ಶುಕ್ರವಾರ, ಡಿಸೆಂಬರ್ 13, 2019
17 °C

ಮುಗುರುಜಾಗೆ ಮುಡಿಗೆ ವಿಂಬಲ್ಡನ್ ಕಿರೀಟ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮುಗುರುಜಾಗೆ ಮುಡಿಗೆ ವಿಂಬಲ್ಡನ್ ಕಿರೀಟ

ಲಂಡನ್‌: ಆರನೇ ವಿಂಬಲ್ಡನ್ ಪ್ರಶಸ್ತಿಯ ಕನಸು ಹೊತ್ತು ಬಂದಿದ್ದ ಅಮೆರಿಕದ ವೀನಸ್ ವಿಲಿಯಮ್ಸ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ಗಾರ್ಬೈನ್ ಮುಗುರುಜಾ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು.

ಇಲ್ಲಿ ಶನಿವಾರ ರಾತ್ರಿ ನಡೆದ ಮಹಿಳಾ ವಿಭಾಗದ ಅಂತಿಮ ಹಣಾಹಣಿಯಲ್ಲಿ ಮುಗುರುಜಾ 7–5 ಮತ್ತು 6–0ಯಿಂದ ಗೆದ್ದು ಬೀಗಿದರು.

ಸೆಂಟರ್‌ ಕೋರ್ಟ್‌ನಲ್ಲಿ ಮೊದಲ ಬಾರಿ ನಡೆದ ಮಹಿಳೆಯರ ಫೈನಲ್‌ ಪಂದ್ಯದ ಮೊದಲ ಸೆಟ್‌ನಲ್ಲಿ ಇಬ್ಬರೂ ಉನ್ನತ ಮಟ್ಟದ ಆಟ ಪ್ರದರ್ಶಿಸಿದರು.

23 ವರ್ಷದ ಮುಗುರುಜಾ ಮತ್ತು 37 ವರ್ಷದ ವೀನಸ್ ನಡುವಿನ ಪಂದ್ಯ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿತ್ತು. ಒಂದು ತಾಸು 17 ನಿಮಿಷ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಸಮಬಲದ ಹೋರಾಟ ಕಂಡು ಬಂದರೂ ಎರಡನೇ ಸೆಟ್‌ನಲ್ಲಿ ಮುಗುರುಜಾ ಏಕಪಕ್ಷೀಯ ಜಯ ಸಾಧಿಸಿದರು.

ಈ ಮೂಲಕ 2015ರ ಫೈನಲ್‌ನಲ್ಲಿ ವೀನಸ್‌ ಅವರ ಸಹೋದರಿ ಸೆರೆನಾ ವಿಲಿಯಮ್ಸ್ ಎದುರು ಅನುಭವಿಸಿದ ಸೋಲಿನ ನಿರಾಸೆಯನ್ನು ಮರೆತರು.

ಕಳೆದ ವರ್ಷ ಫ್ರೆಂಚ್‌ ಓಪನ್‌ ಟೂರ್ನಿಯ ಪ್ರಶಸ್ತಿ ಗೆದ್ದಿದ್ದ ಮುಗುರುಜಾ ಶನಿವಾರದ ಸಾಧನೆಯೊಂದಿಗೆ ವಿಂಬಲ್ಡನ್‌ ಟೂರ್ನಿಯ ಪ್ರಶಸ್ತಿ ಎತ್ತಿ ಹಿಡಿದ ಸ್ಪೇನ್‌ನ ಎರಡನೇ ಆಟಗಾರ್ತಿ ಎಂಬ ದಾಖಲೆ ತಮ್ಮದಾಗಿಸಿಕೊಂಡರು. 1994ರಲ್ಲಿ ಸ್ಪೇನ್‌ನ ಕೊಂಚಿತಾ ಮಾರ್ಟಿನೆಜ್‌ ಪ್ರಶಸ್ತಿ ಗೆದ್ದಿದ್ದರು.

‘ಎರಡು ವರ್ಷಗಳ ಹಿಂದೆ ವಿಂಬಲ್ಡನ್‌ ಫೈನಲ್‌ ಪಂದ್ಯದಲ್ಲಿ ಸೋತಾಗ ನೀನು ಮುಂದೊಂದು ದಿನ ಖಂಡಿತಾ ಗೆಲುವು ಸಾಧಿಸುತ್ತೀಯಾ ಎಂದು ಅಂದಿನ ನನ್ನ ಎದುರಾಳಿ ಸೆರೆನಾ ವಿಲಿಯಮ್ಸ್ ಹೇಳಿದ್ದರು. ಅವರು ಹೇಳಿದ ಆ ದಿನದ ಸಂಭ್ರಮ ಇಂದು ಬಂದೊದಗಿದೆ’ ಎಂದು ಮುಗುರುಜಾ ಹೇಳಿದರು.

ಮುಗುರುಜಾ ಮೂರು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿದರು. ಈ ಪೈಕಿ ಹತ್ತನೇ ಗೇಮ್‌ನ ಅತ್ಯಂತ ರೋಚಕ ಎರಡು ಸೆಟ್‌ಪಾಯಿಂಟ್‌ಗಳು ಕೂಡ ಇದ್ದವು. ಇದರಲ್ಲಿ ಮೊದಲ ಸೆಟ್‌ ಪಾಯಿಂಟ್‌ ಅತ್ಯಂತ ರೋಮಾಂಚಕವಾಗಿತ್ತು. 19 ಹೊಡೆತಗಳ ರ‍್ಯಾಲಿ ಪ್ರೇಕ್ಷಕರ ನರನಾಡಿಗಳನ್ನು ಬಿಗಿಯಾಗಿಸಿತು. ಮೂರನೇ ಬ್ರೇಕ್‌ ಪಾಯಿಂಟ್‌ನಲ್ಲಿ ಮುಗುರುಜಾ ರಕ್ಷಣೆಗೆ ಹೆಚ್ಚು ಒತ್ತು ನೀಡಿದರು. ಆದರೆ ಮುಂಗೈ ಹೊಡೆತಗಳಲ್ಲಿ ತಪ್ಪುಗಳನ್ನು ಎಸಗಿದ ವೀನಸ್‌ ಹಿನ್ನಡೆ ಅನುಭವಿಸಿದರು.

ಫೆಡರರ್‌ಗೆ ಎಂಟನೇ ಪ್ರಶಸ್ತಿಯ ಕನಸು

36ರ ಹರೆಯಕ್ಕೆ ಕಾಲಿಡಲಿರುವ ಸ್ವಿಡ್ಜರ್‌ ಲೆಂಡ್‌ನ ರೋಜರ್ ಫೆಡರರ್‌ ವಿಂಬಲ್ಡನ್‌ ಟೆನಿಸ್ ಟೂರ್ನಿಯಲ್ಲಿ ತಮ್ಮ ಎಂಟನೇ ಪ್ರಶಸ್ತಿಯ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ.

ಈಗಾಗಲೇ ಇಲ್ಲಿ ಏಳು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಫೆಡರರ್‌ ಹಾಗೂ ಮೊದಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಕ್ರೊವೇಷ್ಯಾದ ಮರಿನ್ ಸಿಲಿಕ್ ನಡುವಿನ ಹೋರಾಟಕ್ಕೆ ಭಾನುವಾರ ಇಲ್ಲಿನ ಆಲ್‌ ಇಂಗ್ಲೆಂಡ್ ಕ್ಲಬ್‌ ಹಸಿರು ಕಣದಲ್ಲಿ ವೇದಿಕೆ ಸಜ್ಜುಗೊಂಡಿದೆ.2014ರ ಅಮೆರಿಕ ಓಪನ್ ಸೆಮಿಫೈನಲ್‌ನಲ್ಲಿ ಸಿಲಿಕ್ ಅವರು ಫೆಡರರ್‌ ಮೇಲೆ ಜಯಿಸಿದ್ದರು.

**

ಮುಗುರುಜ ಪರಿಚಯ

ಜನನ: ಅಕ್ಟೋಬರ್‌ 8, 1993

ಸ್ಥಳ: ಕ್ಯಾರಕಸ್‌, ವೆನಿಜುವೆಲಾ

ಗೆದ್ದ ಗ್ರ್ಯಾನ್‌ಸ್ಲ್ಯಾಮ್‌: ಫ್ರೆಂಚ್‌ ಓಪನ್‌ (2016), ವಿಂಬಲ್ಡನ್‌ (2017).

ವೃತ್ತಿಪರ ಟೆನಿಸ್‌ಗೆ ಅಡಿ ಇಟ್ಟಿದ್ದು: 2011.

ಕೋಚ್‌: ಸ್ಯಾಮ್‌ ಸುಮಿಕ್‌.

ಇಷ್ಟದ ಕ್ರೀಡಾಪಟುಗಳು: ಸೆರೆನಾ ವಿಲಿಯಮ್ಸ್‌, ಪೀಟ್‌ ಸಾಂಪ್ರಾಸ್‌.

ಪ್ರತಿಕ್ರಿಯಿಸಿ (+)