ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಯುವಕ ಅಭಿವೃದ್ಧಿಪಡಿಸಿದ ಬಹೂಪಯೋಗಿ ಡ್ರೋನ್‌

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಈ ಡ್ರೋನ್‌ ಅಡಿಕೆ ಮರದ ನೆತ್ತಿಗೆ ಹೋಗಿ ಔಷಧ ಸಿಂಪಡಿಸಬಲ್ಲದು, ರೋಗಪೀಡಿತ ತೆಂಗಿನ ಗರಿಗಳನ್ನು ಕತ್ತರಿಸಬಲ್ಲದು, 10 ರಿಂದ15 ಮಹಡಿಯ ಕಟ್ಟಡಗಳಿಗೆ ಬಣ್ಣ ಬಳಿಯುವ ಕೆಲಸವನ್ನೂ ಮಾಡಬಲ್ಲದು.

ಇಂತಹದ್ದೊಂದು ಬಹೂಪಯೋಗಿ ಡ್ರೋನ್‌ ಅಭಿವೃದ್ಧಿಪಡಿಸಿದವರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ನಿಡ್ಲೆ ಗ್ರಾಮದ ಯುವಕ ಅವಿನಾಶ್‌ ರಾವ್‌. ಇವರ ಸಾಧನೆಗೆ ಮೆಚ್ಚಿ ರಾಜ್ಯ ಐಟಿ ಮತ್ತು ಬಿಟಿ ಇಲಾಖೆ  ‘ಐಡಿಯಾ 2 ಪಿಒಸಿ (ಪ್ರೂಫ್‌ ಆಫ್‌ ಕಾನ್ಸೆಪ್ಟ್‌)’ ಅಡಿ ₹ 50 ಲಕ್ಷ ಪ್ರೋತ್ಸಾಹ ಧನ ನೀಡಿದೆ.  ಡ್ರೋನ್‌ಗೆ ನಾಲ್ಕು ಪೇಟೆಂಟ್‌ಗಳೂ ಸಿಕ್ಕಿವೆ.

ಈಸ್ಟ್‌ ಆಗ್ರೊ ರೋಬಾಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹೆಸರಿನ ನವೋದ್ಯಮ ಸ್ಥಾಪಿಸಿರುವ ಅವಿನಾಶ್‌ ರಾವ್‌ ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸೆಂಟರ್‌ ಆಫ್‌ ಎಕ್ಸಲೆನ್ಸಿ ಜತೆ ಸೇರಿ ಡ್ರೋನ್‌ ಅಭಿವೃದ್ಧಿಪಡಿಸಿದ್ದಾರೆ.

ಡ್ರೋನ್‌ ಬಗ್ಗೆ ‘ಪ್ರಜಾವಾಣಿ’ಗೆ ವಿವರ ನೀಡಿದ ಅವಿನಾಶ್‌, ‘ಅಡಿಕೆ ಕೊಳೆ ರೋಗಕ್ಕೆ ಔಷಧ ಸಿಂಪಡಿಸುವುದು ಅತ್ಯಂತ ಕಷ್ಟದ ಕೆಲಸ. ಆ ಸಮಸ್ಯೆ ನಿವಾರಿಸಲೆಂದು ಡ್ರೋನ್‌ ಅಭಿವೃದ್ಧಿಪಡಿಸುವ ಕೆಲಸಕ್ಕೆ ಕೈ ಹಾಕಿದೆ. ಮಾಮೂಲಿ ಡ್ರೋನ್‌ಗಿಂತ ವಿನ್ಯಾಸದಲ್ಲಿ ಬದಲಾವಣೆ ಮಾಡಿದೆ.

ನೆಲದಿಂದಲೇ ನಿಯಂತ್ರಣ ಮಾಡಬಹುದು. ಈಗ ಪ್ರೊಟೋ ಟೈಪ್‌ ಸಿದ್ಧವಾಗಿದ್ದು, ಅದರ ಪ್ರಾತ್ಯಕ್ಷಿಕೆಯೂ ಯಶಸ್ವಿಯಾಗಿದೆ’ ಎಂದು  ತಿಳಿಸಿದರು.

‘ತೆಂಗಿನ ಗರಿಗೆ ಬರುವ ರೋಗದ ನಿವಾರಣೆಗೆ  ಡ್ರೋನ್‌ ಮೂಲಕ ಪರಿಹಾರ ಸೂಚಿಸುವಂತೆ ಕಾಸರಗೋಡಿನಲ್ಲಿರುವ ತೆಂಗು ಅಭಿವೃದ್ಧಿ ಮಂಡಳಿ ಕೋರಿಕೆ ಸಲ್ಲಿಸಿತ್ತು. ರೋಗ ಪೀಡಿತ ಗರಿಗಳನ್ನು ಕತ್ತರಿಸುವ ಸಾಧ್ಯತೆ ಬಗ್ಗೆ ಪ್ರಯೋಗ ಯಶಸ್ವಿಯಾಗಿದೆ’ ಎಂದು ತಿಳಿಸಿದರು.

ಕೃಷಿ ಅಲ್ಲದೆ ಇತರ ಉದ್ದೇಶಗಳಿಗೆ ಬಳಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಿದ್ದು, ಪವನ ವಿದ್ಯುತ್‌ ತಯಾರಿಕೆಗೆ ಬಳಸುವ ಗಾಳಿ ಯಂತ್ರಗಳ ರೆಕ್ಕೆಗಳ ಮೇಲೆ ಕೂರುವ ದೂಳನ್ನು ಸ್ವಚ್ಛಗೊಳಿಸಲು ಉಪಯೋಗಿಸಬಹುದು ಎನ್ನುತ್ತಾರೆ ಅವಿನಾಶ್‌.

‘ಹೈವೊಲ್ಟೇಜ್‌ ವಿದ್ಯುತ್‌ ಮಾರ್ಗಗಳ   ಪರೀಕ್ಷೆ ಮತ್ತು ನಿರ್ವಹಣೆ, ಎತ್ತರದ ಕಟ್ಟಡಗಳಿಗೆ ಬಣ್ಣ ಬಳಿಯಲು ಮತ್ತು ಸೇನಾ ಉದ್ದೇಶಕ್ಕೂ  ಬಳಕೆ ಮಾಡಬಹುದು.  ಮುಂದಿನ ದಿನಗಳಲ್ಲಿ ಇದರ ಕ್ಷಮತೆ ಹೆಚ್ಚಿಸಲು ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌  ಅಳವಡಿಸಬೇಕಾಗುತ್ತದೆ’ ಎಂದು ತಿಳಿಸಿದರು.

ಈ ಡ್ರೋನ್‌ನ ಬೆಲೆ ₹ 4 ರಿಂದ 5 ಲಕ್ಷ ಆಗುತ್ತದೆ. ಯಾವುದೇ  ರೈತ ವ್ಯಕ್ತಿಗತವಾಗಿ ಡ್ರೋನ್‌ ಖರೀದಿಸಿ ಇಟ್ಟುಕೊಳ್ಳುವುದು ಕಷ್ಟ. ಬದಲಿಗೆ ಒಂದು ತಂಡವಾಗಿ ಇದನ್ನು ಖರೀದಿಸಿ ಬಳಸಬಹುದು. ಡ್ರೋನ್‌ಗೆ ಬಳಸುವ ಮೋಟಾರ್‌ ಸೇರಿದಂತೆ ಎಲ್ಲ ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆಮದು ಸುಂಕ ಶೇ 30 ಇರುವುದರಿಂದ ದುಬಾರಿ ಆಗುತ್ತಿದೆ. ಮುಂದಿನ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು  ವಿವರಿಸಿದರು.

‘ಕೃಷಿ ಅಲ್ಲದೆ ಇತರ ಕ್ಷೇತ್ರಗಳಲ್ಲೂ ಡ್ರೋನ್‌ ಬಳಕೆಯ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡುವಂತೆ ಪ್ರೇರೇಪಣೆ ನೀಡಿದವರು ಐಟಿ–ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ. ಸರ್ಕಾರ ನೀಡಿದ ₹50 ಲಕ್ಷವನ್ನು ಇದಕ್ಕಾಗಿ ಬಳಸುತ್ತೇವೆ’ ಎಂದು ಅವಿನಾಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT