ಸೋಮವಾರ, ಡಿಸೆಂಬರ್ 16, 2019
25 °C

ಶರತ್‌ ಕೊಲೆ ಪ್ರಕರಣ: ವಜ್ರದೇಹಿ ಮಠದ ಸ್ವಾಮೀಜಿ ವಿಚಾರಣೆಗೆ ಪೊಲೀಸರ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶರತ್‌ ಕೊಲೆ ಪ್ರಕರಣ: ವಜ್ರದೇಹಿ ಮಠದ  ಸ್ವಾಮೀಜಿ ವಿಚಾರಣೆಗೆ ಪೊಲೀಸರ ನೋಟಿಸ್‌

ಮಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ಕುಮಾರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಸ್ಫೋಟಕ ಮಾಹಿತಿ ಇರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ನೋಟಿಸ್‌ ಜಾರಿ ಮಾಡಿರುವ ಪ್ರಕರಣದ ತನಿಖಾಧಿಕಾರಿ, ಸೋಮವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಹಿಂದೂ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಸ್ವಾಮೀಜಿ, ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ‘ಶರತ್‌ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಹಸ್ತಾಂತರಿಸಿದರೆ ಸ್ಫೋಟಕ ಮಾಹಿತಿಯೊಂದನ್ನು ನಾನು ನೀಡುತ್ತೇನೆ’ ಎಂದಿದ್ದರು.

ಶುಕ್ರವಾರ ಸಂಜೆಯೇ ಕ್ರಿಮಿನಲ್‌ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 160ರ ಅಡಿಯಲ್ಲಿ ವಜ್ರದೇಹಿ ಸ್ವಾಮೀಜಿಗೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ಶನಿವಾರ ಬೆಳಿಗ್ಗೆ ಅದನ್ನು ಸ್ವಾಮೀಜಿಗೆ ತಲುಪಿಸಲಾಗಿದೆ.

‘ಶರತ್‌ ಕೊಲೆ ಹಿಂದಿನ ಪಿತೂರಿ ಹಾಗೂ ಕೊಲೆಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಇರುವುದಾಗಿ ತಾವು ಮಾಧ್ಯಮದವರಿಗೆ ತಿಳಿಸಿದ್ದೀರಿ. ಸದ್ರಿ ಕೊಲೆ ಪ್ರಕರಣದ ತನಿಖೆ ಸಂಬಂಧ 17–07–2017ರಂದು ಬೆಳಿಗ್ಗೆ 11 ಗಂಟೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ತನಿಖಾಧಿಕಾರಿಯಾದ ನನ್ನ ಮುಂದೆ ಹಾಜರಾಗಲು ಕೋರಿದೆ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಪೊಲೀಸರು ನೋಟಿಸ್‌ ಜಾರಿ ಮಾಡಿರುವುದನ್ನು ಸ್ವಾಮೀಜಿಯ ಆಪ್ತ ಕಾರ್ಯದರ್ಶಿ ಖಚಿತಪಡಿಸಿದ್ದಾರೆ. ‘ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್‌ನಲ್ಲಿ ಸೂಚನೆ ನೀಡಿದ್ದಾರೆ. ಕಾನೂನು ಸಲಹೆಗಾರರ ಜೊತೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲು ಸ್ವಾಮೀಜಿ ನಿರ್ಧರಿಸಿದ್ದಾರೆ’ ಎಂದು ಅವರು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)