ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಉಳಿವಿಗೆ ಒಂದೇ ಹಾದಿ ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ಹದಿನಾರು ವರ್ಷಗಳ ಹಿಂದಿನ ಮಾತು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ‘ಸಿಂಪ್ಯೂಟರ್‌’ ಎಂಬ ಕೈಗಣಕವನ್ನು ರೂಪಿಸಿದ್ದರು. ಯಾರು ಬೇಕಾದರೂ ಪಡೆದು ತಯಾರಿಸಬಹುದಾದ, ಹಕ್ಕುಸ್ವಾಮ್ಯವೇ ಇಲ್ಲದ ಯಂತ್ರಾಂಶ – ತಂತ್ರಾಂಶಗಳಿಂದ ರೂಪುಗೊಂಡಿದ್ದ ಸಿಂಪ್ಯೂಟರ್‌ (www.simputer.org) ಆ ಕಾಲಕ್ಕಿಂತ ಮುಂದಿತ್ತೇನೋ! ಅದರಲ್ಲಿ ಭಾರತೀಯ ಭಾಷೆಗಳಲ್ಲಿ ಕಡ್ಡಿಯಿಂದಲೇ ಬರೆಯಬಹುದಾಗಿತ್ತು; ಗೀಚಿದ ಅಕ್ಷರಗಳನ್ನು ಅದು ಗುರುತಿಸುತ್ತಿತ್ತು. ಟೊಮ್ಯಾಟೊ ಧಾರಣೆಯನ್ನು ಕನ್ನಡದಲ್ಲೇ ಘೋಷಿಸುತ್ತಿತ್ತು; ಅಪ್ಪಟ ಭಾರತೀಯ ‘ಇಂಡಿಯನ್‌ ಮಾರ್ಕ್‌ ಅಪ್‌ ಲಾಂಗ್ವೇಜ್‌’ (IMLI-ಇಮ್ಲಿ) ಅಳವಡಿಸಿಕೊಂಡಿತ್ತು.

‘ಆಪಲ್‌ನ ಟೈಟಾನಿಯಂ ಪವರ್‌ಬುಕ್‌, ಮೈಕ್ರೋಸಾಫ್ಟ್‌ನ ವಿಂಡೋಸ್‌ ಎಕ್ಸ್‌ಪಿಗಿಂತ ಮುಖ್ಯವಾದ ಸಂಶೋಧನೆ ಎಂದರೆ ಭಾರತೀಯ ವಿಜ್ಞಾನಿಗಳು ರೂಪಿಸಿದ ಸಿಂಪ್ಯೂಟರ್‌. ಇದು ತೃತೀಯ ಜಗತ್ತಿನಲ್ಲಿ ಕಂಪ್ಯೂಟರ್‌ ಕ್ರಾಂತಿಯನ್ನೇ ಮಾಡಲಿದೆ’ ಎಂದು ನ್ಯೂಯಾರ್ಕ್‌ ಟೈಮ್ಸ್‌ ಆಗ ಹಾಡಿ ಹೊಗಳಿತ್ತು.

ಸಿಂಪ್ಯೂಟರ್‌ ಈಗಿಲ್ಲ. ಕೃಷಿ ಮಾರುಕಟ್ಟೆ, ಸಾರಿಗೆ, ಶಿಕ್ಷಣ, ಕ್ಷೇತ್ರ ಮಾಹಿತಿ ಸಂಗ್ರಹ - ಹೀಗೆ ಹಲವು ರಂಗಗಳಲ್ಲಿ ತಕ್ಷಣವೇ ಬಳಕೆಯಾಗಬಹುದಾಗಿದ್ದ ಸಿಂಪ್ಯೂಟರಿಗೆ ಸರ್ಕಾರಗಳು ಯಾವುದೇ ಬೇಡಿಕೆ ನೀಡಲಿಲ್ಲ.

ಸಿಂಪ್ಯೂಟರ್‌ ಸಂಶೋಧಕರೊಬ್ಬರ ಸಂದರ್ಶನವು ಇತ್ತೀಚೆಗೆ ಪ್ರಕಟವಾಗಿದೆ: ಅವರ ಮುಂದೆ ಆ್ಯಪಲ್‌ ಲ್ಯಾಪ್‌ಟಾಪ್‌ ಕೂತಿದೆ! ತಪ್ಪು ಸಂಶೋಧಕರದ್ದಲ್ಲ, ಈ ಕ್ರಾಂತಿಕಾರಿ ಸಾಧನವನ್ನು ಮೂಸಿಯೂ ನೋಡದ ಸರ್ಕಾರಗಳದ್ದು.

ಆ್ಯಪಲ್‌ ಬಿಡಿ, ದೇಶದೆಲ್ಲೆಡೆ ಮೈಕ್ರೋಸಾಫ್ಟ್‌ ಸಂಸ್ಥೆಯ ಆಪರೇಟಿಂಗ್‌ ತಂತ್ರಾಂಶ, ಮೈಕ್ರೋಸಾಫ್ಟ್‌ ಆಫೀಸ್‌ನದ್ದೇ (ವರ್ಡ್‌, ಎಕ್ಸೆಲ್‌, ಪವರ್‌ಪಾಯಿಂಟ್‌) ಪಾರುಪತ್ಯ. ಸರ್ಕಾರ, ಸಿಬ್ಬಂದಿ, ಸಚಿವಾಲಯ, ಶಾಲೆಗಳು - ಎಲ್ಲವೂ ತನ್ನ ದಾಸ್ಯದಲ್ಲೇ ಇರಬೇಕೆಂಬುದು ಮೈಕ್ರೋಸಾಫ್ಟ್‌ನ ಸಹಜ ಚಿಂತನೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸರ್ಕಾರವಾಗಲೀ, ಸಮುದಾಯವಾಗಲೀ ಮಾಹಿತಿ ತಂತ್ರಜ್ಞಾನ ರಂಗದಲ್ಲಿ ನಡೆದಿರುವ, ಜಗತ್ತಿನಾದ್ಯಂತ ನೆಲೆಯೂರಿರುವ ‘ಸ್ವತಂತ್ರ’ (ಫ್ರೀ ಸಾಫ್ಟ್‌ವೇರ್‌) ಮತ್ತು ‘ಮುಕ್ತ ತಂತ್ರಾಂಶಗಳ’ (ಓಪನ್‌ಸೋರ್ಸ್‌ ಸಾಫ್ಟ್‌ವೇರ್‌) ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟ.

ಒಮ್ಮೆ ಪಡೆದ ಮೇಲೆ (ಇದು ಉಚಿತವಾಗಿಯೂ ಇರಬಹುದು, ಖರೀದಿಯೂ ಆಗಿರಬಹುದು) ಅದನ್ನು ಮರು ಹಂಚುವ, ಅದರ ಒಳ ಸೂತ್ರಗಳನ್ನು ತಿಳಿಯುವ ಮತ್ತು ಬೇಕಾದಂತೆ ಬದಲಿಸಿಕೊಳ್ಳುವ ಅವಕಾಶಗಳಿದ್ದರೆ ಅದನ್ನು ‘ಸ್ವತಂತ್ರ ತಂತ್ರಾಂಶ' ಎಂದು ಕರೆಯುತ್ತಾರೆ.

ಭಾರತದ ಸರ್ವೋಚ್ಚ ನ್ಯಾಯಾಲಯವು ‘ಸ್ವತಂತ್ರ ಮತ್ತು ಮುಕ್ತ' ತಂತ್ರಾಂಶಗಳನ್ನೇ ಅಳವಡಿಸಿಕೊಂಡಿದೆ. ಹೆಚ್ಚಿನ ಸರ್ಕಾರಿ ಜಾಲತಾಣಗಳಲ್ಲಿ ಖಾಸಗಿ ಸಂಸ್ಥೆಗಳು ರೂಪಿಸಿದ ಪಾವತಿಸಿದ ತಂತ್ರಾಂಶಗಳೇ ಇವೆ ಎನ್ನುವುದು ವಾಸ್ತವ. ಕೇರಳವು ‘ಸ್ವತಂತ್ರ ಮತ್ತು ಮುಕ್ತ' ತಂತ್ರಾಂಶಗಳನ್ನು ಇ-ಆಡಳಿತದಲ್ಲಿ ಅಳವಡಿಸಿಕೊಂಡ ಮೊದಲ ಮತ್ತು ಬಹುಶಃ ಏಕೈಕ ರಾಜ್ಯ. 2014ರಲ್ಲೇ ಕೇಂದ್ರ ಸರ್ಕಾರವು ಮುಕ್ತ ತಂತ್ರಾಂಶಗಳನ್ನು ಉತ್ತೇಜಿಸುವ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿದ್ದರೂ ಅದರ ಪರಿಣಾಮಕಾರಿ ಜಾರಿ ಸಾಧ್ಯವಾಗಿಲ್ಲ.

ಮುಕ್ತ ತಂತ್ರಾಂಶಗಳನ್ನು ಎಲ್ಲ ಇ-ಆಡಳಿತದ ವ್ಯವಸ್ಥೆಗಳಲ್ಲಿ ಜಾರಿ ಮಾಡಿ ಒಟ್ಟಾರೆ ಖರ್ಚನ್ನು ಇಳಿಸುವ ಮಹತ್ತರ ಉದ್ದೇಶವನ್ನು ಈ ಸುತ್ತೋಲೆ ಹೊಂದಿತ್ತು. ಎಲ್ಲ ತಂತ್ರಾಂಶಗಳ ಮೂಲ ಸಂಕೇತ ವಾಕ್ಯಗಳನ್ನು (ಸೋರ್ಸ್‌ ಕೋಡ್‌) ಸಮುದಾಯಕ್ಕೆ ಬಿಡುಗಡೆ ಮಾಡಬೇಕು ಎಂದು ಅದು ಸೂಚಿಸಿತ್ತು. ಈ ಅಧಿಸೂಚನೆಯನ್ನು ಕಡ್ಡಾಯವಾಗಿ ಜಾರಿ ಮಾಡಬೇಕೆಂದೂ ಸುತ್ತೋಲೆ ಹೇಳುತ್ತದೆ.

ತಂತ್ರಾಂಶ ತಯಾರಿಕಾ ಟೆಂಡರ್‌ಗಳಲ್ಲಿ ಮೊದಲ ಆಯ್ಕೆಯಾಗಿ ಮುಕ್ತ ತಂತ್ರಾಂಶಗಳನ್ನೇ ಸೂಚಿಸಲು ಸೇವೆ ನೀಡಿಕೆದಾರರಿಗೆ ತಿಳಿಸಲು ಈ ಸುತ್ತೋಲೆ ಸಲಹೆ ಮಾಡಿದೆ. ಈ ಸುತ್ತೋಲೆ ಒಂದಲ್ಲ ಒಂದು ಕಾರಣಗಳು, ನೆಪಗಳು ಮತ್ತು ಸಬೂಬುಗಳಿಂದ ಜಾರಿಯಾಗದೇ ಉಳಿದಿದೆ.

ಕೇಂದ್ರ ಸರ್ಕಾರವು ಇದಕ್ಕಾಗಿಯೇ ಮುಕ್ತ ತಂತ್ರಾಂಶ ರೂಪಿಸುವ ಸಮುದಾಯಗಳೊಂದಿಗೆ ಕೆಲಸ ಮಾಡಲೂ ಮುಂದಾಗಿದೆ. ಈ ಕುರಿತು ಕೇಂದ್ರ ಸರ್ಕಾರವು ಹಿರಿಯ ಸಾಫ್ಟ್‌ವೇರ್‌ ತಂತ್ರಜ್ಞ ರಾಜೇಶ್‌ ರಂಜನ್‌ ಅವರನ್ನು ರಾಷ್ಟ್ರೀಯ ಇ-ಆಡಳಿತ ವಿಭಾಗದಲ್ಲಿ ಓಪನ್‌ ಸೋರ್ಸ್‌ ಕಮ್ಯುನಿಟಿ ಮ್ಯಾನೇಜರ್‌ ಎಂದು ನೇಮಿಸಿದೆ.

ಕರ್ನಾಟಕದಲ್ಲಂತೂ ಮುಕ್ತ ತಂತ್ರಾಂಶಗಳ ಬಳಕೆ ನಗಣ್ಯ. ಜನಸಾಮಾನ್ಯರು, ವ್ಯವಹಾರಸ್ಥರು, ಪ್ರಕಾಶನ ಸಂಸ್ಥೆಗಳು, ಸಣ್ಣಪುಟ್ಟ ಡಿಟಿಪಿ ಆಪರೇಟರ್‌ಗಳು - ಎಲ್ಲರೂ ‘ಸ್ವತಂತ್ರ ಮತ್ತು ಮುಕ್ತ' ತಂತ್ರಾಂಶ ಬಳಸುವುದಕ್ಕೆ ಯಾವ ತಡೆಯೂ ಇಲ್ಲ. ಆದರೆ ಅದೇ ಹಳೆಯ ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ವ್ಯವಸ್ಥೆ, ಅದೇ ಹಳೆಯ ಪೇಜ್‌ಮೇಕರ್‌, ಅದೇ ಹಳೆಯ ಫಾಂಟ್‌ಗಳನ್ನು ಬಳಸುವುದರಲ್ಲೇ ಎಲ್ಲರಿಗೂ ಆಸಕ್ತಿ ಇದ್ದಂತಿದೆ. ಹೊಸಕಾಲದ ಅಗತ್ಯವಾದ ಯುನಿಕೋಡ್‌ ಅಕ್ಷರಗಳ ಮೂಲಕ, ಹೊಸ ಮತ್ತು ಸ್ವತಂತ್ರ ತಂತ್ರಾಂಶಗಳಲ್ಲಿ ವಿನ್ಯಾಸ ಮಾಡಬಹುದು ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ.

ಕನ್ನಡವನ್ನು ಕಂಪ್ಯೂಟರಿನಲ್ಲಿ ಹೇಗೆ ಬಳಸಬಹುದು ಎಂಬ ಬಗ್ಗೆ ‘ಕಂಪ್ಯೂಟರ್‌ ಮತ್ತು ಕನ್ನಡ' ಎಂಬ ಉಚಿತ ಪುಸ್ತಕವನ್ನು ಮಿತ್ರಮಾಧ್ಯಮ ಟ್ರಸ್ಟ್‌ ಪ್ರಕಟಿಸಿದ್ದು ಅದನ್ನು ಜಾಲತಾಣದಲ್ಲಿ ಉಚಿತವಾಗಿ ಪಡೆದು ಬಳಸಬಹುದು. (ಕೊಂಡಿ: http://freebookculture.com/?p=37).

ತಂತ್ರಜ್ಞಾನದ ಜೊತೆಗೆ ಮುಕ್ತ ಜ್ಞಾನವೂ ಬೇಕು!
ತಾಯ್ನುಡಿಯಲ್ಲಿ ಕಲಿಸುವುದೇ ಹೆಚ್ಚಿನ ಗ್ರಹಿಕೆಗೆ ಅನುಕೂಲ. ಆದರೆ ನ್ಯಾಯಾಲಯದಲ್ಲೂ ಶಿಕ್ಷಣ ಮಾಧ್ಯಮವು ಪಾಲಕರ ಹಕ್ಕು ಎಂಬ ಮಾತು ಬಂದಿರುವುದರಿಂದ ತಾಯ್ನುಡಿ ಮಾಧ್ಯಮದ ಶಿಕ್ಷಣ ಜಾರಿಯೇ ಆಗುತ್ತಿಲ್ಲ. ಇಂಗ್ಲಿಷ್‌ ಕಲಿಕೆಯೇ ಬೇರೆ, ಇಂಗ್ಲಿಷ್ ಮಾಧ್ಯಮದ ಕಲಿಕೆಯ ಅಪಾಯವೇ ಬೇರೆ ಎಂಬ ಸ್ಪಷ್ಟ ಕಲ್ಪನೆಯೂ ನಮ್ಮ ಹೋರಾಟಗಾರರಿಗೆ ಇಲ್ಲ.

ಈ ಬಗೆ ಬಗೆಯ ಗೋಜಲುಗಳಿಂದಾಗಿ ಕನ್ನಡಕ್ಕೆ ಆತಂಕ ಒದಗಿರುವುದು ಸ್ಪಷ್ಟ. ಕನ್ನಡ ತಂತ್ರಾಂಶ, ಅಕ್ಷರಗಳು, ಪಠ್ಯ, ಸಾಹಿತ್ಯ – ಎಲ್ಲವೂ ಮುಕ್ತವಾಗಿ, ಸ್ವತಂತ್ರವಾಗಿ ದೊರೆಯುವುದರಿಂದ ಮಾತ್ರವೇ ಕನ್ನಡದ ಕಲಿಕೆಗೆ ಉತ್ತಮ ಅವಕಾಶ ಕಲ್ಪಿಸಬಹುದು. ಆದ್ದರಿಂದ ಮುಕ್ತ ತಂತ್ರಾಂಶಗಳ ಜೊತೆಗೆ ಮುಕ್ತಜ್ಞಾನವೂ ಸಿಗಬೇಕಾಗಿದೆ. ಕರ್ನಾಟಕ ಸರ್ಕಾರದ ‘ಕಣಜ' (www.kanaja.in), ಭಾರತ ಸರ್ಕಾರದ ‘ಭಾರತವಾಣಿ' (www.bharatavani.in) ಯೋಜನೆಗಳು ಈ ನಿಟ್ಟಿನಲ್ಲಿ ಉಲ್ಲೇಖನೀಯ.

ಭಾಷೆಯಲ್ಲಿರುವ ಜ್ಞಾನ ಮತ್ತು ಭಾಷೆಗಳ ಕಲಿಕೆಯ ಮಾಹಿತಿಗಳು, ಪಠ್ಯಪುಸ್ತಕಗಳು, ಜ್ಞಾನದ ಆಕರಗಳು, ಸಮಕಾಲೀನ ಮಾಹಿತಿಗಳು ಎಲ್ಲವೂ ಮುಕ್ತವಾಗಿ ಮತ್ತು ಮುಕ್ತ ತಂತ್ರಾಂಶಗಳ ಜೊತೆಗೇ ಸಿಗಬೇಕೆನ್ನುವ ಈ ಯೋಜನೆಗಳ ಆಶಯ ತುಂಬಾ ಸಕಾಲಿಕ.

ಸಾರ್ವಜನಿಕ ನಿಧಿ ಬೆಂಬಲಿತ ಸಂಸ್ಥೆಗಳು ಮತ್ತು ಸಮುದಾಯ ಚಿಂತನೆಯ ಪ್ರಕಾಶಕರು, ಲೇಖಕರು, ಶಿಕ್ಷಣ ತಜ್ಞರು ಇಂಥ ಯೋಜನೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಭಾಗಿಯಾಗಬೇಕಿದೆ. ಅಚ್ಚುಮೊಳೆ ಮುದ್ರಣ ಕ್ರಾಂತಿಯಿಂದ ಹುಟ್ಟಿದ ಹಕ್ಕುಸ್ವಾಮ್ಯಕ್ಕೆ ಮುನ್ನ ಜನಪದ ಮತ್ತು ಶಾಸ್ತ್ರೀಯ ಜ್ಞಾನಗಳು ಮುಕ್ತವಾಗಿಯೇ ಇದ್ದವಲ್ಲವೆ? ಈಗ ಅದೇ ಮುಕ್ತತೆಯತ್ತ ನಾವು ಮರಳಬೇಕಿದೆ.

ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಂತಹ ಹಲವು ಸಂಸ್ಥೆಗಳು ಈಗಾಗಲೇ ಮುಕ್ತಜ್ಞಾನಕ್ಕೆ ಕೈಜೋಡಿಸಿ ತಮ್ಮೆಲ್ಲ ಕೃತಿಗಳನ್ನೂ ಸಮುದಾಯಕ್ಕೆ ಬಿಟ್ಟುಕೊಟ್ಟಿರುವುದು ಒಂದು ದೊಡ್ಡ ಬೆಳವಣಿಗೆ. ಈ ಜ್ಞಾನವನ್ನೆಲ್ಲ ಡಿಜಿಟಲೀಕರಿಸಿದರೆ ಕಲಿಕೆ-ಸಂಶೋಧನೆಗೆ ಆಕರ ಸಿಕ್ಕಿದಂತಾಗುತ್ತದೆ. ಇಂಥ ಜ್ಞಾನಭಂಡಾರಗಳ ಸಂಚಯವೇ ಮುಂದೆ ಸ್ವತಂತ್ರ/ಮುಕ್ತ ಭಾಷಾ ಕಲಿಕೆಯ ಸಾಧನಗಳಾಗುತ್ತವೆ.

ಭಾರತವಾಣಿ ಆ್ಯಪ್‌ನಲ್ಲಿ ಇರುವ 50ಕ್ಕೂ ಹೆಚ್ಚು ಪಠ್ಯ ನಿಘಂಟುಗಳು ಇಲ್ಲಿ ಒಂದು ಉದಾಹರಣೆ. ದೇಶದ ಎಲ್ಲ ನಿಘಂಟುಗಳೂ ಪಠ್ಯರೂಪದಲ್ಲಿ ಒಂದೇ ಕಡೆ ಸಿಕ್ಕಿದರೆ, ಬಹುಭಾಷಾ ಸಮಾನಾರ್ಥ ಕೋಶವೇ ಸೃಷ್ಟಿಯಾಗುತ್ತದೆ. ಈಗಲೂ ವಿಶ್ವದಾದ್ಯಂತ ಬಹುಬೇಡಿಕೆಯಲ್ಲಿರುವ ಅನುವಾದ ಉದ್ಯಮಕ್ಕೆ ಇದು ಇಂಬು ಕೊಡುತ್ತದೆ. ಅನುವಾದದ ಕೆಲಸಗಳು ವಾಣಿಜ್ಯದ ಉದ್ದೇಶದಲ್ಲಿ ನಡೆದರೂ, ಭಾಷೆಗಳ ಬೆಳವಣಿಗೆಗೆ, ಸೌಹಾರ್ದಕ್ಕೆ ಅನುಕೂಲವೇ.

ಭಾರತೀಯ ಭಾಷೆಗಳಲ್ಲಿ ಸಮಕಾಲೀನ ವಿಶ್ವಕೋಶಗಳೇ ಇಲ್ಲ. ಮೈಸೂರು ವಿಶ್ವವಿದ್ಯಾಲಯ ರೂಪಿಸಿದ ಬಹುಸಂಪುಟಗಳ ಸಾಮಾನ್ಯ ವಿಶ್ವಕೋಶ ಮತ್ತು ವಿಷಯ ವಿಶ್ವಕೋಶಗಳೇ ಇಂದು ಭಾರತದ ಅತ್ಯುತ್ತಮ ವಿಶ್ವಕೋಶ ರಚನಾ ಯತ್ನವೇನೋ. ಈ ವಿಶ್ವಕೋಶವನ್ನೇ ಆಧಾರವಾಗಿಟ್ಟುಕೊಂಡು ಭಾರತದ ಎಲ್ಲ ಭಾಷೆಗಳಲ್ಲೂ ಬಹುವಿಷಯಗಳ ಮೇಲೆ ಕೋಶಗಳು ರಚನೆಯಾದವು ಎಂದುಕೊಳ್ಳಿ. ಆಗ ಎಲ್ಲ ಶಾಲೆಗಳಲ್ಲೂ, ಆಯಾ ಭಾಷೆಯ ಕೋಶಗಳನ್ನೇ ಮಕ್ಕಳಿಗೆ ನೀಡಬಹುದು.

ಈ ಕೋಶಗಳ ಜೊತೆಗೆ ಬಹುಭಾಷಾ ನಿಘಂಟುಗಳು, ಅನುವಾದದ ಸೌಲಭ್ಯ - ಎಲ್ಲವೂ ಸಿಕ್ಕಿದರೆ ಇಡೀ ದೇಶದಲ್ಲಿ ಭಾಷಾ ಸಾಮರಸ್ಯ ಮೂಡುವುದಿಲ್ಲವೆ? ಭಾಷೆಗಳ ನಡುವಣ ಮಾಹಿತಿ ಕಂದರ ಮುಚ್ಚುವುದಿಲ್ಲವೆ? ಇದೇನೂ ಮೇಲ್‌ಸ್ತರದ ವಿಜ್ಞಾನವಲ್ಲ. ಎಲ್ಲ ಭಾಷಿಗರೂ ಕಲೆತರೆ ಮೂರ್ನಾಲ್ಕು ವರ್ಷಗಳಲ್ಲಿ ಇಂಥದ್ದೊಂದು ಸಮಾನ ವಿವರಗಳ, ಸಮಾನ ಅರ್ಥಗಳನ್ನು ಒದಗಿಸುವ ಆನ್‌ಲೈನ್‌ ಬಹುಭಾಷಾ ಬೃಹತ್‌ ಕೋಶವನ್ನು ರಚಿಸಬಹುದು.

ಸ್ವತಂತ್ರ/ ಮುಕ್ತ ತಂತ್ರಾಂಶಗಳು ಕನ್ನಡದ ಸಾಹಿತ್ಯ, ಸಂಶೋಧನೆಗೆ ಸಹಾಯಕವಾಗುತ್ತವೆ. ಕನ್ನಡದಲ್ಲಿ ಮುದ್ರಿಸಿದ ಹಾಳೆಗಳ ಪಠ್ಯವನ್ನು ಓದಿ ಅಕ್ಷರಗಳಾಗಿ ಪರಿವರ್ತಿಸುವ (ಆಪ್ಟಿಕಲ್‌ ಕ್ಯಾರಕ್ಟರ್‌ ರೆಕಗ್ನಿಶನ್‌ - ಓಸಿಆರ್‌) ತಂತ್ರಾಂಶವನ್ನು ಭಾರತೀಯ ವಿಜ್ಞಾನ ಸಂಸ್ಥೆಯು ಟಿ.ಡಿ.ಐ.ಎಲ್‌ನ ಧನಸಹಾಯದಲ್ಲಿ ರೂಪಿಸಿಯೂ, ಹಕ್ಕುಸ್ವಾಮ್ಯವನ್ನು ತಾನೇ ಇಟ್ಟುಕೊಂಡಿದೆ. ಈ ತಂತ್ರಾಂಶವನ್ನು ಮುಕ್ತ ತಂತ್ರಾಂಶವಾಗಿ ಸಮುದಾಯಕ್ಕೆ ಬಿಡುಗಡೆ ಮಾಡಬೇಕು ಎಂದು ಕೇಂದ್ರದೆದುರು ಮಿತ್ರಮಾಧ್ಯಮ ಟ್ರಸ್ಟ್‌ ಇಟ್ಟ ಬೇಡಿಕೆ ಇನ್ನೂ ನನಸಾಗಬೇಕಿದೆ.

ದೇಸೀಕರಣ ಮತ್ತು ಅನುವಾದ
ನಮ್ಮ ದೇಶದಲ್ಲಿ ಇಂಗ್ಲಿಷ್‌ ಬಲ್ಲವರ ಸಂಖ್ಯೆ ನೂರರಲ್ಲಿ ಹತ್ತು. ಇನ್ನುಳಿದ ತೊಂಭತ್ತು ಜನರಿಗೆ ಮಾತೃಭಾಷೆಯೇ ಜೀವಾಳ. ಆದರೂ ನಮ್ಮ ಮೊಬೈಲುಗಳಲ್ಲಿ, ಟಿವಿ ವಾಹಿನಿಗಳಲ್ಲಿ, ಮುದ್ರಿತ ದೈನಿಕಗಳಲ್ಲಿ ಇಂಗ್ಲಿಷಿನ ಅಬ್ಬರ. ನಮ್ಮ ಗಣಕಗಳಲ್ಲಿ ಕನ್ನಡವನ್ನು ಅಳವಡಿಸಿಕೊಂಡು ಬರೆಯುವ ಹೊತ್ತಿಗೆ ಸಾಕುಬೇಕಾಗುತ್ತದೆ. ಈಗಲೂ ಲಕ್ಷಗಟ್ಟಲೆ ಕನ್ನಡಿಗರು ರೋಮನ್‌ ಲಿಪಿಯಲ್ಲೇ ಕನ್ನಡ ಬರೆಯುತ್ತಿದ್ದಾರೆ. ಸಿಲಿಕಾನ್‌ ಸಿಟಿಯನ್ನು ರಾಜಧಾನಿ ಮಾಡಿಕೊಂಡ ನಾಡಿನ ಕರುಣಾಜನಕ ಸ್ಥಿತಿ ಇದು!

ಕಂಪ್ಯೂಟರ್‌ ಬಿಡಿ, ಮುಂದಿನ ದಿನಗಳಲ್ಲಿ ನಾವು ಖರೀದಿಸುವ ಎಲ್ಲ ವಸ್ತುಗಳೂ ಮಾತನಾಡಲಿವೆ. ಪ್ರಪಂಚದಲ್ಲೇ ಅತಿಹೆಚ್ಚು ಕುತೂಹಲಿ ಮತ್ತು ಸ್ವತಂತ್ರ ಗ್ರಾಹಕರಿರುವ ಭಾರತದಲ್ಲಿ ಈಗಾಗಲೇ ಬಟ್ಟೆ ತೊಳೆವ ಯಂತ್ರ, ಟೆಲಿವಿಜನ್‌ಗಳು, ಏರ್‌ಕಂಡೀಶನಿಂಗ್‌ ಸಾಧನಗಳು ಬಂದಿವೆ. ಇವುಗಳನ್ನು ನೀವು ಇಂಗ್ಲಿಷಿನಲ್ಲಿಯೇ ಮಾತನಾಡಿಸಬೇಕು. ಕಂಪ್ಯೂಟರ್‌ ಮೂಲಕ ದಾಳಿಯಿಟ್ಟ ಇಂಗ್ಲಿಷ್ ವಸಾಹತುಶಾಹಿ ಈಗ ಇಂಥ ಸಾಧನಗಳ ಮೂಲಕ ಮತ್ತೊಂದು ಅವತಾರದಲ್ಲಿ ವಕ್ಕರಿಸಿದೆ.

‘ಇಂಟರ್‌ನೆಟ್‌ ಆಫ್‌ ಥಿಂಗ್ಸ್‌' (IOT) ಎಂಬ ಹೊಸ ಯುಗದಲ್ಲಿ ಈ ಎಲ್ಲ ನಿತ್ಯಬಳಕೆಯ ಸಾಧನಗಳೂ ಅಂತರಜಾಲಕ್ಕೆ ಜೋಡಣೆಯಾಗುತ್ತವೆ. ಆಗ ನಾವು ಇಂಗ್ಲಿಷಿನ ದಾಸ್ಯದಲ್ಲೇ ಇರಬೇಕೆ? ನಿಮ್ಮ ಸ್ಮಾರ್ಟ್‌ಪೋನ್‌, ಟ್ಯಾಬ್ಲೆಟ್‌ಗಳಿಂದ ಹಿಡಿದು ಇಂಥ ಎಲ್ಲ ಸಾಧನಗಳಲ್ಲೂ ಕನ್ನಡ ಮತ್ತು ಭಾರತೀಯ ಭಾಷೆಗಳನ್ನು ಅಳವಡಿಸಿರಬೇಕು ಎಂಬ ಒತ್ತಾಯವನ್ನೂ ನಾವು ಮಾಡಬೇಕಿದೆ.

ಲೋಕಲೈಸೇಶನ್‌ ಎಂಬ ಈ ಕಾರ್ಯವನ್ನು ‘ದೇಸೀಕರಣ' ಎಂದು ಕರೆಯಬಹುದು. ದೇಸೀಕರಣವು ಮಾಹಿತಿ ತಂತ್ರಜ್ಞಾನದ ಸಾಧನಗಳ ಯುಗದಲ್ಲಿ ಸ್ಥಳೀಯ ಭಾಷೆಗಳನ್ನು ಉಳಿಸುವತ್ತ ಮೊದಲ ಹೆಜ್ಜೆ. ಈ ಹೊಸಕಾಲದ ಇಂಗ್ಲಿಷ್ ಸವಾರಿಯಿಂದ ಬಿಡುಗಡೆ ಹೊಂದಬೇಕೆಂದರೆ, ನಾವು ಬಳಸುವ ತಂತ್ರಾಂಶಗಳ ಆದೇಶ ಪಟ್ಟಿ (ಮೆನು) ಕನ್ನಡದಲ್ಲಿ ಇರಬೇಕಾದ್ದು ಅತ್ಯಗತ್ಯ.

ಪಾವತಿಸಿ ಪಡೆವ ತಂತ್ರಾಂಶಗಳಲ್ಲಿ ನಮ್ಮ ಭಾಷೆಯ ಅವತರಣಿಕೆಗಾಗಿ ಕಾಯಬೇಕು. ಸ್ವತಂತ್ರ/ ಮುಕ್ತ ತಂತ್ರಾಂಶಗಳ ವಿಷಯದಲ್ಲಿ ಹೀಗಿಲ್ಲ. ಉದಾಹರಣೆಗೆ ‘ಲಿಬ್ರೆ ಆಫೀಸ್‌’ ಎಂಬ ಮುಕ್ತ ತಂತ್ರಾಂಶದ ಬಹುಪಾಲು ಆದೇಶಗಳನ್ನು ನೀವು ಕನ್ನಡದಲ್ಲಿಯೇ ನೋಡಲು ಸಾಧ್ಯ. ಕಂಪನಿಯ ಬದಲಿಗೆ ಇಲ್ಲಿ ಸಮುದಾಯವೇ ಕೈಗೆ ಕೈ ಜೋಡಿಸಿ ಅನುವಾದ ಕೈಗೊಳ್ಳುತ್ತದೆ.

ವಿವಿಧ ಸ್ವತಂತ್ರ/ ಮುಕ್ತ ತಂತ್ರಾಂಶಗಳ ಆದೇಶ ಪಟ್ಟಿಯು ಏಕರೂಪವಾಗಿರಬೇಕು; ಗೊಂದಲವಿಲ್ಲದ, ಖಚಿತ ಪದಗಳನ್ನೇ ಬಳಸಬೇಕು ಎಂಬುದು ಇಲ್ಲಿನ ಆದ್ಯತೆ. ಇದಕ್ಕಾಗಿ ‘ಫ್ಯುಯೆಲ್‌ ಪ್ರಾಜೆಕ್ಟ್‌’ (http://fuelproject.org) ಬಹುಭಾಷಾ ಅಭಿಯಾನ ಕೈಗೊಂಡಿದೆ.

ಕನ್ನಡದ ಮಟ್ಟಿಗೆ ಇಂತಹ ದೇಸೀಕರಣಕ್ಕಾಗಿ ‘ಸಂಚಯ’ (sanchaya.net) ಸಮೂಹವು ಒಂದು ಆನ್‌ಲೈನ್‌ ವೇದಿಕೆ ಒದಗಿಸಿದೆ. ಇಲ್ಲಿ ಮುಖ್ಯವಾಗಿ ಮೊಜಿಲ್ಲಾ ಫೈರ್‌ಫಾಕ್ಸ್‌ ಎಂಬ ಜಾಲವಿಹಾರ ತಂತ್ರಾಂಶ, ಲಿಬ್ರೆ ಆಫೀಸ್‌, ಜಿನೋಮ್‌, ಉಬುಂಟು (ಗ್ನು/ಲಿನಕ್ಸ್‌ ಆಧಾರಿತ ಆಪರೇಟಿಂಗ್ ವ್ಯವಸ್ಥೆ), ಮೀಡಿಯವಿಕಿ, ಓಪನ್‌ಸ್ಟ್ರೀಟ್‌ ಮ್ಯಾಪ್‌, ವರ್ಡ್‌ಪ್ರೆಸ್‌ (ಜಾಲ ವಿನ್ಯಾಸ ತಂತ್ರಾಂಶ) - ಇವುಗಳ ದೇಸೀಕರಣಕ್ಕೆ ಅಂತರಜಾಲ ಕೊಂಡಿಗಳನ್ನು ನೀಡಿದೆ.

ಇವಲ್ಲದೆ ಗಿಂಪ್‌, ಸ್ಕ್ರೈಬಸ್‌, ಇಂಕ್‌ಸ್ಕೇಪ್‌ ಮುಂತಾದ ಡಿ.ಟಿ.ಪಿ ಅಗತ್ಯದ ಸ್ವತಂತ್ರ/ ಮುಕ್ತ ತಂತ್ರಾಂಶಗಳ ಆದೇಶ ಪಟ್ಟಿಯನ್ನು ಕನ್ನಡೀಕರಿಸುವ ಕೆಲಸವನ್ನು ಪೂರ್ಣಗೊಳಿಸುವ ಕೆಲಸವೂ ಇದೆ. ‘ಸಂಚಯ'ವು ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಇರಿಸಿಕೊಂಡಿದೆ.

ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರ್ಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ ಮತ್ತು ‘ದಾಸ ಸಂಚಯ'ಗಳು ಒಂದು ಉತ್ತಮ ಸಮುದಾಯ ಕಾರ್ಯವಾಗಿ ನಮ್ಮ ಮುಂದೆ ಇವೆ. ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶ ಕೇವಲ ‘ಸಂಚಯ'ದ್ದಾಗದೆ ಎಲ್ಲರದೂ ಆಗಬೇಕಿದೆ.

ಪದ, ಪದಗುಚ್ಛಗಳನ್ನಷ್ಟೆ ಕನ್ನಡಕ್ಕೆ ತಂದುಬಿಟ್ಟರೆ ಸ್ಥಳೀಯತೆ ದಕ್ಕುವುದಿಲ್ಲ. ನಮ್ಮ ನಾಡಿನ ದೇಸಿ ಪದಗಳು ಪಠ್ಯವಾಗಿ ಹರಡಬೇಕು. ಐಕಾನ್‌ಗಳೆಂದು ಕರೆಯುವ ಪುಟ್ಟ ಪುಟ್ಟ ಚಿತ್ರಗಳನ್ನು ಕನ್ನಡ ನಾಡಿಗಾಗಿಯೂ ನಮ್ಮ ಕಲಾವಿದರು ಬರೆಯಬೇಕು. ನಾಡಿನ ಪ್ರಮುಖ ತಾಣಗಳ, ಸಂಸ್ಕೃತಿ, ಪರಂಪರೆ, ಜನಜೀವನದ ಚಿತ್ರಗಳು ಸಹಜವಾಗಿಯೇ ವಿದ್ಯಾರ್ಥಿಗಳಿಗೆ ಸಿಗಬೇಕು.

ಪುಟವಿನ್ಯಾಸ ಮಾಡುವಾಗ ನಾಡಿನ ಹಣ್ಣು- ಸಸ್ಯ- ಬೀಜ- ಹೂವು- ಪ್ರಾಣಿಗಳ ಚಿತ್ರಗಳು ನಮಗೆ ಸಿಗಬೇಕೇ ವಿನಾ ಅಮೆರಿಕ- ಯುರೋಪಿನ ಹೂವುಗಳಲ್ಲ. ಇಂಥ ಹತ್ತಾರು ಬಗೆಯ ಕನ್ನಡೀಕರಣ, ಸ್ಥಾನೀಕರಣ ನಡೆಯುವ ತುರ್ತು ಒದಗಿಬಂದಿದೆ.

ಯಂತ್ರಾನುವಾದವೂ ಸಾಧ್ಯ
ಭಾಷಾ ಸೂತ್ರಗಳನ್ನು ಗುರುತಿಸಿ ಯಂತ್ರಾನುವಾದ ಮಾಡಲು ತಂತ್ರಾಂಶ ರೂಪಿಸುವುದು ಭಾರತೀಯ ಭಾಷೆಗಳ ಮಟ್ಟಿಗೆ ಮರೀಚಿಕೆಯಾಗಿಯೇ ಉಳಿದಿದೆ. ಟಿ.ಡಿ.ಐ.ಎಲ್‌ ಸಂಸ್ಥೆಯು ರೂಪಿಸಿದ ಆನ್‌ಲೈನ್‌ ಯಂತ್ರಾನುವಾದದ ಗುಣಮಟ್ಟ ಪ್ರಾಥಮಿಕ ಹಂತದಲ್ಲೇ ಇದೆ. ಈ ನಿಟ್ಟಿನಲ್ಲಿ ಹೈದರಾಬಾದ್‌ ವಿ.ವಿ.ಯ ಪ್ರಾಧ್ಯಾಪಕ, ಕನ್ನಡಿಗ ಪ್ರೊ. ಕವಿ ನಾರಾಯಣಮೂರ್ತಿಯವರು ರೂಪಿಸಿರುವ ಕನ್ನಡ–ತೆಲುಗು ಅನುವಾದ 'ಸಾರ' ತಂತ್ರಾಂಶವು ಹೊಸ ಭರವಸೆ ಮೂಡಿಸಿದೆ.

ಇದು ಸೆಕೆಂಡಿಗೆ ಒಂದು ಲಕ್ಷ ವಾಕ್ಯಗಳನ್ನು, ಶೇಕಡ 90ರಷ್ಟು ಗುಣಮಟ್ಟದಲ್ಲಿ ತೆಲುಗಿಗೆ ಅನುವಾದಿಸುತ್ತದೆ. ‘ಸಾರ'ದ ವಿನ್ಯಾಸವನ್ನೇ ಅನುಸರಿಸಿ ಜಗತ್ತಿನ ಯಾವುದೇ ಎರಡು ಭಾಷೆಗಳ ನಡುವೆ ಯಂತ್ರಾನುವಾದದ ಸೌಲಭ್ಯವನ್ನು ಸುಲಭವಾಗಿ ರೂಪಿಸಬಹುದು ಎಂದು ನಾರಾಯಣಮೂರ್ತಿ ಹೇಳುತ್ತಾರೆ.

‘ಸಾರ' ತಂತ್ರಾಶವನ್ನು ರೂಪಿಸಲು ವಿವಿಧ ನಿಘಂಟುಗಳು, ವಾಕ್ಯಭಾಗಗಳ ಪಟ್ಟೀಕರಣ, ವಾಕ್ಯ ವ್ಯಾಕರಣದ ಸೂತ್ರಗಳು, ಸಮಾನಾಂತರ ಪದ ಸಂಚಯ (ಕಾರ್ಪಸ್‌) - ಇವೆಲ್ಲವನ್ನೂ ಬಳಸಿಕೊಳ್ಳಲಾಗಿದೆ. ಇವುಗಳನ್ನು ಬಳಸಿ ಪಡೆದ ಭಾರೀ ಪ್ರಮಾಣದ ದತ್ತಾಂಶಗಳನ್ನು ಮತ್ತೆ ಮತ್ತೆ ಇದಕ್ಕೇ ಊಡಿಸಿ ಅನುವಾದ ಸುಧಾರಣೆಗೆ ಬಳಸಿಕೊಳ್ಳಲಾಗಿದೆ.

ಒಂದು ರೀತಿಯಲ್ಲಿ ಇದು ಸದಾ ಗುಣಮಟ್ಟ ಸುಧಾರಿಸಿಕೊಳ್ಳುತ್ತ ಮುನ್ನಡೆವ ತಂತ್ರಾಂಶ. ಸದ್ಯಕ್ಕಂತೂ ‘ಸಾರ' ತಂತ್ರಾಂಶವು ದೇಶದಲ್ಲೇ ಅತ್ಯಂತ ಯಶಸ್ವೀ ಯಂತ್ರಾನುವಾದ ವ್ಯವಸ್ಥೆ. ಭಾಷೆ ಬಲ್ಲವರ ನಿಗಾ ಮತ್ತು ಭಾಗಿತ್ವ ಇದ್ದರೆ ಖಂಡಿತ ಈ ಅನುವಾದದ ಕೆಲಸಗಳು ಬಹುಬೇಗ ಆಗುತ್ತವೆ' ಎಂಬುದು ನಾರಾಯಣಮೂರ್ತಿಯವರ ಅಭಿಮತ.

ಅನುವಾದದ ಕ್ರಿಯೆ ಸೃಜನಶೀಲ ಚಟುವಟಿಕೆ. ಆದ್ದರಿಂದ ಯಂತ್ರಾನುವಾದದ ಜೊತೆಗೇ ಮನುಷ್ಯರ ಮೇಲುಸ್ತುವಾರಿಯೂ ಬೇಕು. ನಾರಾಯಣಮೂರ್ತಿಯವರ ಯಂತ್ರಾನುವಾದವನ್ನು ಸುಧಾರಿಸಿದರೆ, ಅದನ್ನೇ ವಿಸ್ತರಿಸಿದರೆ, ಬಹುಭಾಷಾ ಅನುವಾದವು ಸರಳವಾಗುತ್ತದೆ, ಬೇಗನೆ ಆಗುತ್ತದೆ. ಭಾರತವಾಣಿ, ಕಣಜ ತಾಣಗಳಲ್ಲಿ ಇರುವ ಪಠ್ಯ ಆಧಾರಿತ ನಿಘಂಟು - ಪದಕೋಶಗಳನ್ನು ಸರಿಯಾಗಿ ಬಳಸಿಕೊಂಡರೆ ಮುಕ್ತ ಅನುವಾದ ತಂತ್ರಾಂಶವನ್ನೂ ರೂಪಿಸಲು ಸಾಧ್ಯವಿದೆ.

ಭಾಷೆಗಳ ನಡುವಣ ಕೊಡು-ಕೊಳ್ಳುವಿಕೆಯ ಸಾಂಸ್ಕೃತಿಕ ಬಂಧಕ್ಕೆ ಇಂಥ ತಂತ್ರಾಂಶಗಳನ್ನು ವಿಶ್ವವಿದ್ಯಾಲಯಗಳು ರೂಪಿಸಬೇಕಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯವೂ ಭಾಷಾ ಸಂಶೋಧನೆಗೆಂದು ಪದ ಸಂಚಯವನ್ನು ರೂಪಿಸಿದ್ದು ಈಗ ಮೂಲೆಗುಂಪಾಗಿದೆ. ಭಾಷಾ ತಂತ್ರಜ್ಞಾನದ ಕುರಿತ ಇಂಥ ನಿರ್ಲಕ್ಷ್ಯ ಮುಂದೆ ದೊಡ್ಡ ಸಮಸ್ಯೆಯಾಗಿ ಕಾಡುವುದು ನಿಶ್ಚಿತ.

ಭಾರತೀಯ ಭಾಷೆಗಳ ವಿವಿಧ ತಂತ್ರಾಂಶಗಳನ್ನು ರೂಪಿಸುವುದಕ್ಕೆಂದೇ ‘ಟೆಕ್ನಾಲಜಿ ಡೆವಲಪ್‌ಮೆಂಟ್‌ ಫಾರ್‌ ಇಂಡಿಯನ್‌ ಲಾಂಗ್ವೇಜಸ್‌' (ಟಿ.ಡಿ.ಐ.ಎಲ್‌) ಎಂಬ ಸಂಸ್ಥೆಯು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ಥಾಪನೆಯಾಗಿದೆ. ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಸಂಶೋಧನೆಗಳನ್ನು ಈ ಸಂಸ್ಥೆ ಮಾಡಿದೆ.

ಸ್ವತಂತ್ರ – ಮುಕ್ತ ತಂತ್ರಾಂಶಗಳನ್ನು ಸಮಕಾಲೀನ ಆವೃತ್ತಿಗಳಾಗಿ ಬಿಡುಗಡೆ ಮಾಡುವ ಪ್ರಕ್ರಿಯೆ ಅರೆಬರೆಯಾಗಿದೆ. ಕರ್ನಾಟಕ ಸರ್ಕಾರದ ಯತ್ನಗಳು ಸರಿಯಾದ ದಿಕ್ಕಿನಲ್ಲಿ, ತಪ್ಪು ವಿಧಾನಗಳ ಮೂಲಕ ನಡೆದಿದ್ದು, ಯಾವ ಕೆಲಸಕ್ಕೂ ಬಾರದ ತಂತ್ರಾಂಶಗಳು ಬಿಡುಗಡೆಯಾಗಿದ್ದು ಈಗ ಇತಿಹಾಸ. ಭಾಷಾ ತಂತ್ರಾಂಶ ಎಂದರೆ ಅಕ್ಷರ ಜೋಡಣೆ, ಕೀಲಿಮಣೆ ಎಂಬ ಪ್ರಾಚೀನ ಚಿಂತನೆಯಲ್ಲೇ ನಾವಿದ್ದೇವೆ.

ಶಿಕ್ಷಣ ಮತ್ತು ಸ್ವತಂತ್ರ / ಮುಕ್ತ ತಂತ್ರಾಂಶಗಳು
ಹತ್ತು ವರ್ಷಗಳ ಹಿಂದೆ ನಾವು ಕೆಲವರು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಮೈಕ್ರೋಸಾಫ್ಟ್‌ ವಿಂಡೋಸ್‌, ಆಫೀಸ್‌, ಎಕ್ಸೆಲ್, ಪವರ್‌ ಪಾಯಿಂಟ್‌ ಇತ್ಯಾದಿ ಮೈಕ್ರೋಸಾಫ್ಟ್‌ಗೆ ಸಹಾಯಕವಾಗುವ ಪಠ್ಯಪುಸ್ತಕಗಳನ್ನು ಬರೆದು ಅಪರಾಧ ಎಸಗಿದ್ದೆವು! ಈ ಕೂಡಲೇ ಶಾಲಾ ಪಠ್ಯಕ್ರಮದಲ್ಲಿ ಸ್ವತಂತ್ರ / ಮುಕ್ತ ತಂತ್ರಾಂಶಗಳನ್ನೇ ಕಲಿಸಬೇಕು. ಅಲ್ಲಿಂದಲೇ ಮಾಹಿತಿ ತಂತ್ರಜ್ಞಾನ ಆಧಾರಿತ ಸಮಾಜದಲ್ಲಿ ಮುಕ್ತತೆಯ, ಸ್ವತಂತ್ರ ಚಿಂತನೆಯ ವಿಷಯಗಳನ್ನು ಬಿತ್ತಬಹುದು. ಶಾಲೆಗಳ ಕಂಪ್ಯೂಟರ್‌ ಲ್ಯಾಬ್‌ಗಳಲ್ಲಿ ಮೈಕ್ರೋಸಾಫ್ಟ್‌ ಆಧಾರಿತ ಕಲಿಕೆಯನ್ನು ನಿಲ್ಲಿಸಲು ಈಗಂತೂ ಕಾಲ ಒದಗಿದೆ.

ಸಮುದಾಯದ ಸಹಕಾರದಿಂದ, ಸ್ವತಂತ್ರ ಚಿಂತನೆಯಿಂದ ತಂತ್ರಾಂಶಗಳನ್ನು ರೂಪಿಸಬಹುದು ಎಂಬ ಮನೋಭಾವವನ್ನು ಎಳೆವಯಸ್ಸಿನಲ್ಲೇ ಮೂಡಿಸುವುದು ನಮ್ಮ ಕರ್ತವ್ಯ. ಕಾರ್ಪೊರೇಟ್‌ ತಂತ್ರಾಂಶಗಳ ಗುಲಾಮಗಿರಿಯನ್ನು ಮೊಳಕೆಯಲ್ಲೇ ಚಿವುಟಬೇಕು. ಇದು ನಾಡಿನ ಮಕ್ಕಳಿಗೆ ನೀಡುವ ನೈತಿಕ ಶಿಕ್ಷಣವೂ ಹೌದು. ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು, ಪಾಲಕರು ಈ ವಿಷಯದಲ್ಲಿ ಸ್ವತಂತ್ರ ತಂತ್ರಾಂಶ ಚಳವಳಿಯನ್ನೇ ಹೂಡಬೇಕಿದೆ. ಇಂದಿನ ಮಕ್ಕಳನ್ನು ಈಗಲೇ ಸ್ವತಂತ್ರ ತಂತ್ರಾಂಶದ ಅಭಿಯಾನಿಗಳನ್ನಾಗಿ ಮಾಡಬೇಕಿದೆ.

ಖಾಸಗಿ ಮುಷ್ಟಿಯಲ್ಲಿ ಇ-ಆಡಳಿತ
ಕೇಂದ್ರ ಸರ್ಕಾರವೇ ಅನುಮೋದಿಸಿದ ಮೇಲೆ ರಾಜ್ಯ ಸರ್ಕಾರಗಳು ಈಗಲೂ ಮೈಕ್ರೋಸಾಫ್ಟ್‌ ಮತ್ತಿತರೆ ಖಾಸಗಿ ಮತ್ತು ಮುಚ್ಚಿದ (closed) ತಂತ್ರಾಂಶಗಳನ್ನು ಬಳಸುವುದನ್ನು ಮುಂದುವರಿಸಿವೆ. ಸದಾಕಾಲವೂ ಅಪ್‌ಗ್ರೇಡ್‌ ಆಗಬೇಕೆಂದು ಕೋಟಿಗಟ್ಟಲೆ ಹಣ ಸುಲಿಯುವ ತಂತ್ರಾಂಶಗಳಿಂದಾಗಿ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹಬ್ಬಿದೆ. ಅದರಲ್ಲೂ ವಿಂಡೋಸ್‌ ಆಪರೇಟಿಂಗ್‌ ವ್ಯವಸ್ಥೆಯನ್ನೇ ಅಳವಡಿಸಿರುವ ಕಂಪ್ಯೂಟರುಗಳನ್ನು ಖರೀದಿ ಮಾಡಿದ ಮೇಲೆ ಉಳಿಯುವುದೇನು? ಗ್ನುಲಿನಕ್ಸ್‌ ಆಧಾರಿತ (ಉಬುಂಟು ಇತ್ಯಾದಿ) ಆಪರೇಟಿಂಗ್‌ ವ್ಯವಸ್ಥೆಗಳನ್ನು ಊಡಿಸಿದ ಕಂಪ್ಯೂಟರುಗಳನ್ನು ಕೊಳ್ಳುವುದಕ್ಕೆ ಸರ್ಕಾರಕ್ಕೆ ತಾಂತ್ರಿಕ ಸಮಸ್ಯೆ ಇಲ್ಲವೇ ಇಲ್ಲ.

ಇದು ವಿಂಡೋಸ್‌ಗಿಂತ ಹೆಚ್ಚು ಸುರಕ್ಷಿತ. ಜಾಲತಾಣ, ಕ್ಲೌಡ್‌ ತಂತ್ರಾಂಶಗಳೂ ಮುಕ್ತವಾಗಿ ದೊರಕುತ್ತವೆ. ಸೇವೆಗೆ ಮತ್ತು ಯಂತ್ರಾಂಶಗಳಿಗೆ ಮಾತ್ರ ಹಣ ನೀಡಬೇಕಾಗುತ್ತದೆ. ತಂತ್ರಾಂಶ ತಯಾರಿಕಾ ಟೆಂಡರ್‌ಗಳನ್ನು ಕರೆಯುವಾಗಲೂ ಸ್ವತಂತ್ರ / ಮುಕ್ತ ತಂತ್ರಾಂಶಗಳನ್ನೇ ನೀಡುವಂತೆ ಸೂಚಿಸಬೇಕು.

ಒಂದು ಸರ್ಕಾರದ ತಾಂತ್ರಿಕ ಅಗತ್ಯಗಳನ್ನು ‘ಮುಚ್ಚಿದ ತಂತ್ರಾಂಶ’ಗಳೇ ನಿರ್ಣಯಿಸುವುದು ಎಷ್ಟು ಸರಿ? ನಿಜ, ಶಿಕ್ಷಣದ ಕೋರ್ಸ್‌ಗಳನ್ನು ರೂಪಿಸುವ, ಇ-ಆಡಳಿತದ ಕೆಲಸಗಳಿಗೆ ಬರುವ ಮತ್ತು ದತ್ತ ಸಂಚಯದ ಮೂಲಕ ಕೆಲಸ ಮಾಡುವ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ತಾಂತ್ರಿಕ ಪರಿಣತಿ (ಪಾವತಿಸಿದ ಸಾಫ್ಟ್‌ವೇರ್‌ಗಳಲ್ಲೂ ಇದು ಅಗತ್ಯ ತಾನೆ?) ಬೇಕಾಗುತ್ತದೆ.

ಅವುಗಳ ಸೇವೆ ನೀಡುವವರಿಗೆ, ನಿಯಮಿತವಾಗಿ ನಿರ್ವಹಣೆ ಮಾಡುವವರಿಗೆ ಶುಲ್ಕ ನೀಡಬೇಕಾಗುತ್ತದೆ. ಅಲ್ಲದೆ ಯಾವುದೇ ತಂತ್ರಾಂಶವನ್ನು ಅಳವಡಿಸುವ ಕೆಲಸಗಳಿಗೆ, ಅದನ್ನು ನೀವು ಸೇವಾ ನೀಡಿಕೆದಾರರಿಂದ ಮಾಡಿಸಿದರೆ ಅದಕ್ಕೆ ಪಾವತಿ ಮಾಡಬೇಕಾಗುತ್ತದೆ. ದುಡ್ಡು ತೆತ್ತ ತಂತ್ರಾಂಶಗಳಿಗೆ ಇದಕ್ಕಿಂತ ಹೆಚ್ಚು ಹಣ ಕಕ್ಕಬೇಕು!

ಭಾಷೆ, ನೆಲ, ಜಲ–ವಿವಾದಗಳು ಏನೇ ಇರಲಿ. ಭಾಷೆಗಳನ್ನು ಕಲಿತು ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲೆ ಇದ್ದೇ ಇದೆ. ಅದರಿಂದ ಯಾರೂ ನುಣುಚಿಕೊಳ್ಳಲಾಗದು. ಭಾಷಾ ವೈವಿಧ್ಯವನ್ನು ಉಳಿಸಿಕೊಂಡರೇನೇ ನಮ್ಮ ಜೀವವೈವಿಧ್ಯವೂ ಉಳಿಯುತ್ತದೆ. ಚಿಕ್ಕಪುಟ್ಟ ಭಾಷೆಗಳು ಸಾಂದ್ರವಾಗಿರುವ ಸ್ಥಳಗಳು ಅಮೂಲ್ಯ ಸಸ್ಯ-ಪ್ರಾಣಿ ಸಂಪತ್ತಿನಿಂದ ಕೂಡಿವೆ ಎಂಬ ಅರಿವು ನಮಗಿರಬೇಕು.

ಭಾಷೆಗಳ ಉಳಿವಿನಲ್ಲೇ ನಮ್ಮ ದೇಸಿ ಪರಂಪರೆಯ, ಅರಿವಿನ ಭವಿಷ್ಯವಿದೆ. ಆದರೆ ಭಾಷೆಗಳ ನಿಧಾನ ಸಾವಿಗಾಗಿ ದುಃಖಿಸುವವರು ಕಡಿಮೆ. ಹಿಂದೆಂದೂ ನಿರೀಕ್ಷಿಸಿರದ ವೇಗದಲ್ಲಿ ತಂತ್ರಜ್ಞಾನವು ಬೆಳೆಯುತ್ತಿದೆ; ಅದಕ್ಕೆ ತಕ್ಕಂತೆ ದಕ್ಷ, ಪರಿಣಾಮಕಾರಿ ಭಾಷಾ ಸಾಧನಗಳನ್ನು ನಾವು ರೂಪಿಸುತ್ತಿಲ್ಲ.

ಹಲವು ದೇಶಗಳ ಒಟ್ಟಾರೆ ಆಂತರಿಕ ಉತ್ಪನ್ನಗಳನ್ನೂ ಮೀರಿಸಿದ ಬಹುರಾಷ್ಟ್ರೀಯ ಸಂಸ್ಥೆಗಳು ನಮ್ಮ ಲಿಪಿ, ವ್ಯಾಕರಣ, ಅನುವಾದ – ಎಲ್ಲವನ್ನೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿವೆ. ಜಡನಿದ್ದೆಯಲ್ಲಿರುವ ನಾವು ಭಾಷೆ- ಲಿಪಿಯ ಮೂಲ ಗುಣಗಳನ್ನೇ ಕಳೆದುಕೊಳ್ಳುವ ಅಪಾಯ ಒದಗಿದೆ. ಸರಿಯಾದ ಅಕ್ಷರಭಾಗಗಳೇ ಇಲ್ಲದ, ಕೊಂಬು, ಇಳಿಗಳು ಅಕರಾಳ ವಿಕರಾಳವಾಗಿರುವ ಯುನಿಕೋಡ್‌ ಫಾಂಟ್‌ಗಳೂ ಬಂದುಬಿಟ್ಟಿವೆ.

ತಂತ್ರಜ್ಞಾನದ ಪದಗಳನ್ನು ಕನ್ನಡದಲ್ಲಿ ಟಂಕಿಸುವ ಕೆಲಸವನ್ನು ಕೆಲವು ಭಾಷಾಂಧ ತಜ್ಞರು ತಮಗೆ ತಿಳಿದ ರೀತಿಯಲ್ಲಿ ಮಾಡಿ ಕನ್ನಡಕ್ಕೂ, ದೇಸೀಕರಣಕ್ಕೂ ಅಪಚಾರ ಎಸಗುತ್ತಿದ್ದಾರೆ. ನಗರದ ಶಾಲೆಗಳಲ್ಲಿ ಕನ್ನಡವು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಬಗೆಯ ಬೆಳವಣಿಗೆಗಳನ್ನು ತಡೆಯಲಾದರೂ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಬಳಕೆ ಮತ್ತು ದೇಸೀಕರಣ ಆಗಬೇಕಿದೆ. ಸರ್ಕಾರ ಮತ್ತು ಸಮುದಾಯಗಳು ಆದ್ಯತೆಗಳ ಮೇಲಾದರೂ ಕೆಲವು ಹೆಜ್ಜೆಗಳನ್ನು ಇಡಬೇಕಿದೆ.

ಸ್ವತಂತ್ರ / ಮುಕ್ತ ತಂತ್ರಜ್ಞಾನಕ್ಕಾಗಿ ‘ಡಿಜಿಟಲ್‌ ಜಗಲಿ’
ಸರ್ಕಾರ, ಸಂಸ್ಥೆಗಳು ಮತ್ತು ಸಮುದಾಯ ಕಾರ್ಯಕರ್ತರು ಸುಲಭವಾಗಿ ಒಂದೆಡೆ ಕಲೆತು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ, ತಂತ್ರಜ್ಞಾನ ಹಾಗೂ ಮುಕ್ತಜ್ಞಾನದ ಸಂಗ್ರಹದ ಬಗ್ಗೆ ಮಾಹಿತಿ ವಿನಿಮಯ, ನಿರ್ಣಯ ತಳೆಯಲು ಅನುಕೂಲವಾಗುವ ಒಂದು ವೇದಿಕೆಯನ್ನು ಕರ್ನಾಟಕ ಸರ್ಕಾರವೇ ರೂಪಿಸಿ ನಿರ್ವಹಿಸಬೇಕು.

ಮುಕ್ತ ಜ್ಞಾನಕ್ಕಾಗಿ ‘ಅರಿವಿನ ಗೋಮಾಳ'
ಇದು ಮುಕ್ತಜ್ಞಾನದ ಅಭಿಯಾನವನ್ನು ವಿಶ್ವವಿದ್ಯಾಲಯಗಳಿಂದ ಆರಂಭಿಸಿ ದೇಸಿ ಅರಿವಿನ ಗ್ರಾಮೀಣ ಜ್ಞಾನ ಕಣಜಗಳನ್ನೂ ಸಂಗ್ರಹಿಸಿ ಕಲಿಕೆ ಮತ್ತು ಸಂಶೋಧನೆಗಾಗಿ ಸಮುದಾಯದ ಬಳಕೆಗೆ ಉಚಿತವಾಗಿ ಬಿಟ್ಟುಕೊಡುವ ತತ್ವವೂ ಹೌದು; ಯೋಜನೆಯೂ ಹೌದು.

ಕನ್ನಡ ಕಲಿಕೆಗೆ ಅಭಿಯಾನ: ಕನ್ನಡ ಕಲಿಕೆಯ ಆನ್‌ಲೈನ್‌ ತರಗತಿಗಳೇ ಅಲಭ್ಯವಾಗಿರುವ ಈ ಹೊತ್ತಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು MOOC (massive open online course) ಮಾದರಿಯಲ್ಲಿ ವಿವಿಧ ವಯೋಮಾನದ, ವೃತ್ತಿಪರರ ಅನುಕೂಲಕ್ಕಾಗಿ ಆನ್‌ಲೈನ್‌ ಕೋರ್ಸ್‌ಗಳನ್ನು ರೂಪಿಸಿ ಉಚಿತವಾಗಿ ನೀಡಬೇಕು.

ಈ ಕಾಲದ ಮಹಾನ್ ಕನಸುಗಾರ- ವಿಜ್ಞಾನಿ- ಹೂಡಿಕೆದಾರ ಇಲಾನ್‌ ಮಸ್ಕ್‌, ತನ್ನ ಅತ್ಯಾಧುನಿಕ, ಪರಿಸರ ಸ್ನೇಹಿ ವಿದ್ಯುತ್‌ ಕಾರುಗಳ ವಿನ್ಯಾಸ, ತಂತ್ರಜ್ಞಾನವನ್ನೆಲ್ಲ ಮುಕ್ತವಾಗಿ ಹಂಚಲು ನಿರ್ಧರಿಸಿದ್ದಾರೆ. ಇತ್ತ ನಾವು ಭಾಷೆಗೆ ಸಂಬಂಧಿಸಿದ ಸ್ವತಂತ್ರ / ಮುಕ್ತ ತಂತ್ರಾಂಶಗಳು ಕೈಯಲ್ಲಿದ್ದರೂ ಖಾಸಗೀಕರಣದ ಕಂದಾಚಾರಕ್ಕೆ ಜೋತುಬಿದ್ದಿದ್ದೇವೆ. ಮುಕ್ತಜ್ಞಾನ, ಮುಕ್ತ ತಂತ್ರಜ್ಞಾನದ ಅಭಿಯಾನವನ್ನು ಕನ್ನಡದ ಉಳಿವಿನ ಹೋರಾಟವಾಗಿ ಸ್ವೀಕರಿಸಬೇಕಿದೆ.

*

ದೇಶಕ್ಕೆ ಗಣಕ ಸ್ವಾತಂತ್ರ್ಯವೂ ಮುಖ್ಯ: ರಿಚರ್ಡ್‌ ಸ್ಟಾಲ್‌ಮನ್‌
‘ಕೇರಳ ರಾಜ್ಯಸರ್ಕಾರವು ಫ್ರೀ ಸಾಫ್ಟ್‌ವೇರ್‌ ಬಳಸುವಲ್ಲಿ ನಮ್ಮ ಸ್ವತಂತ್ರ ತಂತ್ರಾಂಶ ಚಳವಳಿ ಯಶಸ್ಸು ಪಡೆಯಿತು. ಅದೇ ರೀತಿ ಎಲ್ಲಾ ಸರ್ಕಾರಗಳೂ ಮುಚ್ಚಿದ (ಸ್ವತಂತ್ರವಲ್ಲದ) ತಂತ್ರಾಂಶಗಳ ಖರೀದಿ ನಿಲ್ಲಿಸಿ ಸ್ವತಂತ್ರ ತಂತ್ರಾಂಶಗಳ ಬಳಕೆ ಮಾಡಬೇಕಿದೆ. ಸರ್ಕಾರಗಳು ಎಂದಿಗೂ ವಿಂಡೋಸ್‌, ಮ್ಯಾಕ್‌ ಓಎಸ್‌, ಆ್ಯಂಡ್ರಾಯ್ಡ್‌, ಐ.ಒಎಸ್‌ - ಯಾವುದನ್ನೂ ಬಳಸಬಾರದು. ಏಕೆಂದರೆ ಇವೆಲ್ಲವೂ ದೇಶವೊಂದರ ಗಣಕ ಸಾರ್ವಭೌಮತ್ವವನ್ನು ಕಸಿದುಕೊಳ್ಳುತ್ತವೆ’ ಎನ್ನುತ್ತಾರೆ ಸ್ವತಂತ್ರ ತಂತ್ರಾಂಶ ಚಳವಳಿಯ ಸ್ಥಾಪಕ, ಫ್ರೀ ಸಾಫ್ಟ್‌ವೇರ್‌ ಸಂತ ರಿಚರ್ಡ್‌ ಸ್ಟಾಲ್‌ಮನ್‌.

ಈ ಲೇಖನಕ್ಕಾಗಿ ಮಿಂಚಂಚೆ ಸಂದರ್ಶನ ನೀಡಿರುವ ಸ್ಟಾಲ್‌ಮನ್‌, ಮಕ್ಕಳನ್ನು ಶಕ್ತಿಯುತ, ಸಮರ್ಥ, ಸ್ವತಂತ್ರ, ಸಹಕಾರಿ ಮತ್ತು ಮುಕ್ತ ಸಮಾಜದ ಉತ್ತಮ ನಾಗರಿಕರನ್ನಾಗಿಸಲು ಅವರಿಗೆ ಶಾಲೆಗಳಲ್ಲಿ ಸ್ವತಂತ್ರ ತಂತ್ರಾಂಶಗಳನ್ನೇ ಕಲಿಸಬೇಕು ಎಂದು ಪ್ರತಿಪಾದಿಸುತ್ತಾರೆ.

ಖಾಸಗಿ ತಂತ್ರಾಂಶಗಳಿಂದ ಮಕ್ಕಳ ಜ್ಞಾನವೇ ಅಡಗಿಹೋಗುತ್ತದೆ; ಇದು ಶಿಕ್ಷಣ ವ್ಯವಸ್ಥೆಗೇ ಅಪಾಯಕಾರಿ ಎಂಬುದು ಸ್ಟಾಲ್‌ಮನ್‌ ನಿಲುವು.

ತಂತ್ರಾಂಶ ಬಳಕೆದಾರರಿಗೆ ಈ ಸ್ವಾತಂತ್ರ್ಯಗಳು ಇರಬೇಕು ಎಂದು ಸ್ಟಾಲ್‌ಮನ್‌ ಹೇಳುತ್ತಾರೆ: 1) ತಂತ್ರಾಂಶವನ್ನು ಯಾವುದೇ ಉದ್ದೇಶಕ್ಕಾಗಿ, ಯಾವುದೇ ಬಗೆಯಲ್ಲಿ ಬಳಸುವ ಸ್ವಾತಂತ್ರ್ಯ. 2) ತಂತ್ರಾಂಶದ ಮೂಲವಸ್ತುವನ್ನು ತಿಳಿಯುವ ಸ್ವಾತಂತ್ರ್ಯ. 3) ತಂತ್ರಾಂಶವನ್ನು ಯಥಾವತ್‌ ಪ್ರತಿ ಮಾಡುವ ಅವಕಾಶ. 4) ಸುಧಾರಿತ ಆವೃತ್ತಿಗಳನ್ನು ರೂಪಿಸಿ ಹಂಚುವ ಅವಕಾಶ.

‘ಕಿಂಡಲ್‌’ನಲ್ಲಿ ಕೊಂಡ ಪುಸ್ತಕವನ್ನು ಅಮೆಝಾನ್‌ ಯಾವ ಕ್ಷಣದಲ್ಲಾದರೂ ಕಿತ್ತುಕೊಳ್ಳಬಹುದು; ಮುದ್ರಿತ ಪುಸ್ತಕ ನಮ್ಮಲ್ಲೇ ಶಾಶ್ವತವಾಗಿ ಉಳಿಯುವುದಿಲ್ಲವೆ?’ ಎಂಬ ಸ್ಟಾಲ್‌ಮನ್‌ ಪ್ರಶ್ನೆಯೇ ನಮ್ಮನ್ನು ಭಯಭೀತಗೊಳಿಸುತ್ತದೆ!

ಆ್ಯಪಲ್‌, ಮೈಕ್ರೋಸಾಫ್ಟ್‌, ಗೂಗಲ್‌, ಅಡೋಬ್‌, ಅಮೆಝಾನ್‌ ಸಂಸ್ಥೆಗಳು ಗ್ರಾಹಕರಿಗೆ ತಿಳಿಸದೆಯೇ ಹಲವು ಬಗೆಯ ಕೋಡ್‌ಗಳನ್ನು ತುರುಕಿ ಗೂಢಚರ್ಯೆ ನಡೆಸುತ್ತವೆ ಎಂದು ಸ್ಟಾಲ್‌ಮನ್‌ ದೊಡ್ಡ ಪಟ್ಟಿಯನ್ನೇ ನೀಡುತ್ತಾರೆ. ‘ಖಾಸಗಿ ತಂತ್ರಾಂಶಗಳೆದುರು ಗ್ರಾಹಕರು ತಮಗೆ ಬೇಕಾದ್ದನ್ನು ಭಿಕ್ಷೆ ಬೇಡಬೇಕೆ? ಅದು ಅವರ ಹಕ್ಕಲ್ಲವೆ?’ ಎಂಬ ಸ್ಟಾಲ್‌ಮನ್ ಪ್ರಶ್ನೆ ನಮ್ಮದೂ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT