ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಿಯರ್ ಲೇಕ್ ಹೆಸರಿಗೆ ತಕ್ಕಂತೆ ಶುಭ್ರ

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾದ ಬರಗಾಲದ ಬಿಸಿಗೆ ಮಿಕ್ಕೆಲ್ಲಾ ಜಲತಾಣಗಳು ಬತ್ತುವಂತೆ ಆಗಿದ್ದರೂ ಕ್ಲಿಯರ್ ಲೇಕ್ ಸರೋವರಕ್ಕೆ ಮಾತ್ರ ಅಷ್ಟೇನೂ ಹಾನಿಯಾಗಿಲ್ಲ. ಇದರ ನೀರಿನ ಮಟ್ಟ ಸ್ವಲ್ಪ ಕಡಿಮೆಯಾಗಿತ್ತಷ್ಟೆ. ಜೀವನದಲ್ಲಿ ಒಮ್ಮೆಯಾದರೂ ನೋಡಬೇಕಾದ ಸರೋವರ ಇದು ಎನ್ನುತ್ತಾರೆ ಮಂಜುಳಾ ರಾಜ್‌.

ಈ ಬಾರಿ ಮಗನ ಮನೆಗೆ ಅಮೆರಿಕಗೆ ಹೋದಾಗ ಪ್ರತಿ ವಾರ ಒಂದೊಂದೆಡೆಗೆ ಕರೆದುಕೊಂಡು ಹೋಗುತ್ತಿದ್ದ. ಅದೊಂದು ಶನಿವಾರ ಹತ್ತಿರದಲ್ಲಿಯೇ ಒಂದು ಲೇಕ್ ಇದೆ ಹೋಗೋಣ ಎಂದು ಹೊರಡಿಸಿದ. ಎಲ್ಲರೂ ಸಿದ್ಧರಾಗಿ ಲೇಕ್ ಎಲಿಜಬೆತ್ತಿಗೆ ಹೊರಟೆವು. ಫ್ರಿ ಮಾಂಟ್‌ನ ಹೃದಯಭಾಗದಲ್ಲಿರುವ ಸೆಂಟ್ರಲ್ ಪಾರ್ಕ್ ಅರ್ಥಾತ್ ಲೇಕ್ ಎಲಿಜಬೆತ್ ಬಹಳ ಸುಂದರ ತಾಣ. 450 ಎಕರೆಯಷ್ಟು ವಿಶಾಲವಾದ ಪಾರ್ಕಿನಲ್ಲಿ 80ಎಕರೆಯನ್ನು ಸರೋವರ ಆಕ್ರಮಿಸಿ ಕೊಂಡಿದೆ. ಸರೋವರದ ಸುತ್ತ ಎರಡು ಮೈಲುಗಳಷ್ಟು ಕಾಲು ದಾರಿ ಇದೆ.

ಸರೋವರವನ್ನು ನೋಡುತ್ತಾ, ಮುಂಜಾನೆ ಜಿಲ್ ಎನಿಸುವ ಚಳಿಯೊಡನೆ, ಸುತ್ತಲೂ ಪಸರಿಸಿಕೊಂಡಿರುವ ಮಿಷನ್ ಪೀಕಿನ ಹಸಿರನ್ನು ಆಸ್ವಾದಿಸುತ್ತಾ ಸಾಗಲು ಬಲು ಚೆನ್ನ. ಪಾರ್ಕಿನಲ್ಲಿ ಟೆನಿಸ್, ಬ್ಯಾಸ್ಕೆಟ್ ಬಾಲ್, ಸ್ಕೇಟಿಂಗ್, ಎಲ್ಲಕ್ಕೂ ಅವಕಾಶವಿತ್ತು. ಜೊತೆಗೆ ಮೀನು ಹಿಡಿಯುವ ಕಾರ್ಯವೂ ನಡೆದಿತ್ತು.

ಸುಂದರ ಪರಿಸರ, ಅಲ್ಲಿ ಒಂದಷ್ಟು ಬಾತು ಕೋಳಿಯಂತಿರುವ, ತಿಳಿ ಮತ್ತು ದಟ್ಟ ಕಂದು ಬಣ್ಣವನ್ನು ಮೈಮೇಲೆ ಹೊತ್ತ ಗೂಸ್ ಪಕ್ಷಿಗಳು, ಕೆಲವು ಒಂಟಿ ಕಾಲಿನಲ್ಲಿ ತಪಸ್ಸು ಮಾಡುತ್ತಿದ್ದುವು, ಮಲಗಿ ನಿದ್ದೆ ಮಾಡುತ್ತಿದ್ದವು, ಸಾಲು ಸಾಲು ಹಕ್ಕಿಗಳು ನೋಡಲು ಚಂದವೆನಿಸುತ್ತಿತ್ತು. ’ಅವು ಕೆನಡಾದಿಂದ ವಲಸೆ ಬಂದ ಹಕ್ಕಿಗಳು, ಈಗ ಇಲ್ಲಿ ಬೇಸಿಗೆಯಲ್ಲವೇ ಅದಕ್ಕೇ ಇಲ್ಲಿಗೆ ಬಂದಿವೆ’ ಎಂದಳು ಸೊಸೆ.

ಅಲ್ಲಿ ಒಂದು ಗುಂಪು ಚೀನೀಯರ ಒಂದು ವ್ಯಾಯಾಮ ವಿಧಾನ ತಾಯ್ಚಿ, ಎನ್ನುವ ನಿಧಾನ ಗತಿಯ ವ್ಯಾಯಾಮ, ಒಂದು ರೀತಿಯ ಸ್ಲೋ ಮೋಷನ್ ನರ್ತನವನ್ನು ಎಲ್ಲರೂ ಒಟ್ಟಿಗೆ ಸೇರಿ ಮಾಡುತ್ತಿದ್ದರು, ಒಬ್ಬ ನಾಯಕ ಹೇಳಿ ಕೊಡುತ್ತಿದ್ದುದನ್ನು ಮಿಕ್ಕವರು ಪಾಲಿಸುತ್ತಿದ್ದರು. ಮತ್ತೊಂದೆಡೆ ಜನ ಬಂದು ಅಲ್ಲೇ ಇರುವ ಇಜ್ಜಲು ಒಲೆಯಲ್ಲಿ ತಮಗೆ ಬೇಕಾದ್ದನ್ನು ಬಾರ್ಬೆಕ್ಯೂನಲ್ಲಿ ಬೇಯಿಸಿಕೊಂಡು ತಿನ್ನಲು ಅವಕಾಶ.

ವ್ಯಾಯಾಮ ಮಾಡಲು ಸಲಕರಣೆಗಳು, ಮತ್ತು ಅಲ್ಲಲ್ಲೇ ಟೇಬಲ್ಲುಗಳ ಮೇಲೆ ಚೆಸ್ ಮೂಡಿಸಿದ್ದರು. ಯಾರು ಬೇಕಾದರೂ ಚೆಸ್ ಆಡಬಹುದು. ಜೊತೆಗೆ ಪರಿಸರವಂತೂ ಬಹಳ ಶುಚಿಯಾಗಿತ್ತು ಮತ್ತು ಬರುವ ಜನರ ಆಕರ್ಷಣೆಗಾಗಿ ಅನುಕೂಲಗಳೆಲ್ಲಾ ಇದ್ದುವು.

ಮತ್ತೊಂದು ದಿನ ಹಾಲ್ ಆಫ್‌ ಟೆನ್ ಥೌಸಂಡ್ ಗೋಲ್ಡನ್ ಬುದ್ಧಾಸ್ ಗೆ ಹೋಗಿ ಅಲ್ಲಿಂದ ಬರುವಾಗ ಒಂದಷ್ಟು ದೂರದಲ್ಲಿ ಅಂದರೆ ಒಂದು ಗಂಟೆ ಪ್ರಯಾಣ ಮಾಡಿದರೆ ಒಂದು ಕ್ಲಿಯರ್ ಲೇಕ್ ಇದೆ, ನೋಡಿ ಹೋಗೋಣವೆಂದುಕೊಂಡೆವು. ಮಗ ಕಾರಿನಲ್ಲಿ ಆ ಸರೋವರದ ಸುತ್ತು ಹಾಕುತ್ತಲೇ ನಡೆದ. ಬಹಳ ಸುಂದರವಾದ ದೊಡ್ಡ ಸರೋವರ ಅದು.

43,785 ಎಕರೆಗಳಷ್ಟು ಸ್ಥಳವನ್ನು ಆಕ್ರಮಿಸಿಕೊಂಡಿದ್ದು ಕ್ಯಾಲಿಫೋರ್ನಿಯಾದ ಅತಿ ದೊಡ್ಡ ಸರೋವರ ಎನಿಸಿ ಕೊಂಡಿದೆ. ನೋಡಲು ಬಹಳ ಚಂದವೆನಿಸಿತು. ಉತ್ತರ ಅಲಾಸ್ಕಾದಿಂದ ಮೆಕ್ಸಿಕೋದ ದಕ್ಷಿಣದವರೆಗೆ ಭೂವೈಜ್ಞಾನಿಕವಾಗಿ ಅನನ್ಯವೆನಿಸಿಕೊಂಡಿರುವ ಸರೋವರವೆನಿಸಿಕೊಂಡಿದೆ. ಈ ಆಭೂತ ಪೂರ್ವ ಸರೋವರ 48ಲಕ್ಷ ವರ್ಷಗಳಷ್ಟು ಹಳೆಯದು. ಸಾಮಾನ್ಯವಾಗಿ ಸರೋವರಗಳು ಹತ್ತು ಸಾವಿರ ವರ್ಷಗಳು ಬಾಳುತ್ತವೆ.

ಮೆಕ್ಸಿಕೋ, ಕೆನಡಾ, ಅಥವಾ ಅಮೆರಿಕದ  ಬೇರೆ ಯಾವುದೇ ಸರೋವರಕ್ಕಿಂತ ಇಷ್ಟು ಹೆಚ್ಚು ಆಯಸ್ಸು ಇದಕ್ಕೆ ಒದಗಿದ್ದು ಹೇಗೆ ಎನ್ನುವ ಪ್ರಶ್ನೆ ಬಂದಾಗ ಇದೊಂದು ಭೂ ವೈಜ್ಞಾನಿಕ ವಿಸ್ಮಯ ಅಥವಾ ಅದೃಷ್ಟವೆಂದೇ ಭಾವಿಸಬಹುದು. ಜ್ವಾಲಾಮುಖಿ ಕರಗಿ ಹರಿದಾಗ ಅದರ ಲಾವಾರಸ ಗಟ್ಟಿಯಾಗಿ ಈ ಸರೋವರದ ಕೆಳ ಭಾಗದಲ್ಲಿ ಹರಡಿಕೊಂಡಿದೆ. ಅಂದ ಮೇಲೆ ಸರೋವರದ ತಳಭಾಗದಲ್ಲಿ ಒಂದು ಶಿಲಾ ಪದರವಿದೆಯೆಂದಾಯಿತು.

ಸುತ್ತಲೂ ಕಣ್ಮನ ಸೆಳೆಯುವ ಪರ್ವತಗಳೂ ಈ ಜ್ವಾಲಾಮುಖಿಯ ಕೊಡುಗೆಯೇ. ಈ ಕೆಳಗಿನ ಅಗ್ನಿ ಶಿಲೆ ಆಗಾಗ ಸ್ವಲ್ಪ ಅಲುಗಾಡುತ್ತದೆಯಂತೆ. ಆದರೆ ಆಗ ಕೆಸರು ತಳಕ್ಕೆ ಹೋಗಿ ಈ ಬಿರುಕುಗಳಲ್ಲಿ ಶೇಖರಣೆಯಾಗಿ ಸರೋವರದ ನೀರಿನ ಮಟ್ಟ ಕಾಪಾಡುತ್ತದೆ. ಅರ್ಧ ಮಿಲಿಯನ್ ವರ್ಷಗಳಿಂದ ಶೇಖರವಾದ ಹೂಳು ಅಥವಾ ಕೆಸರಿನಿಂದ ಸಾಕಷ್ಟು ಪೌಷ್ಟಿಕಾಂಶಗಳು ಈ ಸರೋವರದಲ್ಲಿವೆ ಮತ್ತು ಅನೇಕ ಸಸ್ಯ ಪ್ರಬೇಧಗಳಿಗೆ ಆಸರೆಯಾಗಿದೆ. ಪರಿಣಾಮವಾಗಿ ಮೀನು ಮತ್ತು ಪ್ರಾಣಿಗಳಿಗೂ ಒಳ್ಳೆಯ ಪರಿಸರ ಸೃಷ್ಟಿಯಾಗಿದೆ.

ಈ ಜೀವಸೆಲೆಯಲ್ಲಿರುವ ಅರ್ಧ ಭಾಗವಾದರೂ ಪಕ್ಷಿಗಳಿಗೆ ವಿಹರಿಸುವ ತಾಣವಾಗಿದೆ. ಈ ಫಲವತ್ತಾದ ಪರಿಸರ ಸರೋವರದಲ್ಲಿನ ಮೀನುಗಳಿಗೆ ಆಸರೆಯಾಗಿದೆ. ಅತಿ ಒಳ್ಳೆಯ ಮೀನು ಹಿಡಿಯುವ ತಾಣವೆಂದು ಪ್ರಸಿದ್ಧವಾಗಿದೆ. ಬ್ಯಾಸ್ ಮೀನುಗಳಿಗೆ ಈ ಲೇಕ್  ಬಹಳ ಪ್ರಸಿದ್ಧ, ಅನೇಕ ಪ್ರಶಸ್ತಿಗಳನ್ನೂ ಪಡೆದಿದೆ. ಜ್ವಾಲಾಮುಖಿಯ ಚಟುವಟಿಕೆ ಇನ್ನೂ ಜೀವಂತವಾಗಿದ್ದು ಅನೇಕ ಬಿಸಿ ನೀರಿನ ಬುಗ್ಗೆಗಳಿಗೆ ಹುಟ್ಟು ನೀಡಿ ಅನೇಕ ನೈಸರ್ಗಿಕ ಸ್ಪಾ ಗಳಿಗೆ ಕಾರಣವಾಗಿದೆ.

ಕ್ಲಿಯರ್ ಲೇಕ್ ಅರ್ಥಾತ್ ತಿಳಿಯಾದ ಸ್ವಚ್ಛ ಕೊಳ ಎನ್ನುವುದು ಸುಖಾ ಸುಮ್ಮನೆ ಪಡೆದ ಹೆಸರಲ್ಲ. ಸುತ್ತಲಿನ ಸ್ವಚ್ಛ ಗಾಳಿ, ಕಳೆದ 23 ವರ್ಷಗಳಿಂದ ಕ್ಯಾಲಿಫೋರ್ನಿಯಾದ ಶುದ್ಧ ಗಾಳಿಗೆ ಕಾರಣೀಭೂತವಾಗಿದೆ. ಸುತ್ತಲಿನ ಪರ್ವತಗಳು ವರ್ಷದ 263 ದಿನಗಳಾದರೂ ಈ ತಿಳಿ ಸರೋವರದ ಸೂರಾದ ಶುಭ್ರ ಆಕಾಶಕ್ಕೂ ಕಾರಣವಾಗಿದೆ.

ಬೆಚ್ಚನೆಯ ಸೂರ್ಯನ ಕಿರಣಗಳು ಜಲಕ್ರೀಡೆಗಳು ಮತ್ತು ಮನರಂಜನೆಗಳಿಗೆ ಅನುಕೂಲಕರವಾಗಿದೆ. ಕ್ಯಾಲಿಫೋರ್ನಿಯಾದ ಬರಗಾಲದ ಬಿಸಿಗೆ ಮಿಕ್ಕೆಲ್ಲಾ ಜಲತಾಣಗಳು ಬತ್ತುವಂತೆ ಆಗಿದ್ದರೂ ಈ ಸರೋವರಕ್ಕೆ ಮಾತ್ರ ಅಷ್ಟೇನು ಹಾನಿಯಾಗಿಲ್ಲ. ಇದರ ನೀರಿನ ಮಟ್ಟ ಸ್ವಲ್ಪ ಕಡಿಮೆಯಾಗಿತ್ತಷ್ಟೆ. ಸುಮಾರು ಅರ್ಧ ಮಿಲಿಯನ್ ವರ್ಷಗಳಷ್ಟು ಹಳೆಯದಾದ ಈ ಸರೋವರವನ್ನು ಜೀವನದಲ್ಲಿ ಒಮ್ಮೆ ನೋಡಬೇಕಾದ್ದೆ.

ಕ್ಯಾಲಿಫೋರ್ನಿಯಾದ ತುಂಬಾ ಸಾವಿರಾರು ಸರೋವರಗಳಿವೆ. ನಾವು ನೋಡಿದ ಈ ಎರಡರಲ್ಲಿ ಒಂದು ಚಿಕ್ಕದು ಮತ್ತೊಂದು ಅತಿ ದೊಡ್ಡದು ಮತ್ತು ಹಳೆಯದು, ಎರಡೂ ನೋಡಲು ನಯನ ಮನೋಹರವಾಗಿದ್ದುವು. ಅಚ್ಚು ಕಟ್ಟಾಗಿ ಇವುಗಳ ನಿರ್ವಹಣೆಯನ್ನೂ ಮಾಡಿದ್ದಾರೆ.

ನಮ್ಮ ಕರ್ನಾಟಕ ಕೆರೆಗಳ ತಾಣವಾಗಿತ್ತು. ಪ್ರತಿಯೊಂದು ಊರಿನಲ್ಲೂ ಒಂದೊಂದು ಕೆರೆಯಿತ್ತು. ಆದರೆ ಈಗ ನಗರದ ಅರ್ಧಕ್ಕಿಂತ ಹೆಚ್ಚು ಕೆರೆಗಳನ್ನು ಕಾಂಕ್ರೀಟ್ ಕಟ್ಟಡಗಳು ತಿಂದು ಹಾಕಿವೆ. ಇರುವ ಕೆರೆಗಳ ಸುತ್ತ ಫ್ಯಾಕ್ಟರಿಗಳಿಗೆ ಅವಕಾಶ ಕೊಟ್ಟು ಅವೆಲ್ಲಾ ವಿಷಪೂರಿತವಾಗಿವೆ. ವರ್ತೂರು ಕೆರೆ, ಬೆಳ್ಳಂದೂರು ಕೆರೆ ವಿಷಪೂರಿತ ನೊರೆಯನ್ನು ಹೊರ ಹೊಮ್ಮಿಸಿ ಅಲ್ಲಿನ ರಸ್ತೆಗಳಲ್ಲಿ ಓಡಾಡುವುದೇ ದುಸ್ತರವಾಗಿದೆ.

ಎತ್ತ ಸಾಗುತ್ತಿದೆ ನಮ್ಮ ದೇಶ. ನಮ್ಮಲ್ಲಿನ ಅಪಾರ ನೈಸರ್ಗಿಕ ಸಂಪತ್ತನ್ನು ಕಾಪಾಡುವ ಮನಸ್ಸು ಸರ್ಕಾರಕ್ಕೂ ಇಲ್ಲ, ಜನರಿಗೂ ಇಲ್ಲ, ನದಿಗಳನ್ನು ದೇವರೆಂದು ಪೂಜಿಸುವವರು ನಾವು. ಆದರೆ ನಮ್ಮ ನದಿ ಕೆರೆಗಳು ಕಲುಷಿತವಾಗಿರುವಂತೆ ಪ್ರಪಂಚದ ಮತ್ತೆಲ್ಲೂ ಆಗಿಲ್ಲ. ಕ್ಲಿಯರ್ ಲೇಕನ್ನು ನೋಡಿದಾಗ ವರ್ತೂರಿನ ಕೆರೆಯ ನೊರೆ ಕಣ್ಣ ಮುಂದೆ ಬಂದು ಕಣ್ಣು ಮಂಜಾಯಿತು. ಪ್ರಶ್ನೆಗಳು ಸಾಲು ಸಾಲಾಗಿ ಎದ್ದೆದ್ದು ಕಾಡತೊಡಗಿದುವು. ಉತ್ತರ ಎಂದು ಸಿಗುವುದೋ... ಗೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT