ಭಾನುವಾರ, ಡಿಸೆಂಬರ್ 8, 2019
24 °C
ಹಸಿವಿನಿಂದ ಮೃತಪಟ್ಟಿರುವ ಶಂಕೆ

15 ದಿನದಲ್ಲಿ ಕುಟುಂಬದ ಮೂವರು ಸಾವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

15 ದಿನದಲ್ಲಿ ಕುಟುಂಬದ ಮೂವರು ಸಾವು!

ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ಇಲ್ಲಿನ ಬೇಲೆಹಿತ್ತಲ ಗ್ರಾಮದ ವೃದ್ಧೆ ನಾಗಮ್ಮ ಮುಕ್ರಿ ಕುಟುಂಬದಲ್ಲಿ 15 ದಿನಗಳಲ್ಲಿ ಅವರ ಮೂವರು ಗಂಡು ಮಕ್ಕಳು ಮೃತಪಟ್ಟಿದ್ದು, ಪಡಿತರ ಸಿಗದೇ ಇರುವುದೇ ಇದಕ್ಕೆ ಕಾರಣ ಎಂಬ ವಿಷಯ ಶನಿವಾರ ಬೆಳಕಿಗೆ ಬಂದಿದೆ.

ಮಕ್ಕಳಾದ ಸುಬ್ಬು ಮಾರು ಮುಕ್ರಿ (54), ಅಪ್ಪು ಮಾರು ಮುಕ್ರಿ (48) ಹಾಗೂ ನಾರಾಯಣ ಮಾರು ಮುಕ್ತಿ (58) ಮೃತಪಟ್ಟವರು. ಈ ಮೂವರು ಅವಿವಾಹಿತರಾಗಿದ್ದರು. ಗೋಕರ್ಣ ಸಮುದ್ರ ತೀರದಲ್ಲಿ ಭಕ್ತರು ಹರಕೆ ರೂಪದಲ್ಲಿ ಸಲ್ಲಿಸುತ್ತಿದ್ದ ಚಿಲ್ಲರೆ ಹಣವನ್ನು ಸಂಗ್ರಹಿಸಿ, ಜೀವನ ಸಾಗಿಸುತ್ತಿದ್ದರು. ಇವರು ನಿಜವಾಗಿ ಹಸಿವಿನಿಂದ ಮೃತಪಟ್ಟಿದ್ದಾರೆಯೇ ಅಥವಾ ಮದ್ಯವ್ಯಸನದಿಂದ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆಯೇ ಎಂಬುದು ಖಚಿತವಾಗಿಲ್ಲ.

ದಲಿತರಾದ ನಾಗಮ್ಮ ಮುಕ್ರಿ ಗುಡಿಸಲಲ್ಲಿ ವಾಸವಿದ್ದರು. ಗೋಕರ್ಣ ದೇವಸ್ಥಾನದ ಬಳಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ  ಇವರು ಅಶಕ್ತರಾಗಿದ್ದರು. ನಾಲ್ಕು ಗಂಡು ಮಕ್ಕಳಿದ್ದು, ಈ ಪೈಕಿ ಹಿರಿಯ ಮಗ ಗಣಪತಿ ಮುಕ್ರಿ ಅವರ ಪತ್ನಿ ನಾಗಮ್ಮ ಮುಕ್ರಿ ಗ್ರಾಮ ಪಂಚಾಯ್ತಿ ಸದಸ್ಯೆ. ಆದರೆ ಅವರು ತವರು ಮನೆಯಲ್ಲಿ ಉಳಿದಿದ್ದರು.

ಪಡಿತರ ಸ್ಥಗಿತ: ‘ಈ ಬಡ ಕುಟುಂಬಕ್ಕೆ ಪಡಿತರವೇ ಆಧಾರವಾಗಿತ್ತು. ಪಡಿತರ ಕಾರ್ಡ್‌ಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡದ ಕಾರಣ ಕಳೆದ ಏಪ್ರಿಲ್‌ನಿಂದ ಪಡಿತರ ನೀಡುವುದು ಬಂದ್‌ ಆಗಿತ್ತು. ಅಶಕ್ತರಾಗಿದ್ದ ನಾಗಮ್ಮ ಆಧಾರ್‌ ನೋಂದಣಿ ಕೇಂದ್ರಕ್ಕೆ ಹೋಗಲು ಆಗಿರಲಿಲ್ಲ. ಹೀಗಾಗಿ ಅವರಿಗೆ ಆಧಾರ್‌ ಸಂಖ್ಯೆ ದೊರೆತಿರಲಿಲ್ಲ. ಪಡಿತರ ಇಲ್ಲದೇ ಎಲ್ಲರೂ ಹಸಿವಿನಿಂದ ದಿನದೂಡಿದ್ದಾರೆ. ಬಳಿಕ ಅನಾರೋಗ್ಯಕ್ಕೆ ಒಳಗಾಗಿ ಒಬ್ಬೊಬ್ಬರೆ ಕೊನೆಯುಸಿರೆಳೆದಿದ್ದಾರೆ’ ಎಂದು ಮಹಾಗಣಪತಿ ಯುವಕ ಸಂಘದ ಕಾರ್ಯದರ್ಶಿ ಕುಮಾರ ದೀವಟಿಗೆ ತಿಳಿಸಿದರು.

**

ವೃದ್ಧೆ ನಾಗಮ್ಮ ಮುಕ್ರಿಯ ಮೂವರು ಗಂಡು ಮಕ್ಕಳು ಕುಡಿತದಿಂದ ಮೃತಪಟ್ಟಿರುವುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ

-ಎಸ್‌.ಎಸ್‌.ನಕುಲ್‌, ಜಿಲ್ಲಾಧಿಕಾರಿ

**

ಪಡಿತರ ಸಮಸ್ಯೆಯನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಇಂತಹ ಘಟನೆ ನಡೆದಿದ್ದು ತುಂಬಾ ದುಖಃಕರ ವಿಷಯ

-ಶಾರದಾ ಮೋಹನ ಶೆಟ್ಟಿ, ಶಾಸಕಿ

ಪ್ರತಿಕ್ರಿಯಿಸಿ (+)