ಶುಕ್ರವಾರ, ಡಿಸೆಂಬರ್ 6, 2019
17 °C

ರಾಷ್ಟ್ರಪತಿ ಚುನಾವಣೆ: ಬೆಂಬಲ ನೀಡಿದ ಉದ್ಧವ್‌ಗೆ ಕೋವಿಂದ್ ಧನ್ಯವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿ ಚುನಾವಣೆ: ಬೆಂಬಲ ನೀಡಿದ ಉದ್ಧವ್‌ಗೆ ಕೋವಿಂದ್ ಧನ್ಯವಾದ

ಮುಂಬೈ: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾದ ರಾಮನಾಥ ಕೋವಿಂದ್ ಅವರು, ತಮಗೆ ಬೆಂಬಲ ನೀಡಿದ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ಶನಿವಾರ ದೂರವಾಣಿ ಕರೆ ಮಾಡಿ ಧನ್ಯವಾದ ತಿಳಿಸಿದ್ದಾರೆ.

ಶಾಸಕ ಮತ್ತು ಸಂಸದರನ್ನು ಭೇಟಿ ಮಾಡಲೆಂದು ಮುಂಬೈಗೆ ಬಂದಿರುವ ಕೋವಿಂದ್ ಅವರು ಠಾಕ್ರೆ ಜೊತೆ ಮಾತನಾಡಿದ್ದಾರೆ. ಮುಂಬೈ ಭೇಟಿ ವೇಳೆ ಕೋವಿಂದ್ ಅವರು ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ಗೆ ಭೇಟಿ ನೀಡುತ್ತಾರೆಯೇ ಇಲ್ಲವೇ ಎಂಬ ಗೊಂದಲಕ್ಕೆ ಅವರು ತೆರೆ ಎಳೆದಿದ್ದಾರೆ.

ಕೋವಿಂದ್ ಅವರ ನಡೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಶ್ಲಾಘಿಸಿದ್ದಾರೆ.

‘ಉದ್ಧವ್ ಅವರು ಈಗಾಗಲೇ ಕೋವಿಂದ್ ಅವರಿಗೆ ಬೆಂಬಲ ಘೋಷಿಸಿದ್ದಾರೆ’ ಎಂದು ಪರಿಸರ ಸಚಿವ ರಾಮದಾಸ್ ಕದಮ್ ಹೇಳಿದರು.

‘ಕೋವಿಂದ್ ಅವರು ನನಗೆ ಕರೆ ಮಾಡಿದ್ದರು. ಅವರಿಗೆ ಶುಭಾಶಯ ತಿಳಿಸಿದ್ದೇನೆ’ ಎಂದು ಉದ್ಧವ್ ಠಾಕ್ರೆ ಅವರು ಸುದ್ದಿಗಾರರಿಗೆ ತಿಳಿಸಿದರು.

ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೋವಿಂದ್ ಅವರನ್ನು ಮುಖ್ಯಮಂತ್ರಿ ಫಡಣವೀಸ್, ರಾಜ್ಯ ಬಿಜೆಪಿ ಮುಖ್ಯಸ್ಥ ರಾವ್‌ಸಾಹೇಬ್ ಪಾಟಿಲ್ ದಾನ್ವೆ, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ವಾಗತಿಸಿದರು. ಶಿವಸೇನಾ ವತಿಯಿಂದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಅನಂತ್ ಗೀತೆ, ಮಹಾರಾಷ್ಟ್ರ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ಮತ್ತು ಹಿರಿಯ ಸಂಸದ ಚಂದ್ರಕಾಂತ್ ಖೈರೆ ಇದ್ದರು.

ಪ್ರತಿಕ್ರಿಯಿಸಿ (+)