7

ನಿಕಷಕ್ಕೆ ಒಳಪಟ್ಟ ಅಧಿಕಾರಿಯ ದೇಶಪ್ರೇಮ

ಶೇಖರ್‌ ಗುಪ್ತ
Published:
Updated:

ಸಾರ್ವಜನಿಕ ಬದುಕಿನಲ್ಲಿ ಇರುವ ಖ್ಯಾತನಾಮರು ಮೃತಪಟ್ಟಾಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ನಾವು ಅವರೊಬ್ಬ ಮಹಾನ್‌ ದೇಶಭಕ್ತ ಎಂದು ಬಣ್ಣಿಸುತ್ತೇವೆ. ಹೀಗೆ ಕರೆಯುವುದು ಹೆಚ್ಚು ಸುರಕ್ಷಿತ ಆಗಿರುವುದರ ಜತೆಗೆ, ಅದೊಂದು ಮೈಗಳ್ಳತನದ ಹೇಳಿಕೆಯೂ ಆಗಿರುತ್ತದೆ. ಅದೇ ಆಗ ನಮ್ಮನ್ನು ಅಗಲಿದವರ ಕುರಿತು ಹೀಗೆ ಮಾತನಾಡಿದಾಗ ಯಾರೊಬ್ಬರೂ ನಿಮ್ಮನ್ನು ಪ್ರಶ್ನಿಸುವುದಿಲ್ಲ. ಸಾವಿಗೆ ಕಾರಣವಾದ ಅನಾರೋಗ್ಯದ ಬಗ್ಗೆಯೂ ನಾವು ನಯನಾಜೂಕಿನಿಂದಲೇ ಮಾತನಾಡುತ್ತೇವೆ.

ನೀವು ಶ್ರದ್ಧಾಂಜಲಿ ಸಲ್ಲಿಸುವ ವ್ಯಕ್ತಿಯು ಪ್ರಭಾವಿ ವ್ಯಕ್ತಿಗಳು ಮತ್ತು ಕೆಲವು ಗುಂಪಿನಿಂದ ನೇರವಾಗಿ ಅಲ್ಲದಿದ್ದರೂ ಒಂದಕ್ಕಿಂತ ಹೆಚ್ಚು ಸಲ ದೇಶದ್ರೋಹಿ ಎಂಬ ಮೂದಲಿಕೆಗೆ ಒಳಗಾಗಿದ್ದರೆ ಸಮೀಕರಣವೇ ಬದಲಾಗಿರುತ್ತದೆ.

ಮೈತ್ರಿಕೂಟಗಳೂ ಸೇರಿದಂತೆ ಬೇರೆ, ಬೇರೆ ಪಕ್ಷದ ಪ್ರಧಾನಿಗಳು ಈ ಅಧಿಕಾರಿಯಲ್ಲಿ ವಿಶ್ವಾಸ ಇರಿಸಿದ್ದರು. ಅಧಿಕಾರಕ್ಕೆ ಬರುವ ಎಲ್ಲರಿಂದಲೂ ನಂಬಿಕೆಗೆ ಪಾತ್ರವಾಗುವ ಕೆಲವೇ ಕೆಲ ಅಧಿಕಾರಿಗಳ ಪೈಕಿ ನರೇಶ್‌ ಚಂದ್ರ ಅವರೂ ಒಬ್ಬರಾಗಿದ್ದರು.   ಅವರೆಂದೂ ತಮ್ಮ ಅಡ್ಡ ಹೆಸರಿಗೆ ಸಕ್ಸೇನಾ ಎಂದು ಸೇರಿಸಿರಲಿಲ್ಲ.  ತಮ್ಮ ಹಿರಿಯಣ್ಣ  ಗಿರೀಶ್‌ (ಗ್ಯಾರಿ) ಸಕ್ಸೇನಾ ಅವರು ಅಜ್ಞಾತರಾಗಿ ಉಳಿಯಬೇಕು  ಎನ್ನುವುದೇ ಅವರ ಬಯಕೆ ಆಗಿತ್ತು ಎಂಬ ಭಾವನೆ ಮೂಡಿಸುತ್ತದೆ. ಬೇಹುಗಾರಿಕೆ ಪಡೆ ‘ರಾ’ದ ಮುಖ್ಯಸ್ಥರಾಗಿದ್ದ  ಗಿರೀಶ್‌ ಅವರು ಏಪ್ರಿಲ್‌ 14ರಂದು ಮೃತಪಟ್ಟಿದ್ದರು.

ನರೇಶ್ ಚಂದ್ರ ಅವರು ಕೂಡ  ಹೋದ ವಾರ (ಜುಲೈ 9ರಂದು) ನಮ್ಮನ್ನು ಅಗಲಿದ್ದಾರೆ. ಅವರನ್ನು ಹತ್ತಿರದಿಂದ ಬಲ್ಲವರು ಮತ್ತು ಅವರ ವಿರೋಧಿಗಳು ಕೂಡ, ಅವರೊಬ್ಬ ಉನ್ನತ ಹುದ್ದೆಗೆ ಏರುವ ಏಕೈಕ ಹಂಬಲದ ಸಂಕುಚಿತ ಮನಸ್ಸಿನ ಐಎಎಸ್‌ ಅಧಿಕಾರಿಯಾಗಿರಲಿಲ್ಲ  ಎನ್ನುವುದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ.

ಸೇವಾವಧಿಯಲ್ಲಿ ಉನ್ನತ ಸ್ಥಾನಕ್ಕೆ ಏರುವ ಅಧಿಕಾರಿಗಳನ್ನು ಎರಡು ವರ್ಗವಾಗಿ ವಿಭಜಿಸಬಹುದು. ನಿವೃತ್ತಿಯಾಗುತ್ತಿದ್ದಂತೆ ಯಾವುದಾದರೂ ಲಾಭದಾಯಕ ಸ್ಥಾನ ಅಲಂಕರಿಸುವ ಸಾಧ್ಯತೆಯ ಹುಡುಕಾಟದಲ್ಲಿ ಕೆಲವರು ತೊಡಗುತ್ತಾರೆ. ಮುಖ್ಯ ವಿಚಕ್ಷಣಾ ಕಮಿಷನರ್‌, ಮಹಾಲೇಖಪಾಲ, ಕೇಂದ್ರೀಯ ಲೋಕ ಸೇವಾ ಆಯೋಗ,  ಆರ್‌ಟಿಐ ಕಮಿಷನರ್‌ನಂತಹ ಪ್ರಮುಖ ಹುದ್ದೆಗೆ ಆಸೆ ಪಡುತ್ತಾರೆ. ಅಧಿಕಾರಸ್ಥರಿಗೆ ಹತ್ತಿರದವರಾಗಿದ್ದರೆ ರಾಜ್ಯಪಾಲ ಹುದ್ದೆಯೂ ಅವರನ್ನು ಹುಡುಕಿಕೊಂಡು ಬರುತ್ತದೆ. ಉಳಿದವರು ನಿವೃತ್ತಿ ನಂತರವೂ ಗರಿಷ್ಠ ಸಂಬಳದ, ವೈಭವದ ಹುದ್ದೆ ಬದಲಿಗೆ ಇನ್ನಷ್ಟು ಸವಾಲಿನ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ನರೇಶ್‌ ಚಂದ್ರ ಅವರು ಈ ಎರಡನೇ ವರ್ಗದ ಅಪರೂಪದ ಅಧಿಕಾರಿಗಳ ಸಾಲಿಗೆ  ಸೇರುತ್ತಾರೆ.

ಹೊಸ ಸವಾಲು ಅಥವಾ ಬಿಕ್ಕಟ್ಟುಗಳನ್ನು ಎದುರಿಸುವ ಅವರ ವೈಖರಿಯನ್ನು ಇನ್ನೊಬ್ಬರಲ್ಲಿ  ಕಂಡಿರುವುದಾಗಿ ನಾನು ಖಚಿತವಾಗಿ ಹೇಳಲಾರೆ. ಸಮಸ್ಯೆಗಳನ್ನು ಬಗೆಹರಿಸುವಲ್ಲಿನ ಅವರ ಚಾಕಚಕ್ಯತೆ ಮತ್ತು  ಬಿಕ್ಕಟ್ಟಿನಿಂದ ಹೊರ ಬರುವಲ್ಲಿ ಅವರು ತೋರಿದ ವಿಶೇಷ ಮುತುವರ್ಜಿ ಇತರರ ಪಾಲಿಗೆ ಆದರ್ಶವಾಗಿದೆ.

ಬಿಕ್ಕಟ್ಟಿನ ಸಂದರ್ಭಗಳಿಗೆ ಸಂಬಂಧಿಸಿದ ರೋಚಕ ಕತೆಗಳನ್ನು  ಅವರು ರಸವತ್ತಾಗಿ ವಿವರಿಸುತ್ತಿದ್ದರು.  ಇಂತಹ ಸಂದರ್ಭಗಳಲ್ಲಿ ಅವರು  ಯಾವತ್ತೂ  ಬಡಾಯಿ ಕೊಚ್ಚಿಕೊಳ್ಳುತ್ತಿರಲಿಲ್ಲ. ತಮ್ಮ ವಿಶಿಷ್ಟ ಅನುಭವಗಳ ಕುರಿತು ಹೇಳಿಕೊಳ್ಳುವಾಗ ಅವರು ತುಂಬ ಖುಷಿಪಡು

ತ್ತಿದ್ದರು.  ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದ ಸಮಸ್ಯೆಗಳಿಗೂ, ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುವಾಗ ಕಲಿತ ಪಾಠಗಳಿಂದ ಪರಿಹಾರ ಕಂಡುಕೊಂಡಿರುವುದನ್ನು ಅವರು ಹೇಳಿಕೊಳ್ಳುತ್ತಿದ್ದರು. ಎಲ್ಲ ಸಂಗತಿಗಳನ್ನೂ ಅವರು ಮನಬಿಚ್ಚಿ ಹೇಳಿಕೊಳ್ಳುತ್ತಿರಲಿಲ್ಲ.  ನಿಮ್ಮ ಬಗ್ಗೆ ಅವರಲ್ಲಿ ನಂಬಿಕೆ ಮೂಡಿದ್ದರೆ   ಮಾತ್ರ ಅವರು ನಿಮಗಾಗಿ ಅವುಗಳನ್ನು ದೃಢಪಡಿಸುತ್ತಿದ್ದರು. 

ನವದೆಹಲಿ ಇರಲಿ ಅಥವಾ ನ್ಯೂಯಾರ್ಕ್‌ ಇರಲಿ, ನಾನು ಯಾವತ್ತೂ ಬೇಗ ಏಳುವ ಜಾಯಮಾನದವನಲ್ಲ. ಬೆಳಗ್ಗಿನ 6 ಗಂಟೆಗೆ ಫೋನ್‌ ರಿಂಗಣಿಸುವುದನ್ನೂ ನಾನೂ ಇಷ್ಟಪಡುವುದಿಲ್ಲ. 1997ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯುತ್ತಿದ್ದಾಗ ನಾನು ಮ್ಯಾನ್‌ಹಟನ್ನಿನ ಲೆಕ್ಸಿಂಗ್ಟನ್‌ ಹೋಟೆಲ್‌ನಲ್ಲಿ  ತಂಗಿದ್ದೆ. ಅಂದು ಬೆಳಗ್ಗೆಯೇ ಫೋನ್‌ ಸದ್ದು ಮಾಡತೊಡಗಿತ್ತು. ಅಮೆರಿಕದಲ್ಲಿ ಭಾರತದ ರಾಯಭಾರಿ ಆಗಿದ್ದ ನರೇಶ್‌ ಚಂದ್ರ ಅವರು ಕರೆ ಮಾಡಿ ನನ್ನ ಬೆಳಗಿನ ನಿದ್ದೆಗೆ ಭಂಗ ತಂದಿದ್ದರು.  1992ರಲ್ಲಿ ಸಂಪುಟದ ಕಾರ್ಯದರ್ಶಿಯಾಗಿ ಅವರು ನಿವೃತ್ತರಾಗಿದ್ದರು.  ಆ ದಿನ ಅವರು ತುಂಬ ದುಗುಡಗೊಂಡಿದ್ದರು. ‘ಅರೆ, ನೀವು ಇದೆಂತಹ ಸುದ್ದಿ ಪ್ರಕಟಿಸಿದ್ದೀರಿ.  ನಾನು ಇಲ್ಲಿ ರಾಯಭಾರಿ ಹುದ್ದೆ ನಿಭಾಯಿಸುತ್ತಿದ್ದರೆ ನಿಮ್ಮ ವರದಿಗಾರ ನನ್ನನ್ನು ಬೇಹಗಾರ ಎಂದು ದೂಷಿಸಿ ಬರೆದಿದ್ದಾರೆ’ ಎಂದು ಅವರು ಸಾತ್ವಿಕ ರೋಷದಿಂದಲೇ ತಮ್ಮ ವಿವರಣೆ ನೀಡತೊಡಗಿದರು.  ಅದೇ ದಿನ   ಪ್ರಧಾನಿ ಐ.ಕೆ. ಗುಜ್ರಾಲ್‌  ಅವರ ಜತೆ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್‌ ಅವರನ್ನು ನರೇಶ್ ಅವರು ಭೇಟಿಯಾಗುವವರಿದ್ದರು.  ಈ ಲೇಖನವನ್ನು ಈಗಾಗಲೇ ಓದಿದ ಅಮೆರಿಕನ್ನರು ಮತ್ತು  ತಮ್ಮ  ಸಹೋದ್ಯೋಗಿಗಳನ್ನೂ ಅವರು ಎದುರಿಸಬೇಕಾಗಿತ್ತು. ಸ್ವದೇಶಿ ಜಾಗರಣ್‌ ಮಂಚ್‌ನ ಸಂಚಾಲಕ ಮತ್ತು ನನ್ನ ಸ್ನೇಹಿತರೂ ಆಗಿದ್ದ  ಎಸ್‌. ಗುರುಮೂರ್ತಿ ಅವರು ‘ದಿ  ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ನಲ್ಲಿ ಬರೆದಿದ್ದ ಲೇಖನವನ್ನು ಅವರು ನನ್ನೊಂದಿಗೆ ಪ್ರಸ್ತಾಪಿಸಿದ್ದರು.  ಪ್ರಧಾನಿ ನರಸಿಂಹರಾವ್‌ ಅವರು ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆಗೆ ನಡೆಸಿದ್ದ ಸಿದ್ಧತೆ ಮತ್ತು ಕೊನೆ ಕ್ಷಣದಲ್ಲಿ ಈ ನಿರ್ಧಾರದಿಂದ ಹಿಂದೆ ಸರಿದಿರುವುದರ ಬಗ್ಗೆ ಈ ವರದಿಯಲ್ಲಿ ವಿವರಗಳಿದ್ದವು.

ಕ್ಲಿಂಟನ್‌ ಸರ್ಕಾರವು ಉಪಗ್ರಹ ಮತ್ತು ಬೇಹುಗಾರಿಕೆ ಸಾಕ್ಷ್ಯಗಳನ್ನು ಆಧರಿಸಿ  ನರಸಿಂಹರಾವ್‌ ಅವರನ್ನು ಈ ಬಗ್ಗೆ ಪ್ರಶ್ನಿಸಿತ್ತು.  ಅಣ್ವಸ್ತ್ರ ಪರೀಕ್ಷೆ ಬಗ್ಗೆ  ಕ್ಲಿಂಟನ್‌ ಆಡಳಿತಕ್ಕೆ ನರೇಶ್‌ ಚಂದ್ರ ಅವರೇ ಮಾಹಿತಿ ನೀಡಿ ಬೇಹುಗಾರಿಕೆ ನಡೆಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಲೇಖನದ ಜೆರಾಕ್ಸ್‌ ಪ್ರತಿಯೊಂದಿಗೆ ಹೋಟೆಲ್‌ನ ಲಾಬಿಯಲ್ಲಿ ನನ್ನನ್ನು ಭೇಟಿಯಾಗಲು ಬಯಸಿರುವುದಾಗಿ ನರೇಶ್‌ ಹೇಳಿದ್ದರು.

ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹದ ಸಂಕೀರ್ಣತೆ ಬಗ್ಗೆ ನಾನು ಅವರಿಗೆ ವಿವರಿಸಲು ಹೆಣಗಿದ್ದೆ.  ‘ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯು ಒಂದೇ ಕುಟುಂಬದ ಇನ್ನೊಂದು ಬಣದ  ಒಡೆತನದಲ್ಲಿ ಇದೆ.  ನನ್ನ ಸಂಪಾದಕತ್ವದ ಪತ್ರಿಕೆಯಲ್ಲಿ ಈ ಲೇಖನ ಪ್ರಕಟಗೊಂಡಿಲ್ಲ’ ಎಂದು ನಾನು ಅವರಿಗೆ ವಿವರಿಸಿದೆ. ‘ಅದೆಲ್ಲ ಸರಿ, ನಾನು ಇಡೀ  ಜಗತ್ತಿಗೆ ಹೇಗೆ ಮುಖ ತೋರಿಸಲಿ’ ಎಂದು  ಅವರು ನನ್ನನ್ನು ಪ್ರಶ್ನಿಸಿದ್ದರು.   ನಾವು ಈ ಲೇಖನ ಪ್ರಕಟಿಸಿರಲಿಲ್ಲ. ಹೀಗಾಗಿ ಅವರು ನನ್ನನ್ನು  ತಪ್ಪುಗಾರ ಎಂದು ಪರಿಗಣಿಸಿರಲಿಲ್ಲ.

ನರೇಶ್‌ ಚಂದ್ರ ಅವರ ವ್ಯಕ್ತಿತ್ವ ಮತ್ತು ಅವರಿಗೆ ಇರುವ ಸಂಪರ್ಕಗಳ ಬಗ್ಗೆ ನನಗೆ ಸಂಪೂರ್ಣ ಅರಿವಿತ್ತು.  ಹಿಂದೆ ಸಂಪುಟದ ಕಾರ್ಯದರ್ಶಿಯಾಗಿದ್ದ ಅವರಿಗೆ ದೇಶದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ಸಂಪೂರ್ಣ ಪರಿಚಯ ಇತ್ತು. ಸಂಪುಟ ಸಚಿವಾಲಯವೇ  ಬೇಹುಗಾರಿಕೆ ಪಡೆ ‘ರಾ’ದ ಮೇಲೆ ನಿಯಂತ್ರಣ ಹೊಂದಿತ್ತು.  ಅದೇ ಹೊತ್ತಿಗೆ ಗುರುಮೂರ್ತಿ ಅವರನ್ನೂ ನಿರ್ಲಕ್ಷಿಸುವಂತಿರಲಿಲ್ಲ. ಆರ್ಥಿಕತೆಯಿಂದ ವಿದೇಶ ನೀತಿ, ಧರ್ಮ ನಿರಪೇಕ್ಷತೆ ವ್ಯಾಖ್ಯಾನದ ಬಗ್ಗೆ ಅವರು ತಳೆದಿರುವ ನಿಲುವಿನ ಬಗ್ಗೆ ಅವರೊಂದಿಗೆ ವಾದ ಮಾಡಬಹುದಾಗಿತ್ತು. ಆದರೆ, ಅವರ ದೇಶಪ್ರೇಮವನ್ನು ಮಾತ್ರ ಪ್ರಶ್ನಿಸುವಂತಿರಲಿಲ್ಲ.  ಹಾಗಿದ್ದರೆ ಸತ್ಯ ಸಂಗತಿ ಏನಿತ್ತು ಎನ್ನುವ ಪ್ರಶ್ನೆಯು ನನಗೆ ಒಂದು ದಶಕಕ್ಕಿಂತ ಹೆಚ್ಚು ಸಮಯ ಕಾಡುತ್ತಲೇ ಇತ್ತು.

ಪ್ರಧಾನಿಗಳಾದ ಗುಜ್ರಾಲ್‌, ವಾಜಪೇಯಿ ಮತ್ತು ನರಸಿಂಹರಾವ್‌ ಅವರಲ್ಲಿಯೂ ನಾನು ಈ ಬಗ್ಗೆ ಪ್ರಸ್ತಾಪಿಸಿದ್ದೆ.  ಎಲ್ಲ ಸಂದರ್ಭಗಳಲ್ಲೂ ಈ ಮೂವರೂ ಒಗಟಿನ ನಗೆ ಬೀರುತ್ತ   ‘ನೀವು ಈಗ ಅದನ್ನೆಲ್ಲ ಮರೆತುಬಿಡಿ’ ಎನ್ನುವ ಸಲಹೆಯನ್ನೂ ನನಗೆ ನೀಡಿದ್ದರು. ಆದರೆ, ವರ್ಷಗಳು ಉರುಳಿದಂತೆ  ನರೇಶ್‌ ಚಂದ್ರ ಅವರಿಗೆ ಅಂಟಿದ ಈ ಕಳಂಕದ ಬಗ್ಗೆ  ಸರ್ಕಾರದ ಉನ್ನತ ಮಟ್ಟದಲ್ಲಿ ಯಾರೊಬ್ಬರೂ ನಂಬಿಕೆ ಹೊಂದಿರಲಿಲ್ಲ.

ಅಣ್ವಸ್ತ್ರ ಮತ್ತು ಕ್ಷಿಪಣಿ ವಿಷಯಗಳ ಬಗ್ಗೆ ಅಮೆರಿಕದ ಜತೆ ಮಾತುಕತೆ ನಡೆಸಲು ನರಸಿಂಹರಾವ್‌ ಅವರು ಇವರನ್ನು ತಮ್ಮ ಪ್ರಮುಖ ಸಂಧಾನಕಾರರನ್ನಾಗಿ ನೇಮಿಸಿಕೊಂಡಿದ್ದರು.  ನಂತರ ಅಧಿಕಾರಕ್ಕೆ ಬಂದ ಗುಜ್ರಾಲ್‌ ಮತ್ತು ವಾಜಪೇಯಿ ಅವರು ಕೂಡ  ಇವರ ವಿರುದ್ಧ ಬೇಹುಗಾರಿಕೆಯ ಆರೋಪಗಳ ಹೊರತಾಗಿಯೂ ಇವರನ್ನೇ ಅಮೆರಿಕದ ರಾಯಭಾರಿಯಾಗಿ ಮುಂದುವರೆಸಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್‌) ಮತ್ತು ಬಿಜೆಪಿಯ ಉನ್ನತ ವ್ಯಕ್ತಿಗಳ ಜತೆ ಉತ್ತಮ ಒಡನಾಟ ಇದ್ದ, ಅಡ್ವಾಣಿ ಮತ್ತು ವಾಜಪೇಯಿ ಅವರ ಜತೆ ಮುಕ್ತವಾಗಿ ಬೆರೆಯುವಂತಹ ಸ್ವಾತಂತ್ರ್ಯವನ್ನೂ ಹೊಂದಿದ್ದ ಗುರುಮೂರ್ತಿ ಅವರಿಂದಲೇ ಆರೋಪಕ್ಕೆ ಒಳಗಾಗಿದ್ದರೂ ಅವರು ನಿರ್ವಹಿಸುತ್ತಿದ್ದ ರಾಯಭಾರಿ ಹುದ್ದೆಗೆ ಯಾವುದೇ ಧಕ್ಕೆ ಒದಗಿರಲಿಲ್ಲ.  

2006ರಲ್ಲಿ ನಡೆದ ಜಸ್ವಂತ್ ಸಿಂಗ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೇದಿಕೆ ಮೇಲೆ  ನರೇಶ್‌ ಚಂದ್ರ ಅವರೂ ಉಪಸ್ಥಿತರಿದ್ದರು. ಅಮೆರಿಕದಲ್ಲಿ ರಾಯಭಾರಿ ಹುದ್ದೆ ನಿಭಾಯಿಸುವಾಗ ತಮಗೆ ಎದುರಾದ ಕಹಿ ಘಟನೆಗಳು, ಅಮೆರಿಕ ಸರ್ಕಾರದ ವಿಶ್ವಾಸಘಾತುಕತನ ಕುರಿತು ಅವರು ಕೆಲ ಆಸಕ್ತಿದಾಯಕ ಸಂಗತಿಗಳನ್ನು ಹೇಳಿಕೊಂಡಿದ್ದರು.

ಬೇಹುಗಾರ ಯಾರು ಎನ್ನುವುದನ್ನು ಜಸ್ವಂತ್ ಸಿಂಗ್ ಅವರು ತಮ್ಮ ಪುಸ್ತಕದಲ್ಲಿ  ಬಹಿರಂಗಪಡಿಸದಿರುವುದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ, ಚಂದ್ರ ಅವರೇ ಬೇಹುಗಾರರಾಗಿದ್ದರು ಎನ್ನುವ ಖಚಿತವಲ್ಲದ ಶಂಕೆಯನ್ನು ಜಸ್ವಂತ್ ಸಿಂಗ್  ಹೊಂದಿದ್ದರೆ, ಅವರ ಜತೆ ಏಕೆ ವೇದಿಕೆ ಹಂಚಿಕೊಳ್ಳುತ್ತಿದ್ದರು ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ.

ಈ ಬಗ್ಗೆ ನಾನು ಪ್ರತಿ ಬಾರಿ ನರಸಿಂಹರಾವ್‌ ಅವರನ್ನು ಪೀಡಿಸಿದಾಗೊಮ್ಮೆ ಅವರು ಉತ್ತರ ನೀಡದೆ ಸುಮ್ಮನಾಗುತ್ತಿದ್ದರು.  ‘ವಾಕ್‌ ದ ಟಾಕ್‌’ ಕಾರ್ಯಕ್ರಮದಲ್ಲಿ 1995ರ ಡಿಸೆಂಬರ್‌ನಲ್ಲಿ ಏನು ನಡೆದಿತ್ತು. ಈ ಬಗ್ಗೆ ನೀವು ಉತ್ತರ ನೀಡಲೇಬೇಕು ಎಂದು ನಾನು ಪಟ್ಟು ಹಿಡಿದಾಗ, ‘ಕೆಲ ಸಂಗತಿಗಳನ್ನು ನನ್ನ ಸಾವಿನೊಂದಿಗೆ ಒಯ್ಯಲು ನನ್ನನ್ನು ಬಿಟ್ಟು ಬಿಡಿ’ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದರು.

2006ರಲ್ಲಿ ಬಿಡುಗಡೆಯಾದ ಜಸ್ವಂತ್‌ ಸಿಂಗ್‌ ಅವರ ಪುಸ್ತಕವು ಈ ವಿಷಯದಲ್ಲಿ ಇನ್ನಷ್ಟು ಸಂಶೋಧನೆ ನಡೆಸಲು ನನಗೆ ಪ್ರಚೋದನೆ ನೀಡಿತ್ತು. ಅದರ ಫಲವಾಗಿ ಈ ವಿಷಯವಾಗಿಯೇ  ನಾನು ಮೂರು ಅಂಕಣಗಳನ್ನು (ಮೌಂಟೇನ್‌ ಇನ್‌ ದಿ ಮೋಲ್‌ಹಿಲ್‌, ಹೌ ವಿ ಬಿಲ್ಟ್‌ ದಿ ಬಾಂಬ್‌ ಮತ್ತು ದಿ ಮೋಲ್‌ ಆ್ಯಂಡ್‌ ದಿ ಫಾಕ್ಸ್‌ ) ಬರೆದಿದ್ದೆ.  ಅಲ್ಲಿ ನರೇಶ್‌ ಚಂದ್ರ ಮೋಲ್‌ (ಬೇಹುಗಾರ)  ಆಗಿದ್ದರೆ,  ನರಸಿಂಹರಾವ್‌ ಅವರು ಫಾಕ್ಸ್‌ (ನರಿ)ಆಗಿದ್ದರು.

ಈ ಲೇಖನಗಳು ಪ್ರಕಟವಾದ ನಂತರವೂ ನಾನು ಚಂದ್ರ ಅವರ ಜತೆ ಸಾಕಷ್ಟು ಗಂಟೆಗಳನ್ನು ಕಳೆದಿರುವೆ. ಆದರೂ ಅವರಿಂದ ಮಾಹಿತಿ ಪಡೆಯುವಲ್ಲಿ ನಾನು ವಿಫಲನಾಗಿದ್ದೆ.  ಆದರೆ, ನಾನು ನನ್ನ ಮೂರು ಲೇಖನಗಳಲ್ಲಿ ಒಂದು ಖಚಿತ ತೀರ್ಮಾನಕ್ಕೆ ಬಂದಿದ್ದೆ. ನರಸಿಂಹರಾವ್‌ ಅವರು ಅಣ್ವಸ್ತ್ರ ಪರೀಕ್ಷೆ ನಡೆಸಲು ಯಾವತ್ತೂ ಉದ್ದೇಶಿಸಿರಲಿಲ್ಲ.  ಅಣ್ವಸ್ತ್ರ ಯೋಜನೆಗಳಿಂದ ಹಿಂದೆ ಸರಿಯುವಂತೆ ಕ್ಲಿಂಟನ್‌ ಸರ್ಕಾರದಿಂದ ಅವರ ಮೇಲೆ ಭಾರಿ ಒತ್ತಡ ಇತ್ತು ಎನ್ನುವುದು ನನ್ನ ನಿಲುವಾಗಿತ್ತು. ನರೇಶ್‌ ಚಂದ್ರ ಅವರೂ ಸೇರಿದಂತೆ ಯಾರೊಬ್ಬರೂ ನನ್ನ ಅಭಿಪ್ರಾಯವನ್ನು ಪ್ರಶ್ನಿಸಿರಲಿಲ್ಲ.

ಅಣ್ವಸ್ತ್ರ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿರುವಂತೆ ಅಮೆರಿಕೆಗೆ ಮನದಟ್ಟು ಮಾಡಲು ರಾವ್‌ ಅವರು ಬಳಸು ಮಾರ್ಗದ ಕಾರ್ಯತಂತ್ರ ಹೆಣೆದಿದ್ದರು. ಈ ರಹಸ್ಯ ಯೋಜನೆ ಬಹಿರಂಗವಾಗುತ್ತಿದ್ದಂತೆ ಅದನ್ನು ರದ್ದುಪಡಿಸಿದಂತೆ ಮಾಡಿ ಕ್ಲಿಂಟನ್‌ ಅವರು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದರು.  ಪರೀಕ್ಷೆ ನಡೆಸಲು ಭಾರತದ ವಿಜ್ಞಾನಿಗಳಿಗೆ ಬೇಕಾಗಿದ್ದ ಇನ್ನಷ್ಟು ಸಮಯಾವಕಾಶ ಒದಗಿಸಿ ಕೊಟ್ಟರು.  ಈ ಕಾರ್ಯತಂತ್ರದಲ್ಲಿ ನರೇಶ್‌ ಚಂದ್ರ ಅವರೂ ಒಬ್ಬ ಪಾತ್ರಧಾರಿಯಾಗಿದ್ದರು. ಅದೆಲ್ಲವೂ ಉತ್ತಮ ಉದ್ದೇಶದ ದೇಶಪ್ರೇಮದ ಕೆಲಸವಾಗಿತ್ತು ಎನ್ನುವ ಕಾರಣಕ್ಕೆ ‘ಬೇಹುಗಾರ’ ಪಾತ್ರ ನಿರ್ವಹಿಸಲು ಅವರೂ ಸಮ್ಮತಿಸಿದ್ದರು. ಆದರೆ, ಇದಕ್ಕಾಗಿ ಅವರು ದೇಶದ್ರೋಹದ ಸೂಕ್ಷ್ಮ ದೂಷಣೆಯನ್ನೂ ಎದುರಿಸಬೇಕಾಯಿತು.

ಮೊನ್ನೆ ದೆಹಲಿಯಲ್ಲಿ ನಡೆದ ನರೇಶ್‌ ಚಂದ್ರ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಅನೇಕ ಅಭಿಮಾನಿಗಳು ಅವರನ್ನು ದೇಶಭಕ್ತ ಎಂದೇ ಕೊಂಡಾಡಿದರು.  ಇದು ಇತರ ಜನ ನಾಯಕರಿಗೆ ಮಾಮೂಲಾಗಿ ಅನ್ವಯಿಸುವ ಹೊಗಳಿಕೆಗಿಂತ ಭಿನ್ನವಾಗಿತ್ತು.

ಅವರನ್ನು ನೋಯಿಸುವ ಉದ್ದೇಶದಿಂದಲೇ ಕೆಲವರು ಪ್ರಶ್ನಿಸಿದಾಗಲೂ ದೇಶಭಕ್ತಿ ಕುರಿತ ಅವರ  ಬದ್ಧತೆಯು ಬದಲಾಗಿರಲಿಲ್ಲ.  ತಮ್ಮ ಮೇಲಿನ ಆರೋಪಗಳಿಂದ ಹೊರ ಬರಲು ಅವರು ಆತ್ಮಕಥೆಯನ್ನೂ  ಬರೆಯಲಿಲ್ಲ. ದೇಶಕ್ಕಾಗಿ ನಾನೇನು ಮಾಡಿರುವೆ ಎನ್ನುವುದನ್ನು ಹೇಳಿಕೊಳ್ಳಲಿಕ್ಕಾದರೂ ಅವರು ಪುಸ್ತಕ ಬರೆಯಬೇಕಾಗಿತ್ತು. ಅವರು ಅದನ್ನೂ  ಮಾಡಲಿಲ್ಲ. ‘ಜನರು ಓದಲು ಬಯಸುವುದನ್ನು ನಾನು ಬರೆಯಲಾರೆ. ನಾನು ಬರೆದಿರುವುದನ್ನು ಯಾರೊಬ್ಬರೂ ಓದುವುದಿಲ್ಲ’ ಎಂದು ಅವರು  ಹೇಳುತ್ತಿದ್ದರು.  ನಮ್ಮ ಕಾಲಘಟ್ಟದಲ್ಲಿ ನಾನು ನೋಡಿದ ಭಾರತ ಮಾತೆಯ ಅತ್ಯುತ್ತಮ ಸೇವಕರಲ್ಲಿ ಅವರೂ ಒಬ್ಬರಾಗಿದ್ದರು.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry