬಾಯಾರಿಕೆ ಆಗಿರಬಹುದು ಅನಿಸಿತು.

ನಮ್ಮ ಬಿಲ್ಡಿಂಗ್ ಮೇಲೆ ಒಂದು ಕಪ್‌ನಲ್ಲಿ ನೀರು ತಂದಿಡೋಣ. ಅವು ಬಂದು ಕುಡಿದುಕೊಂಡು ಹೋಗಲಿ ಅಂದುಕೊಂಡೆ. ಆ ವೇಳೆಗೆ ಅದೇ ಕಟ್ಟಡದ ಮೂಲೆಯಲ್ಲಿದ್ದ ಒಂದು ಕೊಡದ ಸುತ್ತ ಅವು ಏನೋ ಮಾಡುತ್ತಿದ್ದವು. ಅವಕ್ಕೆ ಆ ಕೊಡದಲ್ಲಿ ನೀರು ಕಾಣಿಸಿರಬೇಕು ಎಂದು ಎಣಿಸಿದೆ. ಆ ಕೊಡದಲ್ಲಿ ನೀರು ತುಂಬಾ ಕೆಳಗಿತ್ತು. ಕೊಕ್ಕಿನಲ್ಲಿ ಕುಡಿಯೋಕೆ ನೀರು ಸಿಗುತ್ತಿರಲಿಲ್ಲ. ಕಾವ್‌ ಕಾವ್‌.. ಎನ್ನುತ್ತಾ ಇಣುಕುತ್ತಿದ್ದನ್ನು ಗಮನಿಸಿದೆ.

ಅವು ಎರಡೂ ಸೇರಿ ಉಪಾಯ ಹೂಡಿದವು. ಕಲ್ಲುಗಳನ್ನು ತಂದು ಕೊಡಪಾನಕ್ಕೆ ತುಂಬಿದವು. ಚಿಕ್ಕವನಿದ್ದಾಗ ಈ ಕುರಿತ ಕತೆ ಕೇಳಿದ್ದು ನೆನಪಾಯಿತು. ಕಣ್ಣ ಮುಂದೆ ನಿಜವಾಗಿ ನಡೆಯುತ್ತಿರೋದನ್ನು ಗಮನಿಸಿದೆ.ನನ್ನ ಮಗನೂ ಕುತೂಹಲದಿಂದ ನೋಡುತ್ತ

ನಿಂತಿದ್ದ. ಅವು ಹಟ ಬಿಡದೆ ನೀರು ಮೇಲೆ ಬರುವವರೆಗೂ ಕಲ್ಲು ತಂದು ತುಂಬಿಸಿದವು. ನೀರು ಮೇಲೆ ಬಂದೊಡನೆ ಎರಡೂ ಕಾಗೆಗಳೂ ನೀರು ಕುಡಿಯಲು ನಾ ಮೊದಲು ತಾ ಮೊದಲು ಎನ್ನುತ್ತಾ ಕಾವ್‌... ಕಾವ್... ಎಂದು ಜೋರಾಗಿ ಕೂಗುತ್ತಾ ಕೊಡದ ಬಾಯಿಗೆ ಬಗ್ಗುತ್ತಾ ಸ್ಪರ್ಧೆಗಿಳಿದವು.

‘ಕೊಡವನ್ನು ಹುಡುಕಿದ್ದು ನಾನು. ನನಗೆ ನೀರುಬೇಕು’ ಎಂದಿತು ದೊಡ್ಡ ಕಾಗೆ. ‘ಕಲ್ಲು ಹಾಕಿದರೆ ನೀರು ಮೇಲೆ ಬರುತ್ತೆ ಅಂತಾ ಉಪಾಯ ಕೊಟ್ಟಿದ್ದು ನಾನಲ್ಲವೇ. ಹಾಗಾಗಿ ನಾನೇ ಮೊದಲು ಕುಡಿಯುವೆ’ ಎಂದು ಇನ್ನೊಂದು ಕಾಗೆ ಜಗಳ ಆರಂಭಿಸಿತು.

ನೋಡು ನೋಡುತ್ತಿದ್ದಂತೆ ಅವುಗಳ ಜಗಳ ತಾರಕಕ್ಕೇರಿತು. ಈ ಇವರ ಜಗಳ ನೋಡಿ ಇನ್ನೊಂದು ಕಾಗೆ ಅಲ್ಲಿಗೆ ಬಂತು. ಅದರ ಕೊಕ್ಕು ಸ್ವಲ್ಪ ಮೊಂಡಾಗಿತ್ತು. ತಲೆ ಸ್ವಲ್ಪ ದೊಡ್ಡದಾಗಿಯೂ ದೇಹವೂ ಅವೆರಡು ಕಾಗೆಗಳಿಗಿಂತ ದೊಡ್ಡದಾಗಿತ್ತು.

ಮೂರೂ ಕಾಗೆಗಳೂ ಏನೇನೋ ಮಾತಾಡತೊಡಗಿದವು. ಇವೆರಡರ ಜಗಳದಲ್ಲಿ ಮೂರನೇ ಕಾಗೆ ಎಲ್ಲಾ ನೀರು ಕುಡಿದುಕೊಂಡು ಹೋಗಬಹುದು ಅಂತ ಭಾವಿಸಿದೆ. ಆದರೆ, ಅದು ಹಾಗೆ ಮಾಡಲಿಲ್ಲ. ಅವರಿಬ್ಬರಿಗೂ ಸಮಾಧಾನ ಹೇಳಲು ಆರಂಭಿಸಿತು.

‘ಅಯ್ಯಾ ಸಹೋದರರೇ... ಸುಮ್ಮನೇ ಕಿತ್ತಾಡಿದರೆ ಇದ್ದ ನೀರು ಈ ಉರಿ ಬಿಸಿಲಿಗೆ ಇಂಗಿ ಹೋಗುತ್ತದೆ. ಈ ಮನುಷ್ಯ ಮಾಡಿದ ಪಾಪದಿಂದ ನಮ್ಮಂಥಾ ಪ್ರಾಣಿ, ಪಕ್ಷಿಸಂಕುಲಕ್ಕೆ ಕುಡಿಯಲು ನೀರಿಗೂ ಗತಿಯಿಲ್ಲದಂತಾಗಿದೆ’ ಎಂದಿತು.

‘ನಾವೇ ಜಗಳವಾಡಿಕೊಂಡರೆ ನಮಗೆ ಸಾವೇ ಗತಿ. ನನಗೂ ಒಂದಿಷ್ಟೇ ಕೊಳಕು ನೀರು ಸಿಕ್ಕಿತ್ತು. ಅದನ್ನೇ ನನ್ನ ಮಕ್ಕಳಿಗೂ ಹಂಚಿ ಬಂದೆ. ಬೇರೆ ಎಲ್ಲಾದರೂ ಕುಡಿಯಲು ನೀರು ಸಿಗಬಹುದು. ಅಲ್ಲಿವರೆಗೆ ಜೀವ ಹಿಡಿದಿಟ್ಟುಕೊಳ್ಳೋಕೆ ಇಬ್ಬರೂ ಹಂಚಿಕೊಂಡು ಕುಡಿಯಿರಿ. ಸಮನಾಗಿ ಒಂದೇ ಸಮಯಕ್ಕೆ ಕೊಡದೊಳಗೆ ಕೊಕ್ಕನಿಟ್ಟು ಕುಡಿಯಿರಿ’ ಎಂದಿತು. ಈ ಸಲಹೆ ಎರಡೂ ಕಾಗೆಗಳಿಗೆ ಒಪ್ಪಿಗೆಯಾಯಿತು. ಆಗ ಅವು ಒಪ್ಪಿ ಒಟ್ಟಿಗೆ ಹರ್ಷದಿಂದ ನೀರು ಕುಡಿಯಲಾರಂಭಿಸಿದವು.

ಅದೇ ವೇಳೆಗೆ ಮನೆ ಮಾಲೀಕ ಅಲ್ಲಿಗೆ ಬಂದ. ಕಾಗೆಗಳು ನೀರು ಕುಡಿಯುತ್ತಿದ್ದುದ್ದನ್ನು ಕಂಡ. ‘ಬಹುದೂರದಿಂದ ಸೈಕಲ್‌ನಲ್ಲಿ ನೀರು ತಂದಿಟ್ಟಿದೀನಿ. ಮನೆ ಬಿಲ್ಡಿಂಗ್ ಸುಡ್ತಾ ಇದೆ. ನೀರು ಹಾಕೋಣಾ ಅಂಥಾ ಬಂದ್ರೆ ಕಾಗೆಗಳೇ ಕುಡಿದು ಹಾಕುತ್ತಿವೆಯಲ್ಲ’ ಎಂದು ಓಡಿ ಬಂದನು.

ಅವನು ಓಡಿ ಬಂದರೂ ಹಾರಿ ಹೋಗದೆ ಕುಡಿಯುತ್ತಲೇ ಇದ್ದವು. ಹತ್ತಿರ ಬಂದೊಡನೆ ಹಾರಲು ಯತ್ನಿಸಿದವು. ಸಿಟ್ಟಿನಿಂದ ಓಡಿಬಂದ ಅವನು ಅದೇ ಕೊಡ ಎತ್ತಿಕೊಂಡು ಆ ಕಾಗೆಗಳ ಬೆನ್ನೆತ್ತಿ ಹೊಡೆಯಲು ಹೋದನು.

ಅವನ ಕೈತಪ್ಪಿ ಆ ಕೊಡ ಕಟ್ಟಡದ ಕೆಳಗಿನ ರಸ್ತೆಯಲ್ಲಿ ಹೋಗುತ್ತಿದ್ದ ದಾರಿಹೋಕನ ಮೇಲೆ ಬಿತ್ತು. ಆತ ತಕ್ಷಣವೇ ಸಿಟ್ಟಿನಿಂದ ಮೇಲೆ ನೋಡಿದ. ತನ್ನ ಮೇಲೆ ಕೊಡ ಎಸೆದವನನ್ನು ಬೈಯುತ್ತಾ ಮೇಲೆ ಬಂದು ಅಲ್ಲಿದ್ದ ಇನ್ನೊಂದು ಕೊಡದಿಂದ ಹೊಡೆದ. ಇಬ್ಬರಿಗೂ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವಾಯಿತು. ಅಲ್ಲೇ ಇದ್ದ ಪೈಪ್‌ನಿಂದ ಹೊಡೆದುಕೊಂಡು ಮೈ ಕೈ ರಕ್ತ ಬರುವ ತನಕ ಜಗಳ ಆಡಿದರು. ಗಲಾಟೆಯ ಸುದ್ದಿ ತಿಳಿದ ಆ ಮನೆಯವರೆಲ್ಲ ಓಡಿ ಬಂದು ಜಗಳ ಬಿಡಿಸಿದರು.

ದೂರದಲ್ಲಿ ಫ್ಲೆಕ್ಸ್‌ ಮೇಲೆ ಕುಳಿತಿದ್ದ ಕಾಗೆಗಳು ಈ ದೃಶ್ಯ ನೋಡುತ್ತಿದ್ದವು. ‘ಮನುಷ್ಯರ ವರ್ತನೆ ಏನೆಂಬುದು ಅರ್ಥವಾಯಿತೇ’ ಎಂದಿತು ದೊಡ್ಡ ಕಾಗೆ. ‘ಒಂದು ಕ್ಷಣದ ಸಿಟ್ಟಿನಿಂದ ದೊಡ್ಡ ಅಪಾಯ ಎದುರಾಗುತ್ತದೆ. ಸಿಟ್ಟಿನಿಂದ ಎಂದೂ ಒಳ್ಳೆಯದಾಗುವುದಿಲ್ಲ. ಆ ಪಾಪಿ ಒಂದಿಷ್ಟು ನೀರು ಕುಡಿದಿದ್ದಕ್ಕೆ ಏನೆಲ್ಲ ರಂಪ ಮಾಡಿದ. ತನಗೆ ತಾನೆ ಜಗಳ ತಂದುಕೊಂಡ’ ಎಂದಿತು.

ಮತ್ತೇನು ಮಾತಾಡಬಹುದೆಂದು ನೋಡಲು ಹತ್ತಿರ ಹೊರಟ ನನ್ನನ್ನು ಕಂಡು ಹೆದರಿ ದೂರಕ್ಕೆ ಹಾರಿ ಹೋಗಿ ಮೊಬೈಲ್ ಟವರ್ ಮೇಲೆ ಹೋಗಿ ಕುಳಿತವು. ಆ ಫ್ಲೆಕ್ಸ್ ನೋಡಿದೆ. ‘ಸಕಲ ಜೀವಕೋಟಿಗಳನ್ನು ದಯೆಯಿಂದ ಕಾಣುತ್ತ ಸಹಬಾಳ್ವೆಯಿಂದ ಬದುಕುವುದೇ ಮಾನವ ಧ್ಯೇಯವಾಗಲಿ’ ಎಂದು ಅದರಲ್ಲಿ ಬರೆದಿತ್ತು.

ದಯೆಯೇ ಧರ್ಮದ ಮೂಲ ಎಂದು ಸಾರುತ್ತಾ ನಾವು ಕಾಗೆಗಳಿಗಿಂತಲೂ ನಿಕೃಷ್ಟ ಜೀವಿಯಾಗಿ ಬಿಟ್ಟಿದ್ದೇವಲ್ಲಾ ಎಂಬ ನೋವು ಕಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT