ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಸಿನಿಮಾಗೆ ರವಿಶಂಕರ್‌ ಆ್ಯಕ್ಷನ್‌ ಕಟ್‌!

Last Updated 15 ಜುಲೈ 2017, 11:42 IST
ಅಕ್ಷರ ಗಾತ್ರ

ತೆರೆಯ ಮೇಲೆ ಖಳನಾಗಿ ಅಬ್ಬರಿಸುವ ನಟ ರವಿಶಂಕರ್‌ ಈಗ ನಿರ್ದೇಶನದ ಟೋಪಿ ಧರಿಸಲೂ ಸಜ್ಜಾಗಿದ್ದಾರೆ. ರವಿಶಂಕರ್‌ ನಿರ್ದೇಶನಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿ ಮತ್ತು ರವಿಶಂಕರ್‌ ಮಗ ಅದ್ವೈತ್‌ ಕನ್ನಡ ಸಿನಿಮಾದ ಮೂಲಕವೇ ಚಿತ್ರರಂಗ ಪ್ರವೇಶಿಸಲಿದ್ದಾರೆ ಎಂಬ ಎರಡು ಪ್ರತ್ಯೇಕ ಸುದ್ದಿಗಳು ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದ್ದವು.

ಈಗ ಈ ಎರಡೂ ಸುದ್ದಿಗಳಿಗೂ ಒಂದೇ ಸೂತ್ರ ಎಂಬ ಸಂಗತಿಯನ್ನು ರವಿಶಂಕರ್‌ ಹೊರಹಾಕಿದ್ದಾರೆ. ತಮ್ಮ ಮಗನ ಮೊದಲ ಸಿನಿಮಾ ತಮ್ಮ ನಿರ್ದೇಶನದ ಮೊದಲ ಸಿನಿಮಾ ಕೂಡ ಆಗಬೇಕು ಎಂಬುದು ಅವರ ಅಭಿಲಾಷೆ. ಅದಕ್ಕಾಗಿ ಅವರು ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ.

ಮುಂದಿನವರ್ಷ ಯುಗಾದಿಯ ಸಮಯದಲ್ಲಿ ಸಿನಿಮಾ ಆರಂಭಿಸುವುದು ಅವರ ಯೋಜನೆ. ‘ನನಗೆ ಗೌರವ ಕೊಟ್ಟು ಬೆಳೆಸಿದ ಕನ್ನಡ ಭಾಷೆಯಲ್ಲಿಯೇ ಮೊದಲ ಸಿನಿಮಾ ನಿರ್ದೇಶಿಸುತ್ತೇನೆ ಮತ್ತು ಮಗನನ್ನೂ ಇದೇ ಭಾಷೆಯಲ್ಲಿಯೇ ಪರಿಚಯಿಸುತ್ತೇನೆ’ ಎಂಬುದು ಅವರ ಸ್ಪಷ್ಟ ನುಡಿ.

‘ಸದ್ಯಕ್ಕೆ ಅದ್ವೈತ್‌ ಅಮೆರಿಕದಲ್ಲಿ ಒಂದು ವರ್ಷದ ನಟನೆ ತರಬೇತಿ ಕೋರ್ಸ್‌ ಮಾಡುತ್ತಿದ್ದಾನೆ. ಆ ಕೋರ್ಸ್‌ ಮುಗಿಸಿ ಜನವರಿಯಲ್ಲಿ ಭಾರತಕ್ಕೆ ಮರಳಲಿದ್ದಾನೆ. ನಂತರ ಮೂರು ತಿಂಗಳ ಇಲ್ಲಿನ ವಾತಾವರಣ, ಚಿತ್ರರಂಗದ ಪರಿಸ್ಥಿತಿಗಳನ್ನು ಗಮನಿಸಿಕೊಳ್ಳಲು ಬಿಡುತ್ತೇನೆ. ನಂತರ ಸಿನಿಮಾ ಶುರುಮಾಡುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

ನಿರ್ಮಾಪಕರು, ತಾರಾಗಣ, ತಾಂತ್ರಿಕವರ್ಗ ಯಾವುದೂ  ಇನ್ನೂ ನಿಕ್ಕಿಯಾಗಿಲ್ಲ. ಆದರೆ ಮಗನಿಗಾಗಿ ರವಿಶಂಕರ್‌ ಅವರೇ ಆರೇಳು ಭಿನ್ನ ಕಥೆಗಳ ಎಳೆಗಳನ್ನು ಇಟ್ಟುಕೊಂಡು ಅದರ ಮೇಲೆ ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ. ಅವುಗಳಲ್ಲಿ ಯಾವುದನ್ನು ಆಯ್ದುಕೊಳ್ಳುವುದು ಎಂಬುದೂ ಇನ್ನು ಅಂತಿಮವಾಗಿಲ್ಲ. ಆದರೆ ಅದು ಪ್ರೇಮಕಥೆ  ಎಂಬ ಸೂಚನೆಯನ್ನು ಮಾತ್ರ ಅವರು ನೀಡುತ್ತಾರೆ.

ಈ ಚಿತ್ರದಲ್ಲಿಯೂ ನೀವು ಖಳನಾಗಿಯೇ ಕಾಣಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ‘ನೋಡೋಣ, ನಾನೇ ನನ್ನ ಮಗನಿಗೆ ವಿಲನ್‌ ಆಗುವ ಸಂದರ್ಭ ಬಂದರೂ ಬಂತು’ ಎಂದು ಜೋರಾಗಿ ನಗುತ್ತಾರೆ ಅವರು.

ಮಗ ಸಿನಿಮಾರಂಗಕ್ಕೆ ಬರುತ್ತಿರುವುದರ ಹಿಂದೆ ನಿಮ್ಮ ಪ್ರಭಾವವೂ ಇದೆಯೇ ಎಂದು ಕೇಳಿದರೆ, ‘ನಮ್ಮ ಮನೆಯಲ್ಲಿ ಬೆಳಗಿನಿಂದ ಸಂಜೆಯವರೆಗೂ ಸಿನಿಮಾದ ಬಗ್ಗೆಯೇ ಚರ್ಚೆ ನಡೆಯುತ್ತಿರುತ್ತದೆ. ನನ್ನ ಅಣ್ಣನ ಮಕ್ಕಳು, ತಂಗಿಯ ಮಕ್ಕಳೆಲ್ಲರೂ ಸಿನಿಮಾ ಕ್ಷೇತ್ರದಲ್ಲಿಯೇ ಆಸಕ್ತಿ ತೋರಿ ತೊಡಗಿಸಿಕೊಳ್ಳುತ್ತಿದ್ದಾರೆ. ಇಂಥ ವಾತಾವರಣದಲ್ಲಿ ಬೆಳೆದ ಅವನಿಗೆ ಸಿನಿಮಾ ಅಲ್ಲದೇ ಇನ್ಯಾವ ವಿಷಯದ ಬಗ್ಗೆ ಆಸಕ್ತಿ ಹುಟ್ಟಲು ಸಾಧ್ಯ ಹೇಳಿ?’ ಎಂದು ಮರುಪ್ರಶ್ನೆ ಎಸೆಯುತ್ತಾರೆ.

ಬಿ. ಎ. ಪದವಿ ಮುಗಿಸಿ ವಿದೇಶದಲ್ಲಿ ನಟನೆಯ ತರಬೇತಿ ಪಡೆದುಕೊಳ್ಳುತ್ತಿರುವ ಅದ್ವೈತ್‌ ಅಲ್ಲಿ ರಂಗಚಟುವಟಿಕೆಗಳಲ್ಲಿಯೂ ತೊಡಗಿಕೊಂಡಿದ್ದಾರಂತೆ. ಆ ರಂಗಭೂಮಿ ಅನುಭವವೂ ಸಿನಿಮಾ ಮಾಧ್ಯಮವನ್ನು ಅರಿತುಕೊಳ್ಳುವಲ್ಲಿ ನೆರವಾಗಲಿದೆ ಎಂಬ ನಂಬಿಕೆ ರವಿಶಂಕರ್‌ ಅವರದು.

‘ನನ್ನ ಮಗನಿಗೆ ಡಾನ್ಸ್, ಫೈಟ್‌, ಎಲ್ಲವೂ ಗೊತ್ತು ಆದರೆ ಅವೆಲ್ಲಕ್ಕಿಂತ ಹೆಚ್ಚಾಗಿ ಅವನೊಬ್ಬ ಒಳ್ಳೆಯ ನಟ’ ಎಂದು ಹೆಮ್ಮೆಯಿಂದ ಅವರು ಹೇಳಿಕೊಳ್ಳುತ್ತಾರೆ.

ಮುಂದಿನವರ್ಷ ಯುಗಾದಿಗೆ ಮುಹೂರ್ತ ಮಾಡಿ ವರ್ಷಾಂತ್ಯದೊಂದಿಗೆ ಸಿನಿಮಾ ತೆರೆಗೆ ತರುವ ನೀಲನಕ್ಷೆಯನ್ನೂ ಅವರು ಹಾಕಿಕೊಂಡಿದ್ದಾರೆ.

ಈ ಸಿನಿಮಾ ಮುಗಿದ ಮೇಲೆ ತಮ್ಮ ಕುಟುಂಬದ ಕಲಾವಿದರನ್ನೇ ಇಟ್ಟುಕೊಂಡು ಒಂದು ಸಿನಿಮಾ ನಿರ್ದೇಶಿಸಬೇಕು ಎಂಬ ಆಲೋಚನೆಯೂ ಅವರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT