ಭಾನುವಾರ, ಡಿಸೆಂಬರ್ 8, 2019
21 °C
ಪಾನಮತ್ತ ಪೊಲೀಸ್‌ ರಂಪಾಟ

ಭದ್ರತಾ ಸಿಬ್ಬಂದಿಗೆ ಒದ್ದ ಹೆಡ್‌ಕಾನ್‌ಸ್ಟೆಬಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರತಾ ಸಿಬ್ಬಂದಿಗೆ ಒದ್ದ ಹೆಡ್‌ಕಾನ್‌ಸ್ಟೆಬಲ್‌

ಬೆಂಗಳೂರು: ಕಬ್ಬನ್‌ಪಾರ್ಕ್‌  ಮೆಟ್ರೊ ನಿಲ್ದಾಣದಲ್ಲಿ  ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌) ಮತ್ತು ಮೆಟ್ರೊ ಸಿಬ್ಬಂದಿ ನಡುವಿನ ಹೊಡೆದಾಟದ ನೆನಪು ಮಾಸುವ ಮುನ್ನವೇ ಹೊಸಹಳ್ಳಿ  ಬಾಲಗಂಗಾಧರನಾಥ ಮೆಟ್ರೊ ನಿಲ್ದಾಣದಲ್ಲಿ ಅದೇ ತರಹದ ಮತ್ತೊಂದು  ಘಟನೆ ನಡೆದಿದೆ.

ಪಾನಮತ್ತ  ಹೆಡ್‌ಕಾನ್‌ಸ್ಟೆಬಲ್‌ ಒಬ್ಬರು ಶುಕ್ರವಾರ ರಾತ್ರಿ ಮೆಟ್ರೊ ನಿಲ್ದಾಣದ ಭದ್ರತಾ ಸಿಬ್ಬಂದಿ ಗಜಾನಂದ ಭೀಮಪ್ಪ  ಕಿಲಾರಿ ಅವರ ವೃಷಣಕ್ಕೆ ಒದ್ದಿದ್ದಾರೆ. ಹಲ್ಲೆಗೊಳಗಾದ ಕಿಲಾರಿ ವಿಜಯನಗರದ  ಗಾಯತ್ರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆ ನಡೆಸಿದ ವಿಮಾನನಿಲ್ದಾಣ ಸಂಚಾರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ವೀರಣ್ಣ ವಿರುದ್ಧ ಜೀವ ಬೆದರಿಕೆ, ಅಕ್ರಮ ಬಂಧನ, ಹಲ್ಲೆ ಹಾಗೂ ಶಾಂತಿ ಕದಡಿದ ಆರೋಪಗಳಡಿ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ರಾತ್ರಿ 8.40ರ ಸುಮಾರಿಗೆ ಮಧ್ಯವಯಸ್ಕ ವ್ಯಕ್ತಿಯೊಬ್ಬರು ತೂರಾಡುತ್ತಾ  ನಿಲ್ದಾಣ ಪ್ರವೇಶಿಸಿದರು.  ಅವರನ್ನು ತಡೆದ ಭದ್ರತಾ ಸಿಬ್ಬಂದಿ,  ಮದ್ಯ ಸೇವನೆ ಮಾಡಿದವರು ಮೆಟ್ರೊದಲ್ಲಿ ಪ್ರಯಾಣಿಸಲು ಅವಕಾಶ ಇಲ್ಲ ಎಂದು ಹೇಳಿ ಹಿಂದಕ್ಕೆ ಕಳುಹಿಸಿದರು. ಸಿಬ್ಬಂದಿ ಜೊತೆ ಜಗಳವಾಡಿದ ಅವರು ಸುರಕ್ಷತಾ ತಪಾಸಣೆಗೆ ಒಳಗಾಗದೆಯೇ ಟಿಕೆಟ್‌ ಕೌಂಟರ್‌ನತ್ತ ಬಂದರು’ ಎಂದು ನಿಲ್ದಾಣದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಲಾಟೆ ನಡೆಯುತ್ತಿರುವ ವಿಷಯ ತಿಳಿದು ನಿಲ್ದಾಣದ ನಿಯಂತ್ರಕರು ಸ್ಥಳಕ್ಕೆ ಬಂದರು. ಅವರಿಗೆ ಹಾಗೂ ಭದ್ರತಾ  ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿ, ನಿಲ್ದಾಣದ ಪಾವತಿ ಪ್ರದೇಶಕ್ಕೆ ಹೋಗಲು ಯತ್ನಿಸಿದರು. ತಡೆಯಲು ಮುಂದಾದಾಗ ಕಿಲಾರಿ ಅವರ ವೃಷಣಕ್ಕೆ ಒದ್ದರು. ಅವರು ಕುಸಿದು ಬಿದ್ದ ಬಳಿಕವೂ ಹಲ್ಲೆ ನಡೆಸಿದರು’ ಎಂದು ಸಿಬ್ಬಂದಿ ವಿವರಿಸಿದರು.

‘ಅಷ್ಟರಲ್ಲಿ ನಾವು ವಿಜಯ ನಗರ ಪೊಲೀಸ್‌ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದೆವು. ಪೊಲೀಸರು ಬಂದು ವ್ಯಕ್ತಿಯನ್ನು ಕರೆದೊಯ್ದರು. ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ಅವರು ಪಾನಮತ್ತರಾಗಿರುವುದು ಧೃಡಪಟ್ಟಿದೆ. ಪೊಲೀಸರು ವಿಚಾರಣೆ ನಡೆಸಿದಾಗಲೇ ಆ ವ್ಯಕ್ತಿ ಹೆಡ್‌ಕಾನ್‌ಸ್ಟೆಬಲ್‌ ಎಂಬುದು ಗೊತ್ತಾಗಿದೆ’ ಎಂದರು. 

ಪ್ರಕರಣ ದಾಖಲಿಸಲು ವಿಳಂಬ: ‘ಹಲ್ಲೆ ನಡೆಸಿರುವ ವ್ಯಕ್ತಿ  ಪೊಲೀಸ್‌ ಇಲಾಖೆಗೆ ಸೇರಿದವರೆಂಬ ಕಾರಣಕ್ಕೆ ಪ್ರಕರಣ ದಾಖಲಿಸಲು ವಿಳಂಬ ಮಾಡಲಾಗಿದೆ.  ಆದರೆ ಘಟನೆ ನಡೆದ ಒಂದು ದಿನದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಪ್ರಕರಣದ ಬಗ್ಗೆ ಶನಿವಾರ ಬೆಳಿಗ್ಗೆಯೇ ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರಿಂದಲೂ ಯಾವುದೇ ಸ್ಪಂದನೆ  ಸಿಕ್ಕಿಲ್ಲ’ ಎಂದು ದೂರಿದರು.

‘ಹಲ್ಲೆಗೊಳಗಾದ ಕಿಲಾರಿ ಅವರು  ಖಾಸಗಿ ಭದ್ರತಾ ಏಜೆನ್ಸಿಯ ಉದ್ಯೋಗಿ.  ಹೊರಗುತ್ತಿಗೆ ಆಧಾರದಲ್ಲಿ, ತಿಂಗಳಿಗೆ ₹10 ಸಾವಿರ ಸಂಬಳಕ್ಕೆ ಕೆಲಸಕ್ಕಿದ್ದಾರೆ. ಗಲಾಟೆ ನಡೆದಾಗ ಸಿಬ್ಬಂದಿಯ ನೆರವಿಗೆ ಬಿಎಂಆರ್‌ಸಿಎಲ್‌ ಆಡಳಿತ ಧಾವಿಸಬೇಕು. ಆದರೆ ಹಲ್ಲೆಗೊಳಾದ ಸಿಬ್ಬಂದಿಯೇ  ದೂರು ನೀಡಲಿ ಎಂದು ಬಿಎಂಆರ್‌ಸಿಎಲ್‌ ಬಯಸುತ್ತಿದೆ.  ಈ ಪರಿಸ್ಥಿತಿಯಲ್ಲಿ ನಾವು ನಿಶ್ಚಿಂತೆಯಿಂದ ಕೆಲಸ ಮಾಡುವುದಾದರೂ ಹೇಗೆ’ ಎಂದು  ಅಸಹಾಯಕತೆ ತೋಡಿಕೊಂಡರು. 

ದೂರು ನೀಡದಂತೆ ಸೂಚನೆ: ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ ಹಾಗೂ ಮೆಟ್ರೊ ಸಿಬ್ಬಂದಿ ನಡುವೆ ಇತ್ತೀಚೆಗೆ ಜಟಾಪಟಿ ನಡೆದ ಬಳಿಕ, ‘ಗಲಾಟೆಗಳು ನಡೆದರೆ ಮೆಟ್ರೊ ಸಿಬ್ಬಂದಿ ಪೊಲೀಸರಿಗೆ ದೂರು ನೀಡಬಾರದು’ ಎಂದು ನಿಗಮ ಸ್ಪಷ್ಟ ಸೂಚನೆ ನೀಡಿದೆ ಎಂದು ನಿಲ್ದಾಣದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಲ್ಲೆ ನಡೆದೇ ಇಲ್ಲ’: ‘ಈ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ’ ಎಂದು ಹೊಸಹಳ್ಳಿ ಮೆಟ್ರೊ ನಿಲ್ದಾಣದ ಸಿಬ್ಬಂದಿಯೊಬ್ಬರು ಆರೋಪಿಸಿದರು.  ಈ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ   ಅವರನ್ನು ಸಂಪರ್ಕಿಸಿದಾಗ, ‘ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ  ನಡೆದಿಲ್ಲ. ಇಂತಹ ಯಾವುದೇ ಘಟನೆ  ನನ್ನ ಗಮನಕ್ಕೆ ಬಂದಿಲ್ಲ’ ಎಂದು ತಿಳಿಸಿದರು.

ನಗರ ಪೊಲೀಸ್‌ ಕಮೀಷನರ್‌ ಪ್ರವೀಣ್‌ ಸೂದ್‌ ಅವರೂ, ‘ಮೆಟ್ರೊ ನಿಲ್ದಾಣದಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ, ಅಂತಹ ಯಾವುದೇ ಘಟನೆ ನಡೆದಿಲ್ಲ. ಇದ್ದಿದ್ದರೆ ನಾನೇ ತಿಳಿಸುತ್ತಿದ್ದೆ’ ಎಂದು  ಸುದ್ದಿಗಾರರಿಗೆ ತಿಳಿಸಿದ್ದರು.

ವಿಮಾನನಿಲ್ದಾಣ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ ಕೂಡಾ ‘ವೀರಣ್ಣ ಹೆಸರಿನ ಸಿಬ್ಬಂದಿ ನಮ್ಮ ಠಾಣೆಯಲ್ಲೇ ಇಲ್ಲ’ ಎಂದಿದ್ದರು.

ಆದರೆ, ಸಂಜೆ ವೇಳೆಗೆ ವಿಜಯನಗರ ಠಾಣೆಯಲ್ಲಿ ವೀರಣ್ಣ ವಿರುದ್ಧ ಪ್ರಕರಣ ದಾಖಲಾಯಿತು. ಭಾನುವಾರ ಅವರನ್ನು ಠಾಣೆಗೆ ಕರೆಸಿ ವಿಚಾರಣೆಗೆ ಒಳಪಡಿಸುವುದಾಗಿ ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)