ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಯೋಜನೆಗಳ ಸಮರ್ಪಕ ಜಾರಿ ಅವಶ್ಯ: ಬಿಂದ್ರಾ

Last Updated 15 ಜುಲೈ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೀಡಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾದರೆ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಾಕಷ್ಟು ಚಿನ್ನದ ಪದಕಗಳು ಬರುವ ಸಾಧ್ಯತೆ ಇದೆ ಎಂದು ಒಲಿಂಪಿಯನ್‌ ಅಭಿನವ್‌ ಬಿಂದ್ರಾ ಅಭಿಪ್ರಾಯಪಟ್ಟರು.

ಕ್ರೀಡಾ ಕಾನೂನು ಮತ್ತು ಯೋಜನೆಗಳ ಕೇಂದ್ರ, ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಪಾಲ್ಗೊಂಡ ಅವರು ‘ಉದ್ದೇಶಿತ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನೀತಿ ರಾಷ್ಟ್ರದಲ್ಲಿ ಕ್ರೀಡೆಯ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದರು.

‘ಒಲಿಂಪಿಕ್ಸ್‌ನಲ್ಲಿ ಗೆಲುವು ಸಾಧಿಸಲು ಯೋಜನೆಯೇ ಮುಖ್ಯ. ಕ್ರೀಡಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರು ವುದು ಸರ್ಕಾರದ ಮುಖ್ಯ ಉದ್ದೇಶ ವಾಗಬೇಕು. ಕಾಗದದಲ್ಲಿ ಸಾಕಷ್ಟು ಯೋಜನೆಗಳಿವೆ. ಆದರೆ ಅವುಗಳು ಜಾರಿಗೆ ಬಾರದೇ ಇರುವುದರಿಂದ ಸಮಸ್ಯೆಗಳು ಹಾಗೆಯೇ ಉಳಿದಿವೆ. ಈ ನಿಟ್ಟಿನಲ್ಲಿ ಉದ್ದೇಶಿತ ಕ್ರೀಡಾ ಅಭಿವೃದ್ಧಿ ನೀತಿಯ ಬಗ್ಗೆ ಹೆಚ್ಚು ಗಮನ ನೀಡಬೇಕಾಗಿದೆ’ ಎಂದು  ಹೇಳಿದರು.

ಅಂತರರಾಷ್ಟ್ರೀಯ ಶೂಟರ್‌ ಹೀನಾ ಸಿಧು ಮತ್ತು ಕೋಚ್‌ ಪವೆಲ್ ಸಿರ್ನೊವ್‌ ನಡುವಿನ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿದ ಬಿಂದ್ರಾ ‘ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಕೋಚ್‌ ಮತ್ತು ಕ್ರೀಡಾಪಟುಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಪರಿಸ್ಥಿತಿ ನಿಭಾಯಿಸುವುದು ಭಾರಿ ಕಷ್ಟ’ ಎಂದು ಅಭಿಪ್ರಾಯಪಟ್ಟರು.

‘ಸಮರ್ಥ ಕೋಚ್‌ಗಳನ್ನು ಗುರುತು ಹಚ್ಚುವುದಕ್ಕೂ ಗಮನ ನೀಡಬೇಕು. ಸಾಮಾನ್ಯವಾಗಿ ಒಲಿಂಪಿಕ್ಸ್‌ ಮುಗಿದು ಆರು ತಿಂಗಳ ನಂತರ ಭಾರತದಲ್ಲಿ ಕೋಚ್‌ಗಳ ಹುಡುಕಾಟ ನಡೆಯುತ್ತದೆ. ಅಷ್ಟರಲ್ಲಿ ಅಂತರರಾಷ್ಟ್ರೀಯ ಮಟ್ಟದ ಕೋಚ್‌ಗಳನ್ನು ಬೇರೆ ದೇಶದವರು ತಮ್ಮಲ್ಲಿಗೆ ಕರೆಸಿಕೊಂಡಿರುತ್ತಾರೆ. ಉಳಿದವರು ನಮಗೆ ಸಿಗುತ್ತಾರೆ’ ಎಂದು ಅವರು ಹೇಳಿದರು.

ಕ್ರೀಡಾಪಟುಗಳಿಗೆ ಸಹಾಯವಾಣಿ ಸ್ಥಾಪಿಸಿ: ವಿದೇಶದಲ್ಲಿ ನಡೆಯುವ ಕ್ರೀಡಾಕೂಟಗಳಿಗೆ ತೆರಳುವ ಅಥ್ಲೀಟ್‌ ಗಳಿಗಾಗಿ ಸಹಾಯವಾಣಿ ಸ್ಥಾಪಿಸಬೇಕು ಎಂದು ಅಭಿನವ್ ಬಿಂದ್ರಾ ಕೇಂದ್ರದ ಕ್ರೀಡಾ ಇಲಾಖೆಯನ್ನು ಆಗ್ರಹಿಸಿದ್ದಾರೆ.  ಸರಿಯಾದ ಸಮಯದಲ್ಲಿ ನೆರವು ಸಿಗದ ಕಾರಣ ಪ್ಯಾರಾ ಈಜುಗಾರ್ತಿ ಕಾಂಚನಮಾಲಾ ಪಾಂಡೆ ಇತ್ತೀಚೆಗೆ ತೊಂದರೆ ಅನುಭಿಸಿದ್ದ ಕಾರಣ ಅವರು ಈ ಒತ್ತಾಯ ಮಾಡಿದ್ದಾರೆ.   ಬರ್ಲಿನ್‌ ನಲ್ಲಿ ನಡೆದ ಈಜು ಚಾಂಪಿ ಯನ್‌ಷಿಪ್‌ಗೆ ತೆರಳಲು ಸಜ್ಜಾಗಿದ್ದ ಪಾಂಡೆ ಅವರಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಬಿಡುಗಡೆ ಮಾಡಿದ್ದ ಸಹಾಯ ಧನದ ಮೊತ್ತ ಸರಿಯಾದ ಸಮಯದಲ್ಲಿ ಕೈಸೇರಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT