ಭಾನುವಾರ, ಡಿಸೆಂಬರ್ 8, 2019
24 °C

2020ರ ವೇಳೆಗೆ 1.8 ಕೋಟಿ ಉದ್ಯೋಗ ಸೃಷ್ಟಿ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2020ರ ವೇಳೆಗೆ 1.8 ಕೋಟಿ ಉದ್ಯೋಗ ಸೃಷ್ಟಿ: ಸಿ.ಎಂ

ಮೈಸೂರು: ರಾಜ್ಯದಲ್ಲಿ 2020ರ ವೇಳೆಗೆ 1.8 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶನಿವಾರ ತಿಳಿಸಿದರು.

ಕೌಶಲಾಭಿವೃದ್ಧಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸರ್ಕಾರದಲ್ಲಿ ಕೇವಲ 7 ಲಕ್ಷ ಹುದ್ದೆಗಳಿವೆ. ಪಿಯುಸಿ, ಐಟಿಐ, ಡಿಪ್ಲೊಮಾ, ಎಂಜಿನಿಯರ್‌ ಹಾಗೂ ಇನ್ನಿತರ ಪದವಿ ಮುಗಿಸುವ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡಬೇಕಿದೆ. ಎಲ್ಲರಿಗೂ ಸರ್ಕಾರಿ ಹುದ್ದೆ ಸಿಗಲ್ಲ. ಖಾಸಗಿ ವಲಯದಲ್ಲಿ ಹಲವು ಅವಕಾಶಗಳಿವೆ. ಅದಕ್ಕೆ ಪೂರಕವಾಗಿ ಯುವಕರನ್ನು ಸಜ್ಜುಗೊಳಿಸಬೇಕು’ ಎಂದು ಹೇಳಿದರು.

‘ಮುಂದಿನ ತಿಂಗಳು ಮೈಸೂರಿನಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗುವುದು. ಅಲ್ಲದೆ, ಕರ್ನಾಟಕ– ಜರ್ಮನ್ ತಂತ್ರಜ್ಞಾನ ತರಬೇತಿ ಸಂಸ್ಥೆಯನ್ನು ಇಲ್ಲಿಯೂ ಆರಂಭಿಸಲಾಗುವುದು’ ಎಂದು ಘೋಷಿಸಿದರು.

‘ಕೌಶಲ ಕರ್ನಾಟಕ ಮಿಷನ್‌ ಜಾಲತಾಣದಲ್ಲಿ ಈವರೆಗೆ 6.7 ಲಕ್ಷ ಯುವಕ, ಯುವತಿಯರು ಹೆಸರು ನೋಂದಾಯಿಸಿದ್ದಾರೆ ಎಂದು ರಾಜ್ಯ ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದರು.

**

ವೇದಿಕೆ ಏರಿ ಆಕ್ರೋಶ

ಮುಖ್ಯಮಂತ್ರಿ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆ ಮೇಲೇರಿದ ವ್ಯಕ್ತಿಯೊಬ್ಬರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಅನ್ಯಾಯವಾಗಿದೆ. ನ್ಯಾಯ ಕೊಡಿಸಿ’ ಎಂದು ಕೂಗಾಡಿದರು. ತಕ್ಷಣವೇ ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೆ, ಅವರ ಬಳಿ ಇದ್ದ ಮನವಿ ಪತ್ರಗಳನ್ನು ಕಸಿದುಕೊಂಡರು. ಕುಕ್ಕರಹಳ್ಳಿ ನಿವಾಸಿ ಎಂ.ಪರಶುರಾಮ್ ಎಂಬುದು ಗೊತ್ತಾಗಿದೆ.‘ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅನ್ಯಾಯವಾಗುತ್ತಿದೆ, ದಸರಾ ಮಹೋತ್ಸವದಲ್ಲಿ ಅವ್ಯವಹಾರ ನಡೆದಿದೆ. ಇಷ್ಟಾದರೂ ಯಾವುದೇ ತನಿಖೆ ನಡೆದಿಲ್ಲ. ಸಿಒಡಿ ತನಿಖೆ ನಡೆಸಿ’ ಎಂದು ಆ ಪತ್ರಗಳಲ್ಲಿ ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)