ಭಾನುವಾರ, ಡಿಸೆಂಬರ್ 15, 2019
20 °C

ರಾಷ್ಟ್ರಪತಿ ಚುನಾವಣೆ ಮತದಾನಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿ ಚುನಾವಣೆ ಮತದಾನಕ್ಕೆ ಸಿದ್ಧತೆ

ಬೆಂಗಳೂರು: ‘ರಾಷ್ಟ್ರಪತಿ ಸ್ಥಾನಕ್ಕೆ ಇದೇ 17ರಂದು ನಡೆಯಲಿರುವ ಚುನಾವಣೆಗೆ ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಅಗತ್ಯ ಸಿದ್ಧತೆ ಮಾಡಲಾಗಿದೆ’ ಎಂದು ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಸ್‌. ಮೂರ್ತಿ ತಿಳಿಸಿದರು.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬ್ಯಾಲೆಟ್‌ ಪದ್ಧತಿಯಲ್ಲಿ ಮತದಾನ ನಡೆಯಲಿದೆ. ರಾಜ್ಯ ವಿಧಾನಸಭೆಯ ಚುನಾಯಿತ 224 ಸದಸ್ಯರು ಮತದಾನ ಹಕ್ಕು ಹೊಂದಿದ್ದಾರೆ. ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಆಂಗ್ಲೋ ಇಂಡಿಯನ್‌ ಸದಸ್ಯೆಗೆ ಮತ ಚಲಾಯಿಸುವ ಹಕ್ಕು ಇಲ್ಲ.

‘ಲೋಕಸಭೆ ಕಾರ್ಯದರ್ಶಿಯಿಂದ ಅನುಮತಿ ಪಡೆದ ಸಂಸದರು ಮತದಾನ ಮಾಡಲು ಅವಕಾಶ ಇದೆ. ಅಲ್ಲದೆ, ಬೇರೆ ರಾಜ್ಯಗಳ ಶಾಸಕರು, ಸಂಸದರೂ ತಮ್ಮ ಮತಪತ್ರವನ್ನು ಇಲ್ಲಿಗೆ ವರ್ಗಾಯಿಸಿಕೊಂಡು ಮತ ಚಲಾಯಿಸಬಹುದು. ಸಂಸದ ಪ್ರಕಾಶ ಹುಕ್ಕೇರಿ ರಾಜ್ಯದಲ್ಲಿ ಮತ ಚಲಾಯಿಸುವುದಾಗಿ ಮಾಹಿತಿ ನೀಡಿದ್ದಾರೆ’ ಎಂದು ಮೂರ್ತಿ ತಿಳಿಸಿದರು.

‘ಚುನಾವಣಾ ವೀಕ್ಷಕರಾಗಿ ಐಎಎಸ್‌ ಅಧಿಕಾರಿ, ದೆಹಲಿಯ ಅರುಣ್‌ ಸಿಂಘಲ್‌ ಅವರು ನೇಮಕವಾಗಿದ್ದಾರೆ. ಮತದಾನಕ್ಕೆ ನೀಲಿ ಶಾಯಿ ಪೆನ್‌ ಬಳಸಲಾಗುತ್ತದೆ. ಕೇಂದ್ರ ಚುನಾವಣಾ ಆಯೋಗವೇ ಈ ಪೆನ್‌ ಒದಗಿಸಿದೆ. ಮತದಾರರು ಮೊದಲ ಪ್ರಾಶಸ್ತ್ಯದ ಮತಕ್ಕೆ–1 ಮತ್ತು ಎರಡನೇ ಪ್ರಾಶಸ್ತ್ಯದ ಮತಕ್ಕೆ– 2 ಎಂದು ನಮೂದಿಸಬೇಕು. ಒಂದೊಮ್ಮೆ ಎರಡನೇ ಪ್ರಾಶಸ್ತ್ಯದ ಮತ– 2 ಎಂದು ಮಾತ್ರ ಬರೆದರೆ ಅದು ಅಸಿಂಧು ಆಗಲಿದೆ’ ಎಂದರು.

‘ಚುನಾವಣಾ ಕಣದಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಮೀರಾ ಕುಮಾರ್‌ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿ ರಾಮನಾಥ್‌ ಕೋವಿಂದ್‌ ಇದ್ದಾರೆ. ಅಭ್ಯರ್ಥಿಗಳ ಸಹಿ ಹೊಂದಿದ ಪತ್ರ ಇರುವ ಏಜೆಂಟರಿಗೆ ಮಾತ್ರ ಮತದಾನ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತದೆ. ಆದರೆ, ಈವರೆಗೂ ಯಾರೂ ಈ ಬಗ್ಗೆ ನನ್ನನ್ನು ಸಂಪರ್ಕಿಸಿಲ್ಲ’ ಎಂದರು.

‘ಮತದಾನ ಮುಗಿದ ಬಳಿಕ ಮತಪೆಟ್ಟಿಗೆಯನ್ನು ಅದೇ ದಿನ ವಿಮಾನದ ಮೂಲಕ ನಾನು ಮತ್ತು ಚುನಾವಣಾ ವೀಕ್ಷಕರು ದೆಹಲಿಗೆ ಕೊಂಡೊಯ್ದು ಲೋಕಸಭೆ ಕಾರ್ಯದರ್ಶಿಗೆ ಹಸ್ತಾಂತರಿಸುತ್ತೇವೆ. ಮತಪೆಟ್ಟಿಗೆಗೆಂದೇ ಪ್ರತ್ಯೇಕ ಆಸನ ಕಾಯ್ದಿರಿಸಲಾಗಿದೆ’ ಎಂದೂ ಅವರು ಹೇಳಿದರು.

ಪ್ರತಿಕ್ರಿಯಿಸಿ (+)