ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕರ ಘಟ್ಟಕ್ಕೆ ಮಿಥಾಲಿ ಬಳಗ

ಮಿಥಾಲಿ ಶತಕದ ಮಿಂಚು; ಕರ್ನಾಟಕದ ರಾಜೇಶ್ವರಿ ಕೈಚಳಕ; ವೇದಾ ಅಬ್ಬರದ ಬ್ಯಾಟಿಂಗ್
Last Updated 15 ಜುಲೈ 2017, 19:42 IST
ಅಕ್ಷರ ಗಾತ್ರ

ಡರ್ಬಿ: ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌ (15ಕ್ಕೆ5) ಅವರ ಮಿಂಚಿನ ದಾಳಿಗೆ ನ್ಯೂಜಿಲೆಂಡ್ ಬ್ಯಾಟ್ಸ್‌ವುಮನ್‌ಗಳು ತರಗೆಲೆಗಳಂತೆ ಉದುರಿದರು.

ಸೆಮಿಫೈನಲ್‌ ಹಾದಿಯಲ್ಲಿ ಗೆಲ್ಲಲೇಬೇಕಾಗಿದ್ದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ಪಡೆಯನ್ನು ಕೇವಲ 79 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಇದರಿಂದಾಗಿ ಭಾರತ ವನಿತೆಯರ ತಂಡ 186 ರನ್‌ಗಳ ಅಮೋಘ ಗೆಲುವಿನೊಂದಿಗೆ ಸೆಮಿಫೈನಲ್ ಕನಸು ನನಸು ಮಾಡಿಕೊಂಡಿದೆ.

ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಭಾರತ ತಂಡಕ್ಕೆ ಶನಿವಾರ ಕರ್ನಾಟಕದ ಆಟಗಾರ್ತಿಯರು ನೆರವಾದರು.

ಈ ಬಾರಿಯ ವಿಶ್ವಕಪ್‌ನ ಹಿಂದಿನ ಆರು ಪಂದ್ಯಗಳಲ್ಲಿಯೂ ಬೆಂಚ್ ಕಾದಿದ್ದ ರಾಜೇಶ್ವರಿ ಸಿಕ್ಕ ಮೊದಲ ಅವಕಾಶದಲ್ಲಿಯೇ ಕೇವಲ 15 ರನ್‌ಗಳಿಗೆ 5 ವಿಕೆಟ್ ಕಬಳಿಸಿದರು. ಬ್ಯಾಟ್ಸ್‌ವುಮನ್ ವೇದಾ ಕೃಷ್ಣಮೂರ್ತಿ ವೇಗವಾಗಿ ಅರ್ಧಶತಕ ದಾಖಲಿಸಿ ಮಿಂಚಿದರು.

ಮೊದಲು ಬ್ಯಾಟ್ ಮಾಡಿದ ಭಾರತ  ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 256 ರನ್ ಕಲೆಹಾಕಿತು. ಸವಾಲಿನ ಮೊತ್ತ ಬೆನ್ನಟ್ಟಿದ ಸೂಜಿ ಬೇಟ್ಸ್‌ ಪಡೆ ಆರಂಭದಲ್ಲಿಯೇ ಒತ್ತಡಕ್ಕೆ ಒಳಗಾಯಿತು.

‌ನಾಯಕಿ ಬೇಟ್ಸ್‌ ಕೇವಲ ಒಂದು ರನ್ ದಾಖಲಿಸಿದ್ದ ವೇಳೆ ಶಿಖಾ ಪಾಂಡೆ ಬೌಲಿಂಗ್‌ನಲ್ಲಿ ವೇದಾ ಕೃಷ್ಣಮೂರ್ತಿಗೆ ಕ್ಯಾಚ್‌ ನೀಡಿದರು. ರಚೆಲ್ ಪ್ರೀಸ್ಟ್‌ಗೆ (5) ಭಾರತದ ಅನುಭವಿ ಬೌಲರ್‌ ಜೂಲನ್ ಗೋಸ್ವಾಮಿ ಪೆವಿಲಿಯನ್ ಹಾದಿ ತೋರಿದರು.

ಆ್ಯಮಿ ಸತರ್ಥ್‌ವೇಟ್‌ (26) ನ್ಯೂಜಿಲೆಂಡ್ ತಂಡದ ಬ್ಯಾಟ್ಸ್‌ವುಮನ್‌ಗಳಲ್ಲಿ ಹೆಚ್ಚು ರನ್ ಕಲೆಹಾಕಿದ ಆಟಗಾರ್ತಿ ಎನಿಸಿದರು. ಇವರ ವಿಕೆಟ್‌ ರಾಜೇಶ್ವರಿ ಪಡೆದುಕೊಂಡರು.

27ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ ನಂತರ ಚೇತರಿಸಿಕೊಳ್ಳಲಿಲ್ಲ. ಕೆಳಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳು ರಾಜೇಶ್ವರಿ ಗಾಯಕವಾಡ್ ಅವರ ಕರಾರುವಕ್ಕಾದ ಬೌಲಿಂಗ್ ದಾಳಿಗೆ ನಲುಗಿದರು.

ಮಿಥಾಲಿ–ವೇದಾ ಮಿಂಚು: ಭಾರತದ ಆರಂಭಿಕ ಆಟಗಾರ್ತಿಯರ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು.

ಸ್ಮೃತಿ ಮಂದಾನ (13), ಪೂನಮ್ ರಾವುತ್‌ (4) ಮಹತ್ವದ ಪಂದ್ಯದಲ್ಲಿ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು.

ಕೇವಲ 21 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕಿ ಮಿಥಾಲಿ ರಾಜ್‌ (109) ನೆರವಾದರು.

123 ಎಸೆತಗಳನ್ನು ಎದುರಿಸಿದ ಈ ಆಟಗಾರ್ತಿ 11 ಬೌಂಡರಿಗಳನ್ನು ಸಿಡಿಸಿದರು. ಇವರ ತಾಳ್ಮೆಯ ಆಟದಿಂದ ಭಾರತ 200ರ ಗಡಿ ದಾಟಿತು. ಹರ್ಮನ್‌ಪ್ರೀತ್ ಕೌರ್ (60) ಉತ್ತಮ ಬೆಂಬಲ ನೀಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ 132 ರನ್‌ ಗಳಿಸಿತು.

ಸಿಕ್ಕ ಅವಕಾಶ ಬಳಸಿಕೊಳ್ಳದೇ ಸತತ ವಿಫಲರಾಗಿದ್ದ ರಾಜ್ಯದ ಬಲಗೈ ಬ್ಯಾಟ್ಸ್‌ವುಮನ್ ವೇದಾ ಕೃಷ್ಣಮೂರ್ತಿ (70) ತಮ್ಮ ಎಂದಿನ ಲಯಕ್ಕೆ ಮರಳಿದ ಸೂಚನೆ ನೀಡಿದರು.

45 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್‌ ಸಿಡಿಸುವ ಮೂಲಕ ಭಾರತದ ರನ್‌ ವೇಗ ಹೆಚ್ಚಿಸಿದರು.

ಕೊನೆಯ ಓವರ್‌ಗಳಲ್ಲಿ ರನ್‌ ದಾಖಲಿಸುವ ದಾವಂತದಲ್ಲಿ  ಮೂವರು ಆಟಗಾರ್ತಿಯರು ವಿಕೆಟ್ ಒಪ್ಪಿಸಿದರು.

ಲೀ ಕ್ಯಾಸ್ಪರೆಕ್ 45ರನ್‌ಗಳಿಗೆ 3 ವಿಕೆಟ್ ಕಬಳಿಸಿದರು. ಅಲ್ಲದೇ ಮೂರು ಮೇಡನ್ ಓವರ್‌ಗಳನ್ನು ನೀಡಿದರು.

**

ನನ್ನ ಶತಕಕ್ಕಿಂತ ಹರ್ಮನ್‌ಪ್ರೀತ್ ಕೌರ್ ಹಾಗೂ ವೇದಾ ಕೃಷ್ಣಮೂರ್ತಿ ಅವರ ಅರ್ಧಶತಕ ಉತ್ತಮ ಮೊತ್ತ ದಾಖಲಿಸಲು ಭಾರತ ತಂಡಕ್ಕೆ ನೆರವಾಯಿತು
-ಮಿಥಾಲಿ ರಾಜ್‌

**

‘ಆರು ಪಂದ್ಯಗಳಲ್ಲಿ ನಾನು ಹೊರಗೆ ಉಳಿದಿದ್ದೆ. ಇದಕ್ಕೆ ಬೇಸರ ಇಲ್ಲ. ಭಾರತ ಎಲ್ಲಾ ಪಂದ್ಯಗಳಲ್ಲಿಯೂ ಉತ್ತಮವಾಗಿಯೇ ಆಡಿದೆ. ಸಿಕ್ಕ ಅವಕಾಶವನ್ನು ನಾನು ಬಳಸಿಕೊಂಡಿದ್ದೇನೆ’
-ರಾಜೇಶ್ವರಿ ಗಾಯಕವಾಡ್‌

**

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ  7 ವಿಕೆಟ್‌ಗೆ 265 (ಮಿಥಾಲಿ ರಾಜ್‌ 109, ಹರ್ಮನ್‌ಪ್ರೀತ್ ಕೌರ್‌ 60, ವೇದಾ ಕೃಷ್ಣಮೂರ್ತಿ 70; ಹನ್ನಾ ರೊ 30ಕ್ಕೆ2).
ನ್ಯೂಜಿಲೆಂಡ್‌: 25.3 ಓವರ್‌ಗಳಲ್ಲಿ 79 (ಆಮಿ ಸತರ್ಥ್‌ವೇಟ್‌ 26, ಕೆಟೆ ಮಾರ್ಟಿನ್ 12; ರಾಜೇಶ್ವರಿ ಗಾಯಕವಾಡ್‌ 15ಕ್ಕೆ5)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT