ಶನಿವಾರ, ಡಿಸೆಂಬರ್ 7, 2019
16 °C

ಅಡಿಕೆ ಧಾರಣೆ: ವಾರದಲ್ಲೇ ₹ 5 ಸಾವಿರ ಏರಿಕೆ

Published:
Updated:
ಅಡಿಕೆ ಧಾರಣೆ: ವಾರದಲ್ಲೇ ₹ 5 ಸಾವಿರ ಏರಿಕೆ

ಶಿವಮೊಗ್ಗ:  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದ ವಾರಗಳಲ್ಲೇ ಅಡಿಕೆ ಧಾರಣೆ ₹ 5 ಸಾವಿರ ಏರಿಕೆ ಕಂಡಿದೆ.

ಜಿಲ್ಲೆಯ ಬಹುತೇಕ ಮಾರುಕಟ್ಟೆ, ಸಹಕಾರ ಸಂಘಗಳಲ್ಲಿ ಶುಕ್ರವಾರ ಒಂದು ಕ್ವಿಂಟಲ್‌ ಅಡಿಕೆ ₹ 42 ಸಾವಿರದಿಂದ ₹ 44 ಸಾವಿರದವರೆಗೆಮಾರಾಟವಾಗಿದೆ.

ಏಪ್ರಿಲ್‌ ಆರಂಭದಿಂದ ಜೂನ್‌ ಅಂತ್ಯದವರೆಗೂ ₹ 35,019ರಿಂದ ₹ 39,099ರವರೆಗೆ ಇದ್ದ ಧಾರಣೆ, ಜಿಎಸ್‌ಟಿ ಜಾರಿಯ ನಂತರ ಚೇತರಿಕೆಯ ಹಾದಿಯಲ್ಲಿ ಸಾಗಿದೆ.

ಸ್ಥಗಿತಗೊಂಡಿದ್ದ ವಹಿವಾಟು:  ಜಿಎಸ್‌ಟಿ ಜಾರಿಗೂ ಮೊದಲು ಎರಡು ವಾರ ಹಾಗೂ ಜಾರಿಯ ನಂತರ ಮತ್ತೊಂದು ವಾರ ಅಡಿಕೆ ವಹಿವಾಟು ಪೂರ್ಣ ಸ್ಥಗಿತಗೊಂಡಿತ್ತು. ಜಿಎಸ್‌ಟಿ ಜಾರಿಗೂ ಮೊದಲು ಶೇ 2ರ ತೆರಿಗೆ ದರದಲ್ಲಿ ಖರೀದಿಸಿದ್ದ ಹಳೇ ದಾಸ್ತಾನು ಖಾಲಿ ಮಾಡುವುದಲ್ಲೇ ವರ್ತಕರು ಮಗ್ನರಾಗಿದ್ದರು. ನಂತರ ಹೊಸ ತೆರಿಗೆ ಪದ್ಧತಿಗೆ ಹೊಂದಿಕೊಳ್ಳಲು, ವಹಿವಾಟಿನ ಮೇಲಿನ ಸಾಧಕ–ಬಾಧಕ ಪರಿಶೀಲಿಸಲು ಜುಲೈ 1ರಿಂದ ಖರೀದಿಯನ್ನೇ ಆರಂಭಿಸಿರಲಿಲ್ಲ. ಜುಲೈ 10ರಿಂದ ಖರೀದಿ ಮರು ಆರಂಭಗೊಂಡು ಮೊದಲ ವಾರವೇ ನಿರೀಕ್ಷೆ ಹೆಚ್ಚಿಸಿದೆ.

‘ಮೊದಲು ಅಡಿಕೆ ಖರೀದಿಯ ಮೇಲೆ ಶೇ 2ರಷ್ಟು ತೆರಿಗೆ ನೀಡುತ್ತಿದ್ದೆವು. ಖರೀದಿಸಿದ ಅಡಿಕೆಯನ್ನು ದೆಹಲಿ, ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಿಗೆ ಸಾಗಣೆ ಮಾಡುತ್ತಿದ್ದೆವು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯದ ತೆರಿಗೆ ದರದಲ್ಲಿ ವ್ಯತ್ಯಾಸ ಇರುತ್ತಿದ್ದ ಕಾರಣ ಕಂಪೆನಿಗೆ ಆವಕ ತಲುಪಿಸುವುದರ ಒಳಗೆ ಶೇ 10ರಿಂದ 15ರಷ್ಟು ತೆರಿಗೆ ಪಾವತಿಸಬೇಕಿತ್ತು. ಈಗ ಏಕರೂಪದ ತೆರಿಗೆ ಜಾರಿಯ ಕಾರಣ ಎಲ್ಲ ಗೊಂದಲಗಳಿಗೂ ತೆರೆಬಿದ್ದಿದೆ. ಖರೀದಿಸುವ ಅವಧಿಯಲ್ಲಿ ಶೇ 5ರಷ್ಟು ತೆರಿಗೆ ಪಾವತಿಸುತ್ತಿದ್ದೇವೆ. ಮೊದಲಿನ ತೆರಿಗೆ ಪದ್ಧತಿಗಿಂತ ಶೇ 5ರಿಂದ 10ರಷ್ಟು ತೆರಿಗೆ ಹಣ ಉಳಿತಾಯವಾಗುತ್ತಿದೆ. ಇದು ಧಾರಣೆ ಚೇತರಿಕೆಗೂ ಉತ್ತೇಜನ ನೀಡಿದೆ’ ಎಂದು ತೋಟದ ಉತ್ಪನ್ನಗಳ ಸಹಕಾರ ಸಂಘದ ನಿರ್ದೇಶಕ ಅಜ್ಜಿಹಳ್ಳಿ ರವಿಕುಮಾರ್ ಅವರು ವಿವರಿಸಿದ್ದಾರೆ.

‘ಹಲವು ಮಧ್ಯವರ್ತಿಗಳು ತೆರಿಗೆ ತಪ್ಪಿಸಿಕೊಳ್ಳಲು ಬೆಳೆಗಾರರ ಬಳಿ ನೇರವಾಗಿ ಖರೀದಿಸಿ, ಪಾನ್‌ಮಸಾಲ ಹಾಗೂ ಗುಟ್ಕಾ ಕಂಪೆನಿಗಳಿಗೆ ಕಳುಹಿಸುತ್ತಿದ್ದರು. ತೆರಿಗೆ ವಂಚನೆಯ ಇಂತಹ ವ್ಯವಹಾರ ಒಟ್ಟು ವಹಿವಾಟಿನ ಶೇ 70ರಷ್ಟು ಇತ್ತು. ಜಿಎಸ್‌ಟಿ ಜಾರಿಯಾದ ಮೊದಲ ವಾರದಲ್ಲೇ ತೆರಿಗೆ ವಂಚನೆ ವ್ಯವಹಾರಗಳಿಗೆ ಕಡಿವಾಣ ಬಿದ್ದಿದೆ. ಬೆಳೆಗಾರರು, ಮಧ್ಯವರ್ತಿಗಳು, ಗುಟ್ಕಾ ಕಂಪೆನಿಗಳ ನಡುವಣ ವ್ಯವಹಾರ ಪಾರದರ್ಶಕವಾಗಿದೆ’ ಎಂದು ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಎಸ್‌.ಡೊಂಗ್ರೆ ಅವರು ವಿಶ್ಲೇಷಿಸಿದ್ದಾರೆ.

ಅಡಿಕೆ ಸಂಗ್ರಹವೂ ಖಾಲಿ

ಎರಡು ವರ್ಷದ ಹಿಂದೆ ಒಂದು ಕ್ವಿಂಟಲ್‌ ಅಡಿಕೆ ಧಾರಣೆ ₹ 1 ಲಕ್ಷದ ಗಡಿ ತಲುಪಿದ್ದಾಗ ರೈತರಿಗಿಂತ ಮಧ್ಯವರ್ತಿಗಳಿಗೆ ಭಾರಿ ಲಾಭವಾಗಿತ್ತು. ಹೀಗಾಗಿ, ರೈತರು ಕೊಯ್ಲಿನ ನಂತರ ತಕ್ಷಣವೇ ಅಡಿಕೆ ಮಾರಾಟ ಮಾಡದೇ ಸಂಗ್ರಹಿಸಿ ಇಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಎರಡು ವರ್ಷಗಳಿಂದ ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿದ್ದ ಅಡಿಕೆ ದಾಸ್ತಾನು ಈಗ ಕಡಿಮೆಯಾಗುತ್ತಿದೆ. ಜಿಎಸ್‌ಟಿ ಜಾರಿ ನಂತರ ಶಿವಮೊಗ್ಗ ಎಪಿಎಂಸಿಯಲ್ಲಿ 150 ಟನ್‌, ತುಮ್‌ಕೋಸ್‌ನಲ್ಲಿ 100 ಟನ್‌ ಅಡಿಕೆ ಮಾರಾಟವಾಗಿದೆ.

ಸತತ ಎರಡು ವರ್ಷ ಬರಗಾಲದ ಪರಿಣಾಮ ಅಡಿಕೆ ಇಳುವರಿಯೂ ಗಣನೀಯವಾಗಿ ಕುಸಿದಿದೆ. ಈ ಸಂಗತಿಯೂ ಮುಂದಿನ ದಿನಗಳಲ್ಲಿ ಧಾರಣೆ ಇನ್ನಷ್ಟು ಏರಿಕೆಗೆ ಕಾರಣವಾಗಬಹುದು ಎನ್ನುವುದು ಮಾರುಕಟ್ಟೆ ಪಂಡಿತರ ಲೆಕ್ಕಾಚಾರ.

* ಉತ್ತರದ ಹಲವು ರಾಜ್ಯಗಳಿಂದ ಅಡಿಕೆಗೆ ಬೇಡಿಕೆ ಬರುತ್ತಿದೆ. ಹಳ್ಳಿಗಳಲ್ಲಿ ನಡೆಯುವ ಕೈ ವ್ಯಾಪಾರಕ್ಕೆ ಕಡಿವಾಣ ಹಾಕಿದರೆ ಧಾರಣೆ ಇನ್ನಷ್ಟು ಏರಿಕೆ ಕಾಣಬಹುದು.

–ಕಡಿದಾಳ್ ಗೋಪಾಲ್, ಅಧ್ಯಕ್ಷರು, ಶಿವಮೊಗ್ಗ ಅಡಿಕೆ ವರ್ತಕರ ಸಂಘ.

ಪ್ರತಿಕ್ರಿಯಿಸಿ (+)