ಭಾನುವಾರ, ಡಿಸೆಂಬರ್ 8, 2019
23 °C

ಸಫಾರಿ ಜಾಡಿನಲ್ಲಿ ಭರಪೂರ ರಂಜನೆ

Published:
Updated:
ಸಫಾರಿ ಜಾಡಿನಲ್ಲಿ ಭರಪೂರ ರಂಜನೆ

ನಿರ್ದೇಶನ: ರವೀಂದ್ರ ವಂಶಿ

ನಿರ್ಮಾಪಕ: ಬಿ.ಎಸ್. ಚಂದ್ರಶೇಖರ್

ತಾರಾಬಳಗ: ಮನೀಶ್‌ ಬಲ್ಲಾಳ್‌, ಸಹನಶ್ರೀ, ಮಾ.ರಾಕಿನ್‌, ಮಾ.ರಾಜೀವ್‌ ಪ್ರಥಮ್, ಬೃಂದಾ, ಕೈಲಾಶ್‌, ಟಿ.ಪಿ. ಜಗದೀಶ್‌

ಕನ್ನಡದಲ್ಲಿ ಮಕ್ಕಳ ಚಿತ್ರ ಪ್ರಕಾರ ಸ್ತಬ್ಧವಾಗಿದೆ. ಮುಖ್ಯವಾಹಿನಿ ಚಿತ್ರಮಂದಿರಗಳಲ್ಲಿ ಮಕ್ಕಳ ಚಿತ್ರಗಳು ತೆರೆಕಾಣುವುದು ಅಷ್ಟು ಸುಲಭವೂ ಅಲ್ಲ. ಪ್ರಶಸ್ತಿ, ಸರ್ಕಾರದ ಸಹಾಯಧನಕ್ಕಾಗಿ ಇಂತಹ ಚಿತ್ರ ಮಾಡುತ್ತಾರೆಂಬ ಅಪವಾದವೂ ಉಂಟು. ಇದೇ ಮಕ್ಕಳ ಚಿತ್ರಗಳ ಬಗೆಗಿನ ತಾತ್ಸಾರಕ್ಕೆ ಮೂಲ ಕಾರಣ. 

ವಸ್ತುವಿನ ಆಯ್ಕೆಯಲ್ಲೂ ಮಕ್ಕಳ ಸಿನಿಮಾಗಳು ಎಡವುತ್ತಿವೆ. ಮಕ್ಕಳ ಚಿತ್ರ ಎಂದಾಗ ದೊಡ್ಡವರ ವಂಚನೆ ಬಯಲುಗೊಳಿಸುವ ಸಿದ್ಧಸೂತ್ರಗಳೇ ಪ್ರೇಕ್ಷಕರನ್ನು ಕಾಡಿದರೆ ಸೋಜಿಗಪಡಬೇಕಿಲ್ಲ.

‘ಪುಟಾಣಿ ಸಫಾರಿ’ ಜನಪ್ರಿಯ ಸಿದ್ಧಮಾದರಿಯನ್ನು ಮೀರಿ ಮಕ್ಕಳಿಗೆ ಭರಪೂರ ರಂಜನೆ ನೀಡುವ ಸಿನಿಮಾ. ಹಿರಿಯರಿಗೂ ಚಿತ್ರ ಖುಷಿ ನೀಡುತ್ತದೆ. ದೈನಂದಿನ ಬದುಕಿನಲ್ಲಿ ಪೋಷಕರು ಮಕ್ಕಳ ಮೇಲೆ ಹೇರುವ ಒತ್ತಡದಿಂದ ಅವರ ಮೇಲಾಗುತ್ತಿರುವ ದುಷ್ಪರಿಣಾಮದ ಕುರಿತು ಬೆಳಕು ಚೆಲ್ಲುತ್ತದೆ.

ಇಂಗ್ಲಿಷ್‌ನ ‘ಜಂಗಲ್‌ ಬುಕ್‌’ ಮಾದರಿಯಲ್ಲಿ ಕನ್ನಡದಲ್ಲಿಯೂ ಮಕ್ಕಳ ಚಿತ್ರ ನಿರ್ಮಿಸಬೇಕು ಎಂಬ ಹಂಬಲದೊಂದಿಗೆ ನಿರ್ದೇಶಕ ರವೀಂದ್ರ ವಂಶಿ, ‘ಪುಟಾಣಿ ಸಫಾರಿ’ಯ ಜಾಡಿನಲ್ಲಿ ಸವಾರಿ ಮಾಡಿದ್ದಾರೆ. ಸಮಾಜದ ಎರಡು ಭಿನ್ನ ಸ್ತರದ ಮಕ್ಕಳ ಬದುಕನ್ನು ಇಟ್ಟುಕೊಂಡು ಕಥೆ ಹೆಣೆದಿದ್ದಾರೆ. ಇದಕ್ಕೆ ಕಮರ್ಷಿಯಲ್‌ ಸ್ಪರ್ಶ ನೀಡಲಾಗಿದೆ.

ಮೊದಲ ರ್‌್ಯಾಂಕ್‌ನಲ್ಲಿಯೇ ಮುಳುಗಿ ಬಾಲ್ಯ ಕಳೆದುಕೊಂಡ ರೋಹಿತ್ (ಮಾ.ರಾಜೀವ್‌ ಪ್ರಥಮ್). ಈತನ ಅಪ್ಪ, ಅಮ್ಮ ಸಾಫ್ಟ್‌ವೇರ್‌ ಎಂಜಿನಿಯರ್‌. ಈ ಇಬ್ಬರೂ ಕನ್ನಡ ಮಾಧ್ಯಮದಲ್ಲಿಯೇ ಓದಿ ಸಿಲಿಕಾನ್‌ ಜಗತ್ತಿಗೆ ಕಾಲಿಟ್ಟವರು. ಆದರೆ, ಅವರಿಗೆ ಮಗ ಇಂಗ್ಲಿಷ್‌ನಲ್ಲೇ ಮಾತನಾಡಬೇಕು ಎಂಬ ಹಂಬಲ.

ಸಿದ್ದೇಶನ(ಮಾಸ್ಟರ್‌ ರಾಕಿನ್) ಬದುಕು ಇದಕ್ಕೆ ತದ್ವಿರುದ್ಧ. ಆತನ ಅಪ್ಪ, ಅಮ್ಮ ಅನಕ್ಷರಸ್ಥರು. ಆದರೆ, ಈತ ಕಾಡಿನ ಜ್ಞಾನ ಭಂಡಾರ. ಓದಬೇಕೆಂಬ ಅವನ ಆಸೆಗೆ ಅಪ್ಪನಿಂದಲೇ ವಿರೋಧ.

ಮೊದಲಾರ್ಧದಲ್ಲಿ ನಗರದ ಸಂಕೀರ್ಣ ಬದುಕಿನ ಚಿತ್ರಣದೊಂದಿಗೆ ಚಿತ್ರವು ತೆವಳುತ್ತದೆ. ದ್ವಿತೀಯಾರ್ಧದಲ್ಲಿ ಕಾನನದ ಹಸಿರಿನೊಂದಿಗೆ ಭಾವುಕ ಸನ್ನಿವೇಶಗಳು ಬೆರೆತು ಮನಸ್ಸನ್ನು ಮುದಗೊಳಿಸುತ್ತವೆ.

ಅಪ್ಪ, ಅಮ್ಮನ ಜೊತೆಗೆ ಕಾಡಿನ ಸಫಾರಿಗೆ ಹೊರಟ ರೋಹಿತ್‌ ದಾರಿತಪ್ಪುತ್ತಾನೆ. ಅಲ್ಲಿ ಅವನಿಗೆ ಸಿದ್ದೇಶ ಸಿಗುತ್ತಾನೆ. ಆಗ ಕಥೆ ಹೊಸ ಜಾಡಿಗೆ ಹೊರಳುತ್ತದೆ. ಇಬ್ಬರೂ ಕಾಡಿನಿಂದ ಹೊರಬರಲು ನಡೆಸುವ ಸಾಹಸವೇ ಕಥಾ ಹಂದರ. ಕಥೆಗೆ ಅನುಗುಣವಾಗಿ ಚಿಣ್ಣರ ಅಭಿನಯವೂ ಮನಸೂರೆಗೊಳಿಸುತ್ತದೆ.

ಮಕ್ಕಳಿಗೆ ಕಾಡಿನಲ್ಲಿ ನಕ್ಸಲೀಯರು ಎದುರಾಗುತ್ತಾರೆ. ನಕ್ಸಲ್‌ ಸಿದ್ಧಾಂತ ಕುರಿತು ಮಕ್ಕಳಲ್ಲಿರುವ ನಕಾರಾತ್ಮಕ ಧೋರಣೆ ಬಗ್ಗೆ ರಾಜೀವ್‌ ಮತ್ತು ರಾಕಿನ್‌ ಮೂಲಕ ಹೇಳುವ ಪ್ರಯತ್ನವನ್ನೂ ನಿರ್ದೇಶಕರು ಮಾಡಿದ್ದಾರೆ.

‘ಪುಟಾಣಿ ಸಫಾರಿ’ ಚಿತ್ರವು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಸಾರುತ್ತಲೇ ಪೋಷಕರ ಒತ್ತಡ ಮಕ್ಕಳ ಭವಿಷ್ಯಕ್ಕೆ ಮುಳುವಾಗಲಿದೆ ಎಂಬ ಸಂದೇಶ ಹೇಳುತ್ತದೆ.

ಮನೀಶ್‌ ಬಲ್ಲಾಳ್‌, ಸಹನಾಶ್ರೀ ಅವರದು ಅಚ್ಚುಕಟ್ಟಾದ ಅಭಿನಯ. ವೀರ ಸಮರ್ಥ್‌ ಸಂಗೀತ ಸಂಯೋಜನೆಯ ‘ಬೈತಾರೆ... ಬೈತಾರೆ...’ ಹಾಡು ಹಿತವಾಗಿದೆ. ಶಿರಸಿ, ಸಿದ್ದಾಪುರದ ಕಾಡಿನ ಸೊಬಗು ಜೀವನ್‌ಗೌಡ ಅವರಕ್ಯಾಮೆರಾದಲ್ಲಿ ಸೊಗಸಾಗಿ ಸೆರೆಸಿಕ್ಕಿದೆ.

  

ಪ್ರತಿಕ್ರಿಯಿಸಿ (+)