ಶನಿವಾರ, ಡಿಸೆಂಬರ್ 7, 2019
24 °C

ಚೀನಾ ಗಡಿ ಬಿಕ್ಕಟ್ಟು: ರಾಜತಾಂತ್ರಿಕ ಉಪಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಚೀನಾ ಗಡಿ ಬಿಕ್ಕಟ್ಟು: ರಾಜತಾಂತ್ರಿಕ ಉಪಾಯ

ನವದೆಹಲಿ : ಸಿಕ್ಕಿಂ ವಲಯದ ಗಡಿಭಾಗದಲ್ಲಿ ಚೀನಾದೊಂದಿಗೆ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸರ್ಕಾರದ  ಹಿರಿಯ ಸಚಿವರಾದ ಸುಷ್ಮಾ ಸ್ವರಾಜ್‌ ಮತ್ತು ಅರುಣ್‌ ಜೇಟ್ಲಿ ಅವರು ಶನಿವಾರವೂ ಇನ್ನಷ್ಟು ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸಿದರು.

ಎರಡೂ ರಾಷ್ಟ್ರಗಳ ನಡುವಣ ಉದ್ವಿಗ್ನತೆ ಶಮನಗೊಳಿಸಲು ಸರ್ಕಾರ ಎಲ್ಲ ರಾಜತಾಂತ್ರಿಕ ಮಾರ್ಗಗಳನ್ನು ಬಳಸಲಿದೆ ಎಂದು ಇಬ್ಬರೂ ಸಚಿವರು ವಿರೋಧ ಪಕ್ಷಗಳ ಮುಖಂಡರಿಗೆ ತಿಳಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ, ಅಕಾಲಿ ದಳದ ನರೇಶ್‌ ಗುಜ್ರಾಲ್‌ ಮತ್ತು ಆರ್‌ಎಸ್‌ಪಿಯ ಎನ್‌.ಕೆ. ಪ್ರೇಮಚಂದ್ರನ್‌ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ದೊಕಲಾದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಚೀನಾ ಆಡಳಿತದೊಂದಿಗೆ ಮಾತುಕತೆ ನಡೆಸಲು ಸರ್ಕಾರ ಮುಂದಾಗಬೇಕು ಎಂಬ ಒಮ್ಮತಾಭಿಪ್ರಾಯವನ್ನು ಸರ್ಕಾರದ ಮುಂದಿಡಲಾಯಿತು ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಹೇಳಿದರು.

‘ಚೀನಾದೊಂದಿಗೆ ನಿರ್ಮಾಣವಾಗಿರುವ ಸಂಘರ್ಷ ಸ್ಥಿತಿಯನ್ನು ಕೊನೆಗಾಣಿಸಲು ಎಲ್ಲ ರಾಜತಾಂತ್ರಿಕ ಹಾಗೂ ಇತರ ಮಾರ್ಗಗಳನ್ನು ಅನುಸರಿಸಬೇಕು ಎಂದು ಸರ್ಕಾರಕ್ಕೆ ತಿಳಿಸಿದ್ದೇವೆ’ ಎಂದು ಡಿ. ರಾಜಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಶ್ಮೀರ ವಿಚಾರವೂ ಚರ್ಚೆಗೆ:  ಈ ಸಂದರ್ಭದಲ್ಲಿ ವಿದೇಶಾಂಗಕಾರ್ಯದರ್ಶಿ ಎಸ್‌. ಜೈಶಂಕರ್‌ ಮತ್ತು ಗೃಹ ಇಲಾಖೆಯ ಪ್ರಭಾರ ಕಾರ್ಯದರ್ಶಿ ರಾಜೀವ್‌ ಗೌಬಾ ಅವರು ಕಾಶ್ಮೀರದ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಿದರು. ಆ ಬಳಿಕ ಮುಖಂಡರು ಈ ವಿಚಾರದ ಬಗ್ಗೆಯೂ ಚರ್ಚೆ ನಡೆಸಿದರು.

ಭೂತಾನ್‌ ಜೊತೆ ರಾಜತಾಂತ್ರಿಕ ಸಂಬಂಧಕ್ಕೆ ಚೀನಾ ಆಸಕ್ತಿ

ನವದೆಹಲಿ:  ಭೂತಾನ್‌ ರಾಷ್ಟ್ರದೊಂದಿಗೆ ರಾಜತಾಂತ್ರಿಕ ಸಂಬಂಧ ಬೆಳೆಸಲು ಚೀನಾ ಆಸಕ್ತಿ ತೋರಿದೆ. ರಾಜಧಾನಿ ಥಿಂಪುವಿನಲ್ಲಿ ರಾಯಭಾರಿ ಕಚೇರಿಯನ್ನು ತೆರೆಯಲು ಅವಕಾಶ ಕೊಟ್ಟಲ್ಲಿ  ಭೂತಾನ್‌ನ ಉತ್ತರ ಭಾಗದಲ್ಲಿ ತನ್ನದೆಂದು ಹೇಳಿಕೊಂಡ ಭೂಭಾಗಗಳನ್ನು ಅದಕ್ಕೆ ಬಿಟ್ಟುಕೊಡಲು ಸಿದ್ಧ ಎಂದು ಚೀನಾ ಹೇಳಿದೆ.

ಚೀನಾ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ರಾಷ್ಟ್ರಗಳ ಜೊತೆಗೂ ಭೂತಾನ್‌, ರಾಜತಾಂತ್ರಿಕ ಸಂಬಂಧ ಹೊಂದಿಲ್ಲ.

ಸಿಕ್ಕಿಂ ವಲಯದ ದೊಕಲಾದಲ್ಲಿ  ಚೀನಾ ಸೇನೆಯು ರಸ್ತೆ ನಿರ್ಮಾಣ ಕಾರ್ಯ ಆರಂಭಿಸುವುದಕ್ಕೂ ಮೊದಲೇ ಭೂತಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಬೆಳೆಸಲು ಅದು ಪ್ರಯತ್ನ ಆರಂಭಿಸಿದೆ.

ಭಾರತಕ್ಕೆ ಚೀನಾದ ರಾಯಭಾರಿ ಆಗಿರುವ ಲುವೊ ಜೌಹುಯಿ ಅವರು ಜನವರಿಯಲ್ಲಿ ಥಿಂಪುವಿಗೆ ಭೇಟಿ ಕೊಟ್ಟು ಅಲ್ಲಿನ ರಾಜ ಜಿಗ್ಮೆ ಸಿಂಘ್ಯೆ ವಾಂಗ್‌ಚುಕ್‌ ಮತ್ತು ಪ್ರಧಾನಿ ತ್ಶೆರಿಂಗ್‌ ಟೊಬ್‌ಗೇ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಮಧ್ಯೆ, ಥಿಂಪುವಿನಲ್ಲಿ ರಾಯಭಾರಿ ಕಚೇರಿ ತೆರೆಯುವ ಚೀನಾದ ಯತ್ನದ ಬಗ್ಗೆ ಭಾರತಕ್ಕೆ ಅರಿವಿದ್ದು, ಬೆಳವಣಿಗೆಗಳನ್ನು ಕೂಲಂಕಷವಾಗಿ ಗಮನಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)