ಸೋಮವಾರ, ಡಿಸೆಂಬರ್ 9, 2019
26 °C

ಚೆಸ್‌ ಆಟಗಾರ ರಘು ನಂದನ್‌ಗೆ ₹ 40 ಲಕ್ಷ

Published:
Updated:
ಚೆಸ್‌ ಆಟಗಾರ ರಘು ನಂದನ್‌ಗೆ ₹ 40 ಲಕ್ಷ

ಮೈಸೂರು: ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ಸೇರಿದ್ದ ಕ್ರೀಡಾಪಟುಗಳ ಮನದಲ್ಲಿ ಖುಷಿಯ ಗೂಡು ಕಟ್ಟಿತ್ತು. ರಾಜ್ಯ ಸರ್ಕಾರ ತಮ್ಮ ಸಾಧನೆಯನ್ನು ಗುರುತಿಸಿದೆಯೆಂಬ ಸಂಭ್ರಮ ಅವರದ್ದು. ಏಕೆಂದರೆ ಅವರಿಗೆಲ್ಲಾ ಕ್ರೀಡಾ ಇಲಾಖೆ ವತಿಯಿಂದ ನಗದು ಬಹುಮಾನ ಲಭಿಸಿತು.

2013–14ನೇ ಸಾಲಿನಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ 301 ಸಾಧಕ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಟ್ಟು ₹ 5 ಕೋಟಿ ಬಹುಮಾನ ವಿತರಿಸಿದರು.

ಹೆಚ್ಚು ಮೊತ್ತ ಪಡೆದಿದ್ದು ಚೆಸ್‌ ಆಟಗಾರ ಡಿ.ಎಸ್‌.ರಘುನಂದನ್‌ (₹ 40 ಲಕ್ಷ). ಅವರು ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ, ಏಷ್ಯನ್‌ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ವಿವಿಧ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿರುವ 60 ಅಂಗವಿಕಲ ಕ್ರೀಡಾಪಟುಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಮೊಯಿನ್‌ ಜುನೈದಿ (₹ 10 ಲಕ್ಷ), ತುಳಸೀಧರ್‌ (₹ 6 ಲಕ್ಷ), ಸಿ.ಮಂಜುನಾಥ್‌ (₹ 4 ಲಕ್ಷ), ಕುಮಾರಸ್ವಾಮಿ (₹ 2.7 ಲಕ್ಷ) ನಗದು ಬಹುಮಾನ ಪಡೆದ ಪ್ರಮುಖರು.

‘ಕ್ರೀಡಾ ಇಲಾಖೆಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲು ನಾನು ಸಿದ್ಧ. ಆದರೆ, ಉತ್ತಮ ಸಾಧನೆ ಮಾಡಿ ತೋರಿಸುವುದು ಇಲಾಖೆ ಹಾಗೂ ಅಥ್ಲೀಟ್‌ಗಳ ಜವಾಬ್ದಾರಿ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ ₹ 5 ಕೋಟಿ ಹಾಗೂ ‘ಎ’ ದರ್ಜೆಯ ಹುದ್ದೆ, ಕಾಮನ್‌ವೆಲ್ತ್‌, ಏಷ್ಯನ್‌ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದರೆ ‘ಬಿ’ ದರ್ಜೆ ಹುದ್ದೆ ನೀಡಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದರು.

ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ‘2014–15ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಸದ್ಯದಲ್ಲೇ ₹ 4.1 ಕೋಟಿ ನಗದು ಬಹು ಮಾನ ವಿತರಿಸಲಾಗುವುದು. ಈಗಾಗಲೇ ಕೋಚ್‌ಗಳ ವೇತನ ಹೆಚ್ಚಿಸಲಾಗಿದೆ. ಅಲ್ಲದೆ, 100 ಕೋಚ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಮೈಸೂರು ಜಿಲ್ಲೆಗೆ ₹ 15 ಕೋಟಿ ವೆಚ್ಚದಲ್ಲಿ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದರು.

ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ರೋಷನ್‌ ಅಲಿ, ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್‌ ಅಗರವಾಲ್‌, ಉಪ ನಿರ್ದೇಶಕ ಜಿತೇಂದ್ರ ಶೆಟ್ಟಿ, ಸಹಾಯಕ ನಿರ್ದೇಶಕ ಕೆ.ಸುರೇಶ್‌ ಇದ್ದರು.

ಪ್ರತಿಕ್ರಿಯಿಸಿ (+)