ಭಾನುವಾರ, ಡಿಸೆಂಬರ್ 15, 2019
18 °C

ರಾಹುಲ್‌ ದ್ರಾವಿಡ್‌, ಜಹೀರ್‌ ಸ್ಥಾನ ಅನಿಶ್ಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಹುಲ್‌ ದ್ರಾವಿಡ್‌, ಜಹೀರ್‌ ಸ್ಥಾನ ಅನಿಶ್ಚಿತ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಸಲಹೆಗಾರರಾಗಿ ನೇಮಕಗೊಂಡ ನಾಲ್ಕು ದಿನಗಳು ಕಳೆದರೂ ರಾಹುಲ್ ದ್ರಾವಿಡ್‌ ಮತ್ತು ಜಹೀರ್ ಖಾನ್‌ ಅವರ ನೇಮಕಾತಿ ಕುರಿತ ಅನಿಶ್ಚಿತ ಸ್ಥಿತಿ ಮುಂದುವರಿದಿದೆ.

ಶನಿವಾರ ಇಲ್ಲಿ ನಡೆದ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ ಮತ್ತು ಸಿಇಒ ಅವರ ಸಭೆಯಲ್ಲಿ ಮುಖ್ಯ ಕೋಚ್ ರವಿಶಾಸ್ತ್ರಿ ನೇಮಕಾತಿಯನ್ನು ಮಾನ್ಯ ಮಾಡಲಾಯಿತು. ಆದರೆ ದ್ರಾವಿಡ್‌, ಜಹೀರ್ ಖಾನ್‌ ಅವರ ನೇಮಕಾತಿಯ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಸೌರವ್ ಗಂಗೂಲಿ, ಸಚಿನ್‌ ತೆಂಡೂಲ್ಕರ್‌ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಜುಲೈ 11ರಂದು ಭಾರತ ತಂಡಕ್ಕೆ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಮತ್ತು ವಿದೇಶದಲ್ಲಿ ನಡೆಯುವ ಪಂದ್ಯಗಳಿಗೆ ಬ್ಯಾಟಿಂಗ್ ಸಲಹೆಗಾರರಾಗಿ ರಾಹುಲ್‌ ದ್ರಾವಿಡ್‌ ಹಾಗೂ ಬೌಲಿಂಗ್ ಸಲಹೆಗಾರರಾಗಿ ಜಹೀರ್ ಖಾನ್ ಅವರ ಹೆಸರನ್ನು ಅಂತಿಮಗೊಳಿಸಿತ್ತು.

ಶನಿವಾರ ನಡೆದ ಸಭೆಯಲ್ಲಿ ಸಿಒಎ ಸದಸ್ಯರಾದ ವಿನೋದ್‌ ರಾಯ್‌, ಡಯಾನಾ ಎಡುಲ್ಜಿ ಮತ್ತು ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಪಾಲ್ಗೊಂಡಿದ್ದರು. ‘ರವಿಶಾಸ್ತ್ರಿ ಅವರ ನೇಮಕವನ್ನು ಸಭೆಯಲ್ಲಿ ಮಾನ್ಯ ಮಾಡಲಾಯಿತು. ಸಲಹೆಗಾರರ ವಿಷಯದಲ್ಲಿ ಜುಲೈ 22ರ ಒಳಗೆ ನಿರ್ಧಾರ ಕೈಗೊಳ್ಳಲಾಗುವುದು. ಇದಕ್ಕೂ ಮುನ್ನ ರವಿಶಾಸ್ತ್ರಿ ಅವರ ಜೊತೆ ಚರ್ಚೆ ನಡೆಯಲಿದೆ’ ಎಂದು ಬಿಸಿಸಿಐ ತಿಳಿಸಿದೆ.

ರವಿಶಾಸ್ತ್ರಿ ಸಂಭಾವನೆ ನಿಗದಿಗೆ ಸಮಿತಿ ನೇಮಕ: ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ತಂಡದ ನೆರವು ಸಿಬ್ಬಂದಿಯ ಸಂಭಾವನೆ ಕುರಿತು ನಿರ್ಧಾರ ಕೈಗೊಳ್ಳಲು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಮತ್ತು ಸಿಇಒ ರಾಹುಲ್ ಜೊಹ್ರಿ ಸೇರಿದಂತೆ ನಾಲ್ಕು ಮಂದಿಯ ಸಮಿತಿಯನ್ನು ಆಡಳಿತಾಧಿಕಾರಿಗಳ ಸಮಿತಿ ನೇಮಕ ಮಾಡಿದೆ.

ಈ ಸಮಿತಿಯವರು 19ರಂದು ಸಭೆ ಸೇರಿ ನಿರ್ಧಾರ ಕೈಗೊಳ್ಳಲಿದ್ದಾರೆ.  22ರಂದು ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿಗೆ (ಸಿಒಎ)  ವರದಿ ಸಲ್ಲಿಸಲಿದ್ದಾರೆ.

ಪ್ರತಿಕ್ರಿಯಿಸಿ (+)