ಸೋಮವಾರ, ಡಿಸೆಂಬರ್ 9, 2019
25 °C

‘ಬೀದಿ ಬೀದಿಗೊಂದು ಸಿನಿಮಾ ಇನ್‌ಸ್ಟಿಟ್ಯೂಟ್‌ ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬೀದಿ ಬೀದಿಗೊಂದು ಸಿನಿಮಾ ಇನ್‌ಸ್ಟಿಟ್ಯೂಟ್‌ ’

ಬೆಂಗಳೂರು: ‘ಸಿನಿಮಾ ಶಿಕ್ಷಣವೂ ವಾಣಿಜ್ಯಕರಣಗೊಂಡಿದೆ. ಬೀದಿ ಬೀದಿಗೊಂದು ಸಿನಿಮಾ ಇನ್‌ಸ್ಟಿಟ್ಯೂಟ್‌ಗಳು ತಲೆಎತ್ತುತ್ತಿವೆ. ಇದರಿಂದ ಸಿನಿಮಾ  ಗುಣಮಟ್ಟ ಕಡಿಮೆಯಾಗುತ್ತಿದೆ’ ಎಂದು ಲೇಖಕಿ ಅರುಣಾರಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಗಾಹಿ ಮೀಡಿಯಾ ಜಂಟಿಯಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ತಮ್ಮ ಆತ್ಮಕಥೆ ‘ಫ್ರೀಡಂ–ಮೈ ಸ್ಟೋರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನ್ನ ಜೀವನದ ಅನುಭವಗಳು, ಸಾಂಸಾರಿಕ ನೋವುಗಳು, ಸಿನಿ ಬದುಕಿನ ತಲ್ಲಣಗಳನ್ನು ಈ ಪುಸ್ತಕದ ಮೂಲಕ ನೀಡಿದ್ದೇನೆ. ನಮ್ಮ ಸುತ್ತಲು ನಡೆಯುವ ಒಂದೊಂದು ಕಥೆಯೂ ಒಬ್ಬೊಬ್ಬರಿಗೆ ಸ್ಪೂರ್ತಿ ನೀಡುತ್ತದೆ. ಹಾಗೆಯೇ ನನ್ನ ಕಥೆ ಮತ್ತೊಬ್ಬರಿಗೆ ದಾರಿಯಾಗಲಿ ಎನ್ನುವ ಉದ್ದೇಶದಿಂದ ದಾಖಲಿಸಿದೆ’ ಎಂದು ವಿವರಿಸಿದರು.

‘ಎಲ್ಲವನ್ನೂ ಧೈರ್ಯವಾಗಿ ದಾಖಲಿಸಲು ಪ್ರಯತ್ನಿಸಿದ್ದೇನೆ. ಜಗತ್ತು ಅದನ್ನು ಹೇಗೆ ಸ್ವೀಕರಿಸುತ್ತದೆ ಎಂಬ ಬಗ್ಗೆ ಚಿಂತೆ ಇಲ್ಲ. ಹೇಗಾದರೂ ಸ್ವೀಕರಿಸಲಿ, ನನ್ನ ಬದುಕು ಹೀಗೆಯೇ ಸಾಗುತ್ತದೆ’ ಎಂದರು.

ನಾಟಕಕಾರ ಗಿರೀಶ್‌ ಕಾರ್ನಾಡ, ‘ವಂಶವೃಕ್ಷದಲ್ಲಿ ಸಂಕಲನಕಾರರಾಗಿ  ಕೆಲಸ ಮಾಡುವ ಮೂಲಕ ಅರುಣಾ ಅವರು ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಆಗಿನ ಕಾಲಕ್ಕೆ ಸಂಕಲನದಲ್ಲಿ ಹೊಸತನವನ್ನು ತಂದವರು ಅರುಣಾ. ‘ಫ್ರೀಡಂ–ಮೈ ಸ್ಟೋರಿ’ ಕೃತಿ ಸಿನಿಮಾ ಸಂಕಲನ ತಾಂತ್ರಿಕವಾಗಿ ಎಷ್ಟೆಲ್ಲ ಬದಲಾವಣೆ ಪಡೆದಿದೆ ಎಂಬುದನ್ನು ತಿಳಿಸುತ್ತದೆ’ ಎಂದು ಹೇಳಿದರು.

ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ‘ಅರುಣಾ ನಿರ್ದೇಶನದ ‘ಪತೀತಪಾವನಿ’ ಸಿನಿಮಾ ನೋಡಿ 20 ವರ್ಷಗಳು ಕಳೆದಿವೆ. ಆದರೆ, ಅದರಲ್ಲಿ ಬರುವ ಮುಂಬೈನ ಕಾಮಟಿಪುರ ಎಂಬ ನರಕದ ಚಿತ್ರಣ ಈಗಲು ಕಣ್ಣಿಗೆ ಕಟ್ಟಿದಂತೆ ಇದೆ. ಆ ರೀತಿ ತಾಂತ್ರಿಕ ಕೌಶಲ ಇವರಲ್ಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)